ವ್ಯಾಪಾರದಲ್ಲಿ ನಷ್ಟವಾಗಿದೆ, ಭರಿಸುವುದು ಹೇಗೆ? : ಅರಳಿಮರ ಸಂವಾದ

ನೀವು ನಿಜವಾಗಿಯೂ ಧಾರ್ಮಿಕ ಮನಸ್ಥಿತಿಯವರಾಗಿದ್ದೀರಿ ಎಂದಾದರೆ, ನಿಮಗೆ ಸಮಸ್ಯೆಯಾದಾಗ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದರಲ್ಲಿ ಅಥವಾ ಜ್ಯೋತಿಷಿಗಳ ಬಳಿ ಕವಡೆ ಹಾಕಿಸುವುದರಲ್ಲಿ ಸಮಯ ಕಳೆಯಬಾರದು. ಏಕೆಂದರೆ ಧರ್ಮ ಯಾವತ್ತೂ ಕರ್ಮವನ್ನು ಬೋಧಿಸುತ್ತದೆ . ಆದ್ದರಿಂದ, ಕಾಲಹರಣ ಬಿಟ್ಟು ಕರ್ಮ ನಡೆಸಲು ಮುಂದಾಗಬೇಕು… ~ ಚಿತ್ಕಲಾ

ರಳಿಮರದ ಓದುಗರೊಬ್ಬರು (ವಾಟ್ಸ್ಪ್ ಬ್ರಾಡ್’ಕಾಸ್ಟಿನಲ್ಲಿ ಅವರ ಹೆಸರು AraLi 5 ಎಂದು ನಮೂದಾಗಿದೆ) ಒಂದು ಪ್ರಶ್ನೆ ಕಳಿಸಿದ್ದಾರೆ.

“ವ್ಯಾಪಾರದಲ್ಲಿ ನಷ್ಟವಾಗಿದೆ, ಅದಕ್ಕಾಗಿ ಅಧ್ಯಾತ್ಮದ ಕಡೆ ಬಂದಿದ್ದೇನೆ. ವ್ಯಾಪಾರದಲ್ಲಿ ಲಾಭವಾಗಲು ಏನು ಮಾಡಬೇಕು?” ಇದು ಅವರ ಪ್ರಶ್ನೆ.

ಮೊದಲನೆಯದಾಗಿ, ವ್ಯಾಪಾರದ ಲಾಭ – ನಷ್ಟಗಳ ಚರ್ಚೆ ಆಧ್ಯಾತ್ಮಿಕ ಸಲಹೆಗಾರರ (ಸ್ಪಿರಿಚುವಲ್ ಕೌನ್ಸೆಲರ್ – SC) ವ್ಯಾಪ್ತಿಗೆ ಬರುವುದಿಲ್ಲ. ನಮಗೆ ಅನಾರೋಗ್ಯವಾದಾಗ ಯಾವ ಅಂಗಕ್ಕೆ ಸಮಸ್ಯೆಯಾಗಿದೆಯೋ ಅದರ ಪರಿಣಿತ  ವೈದ್ಯರ ಬಳಿಗೆ ಹೋಗುತ್ತೇವಲ್ಲವೆ? ಆಯಾ ಪರಿಣಿತರ ಬಳಿ ಚಿಕಿತ್ಸೆ ತೆಗೆದುಕೊಂಡರೆ ಮಾತ್ರ ಕಾಯಿಲೆ ಸರಿಯಾಗಿ ಗುಣವಾಗಲು ಸಾಧ್ಯ.

ಈಗಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಸಲಹೆಗಾರರು ಇದ್ದಾರೆ. ಹಾಗೆಯೇ, ವ್ಯಾಪಾರ ಕ್ಷೇತ್ರದ ಲಾಭನಷ್ಟಗಳ ಚರ್ಚೆ ಕುರಿತು ಮಾತಾಡಲಿಕ್ಕೂ ಇದ್ದಾರೆ. ನಿಮ್ಮ ಸಮೀಪದಲ್ಲಿ ಲಭ್ಯವಿರುವವರ ಬಳಿ (ಇರದಿದ್ದರೆ ನಗರಗಳಲ್ಲಿ ಸಿಗುತ್ತಾರೆ; ಅಥವಾ ಕೆಲವು ದಿನಪತ್ರಿಕೆಗಳು ಇಂತ ಸಮಾಲೋಚನೆಯ ಕಾಲಮ್ ಪ್ರಕಟಿಸುತ್ತವೆ, ಅಲ್ಲಿಗೂ ಪತ್ರ ಬರೆಯಬಹುದು) ಸಮಯ ನಿಗದಿ ಮಾಡಿಕೊಂಡು ಮಾತನಾಡುವುದು ಒಳ್ಳೆಯದು.

