ಸ್ವಾತಂತ್ರ್ಯ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 14

Inspirational Quotes Kahlil Gibran Life Kahlil Gibran Quotes | K

ಮಾತುಗಾರನೊಬ್ಬ
ಸ್ವಾತಂತ್ರ್ಯದ ಬಗ್ಗೆ ಕೇಳಿದ ಪ್ರಶ್ನೆಗೆ
ಉತ್ತರಿಸತೊಡಗಿದ.

ನಗರದ ಹೆಬ್ಬಾಗಿಲ ಬಳಿ,
ಮನೆಯೊಳಗೆ ಬೆಂಕಿಗೂಡಿನ ಸುತ್ತ
ನೀವು ದೀರ್ಘದಂಡ ಹಾಕಿ
ಸ್ವಾತಂತ್ರ್ಯವನ್ನು ಆರಾಧಿಸುವುದನ್ನ
ನಾನು ನೋಡಿದ್ದೇನೆ,
ತನ್ನ ಕುತ್ತಿಗೆಗೆ ಕತ್ತಿ ಹಿಡಿದ ಕ್ರೂರಿಯನ್ನು
ಗುಲಾಮನೊಬ್ಬ
ದೀನನಾಗಿ ಆರಾಧಿಸುತ್ತಿರುವಾಗಲೂ.

ಹೌದು, ದೇವಾಲಯದ ಅಂಗಳದಲ್ಲಿ
ಮತ್ತು ಕೋಟೆ ಕೊತ್ತಲಗಳ ನೆರಳಲ್ಲಿ,
ನಿಮ್ಮೊಳಗಿನ ಅತ್ಯಂತ ಸ್ವಾತಂತ್ರ್ಯಪ್ರಿಯ ಜನ
ತಮ್ಮ ಸ್ವಾತಂತ್ರ್ಯವನ್ನು ಕೈಕೊಳದಂತೆ,
ಕುತ್ತಿಗೆಯ ಮೇಲಿನ ನೊಗದಂತೆ
ಧರಿಸಿ ಓಡಾಡುವುದನ್ನೂ ನೋಡಿದ್ದೇನೆ.

ನನ್ನ ಹೃದಯ
ನನ್ನೊಳಗೇ ಕಣ್ಣೀರು ಸುರಿಸುತ್ತಿದೆ ;
ನೀವು ನಿಜವಾಗಲೂ ಸ್ವತಂತ್ರರಾಗುವುದು,
ಸ್ವಾತಂತ್ರ್ಯವನ್ನು ಸಾಧಿಸಬೇಕು ಎನ್ನುವ ಬಯಕೆಯೇ
ನಿಮಗೆ ಬಂಧನವಾಗತೊಡಗಿದಾಗ,
ಸ್ವಾತಂತ್ರ್ಯವೇ ಗುರಿ
ಸ್ವಾತಂತ್ರ್ಯವೇ ಬದುಕಿನ ಪೂರ್ಣತೆ
ಎಂದೆಲ್ಲ ಯೋಚಿಸುವುದನ್ನು
ನಿಲ್ಲಿಸಿದಾಗ ಮಾತ್ರ.

ನಿಮ್ಮ ಹಗಲು ಸುರಕ್ಷಿತವಾಗಿದ್ದರೆ
ಮತ್ತು ರಾತ್ರಿಗಳು
ಆಸೆ, ಸಂಕಟಗಳಿಂದ ಮುಕ್ತವಾಗಿದ್ದ ಮಾತ್ರಕ್ಕೆ
ನೀವು ಸ್ವತಂತ್ರರಲ್ಲ,

ಈ ಎಲ್ಲ ಸಂಗತಿಗಳು ಕಟ್ಟಿಹಾಕಿರುವಾಗಲೂ
ನೀವು, ಎಲ್ಲ ಕಿತ್ತೊಗೆದು
ಯಾರ ಹಿಡಿತಕ್ಕೂ ಸಿಗದೇ ಎದ್ದು ನಿಲ್ಲುತ್ತಿರಲ್ಲ
ಆಗಲೇ ನೀವು ಸ್ವತಂತ್ರರು.

ತಿಳುವಳಿಕೆಯ ಮುಂಜಾವಿನಲ್ಲಿ ನೀವು
ನಿಮ್ಮ ನಟ್ಟ ನಡು ಹಗಲಿಗೆ
ಕಟ್ಟಿಕೊಂಡಿರುವ ಬೇಡಿಗಳನ್ನು ಕಿತ್ತೆಸೆಯದೇ
ಹಗಲು ರಾತ್ರಿಗಳನ್ನು ಮೀರಿ ನಿಲ್ಲುವುದೆಂತು?

ಈ ಬೇಡಿಗಳಲ್ಲಿ ಅತ್ಯಂತ ಬಲಿಷ್ಠ ಸರಪಳಿಯನ್ನು,
ಯಾವುದರ ಕೊಂಡಿಗಳು
ಸೂರ್ಯನ ಬೆಳಕಲ್ಲಿ ಮಿಂಚುತ್ತವೆಯೋ
ನಿಮ್ಮ ಕಣ್ಮನಗಳನ್ನು ತಣಿಸುತ್ತವೆಯೋ,
ಆ ಬೇಡಿಯನ್ನೇ ನೀವು ಬಿಡಗಡೆ ಎನ್ನುತ್ತೀರಿ.

