ಸೂಫಿ ಪರಂಪರೆ : ಪ್ರೇಮದ ಹಾದಿಯ ಆತ್ಮಾನುಭೂತಿ

ಸೂಫಿ ಪರಂಪರೆ ಪ್ರೇಮದ ಹಾದಿಯ ಆತ್ಮಾನುಭೂತಿಯನ್ನು ಮುಖ್ಯ ಕೇಂದ್ರವಾಗಿಟ್ಟುಕೊಂಡು ಬೆಳೆದದ್ದು. ಯಾರು ಪ್ರೇಮದಲ್ಲಿ ಮತ್ತನಾಗಿರುತ್ತಾನೋ ಅವನೇ ಸೂಫಿ. ಎದೆಯಲ್ಲಿ ಪ್ರೇಮ, ಅದನ್ನು ಅಭಿವ್ಯಕ್ತಿಸುವ ಕಾವ್ಯಗಳನ್ನು ಬರೆಯದ ಯಾರೊಬ್ಬರೂ ಈ ಪರಂಪರೆಯಲ್ಲಿ ಕಾಣಸಿಗುವುದಿಲ್ಲ! ಅಷ್ಟರಮಟ್ಟಿಗೆ ಸೂಫಿಗಳ ಅಧ್ಯಾತ್ಮ ಪ್ರೇಮ ಮತ್ತು ಕಾವ್ಯಗಳೊಂದಿಗೆ ಹೆಣೆದುಕೊಂಡಿದೆ ~ ಚೇತನಾ 

“ಪ್ರಾಣ ನೀನು. ನಿನ್ನನ್ನು ಮನುಷ್ಯ ಎಂದೇಕೆ ಅಂದುಕೊಂಡಿದ್ದೀಯ? ನೀನು ನೀರು. ಆದರೆ ಗಡಿಗೆ ಎಂದುಕೊಂಡುಬಿಟ್ಟಿದ್ದೀಯ. ಬೇರೆ ವಸ್ತುಗಳು ಹುಡುಕುವುದರಿಂದ ಸಿಗುತ್ತವೆ. ಆ ಪ್ರಿಯತಮನ ವಿಷಯದಲ್ಲಿ ಒಂದು ಸೋಜಿಗ. ಅವನನ್ನು ಪಡೆಯುವ ಮುನ್ನ ನೀನು ಹುಡುಕುವುದೇ ಇಲ್ಲ. ಅವನು ಯಾವಾಗಲೂ ನಿನ್ನಲ್ಲಿರುತ್ತಾನೆ ಎಂಬುದನ್ನು ನಂಬು. ಆದರೆ ನೀನು ಕೇಂದ್ರದಿಂದ ದೂರವಾದರೆ ಅವನು ಅಲ್ಲೇ ಉಳಿದುಬಿಡುತ್ತಾನೆ”. 
ಈ ಸಾಲುಗಳು ಸೂಫಿ ಅನುಭಾವಿ ಕವಿ ಸನಾಯಿಯದ್ದು.

