ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #38

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಮಾಹಿತಿ ಕೃಪೆ : www.vyasaonline.com

ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ ಮತ್ತು ಕ್ರತು ಈ ಆರು ಮಹರ್ಷಿಗಳು ಬ್ರಹ್ಮನ ಮಾನಸಪುತ್ರರು. ಮರೀಚಿಯ ಪುತ್ರ ಕಶ್ಯಪ. ಕಶ್ಯಪನಿಂದ ಮಹಾಭಾಗ ದಕ್ಷನ ಹದಿಮೂರು ಕನ್ಯೆಯರಲ್ಲಿ ಎಲ್ಲ ಪ್ರಜೆಗಳೂ ಹುಟ್ಟಿದರು. ಅದಿತಿ, ದಿತಿ, ದನು, ಕಾಲಾ, ಅನಾಯು, ಸಿಂಹಿಕಾ, ಮುನಿ, ಕ್ರೋಧಾ, ಪ್ರಾವಾ, ಅರಿಷ್ಟಾ, ವಿನತಾ, ಕಪಿಲ, ಮತ್ತು ಕದ್ರು ಇವರು ದಕ್ಷಕನ್ಯೆಯರು. ಇವರಲ್ಲಿ ಅನಂತ ಸಂಖ್ಯೆಗಳಲ್ಲಿ ವೀರ್ಯಸಂಪನ್ನ ಪುತ್ರ ಪೌತ್ರರಾದರು.

ಹನ್ನೆರಡು ಭುವನೇಶ್ವರ ಆದಿತ್ಯರು ಅದಿತಿಯಲ್ಲಿ ಜನಿಸಿದರು. ಮೊದಲ ಹತ್ತು ಮಂದಿ – ಧಾತ, ಮಿತ್ರ, ಯಮ, ಶಕ್ರ, ವರುಣ, ಅಂಶ, ಭಗ, ವಿವಸ್ವತ, ಪೂಷ ಮತ್ತು ಸವಿತ. ಹನ್ನೊಂದನೆಯವನು ತ್ವಷ್ಟ ಮತ್ತು ಹನ್ನೆರಡನೆಯವನು ವಿಷ್ಣು. ಕೊನೆಯವನು ಸರ್ವ ಆದಿತ್ಯರಲ್ಲಿ ಅಧಿಕ ಗುಣವಂತನು.

ದಿತಿಗೆ ಹಿರಣ್ಯಕಶಿಪುವೆಂಬ ಹೆಸರಿನಿಂದ ಖ್ಯಾತ ಒಬ್ಬನೇ ಮಗನಿದ್ದನು. ಆ ಮಹಾತ್ಮನಿಗೆ ಐವರು ಪುತ್ರರಿದ್ದರು. ಅವರಲ್ಲಿ ಮೊದಲನೆಯವನು ಪ್ರಹ್ಲಾದ, ಅವನ ನಂತರ ಸಂಹ್ಲಾದ, ಮೂರನೆಯವನು ಅನುಹ್ಲಾದ. ನಂತರ ಶಿಬಿ ಮತ್ತು ಬಾಷ್ಕಲ. ಪ್ರಹ್ಲಾದನ ಮೂರೂ ಪುತ್ರರೂ ಖ್ಯಾತರಾಗಿದ್ದರು: ವಿರೋಚನ, ಕುಂಭ, ನಿಕುಂಭರೆಂದು ವಿಶೃತರಾಗಿದ್ದರು. ಪ್ರತಾಪಿ ಬಲಿಯೊಬ್ಬನೇ ವಿರೋಚನನ ಪುತ್ರ. ಬಾಣ ಎಂಬ ಹೆಸರಿನ ಮಹಾಸುರನು ಬಲಿಯ ಪುತ್ರ.

