ಗಾಂಧಿ ಸದಾ ನಮ್ಮಲ್ಲಿ ಜಾಗೃತವಾಗಿರಬೇಕಾದ ಪ್ರಜ್ಞೆ. ಗಾಂಧೀಜಿ ಕುರಿತು ನಮ್ಮ ಜನರ ಅಭಿಪ್ರಾಯಗಳನ್ನು ನಾವು ಬಲ್ಲೆವು. ಜಗತ್ತೇ ನಿಬ್ಬೆರಗಾಗಿ ನೋಡಿದ ಈ ಆಧುನಿಕ ಸಂತನ ಕುರಿತು ವಿದೇಶೀಯರು ಏನು ಹೇಳಿದ್ದಾರೆ ಅನ್ನುವುದನ್ನೂ ನಾವು ಅರಿಯಬೇಕು. ಈ ನಿಟ್ಟಿನಲ್ಲಿ ಗಾಂಧೀಜಿ ಕುರಿತು ಡಾ.ಹೇಯ್ನೆಸ್ ನೀಡಿದ್ದ ಉಪನ್ಯಾಸವನ್ನು ಇಲ್ಲಿ ನೀಡಿದ್ದೇವೆ. ಮೂಲ : ರೆ. ಡಾ. ಜಾನ್ ಹೇಯ್ನೆಸ್ ಹೋಮ್ಸ್ | ಅನುವಾದ: ಚೇತನಾ ತೀರ್ಥಹಳ್ಳಿ
ಇಂದು ಬೆಳಗ್ಗೆ ನಾನು ಭಾರತದ ಮಹಾತ್ಮಾ ಗಾಂಧಿ ಮತ್ತು ಅವರು ಕೈಗೊಂಡಿರುವ ಕಾರ್ಯದ ಜಾಗತಿಕ ಮಹತ್ವದ ಕುರಿತು ಮಾತನಾಡಲು ಬರುವಾಗ ಅಯಾಚಿತವಾಗಿ ಹಿಂದಿನ ಸಂದರ್ಭವೊಂದು ನನೆಪಿಗೆ ಬಂದಿತು. ಅದು ನಡೆದು ಬಹಳ ಸಮಯವೇನಾಗಿಲ್ಲ. ಆ ದಿನ ನಾನು ಇದೇ ಸಭೆಯಲ್ಲಿ ಮೊದಲ ಬಾರಿಗೆ ಗಾಂಧಿಯವರನ್ನು ಪರಿಚಯಿಸಿದ್ದೆ. ಅಂದು ಕೂಡ ನನಗೆ ಇಂದು ಇರುವಷ್ಟೇ ವಿಶ್ವಾಸವಿತ್ತು.
ಈ ವ್ಯಕ್ತಿ ಈ ಕಾಲಘಟ್ಟದಲ್ಲಿ ಜೀವಿಸಿರುವ ಅತಿಶ್ರೇಷ್ಠ ಮನುಷ್ಯನೆಂಬ ಭಾವನೆ ನನಗೆ ಅಂದಿಗೂ ಇಂದಿಗೂ ಸಮನಾಗಿದೆ. ಈ ಕೆಲವು ತಿಂಗಳಲ್ಲಿ ಏನೆಲ್ಲ ಬದಲಾಗಿಹೋಯಿತು! ಆ ಸಮಯದಲ್ಲಿ ಗಾಂಧಿಯವರ ಹೆಸರು ಭಾರತದ ಗಡಿಗಳಾಚೆ ಗೊತ್ತೇ ಇರಲಿಲ್ಲ. ಆಗ ನಾನು ನನ್ನಲ್ಲಿದ್ದ ಅತ್ಯಲ್ಪ ಮಾಹಿತಿ ಇಟ್ಟುಕೊಂಡು ಚಿಕ್ಕದಾಗಿ ವಿವರ ನೀಡುವ ಪ್ರಯತ್ನ ಮಾಡಿದ್ದೆ. ಆ ಸಮಯದಲ್ಲೇ ನನ್ನೊಳಗೆ, ಇಲ್ಲೊಬ್ಬ ಅತ್ಯುನ್ನತ ಮಟ್ಟದ ಸೃಜನಶೀಲ ಆಧ್ಯಾತ್ಮಿಕ ವ್ಯಕ್ತಿ ಇರುವರೆಂಬ ಭಾವನೆ ಉದಿಸಿತ್ತು. ಹಾಗಿದ್ದೂ ಅವರ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುವಲ್ಲಿ ನಾನು ವಿಫಲಗೊಂಡಿದ್ದೆ.