ಸೂಫಿ ಪರಂಪರೆ ಪ್ರೇಮದ ಹಾದಿಯ ಆತ್ಮಾನುಭೂತಿಯನ್ನು ಮುಖ್ಯ ಕೇಂದ್ರವಾಗಿಟ್ಟುಕೊಂಡು ಬೆಳೆದದ್ದು. ಯಾರು ಪ್ರೇಮದಲ್ಲಿ ಮತ್ತನಾಗಿರುತ್ತಾನೋ ಅವನೇ ಸೂಫಿ. ಎದೆಯಲ್ಲಿ ಪ್ರೇಮ, ಅದನ್ನು ಅಭಿವ್ಯಕ್ತಿಸುವ ಕಾವ್ಯಗಳನ್ನು ಬರೆಯದ ಯಾರೊಬ್ಬರೂ ಈ ಪರಂಪರೆಯಲ್ಲಿ ಕಾಣಸಿಗುವುದಿಲ್ಲ! ಅಷ್ಟರಮಟ್ಟಿಗೆ ಸೂಫಿಗಳ ಅಧ್ಯಾತ್ಮ ಪ್ರೇಮ ಮತ್ತು ಕಾವ್ಯಗಳೊಂದಿಗೆ ಹೆಣೆದುಕೊಂಡಿದೆ. ಸೂಫಿ ಸಂತರ ಈ ರಚನೆಗಳು ಮೇಲ್ನೋಟಕ್ಕೆ ಅದ್ಭುತ ಪ್ರೇಮ ಕಾವ್ಯಗಳಂತೆ ಕಾಣುತ್ತ, ಪ್ರಿಯತಮರ ಪ್ರಲಾಪಗಳಂತೆ ತೋರುತ್ತವೆ. ಆದರೆ ಅವುಗಳ ಒಳಹೂರಣ ದಿವ್ಯಜ್ಞಾನವನ್ನೆ ಹೊತ್ತುಕೊಂಡಿದೆ. ಮೇಲುಮೇಲಿನ ಆಸ್ವಾದನೆಗೆ ತೆರೆದುಕೊಳ್ಳುವವರಿಗೂ ಸೂಫೀಕೃತಿಗಳಲ್ಲಿ ಅದ್ವಿತೀಯ ಆನಂದ ಲಭಿಸುವುದೇನೋ ಸರಿಯೇ. ಒಳಹೊಕ್ಕು ನೋಡುವವರು ಮಾತ್ರ ಅನರ್ಘ್ಯ ರತ್ನಗಳನ್ನೆ ಹೊಂದುತ್ತಾರೆ.

ಸನಾಯಿಯದ್ದೇ ಆದ ಈ ಸಾಲುಗಳನ್ನು ನೋಡಿ. ಆತ ಹೇಳುತ್ತಾನೆ, ‘ಯಾವನೇ ಮನುಷ್ಯ ಹೃದಯದಲ್ಲಿ ಬೇರೆ ಯಾವುದೇ ಆಕಾಂಕ್ಷೆ ಇಟ್ಟುಕೊಂಡು ಈ ದರಬಾರಿನತ್ತ ಬರಲಾರ. ಇಂಥ ಪ್ರಿಯತಮೆಯ ಬಳಿ ಯಾವನೂ ಯಾವುದೇ ಬಗೆಯ ಬಟ್ಟೆ ಧರಿಸಿ ಮಲಗಲಾರ!’
ಪ್ರಣಯೋನ್ಮಾದಿ ಕವಿತೆಯಂತೆ ತೋರುವ ಈ ಸಾಲುಗಳು ಅಷ್ಟೇ ಆಧ್ಯಾತ್ಮಿಕ ಭಾವೋನ್ಮತ್ತತೆಯನ್ನೂ ಹೊಂದಿರುವುದು ಸ್ಪಷ್ಟ. ‘ಭಗವಂತನ ಬಳಿ ಸಾರುವಾಗ ಆತನನ್ನು ಹೊಂದುವ ಆಕಾಂಕ್ಷೆ ಮಾತ್ರ ಇಟ್ಟುಕೊಂಡಿರಬೇಕು. ಆತನನ್ನು ಹೊಂದಿದವರು ಯಾರು ತಾನೆ ಮುಚ್ಚುಮರೆ ಇಟ್ಟುಕೊಂಡು ಚಿತ್ಸುಖವನ್ನು ಅನುಭವಿಸಲು ಬಯಸುತ್ತಾರೆ?’– ಇದು ಈ ಕವಿತೆಯ ಅಂತರಾರ್ಥ.

