ಬೆಣ್ಣೆ ಕದಿಯುವುದರಿಂದ ಬಾಣ ತಗಲುವವರೆಗೆ…. ಶ್ರೀಕೃಷ್ಣನ ಬದುಕೇ ಬೋಧನೆ!

ಕೃಷ್ಣ ಕಥೆಯನ್ನು ಹೃದಯದಿಂದ ಕೇಳಿದರೆ, ನಮಗೆ ಕೊನೆಗೂ ದಕ್ಕುವುದು ಒಂದು ಸಹಜವಾದ ಜೀವ. ತನ್ನೆಲ್ಲ ಶಕ್ತಿ , ಜಾಣತನಗಳನ್ನು ಮತ್ತೊಬ್ಬರಿಗಾಗಿ ವಿನಿಯೋಗಿಸುವ ಗೊಲ್ಲರ ಹುಡುಗ, ಅರಸೊತ್ತಿಗೆ ಪಡೆದ ಮೇಲೂ ಅಷ್ಟೇ ಸರಳ ಜೀವಿ. ಅವನಲ್ಲಿ ಅಧಿಕಾರದ ಹಂಬಲ ಯಾವ ಪುರಾಣಗಳ ಯಾವ ಪುಟದಲ್ಲೂ ಕಾಣಸಿಗುವುದಿಲ್ಲ ಅವನ ಯುದ್ಧ – ಕಾದಾಟಗಳೆಲ್ಲ ಲೋಕಹಿತಕ್ಕಾಗಿ ಹೊರತು ತಾನು ಏನನ್ನೋ ಪಡೆಯಲಿಕ್ಕಾಗಿ ಅಲ್ಲ. ಹಾಗಿದ್ದೂ ಅವನು ಪಡೆದೇ ತೀರುತ್ತಾನೆ. ಏನನ್ನು ಗೊತ್ತೇ? ಶಾಪಗಳನ್ನು!!  ~ ಸಾ.ಹಿರಣ್ಮಯಿ

krsna3
ಕಾಳಿಘಾಟ್ ಚಿತ್ರಸಂಗ್ರಹ | ಕೃಪೆ: ಗೂಗಲ್

ಕೃಷ್ಣ ಎಂದರೇನೇ ‘ಸರ್ವಾಕರ್ಷಕ’ ಎಂದು. ಸಮಸ್ತ ಸೃಷ್ಟಿಯನ್ನು ತನ್ನ ಗುರುತ್ವದಿಂದ (ಗುರುತ್ವಾಕರ್ಷಣೆಯಿಂದ, ಹಿರಿತನದಿಂದ, ಜವಾಬ್ದಾರಿಯಿಂದ ಅಥವಾ ಬಲದಿಂದ ಎನ್ನುವ ಅರ್ಥಗಳೊಂದಿಗೆ) ಸಮತೋಲನದಲ್ಲಿ ಇರಿಸುವ ಮಹಾವಿಷ್ಣುವಿನ ಪೂರ್ಣಾವತಾರ. ಗುರತ್ವಾಕರ್ಷಣೆ ಇಲ್ಲದೆ ಹೋದರೆ ಸೃಷ್ಟಿಯು ಹೇಗೆ ಸಮತೋಲನದಲ್ಲಿ ವ್ಯವಸ್ಥಿತವಾಗಿರಲು ಸಾಧ್ಯವಿಲ್ಲವೋ, ಹಾಗೆ ಸೃಷ್ಟಿಯ ಜಡಚೇತನಗಳ ಅಸ್ತಿತ್ವದ ಹೊಣೆಗಾರಿಕೆ ಕೃಷ್ಣನದ್ದು.