ಇಂದು ಗಾಂಧೀಜಿಯವರ ಹೆಸರು ಪತ್ರಿಕೆಗಳ ಮೊದಲ ಪುಟದಲ್ಲೇ ದಪ್ಪ ಅಕ್ಷರಗಳಲ್ಲಿ ಅಚ್ಚಾಗತೊಡಗಿದೆ. ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಲ್ಲಿ ಈ ದೇಶದ – ಇಂಗ್ಲೆಂಡ್ ಹಾಗೂ ಖಂಡದ ಕುರಿತಾದ ವಿಮರ್ಶೆಗಳು ಹಾಗೂ ಲೇಖನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಮೆರಿಕದ ಪ್ರತಿಷ್ಠಿತ ಪತ್ರಿಕೆ ‘ದ ನ್ಯೂಯಾರ್ಕ್ ವರ್ಲ್ಡ್’, ಗೂಢಚಾರ ವರದಿಗಾಗಿ ಭಾರತಕ್ಕೆ ತನ್ನ ಪತ್ರಕರ್ತನನ್ನು ಕಳಿಸಿದರೆ, ಆತ ಮರಳಿ ಬಂದು ಗಾಂಧಿ ಮತ್ತವರ ಅಹಿಂಸೆ ಹಾಗೂ ಅಸಹಕಾರ ಚಳವಳಿಗಳ ಕುರಿತಾಗಿ ಬರೆಯುತ್ತಾನೆ!
ಕೆಲವೇ ತಿಂಗಳಲ್ಲಿ ಈ ಮನುಷ್ಯ ಖ್ಯಾತಿಯ ಉತ್ತುಂಗಕ್ಕೆ ಏರಿದ್ದಾರೆ. ಅವರ ಈ ಸಾಧನೆ ಶಾಶ್ವತವಾಗಿ ನಿಲ್ಲುವ ಎಲ್ಲ ಭರವಸೆಯನ್ನೂ ಹೊತ್ತುಕೊಂಡಿದೆ. ಅವರೀಗ ಜಗತ್ತಿನ ಗಮನ ಸೆಳೆಯುವ ಕೇಂದ್ರಬಿಂದುವಿನಂತೆ ಆಗಿದ್ದಾರೆ. ೧೯೧೮ -೧೯ರಲ್ಲಿ ವುಡ್ರೋ ವಿಲ್ಸನ್, ೧೯೨೦ -೨೧ರಲ್ಲಿ ನಿಕೊಲೈ ಲೆನಿನ್ ಈ ಸ್ಥಾನವನ್ನು ಪಡೆದಿದ್ದರು. ಆದರೆ ಈಗ, ಈತನಕ ಯಾವುದೇ ಉನ್ನತ ಹುದ್ದೆ ಹೊಂದಿಲ್ಲದ, ಯಾವುದೇ ಅಧಿಕಾರದ ಪ್ರಭಾವಳಿ ಇಲ್ಲದ ಪುಟ್ಟ ನಿಲುವಿನ ಪೌರಸ್ತ್ಯ ವ್ಯಕ್ತಿಯೊಬ್ಬ ಈ ಸ್ಥಾನಕ್ಕೇರಿದ್ದಾರೆ. ಅದೂ ಕೂಡ, ಇಂಗ್ಲೀಷರ ಸೆರೆಯ ಸರಳುಗಳ ಹಿಂದೆ ಇದ್ದುಕೊಂಡು!
ಇಂಥಾ ಬದಲಾವಣೆಯ ಅದೃಷ್ಟ ಒಬ್ಬ ವ್ಯಕ್ತಿಯ ಪಾಲಿಗೆ ಒದಗಿಬಂದಿದೆ ಎಂದರೆ ಅದು ಸುಮ್ಮನೆ ಆಗಿರಲಿಕ್ಕಿಲ್ಲ. ಮುಂದೊಂದು ದಿನ ಏನೋ ಸಂಭವಿಸುವ ಸಲುವಾಗಿಯೇ ಈಗ ಇದು ಘಟಿಸುತ್ತಿದೆ. ಈ ಮಾತಿಗೆ ಬೆಂಬಲವಾಗಿ ನಾನು ಇಂದು ನಾಲ್ಕು ಘಟನೆಗಳನ್ನು ವಿವರಿಸುತ್ತೇನೆ. ಜಗತ್ತಿನ ದೂರದ ತುದಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಏನನ್ನು ಸೂಚಿಸುತ್ತದೆ ಎಂದು ಅರಿಯುವ ಪ್ರಯತ್ನ ಇದಾಗಲಿದೆ.