ಆದರೆ, ಬಹುತೇಕವಾಗಿ ವ್ಯಾಪಾರದ ಲಾಭ ನಷ್ಟಗಳ ವಿಷಯ ಬಂದಾಗ ನಾವು ದೇವ – ದಿಂಡರ ಕಡೆ, ಅಧ್ಯಾತ್ಮದ ಕಡೆ (ಅಂದರೆ, ನಾವು ಅಧ್ಯಾತ್ಮ ಅಂದುಕೊಂಡಿರುವುದರ ಕಡೆ) ಮುಖ ಮಾಡುತ್ತೇವೆ. ಕೆಲವರು ಹರಕೆಗಳನ್ನು ಹೊರುತ್ತಾರೆ, ಕೆಲವರು ಪೂಜೆ ಪುನಸ್ಕಾರಗಳ ಮೊರೆ ಹೋಗುತ್ತಾರೆ. ತಮ್ಮ ಸಮಸ್ಯೆಗೆ, ತಮಗಾಗಿರುವ ನಷ್ಟಕ್ಕೆ ದೇವಸ್ಥಾನಗಳಲ್ಲಿ ಅಥವಾ ಆಶ್ರಮಗಳಲ್ಲಿ ಪರಿಹಾರ ಹುಡುಕುತ್ತಾರೆ. ಕಳೆದುಕೊಂಡಿರುವುದು ವ್ಯವಹಾರದ ಸಂತೆಯಲ್ಲಿ. ಅದನ್ನು ದೇವಸ್ಥಾನದ ಪೂಜೆಯ ಮೂಲಕ ಪಡೆಯಲು ಯತ್ನಿಸಿದರೆ ಸಿಕ್ಕೀತೇ?

ನೀವು ನಿಜವಾಗಿಯೂ ಧಾರ್ಮಿಕ ಮನಸ್ಥಿತಿಯವರಾಗಿದ್ದೀರಿ ಎಂದಾದರೆ, ನಿಮಗೆ ಸಮಸ್ಯೆಯಾದಾಗ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದರಲ್ಲಿ ಅಥವಾ ಜ್ಯೋತಿಷಿಗಳ ಬಳಿ ಕವಡೆ ಹಾಕಿಸುವುದರಲ್ಲಿ ಸಮಯ ಕಳೆಯಬಾರದು. ಏಕೆಂದರೆ ಧರ್ಮ ಯಾವತ್ತೂ ಕರ್ಮವನ್ನು ಬೋಧಿಸುತ್ತದೆ. ಆದ್ದರಿಂದ, ಕಾಲಹರಣ ಬಿಟ್ಟು ಕರ್ಮ ನಡೆಸಲು ಮುಂದಾಗಿ. 

ನೀವು ಹಿಂದೂ ಆಗಿದ್ದರೆ (ಪ್ರಶ್ನೆ ಕೇಳಿದವರ ಹಿನ್ನೆಲೆ ತಿಳಿದಿಲ್ಲ. ಉತ್ತರ ನೀಡುತ್ತಿರುವವರ ತಿಳುವಳಿಕೆ ಹಿಂದೂ ಧರ್ಮಕ್ಕೆ ಸೀಮಿತವಾಗಿರುವುದರಿಂದ ನಿರ್ದಿಷ್ಟ ಧರ್ಮವನ್ನು ಉಲ್ಲೇಖಿಸಲಾಗಿದೆ) ಹಿಂದೂ ಧರ್ಮದ ಶ್ರೇಷ್ಠ ಗ್ರಂಥ ಭಗವದ್ಗೀತೆಯನ್ನು ಓದಿರುತ್ತೀರಿ ಅಥವಾ ಅದರ ಬಗ್ಗೆ ಕೇಳಿರುತ್ತೀರಿ. ಅದು ಕರ್ಮ ಮತ್ತು ಕರ್ಮಫಲದ ಬಗ್ಗೆ ವಿವರಣೆ ನೀಡುತ್ತದೆ. ದೇವಸ್ಥಾನಕ್ಕೆ ಹೋಗುವುದು ಧಾರ್ಮಿಕತೆಯ ಸಂಕೇತವಲ್ಲ. ಧರ್ಮ ಏನನ್ನು ಬೋಧಿಸುತ್ತದೆಯೋ ಅದನ್ನು ಶ್ರದ್ಧೆಯಿಂದ ಮಾಡುವುದು ಧಾರ್ಮಿಕತೆ. ಧರ್ಮವು ಕರ್ಮವನ್ನು ಬೋಧಿಸುತ್ತದೆಯಾದ್ದರಿಂದ, ನಿಮ್ಮ ನಷ್ಟವನ್ನು ನೀವು ಕಠಿಣ ಪರಿಶ್ರಮದಿಂದಲೇ ತುಂಬಕೊಳ್ಳಲು ಯತ್ನಿಸಬೇಕು ಹೊರತು ಮತ್ಯಾವುದರಿಂದಲೂ ಅಲ್ಲ.