ದನುವಿನ ನಲವತ್ತು ಪುತ್ರರೂ ಸರ್ವತ್ರ ಖ್ಯಾತರಾಗಿದ್ದರು. ಅವರಲ್ಲಿ ಮೊದಲು ಹುಟ್ಟಿದವನು ಮಹಾಯಶಸ್ವಿ ರಾಜಾ ವಿಪ್ರಚಿತ್ತಿ. ಶಂಬರ, ನಮುಚಿ, ಪುಲೋಮ, ಅಸಿಲೋಮ. ಕೇಶಿ, ದುರ್ಜಯ, ಅಯಃಶಿರ, ಅಶ್ವಶಿರ, ಅಯಃಶಂಕು, ಗಗನಮೂರ್ಧಾ, ವೇಗವಾನ, ಕೇತುಮಾನ್, ಸ್ವರ್ಭಾನು, ಅಶ್ವ, ಅಶ್ವಪತಿ, ವೃಶಪರ್ವ, ಅಜಕ, ಅಶ್ವಗ್ರೀವ, ಸೂಕ್ಷ್ಮ, ತುಹುಂಡ, ಇಸೃಪ, ಏಕಚಕ್ರ, ವಿರೂಪಾಕ್ಷ, ಹರ, ಹರಿ, ನಿಚಂದ್ರ, ನಿಕುಂಭ, ಕೃಪಥ, ಕಾಪಥ, ಶರಭ, ಶಲಭ, ಸೂರ್ಯ, ಚಂದ್ರ, ಇವರೆಲ್ಲರೂ ದಾನವ ವಂಶದಲ್ಲಿ ಖ್ಯಾತರು. ದೇವತೆಗಳಾದ ಸೂರ್ಯ ಮತ್ತು ಚಂದ್ರರೇ ಬೇರೆ ಎಂದೂ ಕೇಳಿದ್ದೇವೆ. ಇವರನ್ನೂ ಬಿಟ್ಟು ಇನ್ನೂ ಹತ್ತು ಸತ್ಯವಂತ ಮಹಾಬಲಿ ದಾನವ ಪುಂಗವರು ದನುವಿನ ಪುತ್ರರು. ಏಕಾಕ್ಷ, ವೀರ ಮೃತಪ, ಪ್ರಲಂಬ, ನರಕ, ವಾತಾಪಿ, ಶತ್ರುತಪನ, ಮಹಾಸುರ ಶಠ, ಗವಿಷ್ಠ, ದನಾಯು, ದಾನವ ದೀರ್ಘಜಿಹ್ವ, ಮತ್ತು ಇವರ ಅಸಂಖ್ಯ ಪುತ್ರರೂ ಮತ್ತು ಪೌತ್ರರು.

ಸಿಂಹಿಕೆಯು ಚಂದ್ರ ಮತ್ತು ಸೂರ್ಯರ ವೈರಿ ರಾಹುವೆಂಬ ಪುತ್ರನಿಗೆ ಮತ್ತು ಸುಚಂದ್ರ, ಚಂದ್ರಹಂತಾರ ಹಾಗೂ ಚಂದ್ರವಿಮರ್ದನರಿಗೆ ಜನ್ಮವಿತ್ತಳು.

ಅಸಂಖ್ಯ ಕ್ರೂರಳ ಪುತ್ರ ಪೌತ್ರರು ಕ್ರೂರ ಸ್ವಭಾವದವರಾಗಿದ್ದರು. ಆ ಕ್ರೂರ ಕರ್ಮಿ ಅರಿಮರ್ದನ ಗುಂಪಿಗೆ ಕ್ರೋಧವಶ ಎನ್ನುವ ಹೆಸರಿದೆ. ಅವಳಿಗೆ ಇನ್ನೂ ನಾಲ್ವರು ಅಸುರಪುಂಗವರು ಪುತ್ರರಾದರು: ವಿಕ್ಷರ, ಬಲ, ವೀರ, ಮತ್ತು ಮಹಾಸುರ ವೃತ್ರ.

