ಗೌರೀ ಹಬ್ಬ : ಆದಿಶಕ್ತಿಯ ಗುಣಗಾನ

ಗೌರಿ ಹಬ್ಬ, ಹೆಂಗೆಳೆಯರ ಪ್ರೀತಿಯ ಹಬ್ಬ. ಹಬ್ಬದ ಹಿನ್ನೆಲೆ ಕಥನಗಳ ಪ್ರಕಾರ; ಈ ಹಬ್ಬ ಮಾಂಗಲ್ಯ ಸೌಭಾಗ್ಯ ಬೇಡುವುದಕ್ಕೆ ಸೀಮಿತವಲ್ಲ, ಅಪ್ಪಟ ಹೆಣ್ತನದ ಸಂಭ್ರಮಾಚರಣೆಯೂ ಆಗಬೇಕು. ಏಕೆಂದರೆ ಗೌರಿ, ಶಿವಪತ್ನಿಯಾಗಿರುವಂತೆಯೇ ಆದಿ ಶಕ್ತಿಯೂ ಹೌದು, ಜಗಜ್ಜನನಿಯೂ ಹೌದು, ಮಹಾಕಾಳಿಯೂ ಹೌದು, ಮಹಾವಿದ್ಯೆಯೂ ಹೌದು ! ~ ಗಾಯತ್ರಿ

ಶಿವಃ ಶಕ್ತ್ಯಾಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಮ್|
ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ ||
ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾಧಿಭಿರಪಿ |
ಪ್ರಣಂತುಂ ಸ್ತೋತುಂ ವಾ ಕಥಮಕೃತ ಪುಣ್ಯಃ ಪ್ರಭವತಿ ||
“ಶಿವನು ನಿನ್ನೊಡಗೂಡಿದಾಗ ಮಾತ್ರ ಸೃಷ್ಟಿಕಾರ್ಯ ಸಾಧ್ಯಾವಾದೀತು. ಹೇ ದೇವೀ! ಹಾಗಲ್ಲದಿದ್ದಲ್ಲಿ ಅವನೊಬ್ಬನೇ ಚಲಿಸಲೂ ಸಾಧ್ಯವಾಗಲಾರದು. ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರಾದ ತ್ರಿಮೂರ್ತಿಗಳಿಂದಲೂ ವಂದಿತಳಾದ ನಿನ್ನನ್ನು ಪುಣ್ಯವಂತರಲ್ಲದವರಿಗೆ ವಂದಿಸಲು ಹೇಗೆ ತಾನೆ ಸಾಧ್ಯವಾದೀತು?”
ದೇವಿ ಪಾರ್ವತಿಯ ಗುಣ ಸಂಪನ್ನತೆಯನ್ನು ಅಳೆಯಲು ಇದಕ್ಕಿಂತ ಸೊಗಸಾದ ಬಣ್ಣನೆ ಬೇಕೆ? ಈ ಮೂಲಕ ಜಗಜ್ಜನನಿ ಲೋಕದೆಲ್ಲ ಸ್ತ್ರೀಯರಿಗೂ ಉನ್ನತ ಸ್ಥಾನವನ್ನು ಕೊಡಮಾಡಿಸಿದ್ದಾಳಲ್ಲವೆ? 

ಈ ಮೇಲಿನ ಶ್ಲೋಕ ಶ್ರೀ ಶಂಕರರ ಸೌಂದರ್ಯ ಲಹರಿಯದ್ದು. ತ್ರಿಮೂರ್ತಿ ಪತ್ನಿಯರಲ್ಲಿ ಶಿವಾನಿಗೆ (ಶಿವಪತ್ನಿ = ಪಾರ್ವತಿ) ಸಿಕ್ಕಷ್ಟು ಮನ್ನಣೆ ಸ್ತುತಿಕಾರರಿಂದ ಉಳಿದಿಬ್ಬರಿಗೆ ಸಿಕ್ಕಿಲ್ಲವೆಂದೆ ಹೇಳಬಹುದು. ಅದರಲ್ಲಿಯೂ ಲೋಕಮಾತೆಯೆಂಬ ಹೆಗ್ಗಳಿಕೆ ಬಹುತೇಕ ಪಾರ್ವತಿಯ ಪಾಲಿಗೇ ಸಂದಿರುವುದು ವಿಶೇಷ.