ಬಹುತೇಕವಾಗಿ ಕೃಷ್ಣ ಮಹಾವಿಷ್ಣುವಿನ ಅವತಾರ ಎಂಬ ನಂಬಿಕೆ ಇದೆ. ಆದರೆ ‘ಕೃಷ್ಣಪಂಥೀಯರು’ (ಹರೇಕೃಷ್ಣ ಪಂಥ, ರಾಧಾಪಂಥ, ವೈಷ್ಣವ ಬಾವುಲ್ ಪಂಥ ಇತ್ಯಾದಿ) ಮಹಾವಿಷ್ಣುವನ್ನೇ ಕೃಷ್ಣನ ಅವತಾರವೆಂದೂ, ಸ್ವಯಂ ಕೃಷ್ಣನೇ ಆದಿಮೂಲನೆಂದೂ ಭಾವಿಸುತ್ತಾರೆ. ಈ ಪಂಥದ ನಂಬಿಕೆಯಂತೆ; ಕೃಷ್ಣ ಪರಮಾತ್ಮ ಗೋಲೋಕ ವೃಂದಾವನದಲ್ಲಿ ನೆಲೆಸಿದ್ದಾನೆ. ಅವನ ಪ್ರತಿರೂಪನಾದ ಮಹಾವಿಷ್ಣು ಕ್ಷೀರೋದಕ ಶಾಯಿಯಾಗಿ ಸ್ಥಿತಿಕಾರಕನ ಹೊಣೆಗಾರಿಕೆ ಹೊತ್ತಿದ್ದಾನೆ. ದ್ವಾಪರ ಯುಗದಲ್ಲಿ ಸ್ವತಃ ಗೋಲೋಕ ವೃಂದಾವನದ ಕೃಷ್ಣನೇ ಭೂಮಿಗಿಳಿದು ಬಂದಿದ್ದರಿಂದ, ಈ ಯುಗದ ಅವತಾರ ‘ಪೂರ್ಣಾವತಾರ’ವಾಗಿದೆ. ಮಹಾಭಾರತದಲ್ಲಿ ಶ್ರೀಕೃಷ್ಣನು ಭಗವದ್ಗೀತೆಯನ್ನು ಬೋಧಿಸುವ ಉಲ್ಲೇಖವಿದೆಯಷ್ಟೆ? ಈ ಭಗವದ್ಗೀತೆಯನ್ನು ಸಾವಿರಾರು ವರ್ಷಗಳ ಮೊದಲೇ ಸೂರ್ಯನಿಗೆ (ವಿವಸ್ವಾನ) ಬೋಧಿಸಿರುತ್ತಾನೆ. ಪುನಃ ಅದನ್ನೇ ಅವತಾರಿ ಕೃಷ್ಣನಾಗಿ ಅರ್ಜುನನಿಗೆ ಬೋಧಿಸುತ್ತಾನೆ. ಆದ್ದರಿಂದ ಭಗವದ್ಗೀತೆ ನೇರವಾಗಿ ಪರಮಾತ್ಮನ ಬೋಧನೆ. ಅದು ಆತ್ಯಂತಿಕ ಬೋಧನೆ ಅನ್ನುವುದು ಕೃಷ್ಣಪಂಥೀಯರ ನಿಲುವು.

ಅದರ ಹೊರತಾಗಿಯೂ ಕೃಷ್ಣನ ಚಿತ್ರಣ ಎಲ್ಲ ದೇಶಕಾಲಕ್ಕೂ ಮುದ ನೀಡುವಂಥದ್ದು. ಬಹುಶಃ ಕೃಷ್ಣನಷ್ಟು ವರ್ಣರಂಜಿತವಾಗಿ ಮರುಚಿತ್ರಿಸಲ್ಪಟ್ಟ ಪೌರಾಣಿಕ ಪಾತ್ರ ಮತ್ತೊಂದಿಲ್ಲ. ಕೃಷ್ಣನನ್ನು ಭಂಜಿಸಿದಷ್ಟು, ಕಟ್ಟಿಕೊಟ್ಟಷ್ಟು, ಹಲವು ಆಯಾಮಗಳಲ್ಲಿ ಕಂಡು ಕೊಂಡಾಡಿದಷ್ಟು ಮತ್ಯಾವ ದೇವತೆಯನ್ನೂ ಬಳಸಲಾಗಿಲ್ಲ. ಕೃಷ್ಣ ಅಷ್ಟು ಸಮಗ್ರ ಮತ್ತು ಆಪ್ತ.