ಕಾಲಾಳ ಪುತ್ರರು ಕಾಲದಂತೆ ಪ್ರಹಾರಿಗಳಿದ್ದರು. ಅವರು ಭೂಮಿಯಲ್ಲಿ ದಾನವರಲ್ಲಿಯೇ ಮಹಾವೀರರೂ ಪರಂತಪಸ್ವಿಗಳೂ ಎಂದು ಖ್ಯಾತರಾದರು. ವಿನಾಶನ, ಕ್ರೋಧ, ಹಂತ, ಕ್ರೋಧಶತ್ರು ಮೊದಲಾದವರು ಕಾಲಳ ಮಕ್ಕಳೆಂದು ವಿಶೃತರಾಗಿದ್ದಾರೆ. ಅಸುರರ ಉಪಾಧ್ಯಾಯ ಶುಕ್ರನು ಋಷಿಪುತ್ರನಾಗಿದ್ದನು. ಉಶಾಸನನ ನಾಲ್ವರು ಪುತ್ರರೂ ಅಸುರ ಯಾಜಕರಾಗಿ ವಿಖ್ಯಾತರಾಗಿದ್ದರು. ತ್ವಷ್ಟಾವರ ಮತ್ತು ಅತ್ರಿ ಇಬ್ಬರೂ ಮಂತ್ರಕರ್ಮಿ, ತೇಜದಲ್ಲಿ ಸೂರ್ಯಸಂಕಾಶರೂ ಆಗಿದ್ದು ಬ್ರಹ್ಮಲೋಕ ಪ್ರಭಾವನರಾಗಿದ್ದರು. ಇವರಲ್ಲಿ ಜನಿಸಿದ ಪೀಳಿಗೆಗಳೆಲ್ಲವನ್ನೂ ಎಣಿಸುವುದು ಅಶಕ್ಯ. ಅವರ ಸಂಖ್ಯೆ ಅನಂತ.

ತಾರ್ಕ್ಷ್ಯ, ಅರಿಷ್ಟನೇಮಿ, ಗರುಡ, ಅರುಣ, ಆರುಣಿ ಮತ್ತು ವಾರುಣಿಯರು ವಿನತೆಯ ಮಕ್ಕಳು.

ಶೇಷ, ಅನಂತ, ವಾಸುಕಿ, ತಕ್ಷಕ, ಕೂರ್ಮ, ಕುಲಿಕ ಈ ಎಲ್ಲ ಮಹಾ ಬಲಶಾಲಿ ನಾಗಗಳು ಕದ್ರುವಿನ ಮಕ್ಕಳು.

ಭೀಮಸೇನ, ಉಗ್ರಸೇನ, ಸುಪರ್ಣ, ವರುಣ, ಗೋಪತಿ, ಧೃತರಾಷ್ಟ್ರ, ಮತ್ತು ಏಳನೆಯವನು ಸೂರ್ಯವರ್ಚ; ಪತ್ರವಾನ, ಅರ್ಕಪರ್ಣ, ಪ್ರಖ್ಯಾತ ಪ್ರಯುತ, ವಿಖ್ಯಾತ ಮತ್ತು ಸರ್ವವನ್ನು ತಿಳಿದ ಭೀಮ ಮತ್ತು ಚಿತ್ರರಥರು; ಶಾಲಿಶಿರ ಮತ್ತು ಹದಿಲ್ಕನೆಯವನು ಪ್ರದ್ಯುಮ್ನ, ಹದಿನೈದನೆಯವನು ಕಲಿ, ಹದಿನಾರನೆಯವನು ನಾರದ, ಇವರೆಲ್ಲ ದೇವ ಗಂಧರ್ವರೂ ಮುನಿಯ ಮಕ್ಕಳು.

