ಕಲ್ಲುಕುಟಿಗ ಹಶ್ನು, ಮತ್ತೆ ಕಲ್ಲುಕುಟಿಗನಾಗಿದ್ದು : ಒಂದು ಜಪಾನಿ ಜನಪದ ಕಥೆ

hashnu

ಒಂದೂರಲ್ಲಿ ಹಶ್ನು ಎಂಬ  ಕಲ್ಲುಕುಟಿಗನಿದ್ದ. ಉಂಡುಟ್ಟು ಹೆಂಡತಿ ಮಕ್ಕಳ ಜೊತೆ ಚೆನ್ನಾಗಿಯೇ ಇದ್ದ. ಆದರೂ  ಅವನಿಗೆ ಜೀವನದಲ್ಲಿ ಸಂತೃಪ್ತಿ ಅನ್ನೋದೇ ಇರಲಿಲ್ಲ. ಯಾವಾಗಲೂ ಅವನು ನಾನು ಅದಾಗಿದ್ದಿದ್ದರೆ… ಇದಾಗಿದ್ದಿದ್ದರೆ… ಅಂತ ಕನಸು ಕಾಣುತ್ತ ಇರುತ್ತಿದ್ದ.

ಹೀಗೆ ಒಂದು ದಿನ ಹಶ್ನುವಿಗೆ “ನಾನು ರಾಜಕುಮಾರನಾಗಿರಬೇಕಿತ್ತು…” ಅನ್ನುವ ಆಸೆ ತೀವ್ರವಾಗಿ ಕಾಣಿಸಿಕೊಂಡಿತು. ಅದೇನು ಘಳಿಗೆಯೋ ಏನೋ ಮರುಕ್ಷಣ ಅವನು ರಾಜಕುಮಾರನಾಗಿಬಿಟ್ಟ.

ಕಲ್ಲುಕುಟಿಗ ಹಶ್ನು, ರಾಜಕುಮಾರನಾಗಿ ತನ್ನ ಸಂಪತ್ತು – ಅಧಿಕಾರಗಳ ಬಗ್ಗೆ ಸಂಭ್ರಮಿಸುತ್ತಾ, ತನ್ನ ಅರಮನೆ ಮಾಳಿಗೆ ಮೇಲೆ ನಿಂತುಕೊಂಡಿದ್ದ. ಹಾಗೇ ಆಕಾಶ ನೋಡುತ್ತಾ ನಿಂತಿದ್ದ ಅವನಿಗೆ, ಸೂರ್ಯನ ಶಕ್ತಿ, ತೇಜಸ್ಸುಗಳು ಕಣ್ಣು ಕುಕ್ಕಿದವು. ಸೂರ್ಯನ ಶಕ್ತಿ ಎದುರು ತಾನು ಏನೂ ಅಲ್ಲ ಅನ್ನುವ ಅತೃಪ್ತಿ ಅವನಿಗೆ ಕಾಡತೊಡಗಿತು. “ಛೆ! ನಾನು ಸೂರ್ಯನಾಗಬೇಕಿತ್ತು” ಅಂತ ಪರಿತಪಿಸತೊಡಗಿದ.

ಆಶ್ಚರ್ಯ! ರಾಜಕುಮಾರನಾಗಿದ್ದ ಹಶ್ನು, ಮರುಕ್ಷಣವೇ ಸೂರ್ಯನಾಗಿಬಿಟ್ಟಿದ್ದ!!

ಸೂರ್ಯನಾಗಿ ಆಕಾಶದಲ್ಲಿ ಉರಿಯುತ್ತ ನಿಂತ ಹಶ್ನುವನ್ನು ಮೋಡ ಮುಸುಕಿತು. ಆಗ ಸೂರ್ಯನಾಗಿದ್ದ ಕಲ್ಲುಕುಟಿಗನಿಗೆ, “ಅಯ್ಯೋ! ಈ ಮೋಡ ಸೂರ್ಯನಿಗಿಂತ ಶಕ್ತಿಶಾಲಿ!! ನಾನು ಮೋಡವೇ ಆಗಿರಬೇಕಿತ್ತು” ಅಂದುಕೊಂಡ.

ಹಾಗಂದುಕೊಂಡ ಮರುಕ್ಷಣವೇ ಹಶ್ನು ಮೋಡವಾಗಿ ಬದಲಾಗಿದ್ದ.