ಸೂಫಿಗಳ ಭಕ್ತಿ ಮಾರ್ಗ ಸಖ್ಯ ಭಾವ ಅಥವಾ ಮಧುರ ಭಕ್ತಿಯದ್ದು. ಭಗವಂತನನ್ನು ಅವರು ತಮ್ಮ ‘ಸಖ’ನೆಂದು ಅಥವಾ ‘ಪ್ರೇಮಿ’ಯೆಂದು ಭಾವಿಸುತ್ತಾ ತಮ್ಮನ್ನು ತಾವು ಆತನ ‘ಪ್ರಿಯತಮೆ’ ಎಂದು ಭಾವಿಸಿಕೊಳ್ಳುತ್ತಾರೆ. ಆ ಮೂಲಕವೇ ಆರಾಧಿಸುತ್ತಾರೆ. ಮತ್ತೊಬ್ಬ ಪ್ರಮುಖ ಸೂಫಿ ಕವಿ ಫರೀದುದ್ದಿನ್ ಅತ್ತಾರ್ ಹೇಳುತ್ತಾನೆ, ‘ಯಾರು ತಮ್ಮಪ್ರಾಣದ ಮೋಹವನ್ನು ತೊರೆಯುವರೋ ಅವರು ಮಾತ್ರ ಪ್ರೇಮಿಗಳೆಂದು ಪರಿಗಣಿತರಾಗುತ್ತಾರೆ’ ಎಂದು. ಅತ್ತಾರ್ ಮತ್ತೂ ಹೇಳುತ್ತಾನೆ, ‘ಪ್ರಾಣದ ಮೋಹ ತೊರೆದ ಬಳಿಕ ಪ್ರೇಮಿಗಳು ಪ್ರಣಯಕ್ಕೆ ಅಧಿಕಾರಿಗಳಾಗುತ್ತಾರೆ. ಆಮೇಲೆ ಅವರು ಪಾಪ ಮಾಡಲಿ ಅಥವಾ ಉಪಾಸನೆ ಮಾಡಲಿ, ಅದು ಮುಖ್ಯವಾಗುವುದಿಲ್ಲ’ ಎಂದು! ಅವನ ಈ ಒಟ್ಟಾರೆ ಕವಿತೆ ಭಗವಂತನನ್ನು ಅರಸುವ ಮಾರ್ಗದಲ್ಲಿ ಯಾವ ಎಡರು ತೊಡರುಗಳು ಎದುರಾದರೂ, ಪ್ರಾಣಭೀತಿ ಉಂಟಾದರೂ ಲೆಕ್ಕಿಸಬಾರದೆಂಬ ಆಶಯವಿದೆ.
ಪ್ರೇಮಿಗಳನ್ನು ಸ್ವರ್ಗದ ದೂತರೆಂದು ಕರೆಯುವ ಅತ್ತಾರ್, ಅವರಿಗೆ ಧರ್ಮಪಾಲನೆ ಅಥವಾ ನಾಸ್ತಿಕತೆಗಳ ಗೊಡವೆಯೇ ಇರುವುದಿಲ್ಲ ಎಂದೂ ಹೇಳುತ್ತಾನೆ.

ರೂಮಿ, ಚಿರಪರಿಚಿತ ಸೂಫಿ…
ಜಲಾಲುದ್ದೀನ ರೂಮಿಯ ಹೆಸರು ಕೇಳಿದವರೆ, ಬಲ್ಲವರ ಕಣ್ಣುಗಳು ಹೊಳೆಯದೆ ಇರಲಾರವು. ರೂಮಿಯ ಹೆಸರಲ್ಲೆ ಪ್ರೇಮಧಾರೆ ಉಕ್ಕಿ ಹರಿಯುತ್ತದೆ. ಆತನ ಕಾವ್ಯವಂತೂ ಎಂದೆಂದಿಗೂ ಬತ್ತದ ಅನುಭಾವ ರಸ ಬುಗ್ಗೆ.

ರೂಮಿ ಪರಮ ಅದ್ವೈತಿ. ಆತ ತನ್ನನ್ನು ತನ್ನ ಪ್ರೇಮಿ (ಭಗವಂತ)ಗಿಂತ ಬೇರೆಯಾಗಿ ಭಾವಿಸಿಕೊಂಡವನೇ ಅಲ್ಲ. ತಾನು ಏನು ಅನ್ನುವುದರ ಬಗ್ಗೆ ಆತ ಹೇಳುವುದನ್ನು ಕೇಳಿ. ಅವನು ಹೇಳುತ್ತಾನೆ, ತಾನು ಮಣ್ಣಿನಿಂದಾಗಲೀ ಗಾಳಿಯಿಂದಾಗಲೀ ಆಕಾಶದಿಂದಾಗಲೀ ನೆಲದಿಂದಾಗಲೀ ಬಂದವನಲ್ಲವೆಂದು. ತಾನು ಸಂಸಾರದ ಪರಿಣಾಮದಿಂದ ಹುಟ್ಟಿಕೊಂಡವನಲ್ಲವೆಂದು, ತನಗೆ ಆದಮನ ಜತೆಗಾಗಲೀ ಈವಳ ಜತೆಗಾಗಲೀ ಸಂಬಂಧವಿಲ್ಲವೆಂದು. ರೂಮಿ ಹೇಳುತ್ತಾನೆ, ತಾನು ಶರೀರವೂ ಅಲ್ಲ, ಪ್ರಾಣವೂ ಅಲ್ಲ; ಆದರೆ ಪ್ರಾಣದ ಪ್ರಾಣವೆಂದು! ಇದು ಭಗವಂತನೊಳಗೊಂದಾಗುವುದರ ಪರಾಕಾಷ್ಠೆಯಲ್ಲದೆ ಮತ್ತೇನು?