ಮೊದಲನೆಯದಾಗಿ, ಭಾರತದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಪಕ್ಷವೊಂದು ವ್ಯಾಪಕವಾಗಿ ಹಬ್ಬತೊಡಗಿದೆ. ಕೆಲವೇ ವರ್ಷಗಳ ಹಿಂದೆ ಅಲ್ಲಿ ಒಂದಷ್ಟು ಜನರಷ್ಟೆ ಪ್ರತ್ಯೇಕ ಗುರುತು ಅಥವಾ ಸ್ವಾತಂತ್ರ್ಯವನ್ನು ಬಯಸುತ್ತಿದ್ದರು. ಅವರಲ್ಲಿ ಕೆಲವರು ತೀವ್ರವಾದಿಗಳೂ ಮತಾಂಧರೂ ಇದ್ದರು. ಪ್ರಜ್ಞಾವಂತ ಮುಂದಾಳುಗಳು ಹೋಮ್‌ರೂಲ್ ಅಥವಾ ಸಾಮ್ರಾಜ್ಯದೊಳಗೇ ಡೊಮಿನಿಯನ್ ಸ್ಟೇಟಸ್ ಸಿಕ್ಕರೆ ಸಾಕೆನ್ನುವ ಚಿಂತನೆ ನಡೆಸಿದ್ದರು. ಜನಸಾಮಾನ್ಯರು ಈ ಎಲ್ಲದರಿಂದ ಹೊರತಾಗಿ, ಅಥವಾ ಈ ಕುರಿತು ಮೌಢ್ಯತೆಯಿಂದ ತಮ್ಮ ಪಾಡಿಗೆ ಇರುತ್ತಿದ್ದರು.
ಆದರೆ ಇಂದು ಬ್ರಿಟಿಷ್ ಆಡಳಿತದಿಂದ ವಿಮೋಚನೆಗೊಳ್ಳಬೇಕೆನ್ನುವ ಕೂಗು ಕಾಳ್ಗಿಚ್ಚಿನಂತೆ ಹಬ್ಬತೊಡಗಿದೆ.
ಈಗಿನ ಸಂದರ್ಭದಲ್ಲಿ ಭಾರತದ ಕೆಲವು ರಾಜರುಗಳು, ಆಗರ್ಭ ಶ್ರೀಮಂತರು, ರಾಜಪರಿವಾರ, ಸರ್ಕಾರಿ ಹುದ್ದೆಯಲ್ಲಿರುವವರು ಮತ್ತು ಸಾಕಷ್ಟು ಸಂಖ್ಯೆಯ ನೌಕರರು ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ಬಯಸುತ್ತಿಲ್ಲ ಎಂಬುದು ಸತ್ಯವೇ. ಅವರು ತಮ್ಮದೇ ಆದ ಕಾರಣಗಳಿಂದಾಗಿ ಬ್ರಿಟಿಷರಿಗೆ ಎಲ್ಲ ಬಗೆಯ ಸಹಕಾರವನ್ನೂ ನೀಡುತ್ತಿರುವರು. ಆದರೆ ಈ ಸಂಖ್ಯೆ ಎಲ್ಲರನ್ನೂ ಒಗ್ಗೂಡಿಸಿದರೆ, ಹೆಚ್ಚೆಂದರೆ ಹತ್ತು ಲಕ್ಷದಷ್ಟು ಇರಬಹುದು. ಉಳಿದಂತೆ ಒಂದು ದೊಡ್ಡ ವರ್ಗವೇ ಇಂದು ಸ್ವಾತಂತ್ರ್ಯದ ಮಾತಾಡತೊಡಗಿದೆ. ಒಂದೆಡೆ ಸಾಮಾಜಿಕ ಬಹುಮನ್ನಣೆಯ ರಬೀಂದ್ರನಾಥ ಟಾಗೋರರಂಥವರು, ಮತ್ತೊಂದೆಡೆ ಅಸ್ಪೃಷ್ಯರೆನಿಸಿಕೊಂಡ ವರ್ಗದವರು ಸರಿಸಮಾನವಾಗಿ ಬ್ರಿಟಿಷ್ ಹಿಡಿತದಿಂದ ಹೊರಬರಬೇಕು ಅನ್ನುವ ಬಲವಾದ ಇಚ್ಛೆಯ ಕಿಚ್ಚನ್ನು ಹೊತ್ತಿಸುತ್ತಿದ್ದಾರೆ.
