ಪ್ರಜಾಪತಿಗಳು ಮತ್ತು ಸಂತಾನ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #39

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 2ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/11/12/sanatana/

Kashyapa with wives
ಪ್ರಜಾಪತಿ ಕಶ್ಯಪ ಮತ್ತು ಪತ್ನಿಯರು | ಚಿತ್ರಕೃಪೆ: BTG

ಪುತ್ರರಲ್ಲಿ ಮತ್ತು ಪುತ್ರವಂತರಲ್ಲಿ ಶ್ರೇಷ್ಠ ಭಗವಾನ್ ಋಷಿ ದಕ್ಷನು ಬ್ರಹ್ಮನ ಎಡ ಅಂಗುಷ್ಠದಿಂದ ಜನಿಸಿದನು. ಆ ಮಹಾತ್ಮನ ಭಾರ್ಯೆಯು ಬಲ ಅಂಗುಷ್ಠದಿಂದ ಹುಟ್ಟಿದಳು. ಆ ಮುನಿಯು ಅವಳಿಂದ ಐವತ್ತು ಕನ್ಯೆಯರನ್ನು ಪಡೆದನು. ಆ ಎಲ್ಲ ಕನ್ಯೆಯರೂ ಅನವದ್ಯಾಂಗಿಯರೂ, ಕಮಲಲೋಚನೆಯರೂ ಆಗಿದ್ದರು. ಪುತ್ರಹೀನನಾಗಿದ್ದ ಪ್ರಜಾಪತಿಯು ಅವರನ್ನೇ ಪುತ್ರಿಕರನ್ನಾಗಿರಿಸಿಕೊಂಡನು. ಅವರಲ್ಲಿ ಹತ್ತನ್ನು ಧರ್ಮನಿಗೆ, ಇಪ್ಪತ್ತೇಳನ್ನು ಚಂದ್ರನಿಗೆ ಮತ್ತು ಹದಿಮೂರನ್ನು ಕಶ್ಯಪನಿಗೆ ದೇವ ವಿಧಿಯಂತೆ ಕೊಟ್ಟನು.

ಧರ್ಮನ ಪತ್ನಿಯರು: ಕೀರ್ತಿ, ಲಕ್ಷ್ಮಿ, ಧೃತಿ, ಮೇಧಾ, ಪುಷ್ಟಿ, ಶ್ರದ್ದಾ, ಕ್ರಿಯಾ, ಬುದ್ಧಿ, ಲಜ್ಜಾ, ಮತಿ.

ಸೋಮನ ಇಪ್ಪತ್ತೇಳು ಪತ್ನಿಯರು ಲೋಕಪರಿಶೃತರಾಗಿದ್ದಾರೆ. ಆ ಶುಭವ್ರತೆ ಸೋಮಪತ್ನಿಯರು ಎಲ್ಲರೂ ಕಾಲದ ಕಣ್ಣುಗಳಾಗಿದ್ದು ನಕ್ಷತ್ರ ಯೋಗಿನಿಯರಾಗಿ ಲೋಕಯಾತ್ರೆಯಲ್ಲಿ ನಿರತರಾಗಿದ್ದಾರೆ.

ಮುನಿಗಳ ದೇವ ಪಿತಾಮಹ. ಅವನ ಪುತ್ರ ಪ್ರಜಾಪತಿ. ಅವನ ಪುತ್ರರು ಅಷ್ಟ ವಸುಗಳು. ಧರ, ಧೃವ, ಸೋಮ, ಆಹ, ಅನಿಲ, ಅನಲ, ಪ್ರತ್ಯೂಷ, ಮತ್ತು ಪ್ರಭಾಸ ಇವರುಗಳು ಅಷ್ಟ ವಸುಗಳೆಂದು ಕರೆಯಲ್ಪಟ್ಟಿದ್ದಾರೆ.