ಕೇವಲ ಶಿವ ಮಾತ್ರ ಅಲ್ಲ, ವಿಷ್ಣು – ಬ್ರಹ್ಮರೂ ಜಗಜ್ಜನಿಯ ಅಧೀನ ಎನ್ನುತ್ತದೆ ಸೌಂದರ್ಯ ಲಹರಿಯ ಎರಡನೇ ಶ್ಲೋಕ:
ತನೀಯಾಂಸಂ ಪಾಂಸುಂ ತವ ಚರಣಪಂಕೇರುಹಭವಮ್|
ವಿರಿಂಚಿಃ ಸಂಚಿನ್ವನ್ ವಿರಚಯತಿ ಲೋಕಾನವಿಕಲಮ್ ||
ವಹತ್ಯೇನಂ ಶೌರಿಃ ಕಥಮಪಿ ಸಹಸ್ರೇಣ ಶಿರಸಾಮ್|
ಹರಃ ಸಂಕ್ಷುದ್ಯೈನಂ ಭಜತಿ ಭಸಿತೋದ್ಧೂಲನ ವಿಧಿಮ್||
“ಸೃಷ್ಟಿಕರ್ತನಾದ ಬ್ರಹ್ಮನು ನಿನ್ನ ಪಾದ ಪದ್ಮದ ದೂಳಿನ ಕಣಗಳನ್ನು ಸಂಗ್ರಹಿಸಿ ಎಲ್ಲ ಲೋಕಗಳನ್ನೂ ಆಶಕ್ತಿಯಿಂದ ಸೃಷ್ಟಿಸುತ್ತಿದ್ದಾನೆ. ಪಾಲನಕರ್ತನಾದ ಮಹಾವಿಷ್ಣುವು ಸಾವಿರ ಹೆಡೆಗಳುಳ್ಳ ಶೇಷ ರೂಪದಲ್ಲಿ ಈ ಜಗತ್ತನ್ನು ಧರಿಸಿದ್ದಾನೆ. ಶಿವನಾದರೋ, ಈ ಪಾದರೇಣುವನ್ನು ವಿಭೂತಿಯನ್ನಾಗಿ ಹಣೆಯಲ್ಲಿ ಧರಿಸಿದ್ದಾನೆ. (ಹೀಗೆ ತ್ರಿಮೂರ್ತಿಗಳು ಸರ್ವೇಶ್ವರಿ ಶಿವೆಯ ಅಧೀನರಾಗಿದ್ದಾರೆ)” – ಎಂದು ಈ ಶ್ಲೋಕ ವಿವರಿಸುತ್ತದೆ.

ದ್ವೈತ ಸಿದ್ಧಾಂತದಲ್ಲಿ ಲಕ್ಷ್ಮಿ ಲೋಕದ ತಾಯಿ ಎನ್ನಿಸಿಕೊಂಡರೂ ಈ ಪರಿಕಲ್ಪನೆ ಅಷ್ಟಾಗಿ ಜನಪ್ರಿಯವಲ್ಲ. ಸರಸ್ವತಿ ವಿದ್ಯಾಧಿದೇವತೆಯ ಪಾತ್ರಕ್ಕೇ ತೃಪ್ತಳಾಗಿದ್ದಾಳೆ. ಉಳಿದಂತೆ, ಪಾರ್ವತಿಗೆ ಜಗಜ್ಜನನಿಯ ಪಟ್ಟಕಟ್ಟಲು ಏನಾದರೂ ಕಾರಣಗಳಿವೆಯೇ ಎಂದು ಯೋಚಿಸಿದರೆ ಒಂದು ಅಂಶ ಹೊಳೆಯುತ್ತದೆ. ವಿಷ್ಣುವಿನಿಂದ ಬ್ರಹ್ಮನ ಉದ್ಭವವಾಗಿದ್ದರೂ ಲಕ್ಷ್ಮಿ ಬ್ರಹ್ಮನಿಗೆ ತಾಯಿಯಲ್ಲ. ನಾರದಾದಿ ಮಾನಸಪುತ್ರರೂ ಕಶ್ಯಪಾದಿ ಪ್ರಜಾಪತಿಗಳೂ ಬ್ರಹ್ಮನ ಮಕ್ಕಳು. ಆದರೆ ಇವರ್ಯಾರು ಕೂಡ ಸರಸ್ವತಿಗೆ ಮಕ್ಕಳಲ್ಲ! ಪಾರ್ವತಿಯಾದರೂ ಸ್ವತಃ ತನ್ನಿಂದ ಗಣಪನನ್ನು ಸೃಷ್ಟಿಸಿಕೊಂಡು ತಾಯಿಯಾದವಳು. ಇದಕ್ಕೆ ಮುನ್ನ, ಷಣ್ಮುಖನ ಹುಟ್ಟಿಗೆಂದೇ ಶಿವತಪವನ್ನು ಕೆಡಿಸಲು ದೇವಗಣ ಸಾಹಸ ಪಟ್ಟಿದ್ದು, ಶಿವ ಶಿವೆಯರ ಸಮಾಗಮದಿಂದ ಮಗು ಹುಟ್ಟಿ ಆಕೆ ತಾಯಿಯಾಗಿದ್ದು – ಇವೆಲ್ಲ ಲೋಕ ಬಲ್ಲ ಪುರಾಣ ಕಥೆ.