ನೆನಪಿಡಿ, ಭಾರತದ ಇಂದಿನ ಜನಸಂಖ್ಯೆ ೩೦,೦೦,೦೦,೦೦೦ಗೂ ಹೆಚ್ಚಿದೆ. ಇದು ವಿಶ್ವದ ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗದಷ್ಟು. ಈ ರಾಷ್ಟ್ರೀಯ ಚಳವಳಿ ಇದ್ದಕ್ಕಿದ್ದಂತೆ ಯಾಕೆ ಇಷ್ಟು ಮಹತ್ವ ಪಡೆಯುತ್ತಿದೆ ಎಂಬುದನ್ನು ನಾವು ಈಗ ಊಹಿಸಬಹುದು. ಭಾರತದಲ್ಲಿ ಈಗ ಮೂಡಿರುವ ಸಂಚಲನೆಯು, ಅದರಲ್ಲಿ ಪಾಲ್ಗೊಂಡಿರುವ ಜನಸಂಖ್ಯೆಯ ಕಾರಣದಿಂದ ಹೆಚ್ಚಿನ ಮಹತ್ವ ಪಡೆಯುತ್ತಿದ್ದು, ವಿಶ್ವಜೀವನದ ಕೇಂದ್ರ ವಿದ್ಯಮಾನವಾಗಿ ಪರಿಣಮಿಸಿದೆ.
ಎರಡನೆಯದಾಗಿ, ಗಾಂಧಿಯವರ ಹೆಸರು ಕೀರ್ತಿಗಳು ವೇಗಗತಿಯಲ್ಲಿ ಪ್ರವರ್ಧಮಾನಕ್ಕೆ ಬರುವಲ್ಲಿ ಆ ದೇಶದ ಜನರ ಆಶೋತ್ತರಗಳ ಕೊಡುಗೆ ಮುಖ್ಯವಾಗುತ್ತದೆ. ಭಾರತದ ಜನರು ಸದ್ಯಕ್ಕೆ ತಮ್ಮ ಸ್ವಾತಂತ್ರ್ಯ ಹೋರಾಟದ ನಾಯಕನಾಗಿ ಗಾಂಧೀಜಿಯನ್ನೆ ಆಯ್ದುಕೊಂಡಿದ್ದಾರೆ, ಅವರ ಮೇಲೆ ಭರವಸೆ ಇಟ್ಟಿದ್ದಾರೆ. ಕೆಲವೇ ವರ್ಷಗಳ ಹಿಂದೆ ಗಾಂಧೀಜಿ ಇಂಗ್ಲೆಂಡಿನ ಮಿತ್ರರಾಗಿದ್ದರು ಹಾಗೂ ಭಾರತದಲ್ಲಿ ರಾಣಿಯ ಆಳ್ವಿಕೆಯನ್ನು ಒಪ್ಪಿಕೊಂಡಿದ್ದರು. ಬ್ರಿಟನ್ ಸರ್ವಾಧಿಪತ್ಯದ ಲಾಭಗಳನ್ನೂ ಕೊಡುಗೆಗಳನ್ನೂ ಅನುಭವಿಸಿದ್ದರು. ಮಹಾಯುದ್ಧದ ಸಂದರ್ಭದಲ್ಲಿಯೂ ಅವರು ಬ್ರಿಟಿಷ್ ಮಿತ್ರಕೂಟವನ್ನು ಬೆಂಬಲಿಸಿದ್ದರು ಹಾಗೂ ಪ್ರತಿ ಬಾರಿಯೂ ಬ್ರಿಟನ್ ಸಾಮ್ರಾಜ್ಯದ ಪರವಾಗಿಯೇ ನಿಂತಿದ್ದರು. ಯುದ್ಧಾನಂತರ ಅವರು ಹೋಮ್‌ರೂಲ್‌ಗಿಂತ ಹೆಚ್ಚಾಗಿ ಸುಧಾರಣಾ ಕಾರ್ಯಗಳನ್ನು ತೀವ್ರವಾಗಿ ಪ್ರತಿಪಾದಿಸಿದ್ದರು.
ಹಾಗಾದರೆ ಗಾಂಧೀಜಿ ಬದಲಾಗಿದ್ದೆಲ್ಲಿ? ಈ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ನಾವು ಜನರಲ್ ಡೈರ್‌ನ ಎದುರು ನಿಲ್ಲುತ್ತೇವೆ. ಜನರಲ್ ಡೈರ್ ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಸೇರಿದ್ದ ಮುಗ್ಧ ಭಾರತೀಯರ ಮೇಲೆ ಗುಂಡಿನ ಮಳೆಗರೆಯುವ ಆದೇಶ ಹೊರಡಿಸಿದ. ಇದರ ಪರಿಣಾಮವಾಗಿ ನಾನೂರಕ್ಕೂ ಹೆಚ್ಚು ಮಂದಿ ಹತ್ಯೆಗೀಡಾಗಿದ್ದರು. ಮುದುಕರು. ಹೆಂಗಸರು, ಮಕ್ಕಳೂ ಸೇರಿದಂತೆ ಅಲ್ಲಿ ಸೇರಿದ್ದ ಬಹುಪಾಲು ಜನರು ಸಾಮೂಹಿಕ ಹತ್ಯಾಕಾಂಡಕ್ಕೆ ಬಲಿಯಾದರು. ಈ ಘಟನೆ ಗಾಂಧೀಜಿಯವರನ್ನು ಇನ್ನಿಲ್ಲದಂತೆ ಕಾಡಿತು ಮತ್ತು ಪರಿಣಾಮವಾಗಿ ಅವರ ಚಿಂತನಾ ಧಾಟಿ ಬದಲಾತು. ಅವರು ಸ್ವಾತಂತ್ರ ಚಳವಳಿಯ ಚುಕ್ಕಾಣಿ ಹಿಡಿದುಕೊಂಡರು. ಆ ದಿನದಿಂದ ಅವರು ಇಂಗ್ಲೆಂಡ್ ಸರ್ಕಾರದ ನೇರ ಎದುರಾಳಿಯಾದರು.