ಧರ ಮತ್ತು ಬ್ರಹ್ಮವಿದ ಧೃವ ಧೂಮ್ರಾಯಳ ಮಕ್ಕಳು. ಚಂದ್ರನು ಮನಸ್ವಿನಿಯಲ್ಲಿ ಮತ್ತು ಶ್ವಸನನು (ಅನಿಲನು) ಶ್ವಸಳಲ್ಲಿ ಜನಿಸಿದರು. ಅಹನು ರತಳ ಪುತ್ರ, ಹುತಾಶನನು ಶಂಡಿನ್ಯಳ ಪುತ್ರ, ಪ್ರತ್ಯೂಷ ಮತ್ತು ಪ್ರಭಾತರು ಪ್ರಭಾಸನ ಪುತ್ರರೆಂದು ಹೇಳುತ್ತಾರೆ.

ದ್ರವಿಣ ಮತ್ತು ಹುತಹವ್ಯಹಾ ಧರನ ಪುತ್ರರು. ಲೋಕಪ್ರಕಾಲನ ಭಗವಾನ್ ಕಾಲನು ಧ್ರುವನ ಪುತ್ರ. ಸೋಮನ ಸುತನು ವರ್ಚಸ್ವಿ ವರ್ಚಾ. ಅವನಿಗೆ ಮನೋಹರೆಯಲ್ಲಿ ಶಿಶಿರ, ಪ್ರಾಣ ಮತ್ತು ರಮಣರು ಜನಿಸಿದರು. ಅಹನ ಸುತರು ಜ್ಯೋತಿ, ಶ್ರಮ, ಶಾಂತ ಮತ್ತು ಮುನಿ. ಶರವಣಾಲಯ ಶ್ರೀಮಾನ್ ಕುಮಾರನು ಅಗ್ನಿಯ ಪುತ್ರ. ಅವನಿಗೆ ಶಾಖ, ವಿಶಾಖ ಮತ್ತು ಕೊನೆಯವ ನೈಗಮೇಷ. ಕೃತ್ತಿಕೆಯರಿಂದ ಪೋಷಿಸಲ್ಪಟ್ಟ ಅವನು ಕಾರ್ತಿಕೇಯನೆಂದು ಕರೆಯಲ್ಪಟ್ಟಿದ್ದಾನೆ.

ಅನಿಲನ ಭಾರ್ಯೆ ಶಿವಾ; ಅವಳ ಮತ್ತು ಅನಿಲರ ಈರ್ವರು ಮಕ್ಕಳು ಪುರೋಜವ ಮತ್ತು ಅವಿಜ್ಞಾತಿ. ಪ್ರತ್ಯೂಷನ ಋಷಿಪುತ್ರನ ಹೆಸರು ದೇವಲ. ದೇವಲನಿಗೆ ಕ್ಷಮಾವಂತರೂ ವಿಧ್ವಾಂಸರೂ ಆದ ಈರ್ವರು ಪುತ್ರರು. ವರಸ್ತ್ರೀ, ಬ್ರಹ್ಮಚಾರಿಣೀ, ಯೋಗಸಿದ್ಧೆ, ಮತ್ತು ನಿರಾಸಕ್ತಳಾಗಿ ಸರ್ವ ಜಗತ್ತನ್ನೂ ಸಂಚರಿಸಿದ ಬೃಹಸ್ಪತಿಯ ತಂಗಿಯು ಎಂಟನೆಯ ವಸುವಾದ ಪ್ರಭಾಸನ ಭಾರ್ಯೆಯು. ಅವರಲ್ಲಿ ಶಿಲ್ಪಪ್ರಜಾಪತಿ, ಸಹಸ್ರ ಶಿಲ್ಪಗಳ ಕರ್ತೃ, ಮೂವತ್ತು ದೇವತೆಗಳ ಶಿಲ್ಪಿ, ಸರ್ವ ಭೂಷಣಗಳ ಕರ್ತ, ಶಿಲ್ಪವಂತರಲ್ಲಿಯೇ ಶ್ರೇಷ್ಠ, ದೇವತೆಗಳ ದಿವ್ಯ ವಿಮಾನಗಳನ್ನು ರಚಿಸಿದ ಮಹಾಭಾಗ ವಿಶ್ವಕರ್ಮನು ಜನಿಸಿದನು. ಈ ಮಹಾತ್ಮನ ಶಿಲ್ಪದಿಂದ ಉಪಜೀವಿಸುವ ಮನುಷ್ಯರು ನಿತ್ಯನೂ ಅವ್ಯಯನೂ ಆದ ಈ ವಿಶ್ವಕರ್ಮನನ್ನು ಪೂಜಿಸುತ್ತಾರೆ.