ಅಥವಾ; ನಷ್ಟದಿಂದ ಬೇಸತ್ತ ಮನಸ್ಸಿಗೆ ಸಾಂತ್ವನ ಸಿಗುತ್ತದೆ ಎಂದು ನೀವು ದೇವಸ್ಥಾನಕ್ಕೆ ಹೋಗುವುದಾದರೆ ನಿಜಕ್ಕೂ ಅದು ಬಹಳ ಒಳ್ಳೆಯದು. ಶಾಂತಿ ನಮ್ಮ ಮನಸ್ಸಿನೊಳಗೇ ಇರುತ್ತದೆ, ಅದನ್ನು ಅರಸಿ ಎಲ್ಲಿಯೂ ಹೋಗಬೇಕಿಲ್ಲ ಅನ್ನೋದು ನಿಜವಾದರೂ. ಆ ನಮ್ಮೊಳಗಿನ ಶಾಂತಿಯನ್ನು ಕಂಡುಕೊಳ್ಳಲು ಒಂದು ಪರಿಕರ ಬೇಕಾಗುತ್ತದೆ. ಆ ಪರಿಕರ ದೇವಸ್ಥಾನವಾದರೆ ಖಂಡಿತವಾಗಿಯೂ ಅದು ಒಳ್ಳೆಯದೇ. ಆದರೆ, ಈ ಪ್ರಕ್ರಿಯೆ ನಿಮ್ಮ ಭಕ್ತಿಯ ಪರಿಧಿಯಲ್ಲೇ ಇದ್ದರೆ ಒಳ್ಳೆಯದು. ಮೂಢನಂಬಿಕೆ, ಮೌಢ್ಯಾಚರಣೆಗಳಿಂದ ನಿಮ್ಮ ಮನಸ್ಸು ಮತ್ತಷ್ಟು ವಿಚಲಿತವಾಗಿ, ವ್ಯವಹಾರಕ್ಕೆ ಕೊಡುವ ಸಮಯವನ್ನೆಲ್ಲ ತಿಂದುಹಾಕಿಬಿಡುವ ಸಾಧ್ಯತೆಗಳೇ ಹೆಚ್ಚು. 

ಆದ್ದರಿಂದ, ಸರಳ ಪೂಜೆಯಿಂದ ಮನಶ್ಶಾಂತಿಯನ್ನೂ ಆತ್ಮವಿಶ್ವಾಸವನ್ನೂ ಪಡೆದು; ಅದರಷ್ಟೇ, ಅಥವಾ ಅದರ ದುಪ್ಪಟ್ಟು ಶ್ರದ್ಧೆಯಿಂದ ನಿಮ್ಮ ಕಾಯಕದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದೆ ಇರುವುದಿಲ್ಲ. ಹಾಗಿದ್ದೂ ದೊರಕದೇ ಹೋದರೆ, ನಿಮಗೆ ‘ಲಭ್ಯ’ ಇರುವಷ್ಟು ನಿಮಗೆ ಖಾತ್ರಿಯಾಗಿ ದೊರೆಯುತ್ತದೆ. ಲಭ್ಯವನ್ನು ಗೌರವದಿಂದ ಸ್ವೀಕರಿಸಬೇಕು; ಅದರ ಬಗ್ಗೆ ಅಸಾಮಾಧನ ಪಟ್ಟುಕೊಂಡರೆ, ಅದು ನಿಮ್ಮ ದುಡಿಮೆಗೆ ನೀವೇ ಮಾಡಿಕೊಳ್ಳುವ ಅವಮಾನ.