ಒಂದು ವರ್ಷದ ಕೆಳಗೆ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷವು ಗಾಂಧೀಜಿಯ ಅಹಿಂಸಾ ಚಳವಳಿ ಹಾಗೂ ಅಸಹಕಾರ ಚಳವಳಿಗೆ ಅನುಮೋದನೆ ನೀಡಿತ್ತು. ಕೇವಲ ಮೂರು ತಿಂಗಳ ಹಿಂದೆ, ಅಂದರೆ ಕಳೆದ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಪುನಃ ಈ ಚಳವಳಿಗಳನ್ನು ಮತ್ತಷ್ಟು ಬೆಂಬಲ ಹಾಗೂ ಉತ್ಸಾಹಗಳೊಡನೆ ಕೈಗೆತ್ತಿಕೊಂಡಿತು ಹಾಗೂ ಗಾಂಧೀಜಿಯನ್ನು ತನ್ನ ಸ್ವಾತಂತ್ರ್ಯ ಹೋರಾಟದ ನಾಯಕನೆಂದು ಘೋಷಿಸಿತು. ಈ ವ್ಯಕ್ತಿ ಇಂದು ತನ್ನ ದೇಶದ ಜನಗಳ ಭವಿಷ್ಯವನ್ನು ಅಕ್ಷರಶಃ ತನ್ನ ಕೈಯಲ್ಲಿ ಹಿಡಿದು ಸಾಗುತ್ತಿದ್ದಾರೆ.
ಗಾಂಧಿ ಮಾತನಾಡಿದರೆ ಅದು ಭಾರತ ಮಾತಾಡಿದಂತೆ. ಗಾಂಧಿ ನಡೆಸುವ ಚಟುವಟಿಕೆ, ಅದು ಭಾರತದ ಚಟುವಟಿಕೆ. ಗಾಂಧಿಯನ್ನು ಬಂಧಿಸಿ ಸೆರೆಯಲ್ಲಿಟ್ಟರೆ ಇಡಿಯ ಭಾರತ ತಳಮಳಿಸುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ. ಈ ವರೆಗೆ ನಾನು ಬಲ್ಲ ಇನ್ಯಾವುದೇ ವ್ಯಕ್ತಿಗಿಂತ ಹೆಚ್ಚು ಈ ಮನುಷ್ಯ ಜನಸಾಮಾನ್ಯರೆಲ್ಲರ ಆತ್ಮಗಳ ವ್ಯಕ್ತಾವತಾರ ಎಂದೇ ನಾನು ನಂಬಿಕೊಳ್ಳುತ್ತೇನೆ.