ಸರ್ವಲೋಕಸುಖಕಾರಕ ಭಗವಾನ್ ಧರ್ಮನು ನರರೂಪವನ್ನು ಧರಿಸಿ ಬ್ರಹ್ಮನ ಎಡ ಸ್ತನವನ್ನು ಒಡೆದು ಹೊರಬಂದನು. ಅವನಿಗೆ ಸರ್ವಭೂತಮನೋಹರ, ತಮ್ಮ ತೇಜಸ್ಸಿನಿಂದ ಲೋಕವನ್ನೆಲ್ಲ ಪರಿಪಾಲಿಸುತ್ತಿರುವ ಮೂವರು ಪುತ್ರರು: ಶಮ, ಕಾಮ ಮತ್ತು ಹರ್ಷ. ಕಾಮನ ಭಾರ್ಯೆ ರತಿ, ಶಮನ ಅಂಗನೆ ಪ್ರಾಪ್ತಿ, ಮತ್ತು ಹರ್ಷನ ಭಾರ್ಯೆ ಲೋಕಗಳೇ ಯಾರ ಮೇಲೆ ನಿಂತಿವೆಯೋ ಆ ನಂದೀ.

ಕಶ್ಯಪನು ಮರೀಚಿಯ ಪುತ್ರ ಮತ್ತು ಕಶ್ಯಪನಿಂದ ಸುರಾಸುರರೂ ಮತ್ತು ಲೋಕ ಪ್ರಜೆಗಳೂ ಜನಿಸಿದರು. ಹೆಣ್ಣು ಕುದುರೆಯ ರೂಪಧಾರಿಣಿ ತ್ವಷ್ಟ್ರೀಯು ಸವಿತುವಿನ ಭಾರ್ಯೆ ಮತ್ತು ಈ ಮಹಾಭಾಗೆಯು ಅಂತರಿಕ್ಷದಲ್ಲಿ ಅವಳಿ ಅಶ್ವಿನಿಯರಿಗೆ ಜನ್ಮವಿತ್ತಳು. ಶಕ್ರನ ನಾಯಕತ್ವದಲ್ಲಿರುವ ಹನ್ನೆರಡು ಆದಿತ್ಯರಲ್ಲಿ ಯಾರಲ್ಲಿ ಮತ್ತು ಯಾರ ಮೇಲೆ ಲೋಕಗಳೆಲ್ಲವೂ ನಿಂತಿವೆಯೋ ಆ ವಿಷ್ಣುವೇ ಕಿರಿಯವನು.

ರುದ್ರ, ಸಾಧ್ಯ, ಮರುತ, ವಸು, ಭಾರ್ಗವ, ವಿದ್ಯ, ವಿಶ್ವೇದೇವ ಇವರೆಲ್ಲರದ್ದೂ ಒಂದೊಂದು ಪಕ್ಷ. ವೈನತೇಯ ಗರುಡ, ಬಲವಾನ್ ಅರುಣ, ಮತ್ತು ಭಗವಾನ್ ಬೃಹಸ್ಪತಿ ಇವರುಗಳನ್ನು ಆದಿತ್ಯರೆಂದು ಪರಿಗಣಿಸುತ್ತಾರೆ. ಈರ್ವರು ಅಶ್ವಿನಿಯರು, ಸರ್ವ ಔಷಧಿಗಳು ಮತ್ತು ಪಶುಗಳನ್ನು ಗುಹ್ಯಕರೆಂದು ತಿಳಿಯುತ್ತಾರೆ. ಈ ರೀತಿ ದೇವಗಣಗಳನ್ನು ಕ್ರಮಬದ್ಧವಾಗಿ ಹೇಳಲಾಗಿದೆ.