ಭಾಗವತ ಪುರಾಣದಲ್ಲಿ ಕೃಷ್ಣನ ಬಾಲಲೀಲೆಯಿಂದ ಹಿಡಿದು ಬೇಡನ ಬಾಣ ತಗುಲಿ ಅವತಾರ ಸಮಾಪ್ತಿಯಾಗುವವರೆಗಿನ ಕಥೆ ಇದೆ. ಬಾಲ್ಯದ ತುಂಟಾಟಗಳು. ಕೌಮಾರ್ಯದ ಸಾಹಸಗಳು, ಯೌವನದ ಪ್ರೇಮಾಲಪ, ವಯಸ್ಕತನದ ಗಾಂಭೀರ್ಯ, ಗೆಳೆಯನಾಗಿ, ಗುರುವಾಗಿ, ಗಂಡನಾಗಿ, ಸಲಹೆಗಾರನಾಗಿ ನಿಭಾಯಿಸಿದ ಜವಾಬ್ದಾರಿಗಳು – ಇವೆಲ್ಲವೂ ಒಂದೆಡೆ ಅತಿಮಾನುಷವಾಗಿರುತ್ತಲೇ, ಜನಜೀವನದ ಸಾಮಾನ್ಯ ಸಂಗತಿಗಳಿಗೆ ಹತ್ತಿರವೂ ಆಗಿವೆ. ಆದ್ದರಿಂದಲೇ ಮಕ್ಕಳಲ್ಲಿ ಕೃಷ್ಣನನ್ನು ಕಾಣುವ, ಯೌವನದ ಮೋಹಕ್ಕೆ ಕೃಷ್ಣನನ್ನು ಹೋಲಿಸುವ, ಕಷ್ಟ ನಿವಾರಣೆಗೆ ಕೃಷ್ಣನ ಬೋಧನೆಗಳನ್ನು ನೆನೆಯುವ ರೂಢಿ ನಮ್ಮಲ್ಲಿ  ಸಾಮಾನ್ಯ.

ಭಾಗವತದ ಪ್ರಕಾರ ಕೃಷ್ಣ ಅವತಾರಿಯೇ ಆದರೂ ಅವನ ಬದುಕು ಸುಲಭವಾಗಿರಲಿಲ್ಲ. ಬಾಲ್ಯದಲ್ಲಿ ಸಾಕು ತಾಯ್ತಂದೆಯರ ಬಳಿ ಬೆಳೆದ. ಮೇಲಿಂದ ಮೇಲೆ ಶತ್ರು ಕಳಿಸಿದ ದುಷ್ಟರ ಉಪಟಳಗಳನ್ನು ಎದುರಿಸಿದ. ಯೌವನಕ್ಕೆ ಕಾಲಿಡುವಾಗಲೇ ತನ್ನನ್ನು ಹೆತ್ತ ತಾಯ್ತಂದೆಯರ ಬಳಿ ಹೋಗಬೇಕಾಯಿತು. ಮಥುರೆಯಲ್ಲಿ ಕಂಸನನ್ನು ಕೊಂದರೂ ಸುಖವಿರಲಿಲ್ಲ. ಆಕ್ರಮಣಕಾರರ ಉಪಟಳದಿಂದ ಮಥುರೆಯನ್ನೇ ತೊರೆದು ತನ್ನ ಸಮಸ್ತ ಯಾದವ ಪರಿವಾರ ಸಮೇತ ದ್ವಾರಕೆಯಲ್ಲಿ ನೆಲೆಸಬೇಕಾಯಿತು.

