ನಾವೊಂಥರಾ ಸೆಕೆಂಡ್ ಹ್ಯಾಂಡ್ ಮನುಷ್ಯರು ! ~ ಜಿಡ್ಡು ಕೃಷ್ಣಮೂರ್ತಿ

ಕೆಲವೊಮ್ಮೆ ನಾವು ಮಾಡುತ್ತಿರುವುದು ಮೂರ್ಖ ಕೆಲಸ ಅಂತ ಗೊತ್ತಿದ್ದರೂ ನಾವು ತಿರಸ್ಕಾರ ಮಾಡಿರುವುದಿಲ್ಲ. ಪ್ರಬಲವಾಗಿ ನಾವು ಅದನ್ನು ಮಾಡಲು ಸಾಧ್ಯವಾದರೆ, ನಮ್ಮ ಹುಡುಕಾಟಕ್ಕೊಂದು ಹೊಸ ರೂಪ ಬಂದು, ನಮಗೆ ಬೇಕಾದ್ದನ್ನು ಪಡೆಯಲು ಸಾಧ್ಯವಾಗಬಹುದು ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ


ಸ್ವಾತಂತ್ಯ್ರವನ್ನು ಸದಾ ಧೇನಿಸುವ ನಾವು ಅದರ ಅರ್ಥವನ್ನು ಎಂದೂ ಹುಡುಕುವುದಿಲ್ಲ ಅಥವ ನಮಗೆ ಬೇಕಾಗಿರುವ ಸ್ವಾತಂತ್ರ್ಯ ಎಂತಹದ್ದು ಎಂಬುದರ ಪರಿಕಲ್ಪನೆಯೇ ನಮಗಿರುವುದಿಲ್ಲ. ಸಾವಿರಾರು ವರ್ಷಗಳಿಂದ ಒಂದೇ ವ್ಯವಸ್ಥೆ, ಆಲೋಚನಾ ಕ್ರಮ ಮತ್ತು ನಡವಳಿಕೆಗಳನ್ನ ಬಹಳ ಶಿಸ್ತಿನಿಂದಲೋ ಅಥವ ಕಟ್ಟುಪಾಡಿಗೆ ಹೆದರಿಕೊಂಡು, ಯಾವುದನ್ನೂ ಧಿಕ್ಕರಿಸಲಾಗದೇ ಹಲವಾರು ಜಟಿಲತೆಗಳನ್ನ ನಾವು ಕಾಲಗಟ್ಟಲೆಯಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಒಂದು ಪದ್ದತಿಯನ್ನು ಧಿಕ್ಕರಿಸುವುದು ಅಂದರೆ ಅದರ ಹಿಂದಿನ ಭಯಾಧಾರಿತ ಗೊಂದಲಗಳು ಢಾಳಾಗಿ ನಮ್ಮ ಮುಂದೆ ಇದಿರಾದಾಗ, ಹೊಸ ಅವಿಷ್ಕಾರದ ತಂಟೆಗೆ ನಾವು ಹೋಗುವುದೇ ಇಲ್ಲ. ಹೇಗೋ ಭಯದಲ್ಲೇ ಬದುಕಿಬಿಡುತ್ತೇವೆ.
ಬದುಕಿಗೆ ನಿಜಕ್ಕೂ ಒಂದು ಅರ್ಥ ಎಂಬುದು ಇದೆಯಾ? ನಾವು ಆಚರಿಸುವ ಧರ್ಮಗಳು, ಈ ಯುದ್ಧ, ಸಂಪ್ರದಾಯಗಳು, ಹಿಂಸೆ, ಭಿನ್ನ ಭಿನ್ನವಾಗಿ ಪ್ರತಿರೂಪ ಪಡೆಯುವ ಕ್ರೌರ್ಯ, ನಮ್ಮ ಐಡಿಯಾಲಜಿಗಳು, ರಾಷ್ಟ್ರೀಯತೆ- ಏನು ಇದೆಲ್ಲಾ? ನಿಜಕ್ಕೂ ಇದೇ ನಮ್ಮ ಜೀವನವಾ. ಅಥವ ಇದಕ್ಕೂ ಮೀರಿದ್ದು ಇನ್ನೇನಾದರೂ ಇದೆಯಾ ಎಂದು ಮನುಷ್ಯ ಸದಾ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಬಂದಿದ್ದಾನೆ.