ರೂಮಿ, ‘ನಾನು ಪ್ರೇಮದ ಮದಿರೆಯನ್ನು ಕುಡಿದು ಮದಮತ್ತನಾಗಿದ್ದೇನೆ. ಇಹಪರಗಳೆಡರಡನ್ನೂ ತೊರೆದಿದ್ದೇನೆ. ಭಿಕ್ಷೆ ಮತ್ತು ಬಡತನವನ್ನು ಬಿಟ್ಟರೆ ನನ್ನ ಬಳಿ ಬೇರೇನೂ ಇಲ್ಲ’ ಎಂದು ಘೋಷಿಸಿಕೊಳ್ಳುತ್ತಾನೆ.

ಜಲಾಲುದ್ದೀನ ರೂಮಿ ಕೇವಲ ಕಾವ್ಯೋನ್ಮಾದಿಯಲ್ಲ. ಅವನೊಬ್ಬ ಅನುಭಾವಿ. ಇಲ್ಲವಾದಲ್ಲಿ ಅವನ ರಚನೆಗಳು ಈ ಪರಿಯ ಉತಕೃಷ್ಟತೆ ಪಡೆಯಲು ಸಾಧ್ಯವಿರುತ್ತಿರಲಿಲ್ಲ. ರೂಮಿ ಒಂದೆಡೆ ಹೇಳುತ್ತಾನೆ, ‘ಅರ್ಧ ರಾತ್ರಿಯಲ್ಲಿ ನಾನು ಗದರಿದೆ, ನನ್ನ ಹೃದಯ ಮಂದಿರಕ್ಕೆ ಯಾರದು ಬಂದಿರುವುದು? ಎಂದು. ಆ ಪ್ರಿಯತಮ ಉತ್ತರಿಸಿದ, ಯಾರ ಕಾಂತಿಯಿಂದ ಸೂರ್ಯ ಚಂದ್ರರು ಬೆಳಗುವರೋ ಅವನೇ ನಾನು ಎಂದು’. ಭಗವಂತ ರೂಮಿಯೆದೆಯ ನಿತ್ಯನಿವಾಸಿ ಎನ್ನುವುದಕ್ಕೆ ಇದಕ್ಕಿಂತ ಸುಂದರ ನಿದರ್ಶನ ಬೇಕಾಗಲಾರದು.

ಖಯಾಮನ ರುಬಾಯಿಗಳು
ಸೂಫೀ ಕವಿಗಳಲ್ಲಿ ರೂಮಿಯ ಜತೆಜತೆಗೆ ಉಲ್ಲೇಖವಾಗುವ ಮತ್ತೊಂದು ಹೆಸರು ಉಮರ್ ಖಯ್ಯಾಮನದ್ದು. ರುಬಾಯಿಗಳೆಂದೇ ಪ್ರಸಿದ್ಧವಾಗಿರುವ ಈತನ ರಚನೆಗಳು ಪ್ರೇಮದ ನಶೆಯನ್ನು ಕಟ್ಟಿಕೊಡುವಷ್ಟು ಅದ್ಭುತವಾಗಿ ಕಟ್ಟಿಕೊಡುವ ಮತ್ತೊಂದು ಪ್ರಕಾರ ಬಹುಶಃ ಇದ್ದಿರಲಾರದು. ಈತನ ಭಾವೋತಕೃಷ್ಟತೆಗೆ ಈ ಕಾವ್ಯದ ತುಣುಕು ನೋಡಿ; ‘ಓ ಮದಿರಾಲೋಲ, ಎದ್ದು ಕುಳಿತುಕೋ ಬಾ. ಬದುಕಿನ ಬಟ್ಟಲು ತುಂಬುವ ಮುನ್ನ ನಾವು ದೈವೀಪ್ರೇಮದ ಬಟ್ಟಲನ್ನು ಪಾನ ಮಾಡೋಣ. ಮೃತ್ಯುವಿಗೆ ಮುನ್ನ ಅವನನ್ನು ಪ್ರೀತಿಸೋಣ…’ ಇಲ್ಲಿ ಮದಿರಾಲೋಲನೆಂದರೆ ಭಗವತ್ಪ್ರೇಮದ ನಶೆಯಲ್ಲಿ ಮತ್ತನಾಗಿರುವವನು ಎಂದು. ಇಂತಹ ಉನ್ಮತ್ತ ಆಕಾಂಕ್ಷೆ ನಮಗೆ ಭಗವಂತನನ್ನು ದಕ್ಕಿಸಿಕೊಡದೆ ಇದ್ದೀತೆ?