ಮೋಡವಾಗಿ ಆಕಾಶದಲ್ಲಿ ಖುಷಿಯಿಂದ ತೇಲಾಡುತ್ತಿದ್ದ ಹಶ್ನುವನ್ನು ಯಾರೋ ದಬ್ಬಿದಂತೆ ಭಾಸವಾಗತೊಡಗಿತು. ನನ್ನನ್ನೇ ದಬ್ಬುವವರು ಯಾರೆಂದು ನೋಡಿದರೆ, ಅದು ಗಾಳಿ! ಈಗ ಹಶ್ನುವಿಗೆ ತಾನು ಗಾಳಿಯಾಗಿರಬೇಕಿತ್ತು ಅನ್ನಿಸತೊಡಗಿತು.

ಮೋಡವಾಗಿದ್ದ ಹಶ್ನು, ಆ ಕ್ಷಣವೇ ಗಾಳಿಯಾದ. ಗಾಳಿಯಾಗಿ ಇಷ್ಟಬಂದಲ್ಲೆಲ್ಲ ಸುರುಳಿ ಸುತ್ತಿ ಬೀಸತೊಡಗಿದ. ಈಗವನು ಖುಷಿಯಾಗಿದ್ದ. ಆದರೆ, ಆ ಖುಷಿಯಾದರೂ ಎಷ್ಟು ಹೊತ್ತು? ಬೀಸುತ್ತ ಬೀಸುತ್ತ ಧಡ್ಡನೆ ಏನೋ ಅಡ್ಡ ಬಂದು ತಡೆದಂತಾಯ್ತು. ಕಣ್ಬಿಟ್ಟು ನೋಡಿದರೆ, ಬೆಟ್ಟವೊಂದು ತಲೆಎತ್ತಿ ನಿಂತಿತ್ತು! ಅದು ಗಾಳಿಯನ್ನು ತಡೆದು, ಬೀಸುವ ದಿಕ್ಕನ್ನು ನಿಯಂತ್ರಿಸುತ್ತಿತ್ತು.

ಹಶ್ನುವಿಗೆ ತಾನು ಬೆಟ್ಟವಾಗಿರಬೇಕಿತ್ತು ಅನಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಮತ್ತು. ಹಾಗಂದುಕೊಂಡ ಕೂಡಲೇ ಅವನು ಬೆಟ್ಟವಾಗಿ ನಿಂತಿದ್ದ!!

“ನನ್ನಷ್ಟು ಶಕ್ತಿಶಾಲಿ ಯಾರೂ ಇಲ್ಲ! ನಾನು ಗಾಳಿಯನ್ನೂ ನಿಯಂತ್ರಿಸಬಲ್ಲೆ” ಎಂದು ಬೀಗತೊಡಗಿದ. ಹಾಗೆ ಬೀಗುತ್ತಿರುವಾಗಲೇ, ಬುಡಕ್ಕೆ ಯಾರೋ ‘ಠಣ್’ ಎಂದು ಬೀಸಿ ಹೊಡೆದರು. ಅದರ ನೋವಿಗೆ ಬೆಟ್ಟವಾಗಿದ್ದ ಹಶ್ನು ಅಲ್ಲಾಡಿಹೋದ. ಅದೇನೆಂದು ನೋಡಲು ಕಣ್ಣುಕೆಳಗೆ ಮಾಡಿದರೆ…. ಕಲ್ಲುಕುಟಿಗನೊಬ್ಬ ಚಾಣ ಮತ್ತು ಸುತ್ತಿಗೆ ಹಿಡಿದು ಬೆಟ್ಟದ ಬಂಡೆಯನ್ನು ಕುಟ್ಟುತ್ತಿದ್ದ!!

ಹಶ್ನುವಿಗೆ ಜ್ಞಾನೋದಯವಾಯಿತು. “ನಾನು ಕಲ್ಲುಕುಟಿಗನಾಗಿದ್ದಾಗ ನಿಜಕ್ಕೂ ನೆಮ್ಮದಿಯಿಂದ ಇದ್ದೆ. ನಾನು ಮತ್ತೆ ಕಲ್ಲುಕುಟಿಗನಾಗಬೇಕು” ಎಂದು ತೀವ್ರವಾಗಿ ಹಂಬಲಿಸತೊಡಗಿದ.

ಮರುಕ್ಷಣವೇ ಅವನು ಕಲ್ಲುಕುಟಿಗನಾಗಿ ಬದಲಾದ.

1 Comment

Leave a Reply