ಸಮುದ್ರ ದಂಡೆಯಲ್ಲಿದ್ದ ದ್ವಾರಕೆಯನ್ನು ಒಂದು ನಗರವನ್ನಾಗಿ ರೂಪಿಸಲು ಅಣ್ಣ ಬಲರಾಮನೊಂದಿಗೆ ಶ್ರಮಿಸಿದ. ಅಷ್ಟಾದ ಮೇಲೆ ಮದುವೆ, ಮದುವೆಗಳು, ಬಹುಪತ್ನಿಯರ ಪೈಪೋಟಿಯ ತಲೆಬಿಸಿ; ಇತ್ತ ಸಂಬಂಧಿಕರ ಮಕ್ಕಳಾದ ಪಾಂಡವರ ಸಂಕಷ್ಟಗಳು…. ಬಾಲ್ಯದ ಬೆಣ್ಣೆ ಕದಿಯುವ ದಿನಗಳನ್ನು ಬಿಟ್ಟರೆ, ಬಹುಶಃ ಕೃಷ್ಣ ತನ್ನ ಬದುಕನ್ನು ಉಲ್ಲಾಸದಿಂದ ಕಳೆದಿದ್ದು ರಾಧೆ ಮತ್ತು ಗೋಪಿಕೆಯರ ಜೊತೆಗೇ! ಉಳಿದೆಲ್ಲ ಸಂದರ್ಭಗಳಲ್ಲೂ ಕೃಷ್ಣನನ್ನು ಸಮಸ್ಯೆಯ ಮಹಾಪೂರದ ಮೇಲೇ ಚಿತ್ರಿಸಲಾಗಿದೆ.

ಕೃಷ್ಣ ಕಥೆಯನ್ನು ಹೃದಯದಿಂದ ಕೇಳಿದರೆ, ನಮಗೆ ಕೊನೆಗೂ ದಕ್ಕುವುದು ಒಂದು ಸಹಜವಾದ ಜೀವ. ತನ್ನೆಲ್ಲ ಶಕ್ತಿ ಸಾಮರ್ಥ್ಯ, ಜಾಣತನಗಳನ್ನು ಮತ್ತೊಬ್ಬರಿಗಾಗಿ ವಿನಿಯೋಗಿಸುವ ಗೊಲ್ಲರ ಹುಡುಗ, ಅರಸೊತ್ತಿಗೆ ಪಡೆದ ಮೇಲೂ ಅಷ್ಟೇ ಸರಳ ಜೀವಿ. ಅವನಲ್ಲಿ ಅಧಿಕಾರದ ಹಂಬಲ ಯಾವ ಪುರಾಣಗಳ ಯಾವ ಪುಟದಲ್ಲೂ ಕಾಣಸಿಗುವುದಿಲ್ಲ ಅವನ ಯುದ್ಧ – ಕಾದಾಟಗಳೆಲ್ಲ ಲೋಕಹಿತಕ್ಕಾಗಿ ಹೊರತು ತಾನು ಏನನ್ನೋ ಪಡೆಯಲಿಕ್ಕಾಗಿ ಅಲ್ಲ. ಹಾಗಿದ್ದೂ ಅವನು ಪಡೆದೇ ತೀರುತ್ತಾನೆ. ಏನನ್ನು ಗೊತ್ತೇ? ಶಾಪಗಳನ್ನು!! 