ಮತ್ತೀಗ ಶರಣಾಗತಿಯ ಭಾವ ಸಾರುವ ಈ ಸಾಲುಗಳು; ‘ನಾನು ನಿನ್ನಿಚ್ಛೆಯ ಮೇಲೆ ಅವಲಂಬಿತ. ನೀನು ನಿನ್ನ ವಿಯೋಗದಲ್ಲಿ ನನ್ನನ್ನು ಗೋಳಾಡಿಸಲು ಬಯಸಿದರೆ ಗೋಳಾಡಿಸು. ಮಿಲನ ಸುಖವನ್ನು ಕೊಡುವೆಯಾದರೆ ಕೊಡು. ನೀನು ಯಾವ ಅವಸ್ಥೆಯಲ್ಲಾದರೂ ನನ್ನನ್ನು ಇಡು. ನಾನು ಇದರ ವಿರುದ್ಧವಾಗಿ ಒಮ್ಮೆಯೂ ಒಂದು ಮಾತನ್ನೂ ಆಡೆನು’.
ಖಯ್ಯಾಮ್ ಹೇಳುತ್ತಾನೆ, ‘ಯಾವ ಮದಿರೆಯ ಪಾನದಿಂದ ಮತ್ತು ಬರುತ್ತದೆಯೋ ಅದು ಒಮ್ಮೆ ಮೈಮರೆಸಿದರೆ ಒಮ್ಮೆ ಜ್ಞಾನ ಉಂಟುಮಾಡುತ್ತದೆ. ಗುಣಗಳು ತಮ್ಮಷ್ಟಕ್ಕೆ ತಾವೇ ಇರುತ್ತವೆ ಎನ್ನುವುದು ಅನುಚಿತ. ಅವುಗಳ ಅಸ್ತಿತ್ವ ಕೂಡ ಆ ಸರ್ವಶಕ್ತನೊಂದಿಗೆ ಬೆಸೆದುಕೊಂಡಿದೆ’ ಎಂದು. “ಪ್ರತಿಯೊಂದೂ ಭಗವಂತನೊಂದಿಗೆ ಬೆಸೆದುಕೊಂಡಿವೆ, ಕರ್ಮಾಕರ್ಮಗಳು ನಮ್ಮವಲ್ಲ, ಅವು ಕೂಡ ಭಗವತ್ಪ್ರೇರಕವೇ” ಎನ್ನುವ ಭಾವವನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು.