ಭಗವಾನ್ ಭೃಗುವು ಬ್ರಹ್ಮನ ಹೃದಯವನ್ನು ಸೀಳಿ ಹೊರಬಂದನು. ಭೃಗುವಿನ ಪುತ್ರ ಕವಿ, ಮತ್ತು ವಿದ್ವಾನ್ ಶುಕ್ರಗ್ರಹನು ಕವಿಸುತನು. ಸ್ವಯಂಭುವಿನಿಂದ ತ್ರೈಲೋಕ್ಯಪ್ರಾಣಾಧಾರವಾದ ವರ್ಷಾವರ್ಷ ಮತ್ತು ಭಯಾಭಯಗಳ ಒಡೆಯನಾಗಿ ನಿಯುಕ್ತಗೊಂಡ ಅವನು ಎಲ್ಲ ಭುವನವನ್ನೂ ಪರಿಭ್ರಮಿಸುತ್ತಾನೆ. ಯೋಗಾಚಾರ್ಯ, ಮಹಾಬುದ್ಧಿವಂತ, ಮೇಧವೀ, ಬ್ರಹ್ಮಚಾರಿ, ಮತ್ತು  ಯತವ್ರತನಾದ ಅವನು ದೈತ್ಯ ಮತ್ತು ಸುರರ ಗುರುವಾದನು.

ಈ ರೀತಿ ಯೋಗಕ್ಷೇಮಕ್ಕೆಂದು ವಿಭುವಿನಿಂದ ನಿಯುಕ್ತಗೊಂಡ ಭಾರ್ಗವನು ಇನ್ನೊಬ್ಬ ಪುತ್ರ ಅನಿಂದಿತ ದೀಪ್ತತಪಸ್ಕ, ಧರ್ಮಾತ್ಮ ಮನೀಷಿಣಿ ಚ್ಯವನನನ್ನು ಪಡೆದನು. ಅವನು ತಾಯಿಯನ್ನು ಬಿಡುಗಡೆಗೊಳಿಸಲು ರೋಷಗೊಂಡಾಗ ಅವಳ ಗರ್ಭದಿಂದ ಚ್ಯುತನಾಗಿದ್ದನು. ಮನುವಿನ ಕನ್ಯೆ ಆರುಷಿಯು ಆ ಮನೀಷಿಣಿಯ ಪತ್ನಿ. ಅವಳ ತೊಡೆಯನ್ನು ಸೀಳಿ ಮಹಾತಪಸ್ವಿ, ಮಹಾತೇಜಸ್ವಿ ಬಾಲ್ಯದಲ್ಲಿಯೇ ಗುಣಯುಕ್ತ ಔರ್ವನು ಜನಿಸಿದನು. ಅವನ ಪುತ್ರ ಋಚೀಕ, ಅವನ ಮಗ ಜಮದಗ್ನಿ.

ಮಹಾತ್ಮ ಜಮದಗ್ನಿಗೆ ನಾಲ್ವರು ಪುತ್ರರಿದ್ದರು. ಅವರಲ್ಲಿ ಕಿರಿಯವನು ರಾಮ. ಆದರೆ ಅವನು ಗುಣಗಳಲ್ಲಿ ಕಿರಿಯವನಿರಲಿಲ್ಲ. ಆ ಸರ್ವಶಾಸ್ತ್ರಾಸ್ತ್ರ ಕುಶಲನು ಕ್ಷತ್ರಿಯವಂಶವನ್ನೇ ಅಂತ್ಯಗೊಳಿಸಿದನು. ಔರ್ವನ ನೂರು ಪುತ್ರರಲ್ಲಿ ಜಮದಗ್ನಿಯು ಹಿರಿಯವನಾಗಿದ್ದನು. ಅವರಿಗೆ ಸಹಸ್ರಾರು ಪುತ್ರರಿದ್ದು, ಭೃಗುಕುಲವು ವಿಸ್ತಾರವಾಯಿತು.

ಬ್ರಹ್ಮನಿಗೆ ಅನ್ಯ ಎರಡು ಪುತ್ರರಿದ್ದರು – ಧಾತಾ ಮತ್ತು ವಿಧಾತ – ಅವರ ಚಿಹ್ನೆ ಜಗತ್ತಿನಲ್ಲೆಲ್ಲಾ ಉಳಿದಿದೆ ಮತ್ತು ಅವರು ಮನುವಿನ ಸಂಗಡ ಇರುತ್ತಾರೆ. ಅವರ ತಂಗಿಯೇ ದೇವಿ ಪದ್ಮಗೃಹೆ, ಶುಭೆ ಲಕ್ಷ್ಮಿ. ಅವಳ ಮಾನಸ ಪುತ್ರರು ಆಕಾಶಚಾರಿಣಿ ತುರಗಗಳು. ಶುಕ್ರನಲ್ಲಿ ಜನಿಸಿದ ದೇವಿಯು ವರುಣನ ಹಿರಿಯ ಹೆಂಡತಿ. ಅವಳು ಬಲ ಎನ್ನುವ ಪುತ್ರನಿಗೂ ಮತ್ತು ಸುರನಂದಿನಿಯಾದ ಸುರಾ ಎನ್ನುವ ಮಗಳಿಗೂ ಜನ್ಮವಿತ್ತಳು.

ಅನ್ನಕಾಮಿ ಪ್ರಜೆಗಳು ಅನ್ಯೋನ್ಯರನ್ನು ಭಕ್ಷಿಸುವ ಸಮಯದಲ್ಲಿ ಸರ್ವ ಭೂತವಿನಾಶಕ ಅಧರ್ಮನ ಜನ್ಮವಾಯಿತು. ಅವನ ಭಾರ್ಯೆಯು ನಿರೃತಿ ಮತ್ತು ಅವಳಲ್ಲಿ ನೈರೃತರೆಂಬ ರಾಕ್ಷಸರು ಹುಟ್ಟಿದರು. ಅವಳಿಗೆ ಸದಾ ಪಾಪಕರ್ಮರತ ಮೂವರು ಘೋರ ಪುತ್ರರಿದ್ದರು: ಭಯ, ಮಹಾಭಯ, ಮತ್ತು ಭೂತಾಂತಕ ಮೃತ್ಯು.

ದೇವೀ ತಾಮ್ರಾ ಐದು ಲೋಕವಿಶ್ರುತ ಕನ್ಯೆಯರಿಗೆ ಜನ್ಮವಿತ್ತಳು: ಕಾಕೀ, ಶ್ಯೇನೀ, ಭಾಸೀ, ಧೃತರಾಷ್ಟ್ರೀ ಮತ್ತು ಶುಕೀ. ಕಾಕಿಯು ಉಲೂಕಗಳಿಗೆ (ಗೂಬೆಗಳಿಗೆ) ಜನ್ಮವಿತ್ತಳು, ಶ್ಯೇನಿಯು ಗಿಡುಗಗಳಿಗೆ ಜನ್ಮವಿತ್ತಳು, ಮತ್ತು ಬಾಸಿಯು ಹದ್ದುಗಳೇ ಮೊದಲಾದ ಪಕ್ಷಿಗಳಿಗೆ ಜನ್ಮವಿತ್ತಳು. ಭಾಮಿನಿ ಧೃತರಾಷ್ಟ್ರಿಯು ಸರ್ವ ಹಂಸ, ಕೊಕ್ಕರೆಗಳು ಮತ್ತು ಚಕ್ರವಾಕಗಳಿಗೆ ಜನ್ಮವಿತ್ತಳು. ಮನಸ್ವಿನಿ, ಕಲ್ಯಾಣಗುಣಸಂಪನ್ನೆ ಸರ್ವಲಕ್ಷಣಪೂಜಿತೆ ಶುಕಿಯು ಗಿಳಿಗಳಿಗೆ ಜನ್ಮವಿತ್ತಳು. ಅವಳಲ್ಲಿ ಒಂಭತ್ತು ಆತ್ಮಸಂಭ್ಬವ ಕ್ರೋಧವಶ ನಾರಿಯರು ಹುಟ್ಟಿದರು: ಮೃಗೀ, ಮೃಗಮಂದಾ, ಹರಿ, ಭದ್ರಮನಾ, ಮಾತಂಗೀ, ಶಾರ್ದೂಲೀ, ಶ್ವೇತಾ, ಮತ್ತು ಸುರಭಿ.

