ಭಾರತವೆಂದರೆ ಬೆಳಕಿನ ಹುಡುಕಾಟ; ಬನ್ನಿ, ಜ್ಞಾನ ದೀವಿಗೆ ಹೊತ್ತಿಸಿಕೊಳ್ಳೋಣ!

ನಮ್ಮ ಪೂರ್ವಜರು ಹಣತೆಯಂತೆ ಹೊತ್ತಿಸಿಟ್ಟ ಜ್ಞಾನ, ಬಿಟ್ಟ ಕಣ್ಣಲ್ಲೆ ಜಗತ್ತಿನ ಪರಿಚಯ ಮಾಡಿಸುವ ತಂತ್ರಜ್ಞಾನವಲ್ಲ ನಿಜ…  ಆದರೆ, ಈ ಜ್ಞಾನ ಕಣ್ಣು ಮುಚ್ಚಿ ಜಗತ್ತನ್ನು ಅರಿಯುವಂತೆ ಮಾಡುವ ದಿವ್ಯಜ್ಞಾನ. ಮತ್ತು; ಅದು ಕಾಣಿಸುವ ಈ ಜಗತ್ತು, ಅಂತರಂಗದ ಜಗತ್ತು…. ~ ಗಾಯತ್ರಿ

ಭಾರತಕ್ಕೂ ಬೆಳಕಿಗೂ ಎಡೆಬಿಡದ ನಂಟು. `ಭಾ’ ಅಂದರೆ `ಬೆಳಕು’. ಭಾರತ ಪದದ ಅರ್ಥ- ಬೆಳಕಿನ ಹುಡುಕಾಟದಲ್ಲಿ ನಿರತರಾದವರು ಎಂದು. ಹೀಗಾಗಿ ದೀಪಾವಳಿ ಕೇವಲ ಬಾಹ್ಯ ಆಚರಣೆಗಳ ನಿಟ್ಟಿನಿಂದಷ್ಟೇ ಅಲ್ಲ, ಆಂತರಿಕ ಕಾರಣಗಳಿಗಾಗಿಯೂ ಮಹತ್ವ ಪಡೆದಿದೆ. ನಮ್ಮ ಆಂತರ್ಯದಲ್ಲಿ ನಿತ್ಯ ದೀಪಾವಳಿ ನಡೆಯಬೇಕು. ಅಲ್ಲಿ ಸದಾ ಬೆಳಕು ನೆಲೆಸಿರಬೇಕು. ಇದು ದೀಪಾವಳಿ ಹಬ್ಬವನ್ನು ಆಚರಿಸುವುದರ ಹಿಂದಿನ ಸೂಚ್ಯಾರ್ಥ.

ನಮ್ಮ ಪೂರ್ವಜರು ನಿರಂತರ ಜ್ಞಾನದ ಬೆಳಕಿನ ಹುಡುಕಾಟ ನಡೆಸಿದ್ದರು. ಪೂರ್ವಜರೆಂದರೆ, ಕಾಡಿನಲ್ಲಿ ತಪಸ್ಸಿಗೆ ಕುಳಿತವರಷ್ಟೆ ಅಲ್ಲ, ನಾಡಿನಲ್ಲಿ ದುಡಿಯುತ್ತ ಉಳಿದವರು ಕೂಡಾ. ಮತ್ತು ಪೂರ್ವಜರೆಂದರೆ ನಿರ್ದಿಷ್ಟ ವರ್ಣಾಶ್ರಮದವರಲ್ಲ, ಪ್ರತಿಯೊಂದು ಶ್ರೇಣಿಯ ಜನರೂ.

ಹಾಗೆಂದೇ ಈ ಮಣ್ಣಿನ ರೈತ, ಬಡಗಿ, ಚಮ್ಮಾರ, ಅರ್ಚಕ, ವ್ಯಾಪಾರಿ, ವೈದ್ಯ – ನಾನಾ ಬಗೆಯ ವೃತ್ತಿ ನಡೆಸುತ್ತಿದ್ದವರು ಸಂತರಾಗಿ, ಗುರುವಾಗಿ, ಅವಧೂತರಾಗಿ ಜ್ಞಾನ ದೀವಿಗೆ ಹೊತ್ತಿಸಿ ಹೋಗಿದ್ದಾರೆ. ವೇದೋಪನಿಷತ್ತುಗಳು ಗೀತೆ – ಸ್ಮೃತಿಗಳು, ವಚನಗಳು, ದೋಹೆಗಳು, ಸುಭಾಷಿತಗಳು, ಜನಪದ ಗೀತೆಗಳು, ಬುಡಕಟ್ಟು ಮಹಾಕಾವ್ಯಗಳು, ಪುರಾಣಗಳು, ಪದಗಳು… ಎಷ್ಟೆಲ್ಲ ಬಗೆ ಬಣ್ಣದ ಹಣತೆಗಳು ಈ ಜ್ಞಾನದ ಬೆಳಕು ಬೀರುತ್ತಿವೆ!

ಈ ಜ್ಞಾನ ಬಿಟ್ಟ ಕಣ್ಣಲ್ಲೆ ಜಗತ್ತಿನ ಪರಿಚಯ ಮಾಡಿಸುವ ತಂತ್ರಜ್ಞಾನವಲ್ಲದೆ ಇರಬಹುದು. ಆದರೆ, ಈ ಜ್ಞಾನ ಕಣ್ಣು ಮುಚ್ಚಿ ಜಗತ್ತನ್ನು ಅರಿಯುವಂತೆ ಮಾಡುವ ದಿವ್ಯಜ್ಞಾನ. ಮತ್ತು; ಅದು ಕಾಣಿಸುವ ಈ ಜಗತ್ತು, ಅಂತರಂಗದ ಜಗತ್ತು!

ಇಂದಿಗೆ ಒಂದು ಹಂತದ ದೀಪಾವಳಿ ಮುಕ್ತಾಯ. ಸಾಲು ದೀಪದ ಕಾರ್ತೀಕ ಮಾಸ ಶುರು. ಈ ಬೆಳಕಿನ ತಿಂಗಳಲ್ಲಿ ಜ್ಞಾನದ ಹಣತೆಗಳನ್ನು ನಮ್ಮ ಅಂತರಂಗದಲ್ಲಿ ಹೊತ್ತಿಸಿಕೊಳ್ಳೋಣ.

Leave a Reply