ಮಾರುವುದು ಮತ್ತು ಕೊಳ್ಳುವುದು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 11

ದ ಪ್ರಾಫೆಟ್’ ಕೃತಿಯು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಕ್ಕೂ ಬಂದಿವೆ. ‘ಅರಳಿಬಳಗ’ದ ಕವಿ ಚಿದಂಬರ ನರೇಂದ್ರ ಮತ್ತೊಮ್ಮೆ ಇದರ ಅನುಭಾವವನ್ನು ಅನುವಾದದ ಮೂಲಕ ಹರಿಸುವ ಪ್ರಯತ್ನ ಮಾಡಿದ್ದಾರೆ.

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/08/25/pravadi10/

ವ್ಯಾಪಾರಿಯೊಬ್ಬ,
ಯಾವುದನ್ನು ಮಾರುವುದು ಮತ್ತು
ಏನನ್ನು ಕೊಳ್ಳಬೇಕು
ಎಂದು ಕೇಳಿದ ಪ್ರಶ್ನೆಗೆ
ಅವ ಉತ್ತರಿಸತೊಡಗಿದ.

ಭೂಮಿ ಬೆಳೆ ಬೆಳೆಯುತ್ತದೆಯಾದರೂ,
ನಿಮ್ಮ ಬೊಗಸೆ ತುಂಬಿಕೊಳ್ಳುವುದು
ನಿಮಗೆ ಗೊತ್ತಿದ್ದಾಗ;
ಭೂಮಿಯ ಹಣ್ಣುಗಳನ್ನು ನೀವು ಕೀಳಲಾರಿರಿ.

ಭೂಮಿ ಕೊಟ್ಟದಕ್ಕೆ ಬದಲಾಗಿ
ನೀವು ಏನನ್ನಾದರೂ ಕೊಡಬಲ್ಲಿರಾದರೆ
ಅದು ಸಮೃದ್ಧಿ, ಅದು ಸಾರ್ಥಕತೆ.

ಈ ಕೊಡು ಕೊಳ್ಳುವಿಕೆಯಲ್ಲಿ
ಪ್ರೀತಿ, ಅಂತಃಕರಣ, ನ್ಯಾಯ ಇಲ್ಲದಾಗ
ಕೆಲವರು ಅಜೀರ್ಣತೆಯಿಂದ ನರಳಿದರೆ
ಇನ್ನೂ ಕೆಲವರು ಹಸಿವೆಯಿಂದ….

ಮಾರುಕಟ್ಟೆಯಲ್ಲಿ ನೀವು
ಸಮುದ್ರದಲ್ಲಿ, ಹೊಲಗಳಲ್ಲಿ, ದ್ರಾಕ್ಷಿಯ ತೋಟಗಳಲ್ಲಿ
ಬೆವರು ಸುರಿಸುವವರನ್ನು,
ನೇಕಾರರನ್ನು, ಕುಂಬಾರರನ್ನು, ಬಾಣಸಿಗರನ್ನು
ಭೇಟಿಮಾಡಿದರೆ;

ಭೂಮಿಯ ಪಕ್ವ ಚೈತನ್ಯವನ್ನು
ನಿಮ್ಮ ನಡುವೆ ಆಹ್ವಾನಿಸಿ,
ನಿಮ್ಮ ತಕ್ಕಡಿಗಳನ್ನೂ, ಮೌಲ್ಯಗಳಿಗೆ ಬೆಲೆ ಕಟ್ಟುವ
ನಿಮ್ಮ ಲೆಕ್ಕಾಚಾರವನ್ನೂ ನಿಕಷಕ್ಕೆ ಒಡ್ಡಿ.

ನಿಮ್ಮ ಶ್ರಮಕ್ಕೆ ಬದಲಾಗಿ
ಕೇವಲ ಮಾತುಗಳನ್ನು ಮಾರಬಯಸುವ
ಖಾಲಿ ಕೈಗಳೊಂದಿಗೆ ವ್ಯವಹಾರ ಮಾಡಿ
ತೊಂದರೆಗೆ ಸಿಲುಕಿಕೊಳ್ಳದಿರಿ.

ಅಂಥವರಿಗೆ ಹೇಳಿ :

“ಬನ್ನಿ… ನಮ್ಮೊಂದಿಗೆ ಹೊಲಗಳಿಗೆ;
ಇಲ್ಲಾ, ನಮ್ಮ ಗೆಳೆಯರೊಂದಿಗೆ
ಸಮುದ್ರಕ್ಕೆ ಹೋಗಿ ಬಲೆ ಬೀಸಿ.

ಭೂಮಿ ತಾಯಿ, ಸಮುದ್ರ ದೇವತೆ
ನಮ್ಮನ್ನು ಆಶೀರ್ವದಿಸಿದಂತೆ
ನಿಮ್ಮನ್ನೂ ಹಾರೈಸುವರು”

ಸಂಗೀತಗಾರರು, ನೃತ್ಯಪಟುಗಳು
ಎದುರಾದರೆ
ಅವರ ಉಡುಗೊರೆಗಳನ್ನು ಸ್ವೀಕರಿಸಿ.

ಅವರಾದರೂ ಹೂವು, ಹಣ್ಣು, ಸುಗಂಧದ
ಬೆನ್ನು ಹತ್ತಿದವರೇ.
ಅವರು ವಿನಿಮಯಕ್ಕೆ ತಂದಿರುವುದು
ಕಲ್ಪನೆಯ ಕನಸುಗಳಾದರೂ
ಅವು ನಿಮ್ಮ ಆತ್ಮದ ಹೊಟ್ಟೆ ತುಂಬಿಸುತ್ತವೆ,
ಮಾನ ಮುಚ್ಚುತ್ತವೆ.

ನೀವು ಮಾರುಕಟ್ಟೆ ಬಿಡುವ ಮುಂಚೆ
ಯಾರೂ ಖಾಲೀ ಕೈಯಲ್ಲಿ ವಾಪಸ್ಸಾಗಿಲ್ಲ ಎನ್ನುವುದನ್ನು
ಖಾತ್ರಿ ಮಾಡಿಕೊಳ್ಳಿ.

ತನ್ನ ಕಟ್ಟ ಕಡೆಯ ಸಂತಾನವೂ
ಹಾಯಾಗಿ ನಿದ್ರಿಸುವ ತನಕ
ಭೂಮಿಯ ಆತ್ಮಕ್ಕೆ ನಿದ್ದೆಯಿಲ್ಲ.

ಮುಂದುವರೆಯುತ್ತದೆ……….

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

1 Comment

Leave a Reply