ಅನವದ್ಯ, ಅನುವಾಸ, ಪ್ರಿಯಾ, ಅನೂಪ, ಸುಭಗ, ಮತ್ತು ಭಾಸ ಇವರೆಲ್ಲರೂ ಪ್ರಾವಳಲ್ಲಿ ಜನಿಸಿದರು. ಸಿದ್ಧರಾದ ಪೂರ್ಣ, ಬರ್ಹಿ, ಮಹಾಯಶ ಪೂರ್ಣಾಶ, ಬ್ರಹ್ಮಚಾರೀ, ರತಿಗುಣ, ಏಳನೆಯವನು ಸುಪರ್ಣ, ವಿಶ್ವಾವಸು, ಭಾನು, ಮತ್ತು ಹತ್ತನೆಯವನು ಸುಚಂದ್ರ ಈ ಎಲ್ಲ ದೇವ ಗಂಧರ್ವರೂ ಪ್ರಾವಳ ಮಕ್ಕಳು. ಈ ಮಹಾಭಾಗೆ ದೇವಿಯಿಂದ ಹಿಂದೆ ದೇವರ್ಷಿಯಿಂದ ಪುಣ್ಯಲಕ್ಷಣಗಳಿಂದೊಡಗೂಡಿದ ಅಪ್ಸರೆಯರ ವಂಶವು ಉತ್ಪನ್ನವಾಯಿತು. ಅಲಂಬುಸಾ, ಮಿಶ್ರಕೇಶೀ, ವಿದ್ಯುತ್ಪರ್ಣಾ, ಅನಘೆ ತುಲಾ, ಅರುಣಾ, ರಕ್ಷಿತಾ, ರಂಭಾ, ಮನೋರಮಾ, ಅಸಿತ, ಸುಬಾಹು, ಸುವ್ರತಾ, ಸುಭುಜಾ, ಸುಪ್ರಿಯಾ; ಅತಿಬಾಹು, ವಿಖ್ಯಾತರಾದ ಹಾಹಾ, ಹುಹು, ತುಂಬುರು ಈ ನಾಲ್ವರು ಗಂಧರ್ವಸತ್ತಮರು.

ಅಮೃತ, ಬ್ರಾಹ್ಮಣ, ಗೋವು, ಗಂಧರ್ವರು ಮತ್ತು ಅಪ್ಸರೆಯರು ಕಪಿಲಳ ಮಕ್ಕಳು.

ಸ್ಥಾಣುವಿಗೆ ಹನ್ನೊಂದು ವಿಖ್ಯಾತ, ಪರಮ ಮನಸ್ಕ ಮಕ್ಕಳಿದ್ದರು. ಮಹಾಯಶ ಮೃಗವ್ಯಾಧ, ಶರ್ವ, ನಿಋತಿ, ಅಜೈಕಪಾದ, ಅಹಿರ್ಬುಂಧ್ಯ, ಪರಂತಪ ಪಿನಾಕೀ, ದಹನ, ಈಶ್ವರ, ಮಹಾದ್ಯುತಿ ಕಪಾಲೀ, ಸ್ಥಾಣು, ಮತ್ತು ಭಗವಾನ ಭಾವ ಇವರೆಲ್ಲರೂ ಏಕಾದಶ ರುದ್ರರೆಂದು ಕರೆಯಲ್ಪಟ್ಟಿದ್ದಾರೆ.

ಅಂಗಿರಸನಿಗೆ ಮೂರು ಪುತ್ರರು: ಬೃಹಸ್ಪತಿ, ಉತಥ್ಯ, ಮತ್ತು ಸಂವರ್ತ.

ಅತ್ರಿಯ ಮಕ್ಕಳು ಬಹಳ ಎಂದು ಕೇಳಿದ್ದೇವೆ. ಅವರೆಲ್ಲರೂ ವೇದವಿದರೂ, ಸಿದ್ಧರೂ, ಶಾಂತಾತ್ಮರೂ ಆದ ಮಹರ್ಷಿಗಳು.

ರಾಕ್ಷಸ, ವಾನರ ಮತ್ತು ಕಿನ್ನರರು ಪುಲಸ್ತ್ಯನ ಮಕ್ಕಳು. ಮೃಗ, ಸಿಂಹ, ವ್ಯಾಘ್ರ, ಮತ್ತು ಕಿಂಪುರುಷರು ಪುಲಹನ ಮಕ್ಕಳು. ಮೂರೂ ಲೋಕಗಳಲ್ಲಿ ವಿಶೃತ ಸತ್ಯವ್ರತಪರಾಯಣ ಸೂರ್ಯನ ಸಹಚಾರಿ ಪುತ್ರರು ಕ್ರತುವಿಗೆ ಜನಿಸಿದರು.

 

1 Comment

Leave a Reply