ಶತಮಾನಗಳಿಂದ ನಮ್ಮ ಗುರುಗಳು, ನಮ್ಮ ಶಿಕ್ಷಣ ಎಲ್ಲವೂ ನಮಗೆ ಕಲಿಸಿದ್ದನ್ನು ಪಾಲಿಸುತ್ತಾ ಬಂದಿದ್ದೇವೆ. ನಾವೊಂಥರಾ ಸೆಕೆಂಡ್ ಹ್ಯಾಂಡ್ ಮನುಷ್ಯರು. ಇಲ್ಲಿ ನಮ್ಮದು ಎಂಬುದೇನೂ ಇಲ್ಲ ಅಥವಾ ನಾವು ಅದನ್ನು ಪ್ರಶ್ನೆಯೂ ಮಾಡುವುದಿಲ್ಲ. ನಮಗೆ ಯಾವ ತರಹದ ಆಡಳಿತವನ್ನು ಹೇರಿ ಅದನ್ನು ಪಾಲಿಸಬೇಕು ಅಂದರೂ ನಾವು ಅದನ್ನು ಪ್ರಶ್ನೆ ಮಾಡದೇ ಒಪ್ಪಿಕೊಳ್ಳುತ್ತೇವೆ. ಇದು ವರೆಗೂ ನಮ್ಮವರು ನಮಗೆ ಹೇಳಿಕೊಟ್ಟಿದ್ದು ಬಿಟ್ಟರೆ ನಮ್ಮ ಸ್ಮೃತಿಪಟಲದಲ್ಲಿ ಬೇರೇನೂ ಉಳಿದೇ ಇಲ್ಲ.
ಅರ್ಥವೇ ಇಲ್ಲದ ಸಾಂಪ್ರದಾಯಿಕ ಆಚರಣೆಗಳು, ಪದ್ದತಿಗಳಿಂದಾಗಿ; ನಮ್ಮೊಳಗೆ ಚಿಗುರೊಡೆಯಬೇಕಾದ ಪ್ರೀತಿಯದ್ದೊಂದು ಹೂವು, ಅದರ ಸೊಬಗು ಹಾಗು ಅವಿಷ್ಕಾರಗಳು ತಾನೇ ಚಿವುಟಿಕೊಂಡು ಬಾಡಿಹೋಗುತ್ತಿದೆ. ಇದೆಲ್ಲವೂ ಸ್ವಾತಂತ್ರ್ಯ ಹೀನತೆಗೆ ಒಂದೊಂದೇ ಪೂರಕವಾಗಿ ಮತ್ತು ಅನುದಾತ್ತವಾಗಿ ನಮ್ಮಲ್ಲಿ ಬೆಳೆದುಕೊಂಡು ಹೋಗುತ್ತಿದೆ.
ಎಲ್ಲಕ್ಕೂ ಒಂದೊಂದು ಚೌಕಟ್ಟು ಕಟ್ಟಿಕೊಂಡು, ಯಾರೋ ಅರೆಬರೆ ತಿಳಿದವರು ಕಲಿಸಿದ್ದನ್ನು ಕಲಿತುಕೊಂಡು, ಅನರ್ಹರಿಂದ ಆಳಿಸಿಕೊಂಡು ಸುಮ್ಮನೆ ಇದ್ದುಬಿಟ್ಟಿದ್ದೇವೆ. ಮತ್ತು, ಸಮಸ್ಯೆಗಳು ಎದುರಾದಾಗ ಕಂಗಾಲಾಗಿ ಯೋಚಿಸುತ್ತಾ ಸ್ವಾತಂತ್ರ್ಯವನ್ನು ಧೇನಿಸುತ್ತಾ ಮತ್ತೆ ಹುಡುಕತೊಡಗುತ್ತೇವೆ!
ನಿಜ… ಇದೆಲ್ಲವನ್ನೂ ನಾವು ಒಂದೇ ಸಲಕ್ಕೆ ಬಿಟ್ಟು ಬಿಡಲು ಆಗುವುದಿಲ್ಲ. ಬೃಹದಾಕಾರ ಬೆಳೆದ ಈ ಸಂಪ್ರದಾಯ ವೃಕ್ಷದ ಒಂದೊಂದೇ ಎಲೆಗಳನ್ನು, ನಂತರ ಕೊಂಬೆಗಳನ್ನು, ನಂತರ ಅದರ ಸಮಷ್ಟಿಯ ಬಾಹುವನ್ನು ಕಿತ್ತು ಬಿಸಾಕಿ ಹೊಸದೊಂದು ಅವಿಷ್ಕಾರವನ್ನು ನಾವು ಮಾಡಿಕೊಳ್ಳಬೇಕು. ನಮಗೆ ಪ್ರಶ್ನೆ ಮಾಡುವುದು ಮತ್ತು ತಿರಸ್ಕರಿಸುವುದು ಸಾಧ್ಯವಾಗಬೇಕು.
ಕೆಲವೊಮ್ಮೆ ನಾವು ಮಾಡುತ್ತಿರುವುದು ಮೂರ್ಖ ಕೆಲಸ ಅಂತ ಗೊತ್ತಿದ್ದರೂ ನಾವು ತಿರಸ್ಕಾರ ಮಾಡಿರುವುದಿಲ್ಲ. ಪ್ರಬಲವಾಗಿ ನಾವು ಅದನ್ನು ಮಾಡಲು ಸಾಧ್ಯವಾದರೆ, ನಮ್ಮ ಹುಡುಕಾಟಕ್ಕೊಂದು ಹೊಸ ರೂಪ ಬಂದು, ನಮಗೆ ಬೇಕಾದ್ದನ್ನು ಪಡೆಯಲು ಸಾಧ್ಯವಾಗಬಹುದು.

Leave a Reply