ಇಲ್ಲಿ ಎರಡು ಆಸಕ್ತಿಕರ ವಿಷಯಗಳಿವೆ. ಪಾರ್ವತಿಯಂತೆ ಲಕ್ಷ್ಮಿ – ಸರಸ್ವತಿಯರು ಸ್ವಯಂ ಸೃಷ್ಟಿ ಕ್ರಿಯೆಗೆ ಇಳಿಯಲಿಲ್ಲ. ಎರಡನೆಯದಾಗಿ ತಮ್ಮ ಪತಿಯಿಂದ ಸಂತಾನವನ್ನೂ ಪಡೆಯಲಿಲ್ಲ. ಸಂತಾನ ಹೊಂದಿದವಳು ಎನ್ನುವ ಎರಡನೆ ವಿವರಣೆಗಿಂತಲೂ ಸೃಷ್ಟಿ ಕ್ರಿಯೆ ಸಾಧ್ಯವಿರುವವಳು ಎಂಬರ್ಥದಲ್ಲೇ ಪಾರ್ವತಿಯು ಜಗಜ್ಜನನಿಯೆಂಬ ಮನ್ನಣೆಗೆ ಪಾತ್ರಳಾಗಿದ್ದಾಳೆ ಎನ್ನಬಹುದು.

ಆದಿ ಶಕ್ತಿ
ಗೌರಿ ತ್ರಿಮೂರ್ತಿ ಪತ್ನಿಯರಲ್ಲೇ ಅತ್ಯಂತ ಸ್ವತಂತ್ರಳು. ಆದ್ದರಿಂದಲೇ ಈಕೆಯನ್ನು ಆದಿಶಕ್ತಿ ಎಂದು ಕರೆಯಲಾಗುತ್ತದೆ. ವಿಷ್ಣುಪತ್ನಿಯು ಪತಿಯ ಅವತಾರ ಲೀಲೆಗೆ ತಕ್ಕಂತೆ ತಾನೂ ಅವತಾರ ಎತ್ತಿ ಬರುತ್ತಾಳೆ. ಸರಸ್ವತಿಗೆ ವಿದ್ಯಾದಾನದ ಜೊತೆಗೆ ಬ್ರಹ್ಮ ಸಂತೋಷ ಕಾಯ್ದಿಡುವುದೇ ಮುಖ್ಯ ಕಾಯಕ.
ಗೌರಿಯ ಅಭಿವ್ಯಕ್ತಿ ಹೀಗಲ್ಲ. ಈಕೆ ಕಾಳಿಯೂ ದುರ್ಗೆಯೂ ದಶ ಮಹಾ ವಿದ್ಯೆಯೂ ಲಲಿತೆಯೂ ತ್ರಿಪುರಾರಿಯೂ ಆಗಿಬರುತ್ತಾಳೆ. ಈಕೆ ಪತಿಯ ಮಾತನ್ನು ಮೀರುವಂತೆಯೇ (ದಕ್ಷ ಯಜ್ಞಕ್ಕೆ ಹೋಗದಂತೆ ಸೂಚಿಸಿದರೂ ಕೇಳದೆ ಹೋಗುವ ಸಂದರ್ಭ) ಪತಿಗಾಗಿ ಪ್ರಾಣಾಹುತಿಯನ್ನೂ ಮಾಡುತ್ತಾಳೆ (ದಕ್ಷ ಯಜ್ಞದ ಕುಂಡದಲ್ಲಿ ಪ್ರಾಣ ತೆರುವ ಸಂದರ್ಭ). ಸ್ವರ್ಣ ಗೌರಿಯಾಗಿ ಹೆಂಗೆಳೆಯರ ಪರ ನಿಲ್ಲುವ ಈಕೆ, ಅವರ ಸೌಭಾಗ್ಯದ ಕಾವಲುಗಾರ್ತಿಯಾಗಿ ನಿಲ್ಲುತ್ತಾಳೆ. ತನ್ನಲ್ಲಿ ನಿಜ ಭಕ್ತಿ ಇಟ್ಟವರಿಗಾಗಿ ಯಮನ ವಿರುದ್ಧವೂ ಹೋರಾಡುತ್ತಾಳೆ. ಶಿವನ ಲಯ ಕಾರ್ಯಕ್ಕೂ ಅಡ್ಡಿ ತಂದಿಟ್ಟು, ಆಶ್ರಯ ಕೋರಿ ಬಂದವರನ್ನು ಉಳಿಸುತ್ತಾಳೆ. ಅನ್ನಪೂರ್ಣೇಶ್ವರಿಯಾಗಿ ಭೂಮಿಗಿಳಿದು ಬಂದು, ಪತಿಯ ಶಾಪ ವಿಮೋಚನೆಯನ್ನೂ ಮಾಡಿಸುತ್ತಾಳೆ! ಬ್ರಹ್ಮ ಕಪಾಲ ಕೈ ಕಚ್ಚಿಕೊಂಡ ಶಿವನಿಗೆ, ಅದು ತುಂಬುವಷ್ಟು ಭಿಕ್ಷೆ ದೊರೆತ ದಿನ ಶಾಪ ವಿಮೋಚನೆ ಎಂದಿರುತ್ತದೆ. ಬೇಡಿಕೊಂಡು ಏಳು ಲೋಕ ಅಲೆದರೂ ಕಪಾಲ ತುಂಬುವುದಿಲ್ಲ. ಕೊನೆಗೂ ಅದನ್ನು ತುಂಬಿಸಲು ಸ್ವಯಂ ಪಾರ್ವತಿಯೇ ಅನ್ನಪೂರ್ಣೇಶ್ವರಿಯಾಗಿ ಅವತರಿಸಿ ಬರಬೇಕಾಗುತ್ತದೆ!

ಆದಿ ಶಂಕರರು ಸೌಂದರ್ಯ ಲಹರಿಯಲ್ಲಿ (ಶ್ಲೋಕ -97) ಹೀಗೆ ಹೇಳುತ್ತಾರೆ:
ಕಲತ್ರಂ ವೈಧಾತ್ರಂ ಕತಿಕತಿ ಭಜಂತೇ ನ ಕವಯಃ |
ಶ್ರಿಯೋ ದೇವ್ಯಾಃ ಕೋ ವಾ ನ ಭವತಿ ಪತಿಃ ಕೈರಪಿ ಧನೈಃ ||
ಮಹಾದೇವಂ ಹಿತ್ವಾ ತವ ಸತಿ |
ಸತೀನಾಮಚರಮೇಃ ಕುಚಾಭ್ಯಾಮಾಸಂಗಃ ಕುರವಕತರೋರಪ್ಯಸುಲಭಃ ||
– ಹೇ ಸತೀ! ಬ್ರಹ್ಮ ಪತ್ನಿ ಸರಸ್ವತಿಯನ್ನು ಎಲ್ಲ ಕವಿಗಳೂ ಬಣ್ಣಿಸುವುದಿಲ್ಲ. ಅಲ್ಪಧನಿಕರೂ ಲಕ್ಷ್ಮೀಪತಿ ಎನ್ನಿಸಿಕೊಳ್ಳುತ್ತಾರೆ. ಆದರೆ ನಿನ್ನ ಆಲಿಂಗನವು ಶಿವನ ಹೊರತು ಬೇರಾವ ವಸ್ತುವಿಗೂ ಅಲ್ಲದೆ, ನಿನ್ನ ಪಾತಿವ್ರತ್ಯ ಮಹಿಮೆಯನ್ನು ಹೇಳುತ್ತದೆ.