ಮೂರನೆಯದಾಗಿ, ಗಾಂಧೀಜಿಯ ಚಳವಳಿಗಳು ಇಷ್ಟು ವ್ಯಾಪಕವಾಗಿ ಸುದ್ದಿಯಾಗುವಲ್ಲಿ ಬ್ರಿಟಿಷ್ ಸರ್ಕಾರದ ಕೆಲವು ದಮನಕಾರಿ ನೀತಿಗಳೂ ಕಾರಣವಾಗಿವೆ. ಯಾವುದೇ ಸರ್ಕಾರ ಯಾಕಾದರೂ ದಬ್ಬಾಳಿಕೆ ನಡೆಸಬೇಕು? ಅದು ಕೂಡ ಸ್ವಾತಂತ್ರ್ಯದ ಕೂಗು ಎದ್ದಿರುವ ಸಂದರ್ಭದಲ್ಲಿ ಸರ್ಕಾರಗಳು ಹೆಚ್ಚು ದಬ್ಬಾಳಿಕೆ ನಡೆಸತೊಡಗಿದಷ್ಟೂ ಜನರ ಪ್ರತಿರೋಧ ತೀವ್ರಗೊಳ್ಳುತ್ತ ಹೋಗುವುದು. ಅದ್ಯಾಕೆ ಈ ಸರ್ಕಾರಗಳು ಜನಸಮೂಹದ ಮಾನಸಿಕತೆಯ ಇತಿಹಾಸವನ್ನು ಮರೆಯುತ್ತವೆಯೋ ಅರ್ಥವಾಗೋದಿಲ್ಲ. ತುಳಿದಷ್ಟೂ ಸಮೂಹವು ಚಿಮ್ಮಿ ಬರುತ್ತವೆ ಅನ್ನುವುದನ್ನು ಅವು ಮರೆತುಬಿಡುತ್ತವೆ. ಈಗಾಗಲೇ ಇಂಗ್ಲೆಂಡ್ ಹಲವೆಡೆಗಳಲ್ಲಿ ದಮನಕಾರಿ ನೀತಿಯನ್ನು ಲಾಗೂ ಮಾಡಲು ಹೋಗಿ ವಿಫಲಗೊಂಡಿದೆ. ೧೭೭೫ರಲ್ಲಿ ಇದು ಅಮೆರಿಕದಲ್ಲಿ ವಿಫಲಗೊಂಡಿತು. ೨೦ರ ಹಾಗೂ ೪೦ರ ದಶಕಗಳಲ್ಲಿ ಇದು ಇಂಗ್ಲೆಂಡಿನ ಆಂತರಿಕ ಆಡಳಿತದಲ್ಲಿಯೇ ವಿಫಲವಾಯ್ತು. ಸೌತ್ ಆಫ್ರಿಕಾದಲ್ಲಿಯೂ ಬೋಎರ್/ಯುದ್ಧದ ನಂತರ ವಿಫಲವಾಯ್ತು. ನೆನ್ನೆ ಐರ್‍ಲೆಂಡಿನಲ್ಲಿ ವಿಫಲಗೊಂಡ ಈ ನೀತಿ ನಾಳೆ ಭಾರತದಲ್ಲೂ ವೈಫಲ್ಯ ಕಾಣುತ್ತದೆ.
ದಮನಕಾರಿ ಪ್ರಭುತ್ವ ಎಲ್ಲಿಯಾದರೂ ಯಶಸ್ಸು ಕಾಣುತ್ತಿದೆ ಎಂದಾದರೆ, ಅದು ಶತ್ರುಗಳ ಹೋರಾಟವನ್ನು ಜಾಹೀರುಗೊಳಿಸುವಲ್ಲಿ, ಅಷ್ಟೇ!
“ನಾವು ನಮ್ಮ ಪ್ರೀತಿಯ ಗೆಳೆಯರಿಂದಾಗಿ ಜಾಹೀರುಗೊಂಡೆವು” ಅನ್ನುತ್ತಾನೆ ಷೇಕ್ಸ್‌ಪಿಯರ್. ನಾವು ಅದನ್ನೇ ನಮ್ಮ ಶತ್ರುಗಳ ಹೋರಾಟದ ಕುರಿತು ಹೇಳಬೇಕಾಗುತ್ತದೆ. ಇಂಗ್ಲೆಂಡಿನ ನೀತಿಗಳಿಗೆ ಭಾರತೀಯರ ಪ್ರತಿರೋಧವೇ ದೊಡ್ಡ ಸುದ್ದಿಯಾಗಿ, ಆ ಮೂಲಕ ಇಂಗ್ಲೆಂಡು ಜಾಹೀರುಗೊಳ್ಳುತ್ತಿದೆ. ಈ ಮೂಲಕ ಭಾರತೀಯರು ಜಗತ್ತಿನ ಗಮನವನ್ನೂ ಅನುಕಂಪವನ್ನೂ ಸೆಳೆಯತೊಡಗಿದ್ದಾರೆ. ಸ್ವತಃ ಭಾರತೀಯರೇ ಪ್ರಯತ್ನಿಸದ್ದರೆ ಇಷ್ಟು ವ್ಯಾಪಕ ಪ್ರಚಾರ ಸಿಗುತ್ತಿತ್ತೋ ಇಲ್ಲವೋ, ಇಂಗ್ಲೆಂಡಿನ ನೀತಿಗಳು ಅಂಥ ವೇದಿಕೆ ಒದಗಿಸಿಕೊಡುತ್ತಿವೆ.