ಇನ್ನು; ಅಧ್ಯಾತ್ಮದ ವಿಷಯಕ್ಕೆ ಬಂದರೆ, ಧ್ಯಾನ ಇತ್ಯಾದಿಗಳು…. ನಷ್ಟದಲ್ಲಿರುವ ನೀವು ಅದಕ್ಕಾಗಿ ಅಧ್ಯಾತ್ಮಕ್ಕೆ ಬಂದಿರಿ ಎಂದರೆ ಏನರ್ಥ? ನೀವು ಲಾಭದಲ್ಲಿರುವಾಗಲೇ ಅಧ್ಯಾತ್ಮಮುಖಿಯಾಗಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಲಾಭ ನಷ್ಟಗಳನ್ನು ಸಮನಾಗಿ ಸ್ವೀಕರಿಸುವ ಸಮಚಿತ್ತ ನಿಮಗೆ ಸಿದ್ಧಿಯಾಗಿರುತ್ತಿತ್ತು. ಅಥವಾ, ಈಗಲಾದರೂ ಬಂದಿದ್ದೀರಿ. ಒಳ್ಳೆಯದು.  ಇದರಿಂದ ನೇರವಾಗಿ ನಿಮ್ಮ ವ್ಯವಹಾರಕ್ಕೆ ಚೂರೂ ಲಾಭವಿಲ್ಲ.

ಆದರೆ, ಅಧ್ಯಾತ್ಮ ನಿಮ್ಮ ಮನಸ್ಸನ್ನು ಪ್ರಬುದ್ಧವಾಗಿಸುವುದು. ಸಂಯಮ ಕಲಿಸುವುದು. ಧ್ಯಾನದಿಂದ ನೀವು ಏಕಾಗ್ರತೆ ಸಾಧಿಸಬಲ್ಲಿರಿ. ಸಹಜೀವಿಗಳನ್ನು ಪ್ರೇಮಿಸಲು ಕಲಿಯುವಿರಿ. ಪೈಪೋಟಿ ತೊರೆಯುವಿರಿ. ಫಲದ ಚಿಂತೆ ಬಿಟ್ಟು ಕಾಯಕ ಮಾಡುವುದರಲ್ಲಿ ಆಸಕ್ತರಾಗುವಿರಿ.

ಯಾವಾಗ ನೀವು ಫಲದ ಚಿಂತೆ ಬಿಟ್ಟು ಕೆಲಸದಲ್ಲಿ ಸಂಪೂರ್ಣ ಮಗ್ನರಾಗುತ್ತೀರೋ, ಆಗ ಫಲವೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ವ್ಯಾಪಾರ ಅಥವಾ ನಿಮ್ಮ ಯಾವುದೇ ವ್ಯವಹಾರವನ್ನು ತಲ್ಲೀನತೆಯಿಂದ, ಸಕಾರಾತ್ಮಕ ದೃಷ್ಟಿಕೋನದಿಂದ ನಡೆಸುತ್ತಾ ಹೋಗಿ. ಲಾಭದ ಮಾಪಕವನ್ನು ನಿಮ್ಮ ಆಸೆಯ ಮಟ್ಟಕ್ಕಿಂತಲೂ ವಿಪರೀತ ಎತ್ತರದಲ್ಲಿ ಇರಿಸದೆ, ನಿಮ್ಮ ಅಗತ್ಯದ ಮಟ್ಟಕ್ಕೆ ಇರಿಸಿಕೊಳ್ಳಿ. ಆಗ ನಿಮ್ಮ ವ್ಯವಹಾರದ ಸಾಫಲ್ಯ ನಿಮಗೆ ಗೋಚರವಾಗುತ್ತದೆ.

ಕೊನೆಯದಾಗಿ; ನೀವು ಮಾಡುತ್ತಿರುವ ವ್ಯವಹಾರ ನಿಮ್ಮ ಜಾಣ್ಮೆ ಮತ್ತು ಕೌಶಲ್ಯಕ್ಕೆ, ಆಸಕ್ತಿಗೆ ಪೂರಕವಾಗಿದೆಯೇ ಎಂದು ನಿಮ್ಮೊಳಗೆ ಆಲೋಚಿಸಿ ಖಾತ್ರಿಮಾಡಿಕೊಳ್ಳಿ. ನಮ್ಮ ಜಾಯಮಾನಕ್ಕೆ ಒಗ್ಗದ ವ್ಯವಹಾರಗಳು ಕೈಹತ್ತುವುದು ಕಷ್ಟ. ಆದ್ದರಿಂದ, ನೀವೇ ಏನೇ ಕೆಲಸ ಮಾಡುತ್ತಿದ್ದರೂ ಮೊದಲು ಅದರ ಬಗ್ಗೆ ಜ್ಞಾನ ಬೆಳೆಸಿಕೊಂಡು, ಅದರಲ್ಲಿ ಆಸಕ್ತರಾಗಿ, ಅದನ್ನು ಪ್ರೀತಿಯಿಂದ ಮಾಡಲು ಆರಂಭಿಸಿ. ನಿಮ್ಮ ಬದ್ಧತೆ ನಿಮ್ಮನ್ನು ಖಂಡಿತವಾಗಿಯೂ ಗೆಲ್ಲಿಸುವುದು.

 

Leave a Reply