ಪರಬ್ರಹ್ಮ ತತ್ವ
ಸೂಫೀಗಳ `ನಾನೇ ದೇವರು’ ಎನ್ನುವ ಘೋಷಣೆ ಬಂದಿದ್ದು ಜ್ಞಾನ ಅಥವಾ ತರ್ಕಗಳಿಂದಲ್ಲ. ಅದು ಪ್ರೇಮದ ಹಾದಿಯ ಪ್ರಯಾಣ ಫಲ. ಅವರು ಕಂಡುಕೊಂಡ ಭಗವಂತ ಜಗದ ಕಣ್ಣಿಗೆ ಕಾಣುವಂಥವನಲ್ಲ. ಇದನ್ನು ಜಾಮಿ ಎಂಬ ಸೂಫೀಕವಿ ಹೇಳುವುದು ಹೀಗೆ; ‘ನನ್ನ ಪ್ರೇಮಿ ಹೇಳಿದಳು, ನಾನು ಜಗತ್ತಿನೆಲ್ಲ ಪ್ರೇಮಿಕೆಯರಿಗಿಂತ ಭಿನ್ನ. ನಾನು ಪರದೆಯೊಳಗಿಂದ ಸ್ಪಷ್ಟವಾಗಿ ಕಾಣಿಸುತ್ತೇನೆ. ಆದರೆ ಅದರ ಹೊರಗೆ ಅಡಗಿರುತ್ತೇನೆ ಎಂದು!’  ಬ್ರಹ್ಮ ತತ್ತ್ವವೇ ಇದು. ‘ಹಿರಣ್ಮಯೇನ ಪಾತ್ರೇಣ….’ ಹೊಂಬೆಳಕಿನಿಂದ ಆವೃತವಾದ ಬ್ರಹ್ಮ ಬರಿಗಣ್ಣಿಗೆ ಕಾಣಿಸದು. ಅದೇನಿದ್ದರೂ ತಿಳಿವಿನ, ಪ್ರೇಮದ ಪರದೆಯ ಮೂಲಕ ನೋಡಲು ಸಿಗುವಂಥದ್ದು.

ಇಷ್ಟಕ್ಕೇ ನಿಲ್ಲುವುದಿಲ್ಲ ಸೂಫೀಪ್ರೇಮ ಸುಧೆ. ಅದೊಂದು ಅಗಾಧ ಸಾಗರದಂತೆ. ಅದರಿಂದ ಮುತ್ತುಗಳನ್ನು ಹೆಕ್ಕಿ ತೆಗೆಯುವುದು ಸುಲಭವಲ್ಲ. ಸೂಫಿಗಳಲ್ಲಿ ದ್ವೇಷಕ್ಕೆ ಜಾಗವೇ ಇಲ್ಲವೆಂದ ಮೇಲೆ ಅವರ ಪ್ರೇಮದ ಪರಿಯನ್ನ ಅಳೆಯುವುದು ಸುಲಭದ ಮಾತಾಗುವುದೆ?
ಈ ಮಾತಿಗೊಂದು ನಿದರ್ಶನದೊಡನೆ ಮುಗಿಸುವಾ. ಒಮ್ಮೆ ಸೂಫೀ ಸಂತ ಕವಯತ್ರಿ ರಾಬಿಯಾಳನ್ನು ಯಾರೋ ಕೇಳುತ್ತಾರೆ, `ನೀನು ದೇವರನ್ನು ಪ್ರೀತಿಸ್ತೀಯಾ?’ ಅವಳಂದಳು, `ಹೌದು’. `ಹಾಗಾದರೆ ಸೈತಾನನ್ನು ದ್ವೇಷಿಸ್ತೀಯಾ?’ ಮತ್ತೊಂದು ಪ್ರಶ್ನೆ. ಇದನ್ನು ಕೇಳಿ ನಗುತ್ತಾಳೆ ರಾಬಿಯಾ. `ದೇವರನ್ನು ಪ್ರೀತಿಸುತ್ತೀನೆಂದರೆ ಎಲ್ಲವನ್ನೂ ಪ್ರೀತಿಸಿದಂತೆಯೇ ಅಲ್ವೆ? ನನ್ನ ಹೃದಯದಲ್ಲಿ ಅದೆಷ್ಟು ಪ್ರೇಮ ತುಂಬಿಕೊಂಡಿದೆಯೆಂದರೆ, ಯಾರನ್ನಾದರೂ ದ್ವೇಷಿಸಲು ಎಡೆಯೇ ಇಲ್ಲ!’

ಇವು ಕೆಲವು ಹನಿಗಳು ಮಾತ್ರ. ಒಮ್ಮೆ ಸೂಫೀ ಪ್ರೇಮಕಾವ್ಯಗಳ ನಶೆಯೇರಿಸಿಕೊಂಡರೆ ಮತ್ತೆ ಲೌಕಿಕ ಪ್ರಜ್ಞೆಗೆ ಇಳಿಯುವುದು ಕಡುಕಷ್ಟ.

 

 

Leave a Reply