ಮತ್ತೆ ಯಾವುದದು
ನಿಮ್ಮದೇ ಒಂದು ತುಣುಕು;
ಅದನ್ನು ಕಿತ್ತುಹಾಕುವುದರಿಂದ
ನೀವು ಸ್ವತಂತ್ರರಾಗಬಹುದು?

ಅದು ಅನ್ಯಾಯದ ಕಾನೂನಾಗಿದ್ದರೆ
ನೀವೇ ರದ್ದು ಮಾಡಿಬಿಡಬಹುದಾಗಿತ್ತು
ಆದರೆ ಅದು, ನೀವೇ ನಿಮ್ಮ ಕೈಯ್ಯಾರೆ
ಹಣೆಯ ಮೇಲೆ ಬರೆದುಕೊಂಡ ಶಾಸನ.

ಕಾನೂನಿನ ಪುಸ್ತಕಗಳನ್ನು ಸುಡುವುದರಿಂದ,
ನ್ಯಾಯಾಧೀಶರ ಹಣೆಗಳನ್ನು
ಸಾಗರದ ಅಪಾರ ನೀರಿನಿಂದ ತೊಳೆಯುವುದರಿಂದ
ಕಾನೂನುಗಳನ್ನು ಅಳಿಸಲಾರಿರಿ.

ನಿರಂಕುಶ ಪ್ರಭುತ್ವವಾದರೆ
ಕಿತ್ತೆಸಿಯಿರಿ
ಆದರೆ ಅದಕ್ಕೂ ಮೊದಲು
ನಿಮ್ಮೊಳಗೆ ಸ್ಥಾಪಿತವಾಗಿರುವ
ಅವನ ರಾಜ ಸಿಂಹಾಸನವನ್ನ.

ಜನಗಳ ಸ್ವಂತ ಸ್ವಾತಂತ್ರ್ಯದಲ್ಲಿ
ದಬ್ಬಾಳಿಕೆ ಇರದಿದ್ದರೆ,
ಮತ್ತು ಸ್ವಾಭಿಮಾನದಲ್ಲಿ
ಸಂಕೋಚ ಇರದೇ ಹೋದರೆ,
ನಿರಂಕುಶನೊಬ್ಬ
ಸರ್ವ ಸ್ವತಂತ್ರರನ್ನೂ, ಸ್ವಾಭಿಮಾನಿಗಳನ್ನೂ
ಆಳುವುದು ಹೇಗೆ ಸಾಧ್ಯ ?

ನೀವು ಪಾರಾಗಬಯಸುವುದು
ಹತೋಟಿಯಿಂದಾದರೆ,
ಆ ಹತೋಟಿಯನ್ನು ನೀವು
ಸ್ವತಃ ಬಯಸಿದ್ದೀರಿಯೇ ಹೊರತು
ಅದನ್ನು ನಿಮ್ಮ ಮೇಲೆ ಹೇರಲಾಗಿಲ್ಲ.

ಹೆದರಿಕೆಯಿಂದ ಮುಕ್ತರಾಗಬಯಸುವಿರಾದರೆ
ಆ ಹೆದರಿಕೆಯ ಮನೆ ಇರುವದು
ನಿಮ್ಮ ಮನಸ್ಸಿನಲ್ಲಿಯೇ ಹೊರತು
ಹೆದರಿಸುವವನ ಕೈಯ್ಯಲ್ಲಲ್ಲ.

ಬಯಸುವ ಮತ್ತು ಭಯಪಡುವ,
ಪ್ರೀತಿಸುವ ಮತ್ತು ಅಸಹ್ಯಪಡುವ,
ಬೆನ್ನುಹತ್ತುವ ಮತ್ತು ಪಾರಾಗಿ ಓಡಿಹೋಗಬಯಸುವ ಎಲ್ಲವೂ
ಬಹುತೇಕ ನಿಮ್ಮ ಅರ್ಧ ಅಪ್ಪುಗೆಯಲ್ಲೇ ಇವೆ.

ಈ ಎಲ್ಲವೂ
ಒಂದಕ್ಕೊಂದು ಅಂಟಿಕೊಂಡು ಓಡಾಡುವ
ನೆರಳು ಬೆಳಕಿನಂತೆ ನಿಮ್ಮೊಳಗೆ ಒಂದಾಗಿವೆ.

ನೆರಳು ಮಾಸಿ ಹೋದಂತೆಲ್ಲ
ಅದಕ್ಕೆ ಅಂಟಿಕೊಂಡ ಬೆಳಕು
ಇನ್ನೊಂದು ಬೆಳಕಿಗೆ ನೆರಳಾತ್ತದೆ.

ಹಾಗಾಗಿ
ನಿಮ್ಮ ಸ್ವಾತಂತ್ರ್ಯ
ತನ್ನ ಎಲ್ಲ ಸಂಕೋಲೆಗಳನ್ನು ಕಳಚಿಕೊಂಡಾಗ
ಇನ್ನೊಂದು ಮಹಾ ಸ್ವಾತಂತ್ರ್ಯಕ್ಕೆ
ತಾನೇ ಸಂಕೋಲೆಯಾಗುತ್ತದೆ.

ಮುಂದುವರೆಯುತ್ತದೆ……….

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/09/02/pravadi-2/

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

1 Comment

Leave a Reply