ವೇದಗಳಲ್ಲಿ ಮುಖ್ಯ ನದಿಗಳ ನಿರುಕ್ತ | ಸನಾತನ ಸಾಹಿತ್ಯ ~ ಮೂಲಪಾಠಗಳು #37

ವೇದಗಳಲ್ಲಿ ಗಂಗೆ, ಯಮುನೆ, ಸರಸ್ವತೀ, ಶತುದ್ರೀ, ಪರುಷ್ಣೀ (ಇರಾವತೀ), ಸಿಂಧೂ, ಅಸಿಕ್ನೀ, ಮರುಧ್ವೃಧಾ, ವಿತಸ್ತಾ, ಅರ್ಜೀಕೀ, ಸುಷೋಮಾ ಮೊದಲಾದ ನದಿಗಳ ಉಲ್ಲೇಖವಿದೆ. ನಿರುಕ್ತದಲ್ಲಿ (9 : 26) ಈ ನದಿಗಳ ಅರ್ಥವನ್ನು ಹೀಗೆ ಹೇಳಲಾಗಿದೆ:

ಗಂಗಾ : ‘ಗಮನಾತ್ ಇತಿ ಗಂಗಾ’ ಎಂದರೆ ಪ್ರವಹಿಸು ಎಂದು. ಇದು ‘ಗಮ್’ ಧಾತುವಿನಿಂದ ಬಂದಿದೆ. ಗಂಗಾ ಎಂದರೆ ನಿರಂತರವಾಗಿ ಹರಿಯುವವಳು ಎಂದರ್ಥ.

ಯಮುನಾ : ‘ಪ್ರಯುವತಿ, ಗಚ್ಛತೀತಿ ವಾ’ – ಇತರ ನದಿಗಳೊಡನೆ ಕೂಡಿ ಹರಿಯುವುದರಿಂದಲೂ; ನಿಧಾನವಾಗಿ, ನಿಶ್ಶಬ್ದವಾಗಿ ಹರಿಯುವುದರಿಂದಲೂ ಈ ಅನ್ವರ್ಥ

ಸರಸ್ವತೀ : ‘ಸರಃ ಇತ್ಯುದಕ ನಾಮ ಸರತೇಃ ತದ್ವತೀ – ಸರಃ’. ಹೀಗೆಂದರೆ ‘ಉದಕವನ್ನು ಸಮೃದ್ಧವಾಗಿ ಹೊಂದಿರುವವಳೇ ಸರಸ್ವತೀ’ ಎಂದು.  

ಪರುಷ್ಣೀ (ಇರಾವತೀ) : ‘ಇರಾವತೀ ಪರುಷ್ಣೀತ್ಯಾಹುಃ’ – ಇರಾವತಿಯನ್ನೇ ಋಷಿಗಳು ಇಲ್ಲಿ ಪರುಷ್ಣೀ ಎಂದು ಕರೆದಿದ್ದಾರೆ. ‘ಪರ್ವ’ ಎಂಬ ಪದದಿಂದ ಪರುಷ್ಣೀ ಎಂಬ ಪದ ವ್ಯುತ್ಪತ್ತಿಯಾಗಿದೆ. ಪರ್ವತಗಳಿಂದ ಕೂಡಿದ ಅಂಕುಡೊಂಕಾದ ಪ್ರದೇಶದಿಂದ ಹರಿಯುವ ನದಿಯೇ ‘ಪರುಷ್ಣೀ’.

ಅಸಿಕ್ನೀ : ಅಶುಕ್ಲಾ, ಅಸಿತಾ, ಸಿತಮಿತಿವರ್ಣನಾಮ, ತತ್ಪ್ರತಿಷೇಧೋsಸಿತಂ – ಎಂದರೆ ಬೆಳ್ಳಗಿಲ್ಲದ, ಕಪ್ಪಾದ ನದಿ ಎಂದರ್ಥ. ಸಿರವೆಂದರೆ ಬಿಳುಪು. ಅದು ಅಲ್ಲದೆ ಇರುವುದು ಅಸಿತ. ಕಪ್ಪಾದ (ಅಸಿತವಾದ) ನೀರಿನಿಂದ ತುಂಬಿರುವ ನದಿಯೇ ಅಸಿಕ್ನೀ.

ವಿತಸ್ತಾ : ‘ವಿಸಸ್ತಾsವಿದಗ್ಧಾ’ – ಇಲ್ಲಿ ಅವಿದಗ್ಧಾ ಎಂದರೆ ಸುಡಲ್ಪಡದೆ ಇರುವುದು. ಒಂದೊಮ್ಮೆ ವೈದೇಹಕವೆಂಬ ಅಗ್ನಿಯು ಇತರ ಎಲ್ಲ ನದಿಗಳನ್ನು ಸುಟ್ಟುಹಾಕಿತಂತೆ. ಆದರೆ ಇದನ್ನು ಮಾತ್ರ ಸುಡಲಾಗಲಿಲ್ಲವೆಂದು ಸಾಮಿಧೇನೀ ಬ್ರಾಹ್ಮಣದಲ್ಲಿ ಹೇಳಿದೆ.  

ಸುಷೋಮಾ : ‘ಸಿಂಧುಃ ಯದೇನಾ ಅಭಿ ಪ್ರಸುವಂತೀ ನದ್ಯಃ | ಸಿಂಧುಃ ಸ್ಯಂದನಾತ್’ – ಸುಷೋಮಾ ಎನ್ನುವುದು ಸಿಂಧೂ ನದಿಯ ಮತ್ತೊಂದು ಹೆಸರು. ಈ ನದಿಯ ದಡದಲ್ಲಿ ಒಳ್ಳೆಯ ಸೋಮಲತೆಗಳು ಬೆಳೆಯುತ್ತಿದ್ದ ಕಾರಣದಿಂದ ಸುಷೋಮಾ ಎಂಬ ಹೆಸರು ಬಂದಿರಬೇಕೆಂದು ಅಭಿಪ್ರಾಯವಿದೆ. ಸಿಂಧು ಎಂದರೆ ನಿರಂತರವಾಗಿ ಹರಿಯುವ ನದಿ ಎಂದರ್ಥ.

 

1 Comment

Leave a Reply