ಮಗ ಸಾಂಬನ ಕಾರಣದಿಂದಾಗಿ ಯದುಕುಲಕ್ಕೆ ದೂರ್ವಾಸರ ಶಾಪ ತಗುಲಿತು. ಅದೇ ಶಾಪದ ಫಲವಾಗಿ ‘ಒನಕೆ ಹುಲ್ಲಿನ ಬಾಣ’ ತಗುಲಿ ಕೃಷ್ಣನ ಅವತಾರ ಅಂತ್ಯಗೊಂಡಿತು. ಈ ಶಾಪಕ್ಕೆ ಪೂರಕವಾಗಿ ಕೈಕೇಯಿಯ ಶಾಪವೂ ಇತ್ತು. ಅವಳೂ ನಿಮ್ಮ ಕುಲ ದಾಯಾದಿ ಜಗಳದಲ್ಲಿ ಕೊನೆಯಾಗಲಿ ಎಂದು ಶಪಿಸಿದ್ದಳು.

ಗೀತೆಯಲ್ಲಿ ಕರ್ಮ ಮತ್ತು ಕರ್ಮಫಲದ ಬಗ್ಗೆ ಬೋಧಿಸಿದ್ದ ಕೃಷ್ಣ, ಮನುಷ್ಯ ತನ್ನ ನೇರಕರ್ಮಗಳಿಗೆ ಮಾತ್ರವಲ್ಲ, ಪರೋಕ್ಷ ಕರ್ಮಗಳಿಗೂ ಫಲ ಅನುಭವಿಸಬೇಕಾಗುತ್ತದೆ ಎಂದು ಶಾಪಗಳ ಮೂಲಕ ಸ್ವತಃ ಅನುಭವಿಸಿ ತೋರಿದ್ದಾನೆ. ಅಷ್ಟೇ ಅಲ್ಲ, ತನ್ನ ಕರ್ಮ ಲೋಕೋಪಕಾರಕ್ಕಾಗಿಯೇ ಇದ್ದರೂ, ಪರಿಣಾಮ ಸಕಾರಾತ್ಮಕವೇ ಇದ್ದರೂ ಅದರ ಕ್ರಿಯೆ ಮತ್ತೊಬ್ಬರಿಗೆ ದುಃಖ ತಂದ ಕಾರಣ, ಕಹಿಯಾದ ಕರ್ಮಫಲವನ್ನು ಅನುಭವಿಸಬೇಕಾಗುತ್ತದೆ. ಈ ಮೂಲಕ, ಪರಿಣಾಮ ಒಳಿತಾದರಷ್ಟೆ ಸಾಲದು, ಅದನ್ನು ತಲುಪುವ ದಾರಿಯೂ ಒಳಿತಾಗಿರುವಂತೆ ನೋಡಿಕೊಳ್ಳಬೇಕೆಂದು ಕೃಷ್ಣ ತೋರಿಸಿಕೊಡುತ್ತಾನೆ.

ಗೀತಾಚಾರ್ಯನಾಗಿ ಕೃಷ್ಣನ ಬೋಧನೆಗಳು ಒಂದೆಡೆಯಾದರೆ, ಬದುಕಿನಲ್ಲಿ ಸ್ವಯಂಮಾದರಿಯಾಗಿ ನೀಡುವ ಬೋಧನೆಗಳು  ಮತ್ತೊಂದೆಡೆ. ಅವತಾರಗಳೆಂದರೆ ದೇಹ ಹೊತ್ತ ರಾಕ್ಷಸರನ್ನು ದಂಡಿಸುವುದು, ಅವರಿಗೆ ಶಿಕ್ಷಣ ನಿಡುವುದು ಮಾತ್ರವಲ್ಲ; ನಮ್ಮ ದೇಹದೊಳಗೆ, ನಮ್ಮ ಮನಸ್ಸಿನಲ್ಲಿ ಅಮೂರ್ತವಾಗಿರುವ ರಾಕ್ಷಸೀ ಚಿಂತನೆಗಳಿಗೆ ಶಿಕ್ಷಣ ನೀಡುವ ಲೀಲೆಯೂ ಹೌದು. ಈ ಕಾರಣಕ್ಕೇ ಕೃಷ್ಣ ನಮಗೆ ಪ್ರಸ್ತುತ ಮತ್ತು ಪೂಜನೀಯ. 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.