ಇತ್ತೀಚಿನ ಉದಾಹರಣೆಗಳನ್ನೆ ಗಮನಿಸಿ ನೋಡಿ. ಅಲಿ ಸಹೋದರರ ಬಂಧನವಾದಾಗ ಈ ಸುದ್ದಿ ಜಗತ್ತಿನ ಮೂಲೆಮೂಲೆಯಲ್ಲಿರುವ ಮುಸ್ಲಿಂ ದೇಶಗಳನ್ನು ತಲುಪಿತು ಮತ್ತು ಪ್ರತಿಯೊಬ್ಬ ಮುಸ್ಲಿಮನೂ ಭಾರತದ ಸ್ವಾತಂತ್ರ್ಯಕ್ಕಾಗಿ ತುಡಿಯುವಂತೆ ಮಾಡಿತು. ಲಾಲಾ ಲಜಪತರಾಯರನ್ನು ಬಂಧಿಸಿ ಸೆರೆಮನೆಯಲ್ಲಿ ಇರಿಸಿದಾಗ ಸಾವಿರಾರು ಇಂಗ್ಲಿಷ್ ಹಾಗೂ ಅಮೆರಿಕನ್ ಬುದ್ಧಿಜೀವಿಗಳು ಸೆಟೆದು ನಿಂತರು. ಏಕೆಂದರೆ ಲಜಪತರಾಯರ ಪಾಂಡಿತ್ಯದ ಅರಿವು ಈ ಜನರಿಗಿತ್ತು. ಅವರ ವ್ಯಕ್ತಿತ್ವದ ಬಗ್ಗೆ ಜಗತ್ತು ತಿಳಿದಿತ್ತು.
ಹಾಗೆಯೇ ಇದೀಗ ಗಾಂಧೀಜಿಯ ಸರದಿ. ಇಂದು ಲಕ್ಷಾಂತರ ಜನ ಗಾಂಧೀಜಿಯ ಬಗ್ಗೆ ತಿಳಿದಿದ್ದಾರೆ. ಅವರನ್ನು ನಂಬಿಕೊಂಡಿದ್ದಾರೆ. ನಾಳೆ ಅವರನ್ನು ಆರಾಧಿಸತೊಡಗುತ್ತಾರೆ. ಸಾಮ್ರಾಜ್ಯಷಾಹಿಯ ವಿರುದ್ಧ ಸಂತನೊಬ್ಬ ಜೀವ ಪಣಕ್ಕಿಟ್ಟು ಹೋರಾಟಕ್ಕೆ ಇಳಿದಿದ್ದಾನೆಂದು ಅವರು ಭಾವಿಸುತ್ತಿದ್ದಾರೆ.
ಕೊನೆಯದಾಗಿ, ಇತ್ತೀಚಿನ ದಿನಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಲಿಕ್ಕಾಗಿ ನಾನು ಒಂದು ನಿದರ್ಶನವನ್ನು ಹೇಳುತ್ತೇನೆ. ಕೆಲ ತಿಂಗಳುಗಳ ಹಿಂದೆ ವೇಲ್ಸ್ ರಾಜಕುಮಾರ ಭಾರತಕ್ಕೆ ಭೇಟಿ ನೀಡಿದ್ದರು. ಈ ಘಟನೆಗೆ ಹೋಲಿಕೆ ನೀಡಲು ನನಗೇನೂ ತೋಚುತ್ತಿಲ್ಲ. ಬ್ರಿಟಿಷ್ ರಾಜಸತ್ತೆಗೆ ಭಾರತೀಯರೆಷ್ಟು ನಿಷ್ಠರಾಗಿದ್ದಾರೆ ಅನ್ನುವುದನ್ನು ನಿರೂಪಿಸಲು ಈ ಭೇಟಿಯನ್ನು ಆಯೋಜಿಸಲಾಗಿದೆಯೆಂದು ನಮಗೆ ಹೇಳಲಾಗಿತ್ತು. ಹಾಗೇನಾದರೂ ಭಾರತೀಯರು ಬ್ರಿಟಿಷರಿಗೆ ನಿಷ್ಠರಾಗಿದ್ದುದೇ ಆಗಿದ್ದಲ್ಲಿ ರಾಜಕುಮಾರರ ಭೇಟಿಯ ಅಗತ್ಯವೇ ಇರುತ್ತಿರಲಿಲ್ಲ. ಕೆಲವೊಮ್ಮೆ ಸನ್ನಿವೇಶಕ್ಕೆ ತಕ್ಕಂತೆ ಯೋಜಿತ ಕಾರ್ಯಗಳು ವ್ಯತಿರಕ್ತ ಪರಿಣಾಮವನ್ನೆ ಬೀರುತ್ತವೆ.