ಮಹಾಚಾರ್ಯರ ಈ ಬಣ್ಣನೆಯು ಪಾರ್ವತಿಯನ್ನು ಮತ್ತಷ್ಟು ವಿಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲಿಸುತ್ತದೆ.

ಆದರ್ಶ ದಾಂಪತ್ಯ
ಪಾರ್ವತಿಯ ದಾಂಪತ್ಯವೂ ಸರ್ವೋತ್ಕೃಷ್ಟವೇ. ಪತ್ನಿಯರು ಪತಿಯ ವಾಮಾಂಕದ (ಎಡ ತೊಡೆಯ) ಮೇಲೆ ಕೂರುವಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳುವ ಹೊತ್ತಲ್ಲಿ ಈಕೆ ಪತಿಯ ಅರ್ಧಭಾಗವನ್ನೆ ಆವರಿಸಿಕೊಳ್ಳುತ್ತಾಳೆ. ಶಿವೆಯ ಪತಿಪ್ರೇಮ ಎಷ್ಟೆಂದರೆ, ಆಕೆ ಅರೆ ಘಳಿಗೆಯೂ ಅಗಲಿರಲಾರಳು.
ಕವಿರತ್ನ ಕಾಳಿದಾಸನ ಹೇಳಿಕೆಯಂತೆ ಇವರ ಹೊಂದಾಣಿಕೆ ಮಾತು ಮತ್ತು ಅರ್ಥದಂತೆ ಪರಸ್ಪರ ಪೂರಕ. “ವಾಗರ್ಥಾವಿವ ಸಂಪೃಕ್ತೌ ವಾಗರ್ಥಾ ಪ್ರತಿಪತ್ತಯೇ | ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ” ಎಂದು ಸ್ತುತಿಸುತ್ತಾನೆ ಕಾಳಿದಾಸ. “ಮಾತು – ಅರ್ಥಗಳಂತೆ ಒಬ್ಬರಿಗೊಬ್ಬರು ಬೆಸೆದುಕೊಂಡಿರುವ, ಜಗತ್ತಿನ ತಾಯ್ತಂದೆಯರಾದ ಪಾರ್ವತೀಪರಮೇಶ್ವರರಿಗೆ ವಂದಿಸುತ್ತೇನೆ” ಎಂಬುದು ಇದರರ್ಥ.

ಗೌರಿ, ಪಾರ್ವತಿ, ಶಿವೆ, ಶಿವಾನಿ, ಭವೆ, ಭವಾನಿ, ಶೈಲಸುತೆ… ಏನೆಲ್ಲ ಹೆಸರಿದೆ ಶಿವ ಪತ್ನಿಗೆ. ಸರಳವಾಗಿ `ಅಮ್ಮಾ’ ಎಂದರೆ ಆ ಕ್ಷಣಕ್ಕೆ ಒಲಿಯುವ ಆಶುತೋಷಳಾಗಿರುವ ಈಕೆ ಈ ಅರ್ಥದಲ್ಲಿಯೂ ಶಿವನಿಗೆ ಸಾಟಿಯಾಗುವ ಸತಿ. ಏಕೆಂದರೆ ಶಿವನ ಇರುವೂ ಹಾಗೆಯೇ. ಆತ ಆಶುತೋಷನೆಂದೇ ಖ್ಯಾತ.

ಆತ್ಯಂತಿಕ ಶಕ್ತಿಯನ್ನು – ಆದಿ ಶಕ್ತಿಯನ್ನು ಜನನಿಯಾಗಿ ಭಾವಿಸಿ, ಆರಾಧಿಸಿದರೆ ಪರಬ್ರಹ್ಮದ ಸಿದ್ಧಿ ಸುಲಭವಾಗುತ್ತದೆ. ದೇವಿ ಪಾರ್ವತಿ ಈ ಸಾಧನೆಯ ಪಥಿಕರಿಗೆ ಮಾರ್ಗದರ್ಶಕಳಾಗಿ ಮೋಕ್ಷ ದೊರಕಿಸುತ್ತಾಳೆ. ಜೀವಾತ್ಮವು ಪರಮಾತ್ಮದಲ್ಲಿ ‘ಲಯ’ಗೊಳ್ಳಲು ಸಹಕರಿಸುವ ಮಹಾಕಾಳಿಯಾಗಿ ಸೃಷ್ಟಿಯನ್ನು ಪೊರೆಯುತ್ತಾಳೆ.

Leave a Reply