ಸರ್ವಲಕ್ಷಣಸಂಪನ್ನೆ ಯಶಸ್ವಿನಿ ಮೃಗಳ ಮಗಳೇ ಸರ್ವ ಜಿಂಕೆಗಳ ಮೂಲ. ಕರಡಿ, ಸೃಮರ, ಮತ್ತು ಚಮರಗಳು ಮೃಗಮಂದಳ ಮಕ್ಕಳು. ಆನೆ ಐರಾವತವು ಭದ್ರಮನಾಳ ಮಗನಾಗಿ ಹುಟ್ಟಿದನು. ಮಹಾಗಜ, ದೇವನಾಗ ಐರಾವತನು ಅವಳ ಮಗ. ಹರಿಯಲ್ಲಿ ಕುದುರೆಗಳು ಮತ್ತು ತರಸ್ವಿಗಳಾದ ವಾನರರು ಜನಿಸಿದರು. ಗೋಲಾಂಗೂಲಗಳೂ ಹರಿಯ ಪುತ್ರರೇ.

ಶಾರ್ದೂಲಿಯಲ್ಲಿ ಸಿಂಹ, ವ್ಯಾಘ್ರ ಮತ್ತು ಸರ್ವ ಚಿರತೆಗಳೂ ಜನಿಸಿದರು. ಆನೆಗಳೆಲ್ಲವೂ ಮಾತಂಗಿಯ ಮಕ್ಕಳು. ವೇಗವಂತನಾದ ದಿಗ್ಗಜ ಶ್ವೇತನು ಶ್ವೇತಳ ಮಗ. ಸುರಭಿಗೆ ಈರ್ವರು ಪುತ್ರಿಯರು ಜನಿಸಿದರು: ರೋಹಿಣೀ ಮತ್ತು ಯಶಸ್ವಿನಿ ಗಂಧರ್ವೀ. ರೋಹಿಣಿಯಲ್ಲಿ ಗೋವುಗಳು ಹುಟ್ಟಿದವು ಮತ್ತು ಕುದುರೆಗಳು ಗಂಧರ್ವಿಯ ಮಕ್ಕಳು.

ಸುರಸೆಯಲ್ಲಿ ನಾಗಗಳು ಮತ್ತು ಕದ್ರುವಿನಲ್ಲಿ ಪನ್ನಗಗಳು ಜನಿಸಿದರು. ಅನಲಳು ಏಳು ರೀತಿಯ ಪಿಂಡಫಲಗಳನ್ನು ನೀಡುವ ವೃಕ್ಷಗಳಿಗೆ ಜನ್ಮವಿತ್ತಳು. ಶುಕಿಯು ಅನಲೆಯ ಮಗಳು ಮತ್ತು ಸುರಸೆಯು ಕದ್ರುವಿನ ಸುತೆ. ಅರುಣನ ಭಾರ್ಯೆ ಶ್ಯೇನಿಯು ವೀರ್ಯವಂತರೂ ಮಹಾಬಲಿಗಳೂ ಆದ ಸಂಪಾತಿ ಮತ್ತು ಜಟಾಯುಗಳಿಗೆ ಜನ್ಮವಿತ್ತಳು. ವಿನತೆಯ ಮಕ್ಕಳಾದ ಗರುಡ ಮತ್ತು ಅರುಣ ಈರ್ವರೂ ವಿಖ್ಯಾತರು.

(ಮುಂದಿನ ಸಂಚಿಕೆಯಲ್ಲಿ ‘ಭರತ ವಂಶಾವಳಿ)

1 Comment

Leave a Reply