ವೇಲ್ಸ್ ರಾಜಕುಮಾರನ ಪ್ರಯಾಣದ ಅಧಿಕೃತ ಘೋಷಣೆ ಹೊರಡುತ್ತಲೇ ಗಾಂಧಿ ಭಾರತದಲ್ಲಿ ಬಹಿಷ್ಕಾರ ಚಳವಳಿಗೆ ಕರೆ ನೀಡಿದರು. ಅವರು ಇದನ್ನು ಸಾಮ್ರಾಜ್ಯದ ಮುಗ್ಧ ಯುವ ಪ್ರತಿನಿಧಿಯ ವಿರುದ್ಧವಾಗಿಯೇನೂ ಆಯೋಜಿಸಲಿಲ್ಲ. ಆದರೆ ಇಂಗ್ಲಿಷ್ ಆಡಳಿತಕ್ಕೆ ಭಾರತೀಯರ ಪ್ರತಿಕ್ರಿಯೆಯನ್ನು ದಾಖಲಿಸಲು ಅವರು ಬಯಸಿದ್ದರು. ಈ ರಾಜಕುಮಾರ ಭಾರತದ ನೆಲದಲ್ಲಿ ಇಳಿಯುತ್ತಲೇ ಬಹಿಷ್ಕಾರ ಚಳವಳಿಗೆ ಚಾಲನೆ ನೀಡಲಾಯ್ತು. ಅವರು ಹೋದ ಕಡೆಯಲ್ಲೆಲ್ಲ ಸ್ಥಳೀಯರು ಉಡಾಫೆ ಕಣ್ಣುಗಳಿಂದ ಬರ ಮಾಡಿಕೊಂಡಿದ್ದಲ್ಲದೆ, ಬೆನ್ನು ತಿರುಗಿಸಿ ನಡೆದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
ಕೊನೆಯದಾಗಿ ಅಲಹಾಬಾದಿನಲ್ಲಿ ಅವರು ರಾಜಕುಮಾರನನ್ನು ಭೇಟಿಯಾಗಲಿಕ್ಕೆ ಕೂಡ ನಿರಾಕರಿಸಿಬಿಟ್ಟರು. ರಾಜಕುಮಾರ ಈ ನಗರವನ್ನು ಪ್ರವೇಶಿಸಿದಾಗ ಒಮದು ಮೃತ ನಗರವನ್ನು ಪ್ರವೇಶಿಸಿದಂತೆ ಆಗಿತ್ತು. ರಸ್ತೆಗಳು ನಿರ್ಜನವಾಗಿದ್ದವು. ಪ್ರತಿ ಮನೆಯ ಬಾಗಿಲೂ ಮುಚ್ಚಿಕೊಂಡಿದ್ದವು. ಕಿಟಕಿಗಳನ್ನು ಮುಚ್ಚಿ ಪರದೆ ಹಾಕಿಕೊಂಡಿದ್ದರು. ನಗರದ ಹೊರ ವಲಯದಲ್ಲಿ ಒಂದಷ್ಟು ಪ್ರತಿಭಟನಾಕಾರರು ಸ್ವರಾಜ್ಯದ ಘೋಷಣೆ ಕೂಗುತ್ತಿದ್ದರು. ಇಡಿಯ ನಗರ ನಿಶ್ಚಲವಾಗಿ, ನಿರ್ಜೀವವಾದಂತೆ ತೋರುತ್ತಿತ್ತು.
ವೇಲ್ಸ್ ರಾಜಕುಮಾರನ ಭೇಟಿಯ ಸಂದರ್ಭದ ಈ ಪ್ರತಿಭಟನೆಯು ಸ್ವಾತಂತ್ರ್ಯದ ಕುರಿತಾಗಿ ಭಾರತೀಯರ ಚಡಪಡಿಕೆಯನ್ನು ಸ್ಪಷ್ಟವಾಗಿ ಧ್ವನಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಜಗತ್ತಿಗೆ ಗಾಂಧೀಜಿ ಹಾಗೂ ಅವರ ಅನುಯಾಯಿಗಳ ಸಾಮರ್ಥ್ಯವನ್ನು ಪರಿಚಯಿಸಿತ್ತು
ಮುಂದುವರೆಯುವುದು…..
ಆಕರ: ಗ್ಲೋಬಲ್ ಇಂಪಾರ್ಟೆನ್ಸ್ ಆಫ್ ಮಹಾತ್ಮಾಗಾಂಧಿ; ಮಿನಿಸ್ಟರ್ ಆಫ್ ದ ಕಮ್ಯುನಿಟಿ ಚರ್ಚ್, ನ್ಯೂಯಾರ್ಕ್ ಸಿಟಿ – ಫ್ರೆಂಡ್ಸ್ ಆಫ್ ಫ್ರಿಡಮ್ ಫಾರ್ ಇಂಡಿಯಾದ ವತಿಂದ ಪ್ರಕಟಿತ ಕಿರುಹೊತ್ತಿಗೆ