ಪರಿಪೂರ್ಣ ಗುರುವನ್ನು ಹುಡುಕಿ ಹೊರಟ ತರುಣ : tea time story

ಬಾಗ್ದಾದಿನ ಒಬ್ಬ ತರುಣನಿಗೆ, ತಾನು ಪರಿಪೂರ್ಣ ಜ್ಞಾನಿಯೊಬ್ಬನ ಶಿಷ್ಯನಾಗಿ ಸಾಧನೆ ನಡೆಸಿದಂತೆ ಕನಸು ಬಿತ್ತು. ಆ ಕನಸನ್ನು ನನಸು ಮಾಡಿಕೊಳ್ಳುವ ಉತ್ಕಟ ಬಯಕೆ ಅವನಲ್ಲಿ ಉಂಟಾಯಿತು. ಜ್ಞಾನ ಪಡೆದರೆ ಕನಸಿನಲ್ಲಿ ಕಂಡಂತೆ ಪರಿಪೂರ್ಣ ಗುರುವಿನ ಬಳಿಯೇ ಎಂದು ದೃಢ ನಿಶ್ಚಯ ಮಾಡಿಕೊಂಡ.

ಹಾಗೆ ನಿರ್ಧರಿಸಿದ ದಿನವೇ ಅವನು ಮನೆ ಬಿಟ್ಟು ಹೊರಟ. ಊರೂರು ಅಲೆದ. ಸಿಕ್ಕವರ ಬಳಿಯೆಲ್ಲ ಅಂಥಹಾ ಗುರುವನ್ನು ನೋಡಿದ್ದೀರಾ ಎಂದು ವಿಚಾರಿಸಿದ. ನಿರಾಶಾದಾಯಕ ಉತ್ತರವೇ ದೊರೆಯುತ್ತಿದ್ದರೂ ತನ್ನ ನಿರ್ಧಾರದಲ್ಲಿ ಅಚಲನಾಗಿದ್ದ.
ಹೀಗೆ ಅಲೆಯುತ್ತ ತರುಣ ಒಂದು ಕೊಳದ ಬಳಿ ಬಂದ. ಅಲ್ಲೊಂದು ಮರ. ಅದರ ಕೆಳಗೊಬ್ಬ ಅಲೆಮಾರಿ ಮುದುಕ.

ತರುಣ ಅವನ ಬಳಿ ಬಂದು, “ನಿಮ್ಮನ್ನು ನೋಡಿದರೆ ಸಾಕಷ್ಟು ವಯಸಾದಂತೆ ತೋರುತ್ತಿದೆ. ದಯವಿಟ್ಟು ನಿಮ್ಮ ಬಗ್ಗೆ ಹೇಳಿ” ಅಂದ.
ಮುದುಕ ತಾನೊಬ್ಬ ಅಲೆಮಾರಿಯೆಂದೂ ದೇಶದೇಶಗಳನ್ನು ಸುತ್ತಾಡಿ ಬಂದಿರುವೆನೆಂದೂ ಹೇಳಿದ.
“ನಾನು ಪರಿಪೂರ್ಣ ಗುರುವಿನ ಹುಡುಕಾಟದಲ್ಲಿದ್ದೇನೆ. ನೀವು ಎಲ್ಲೆಡೆ ತಿರುಗಾಡಿ ಬಂದಿದ್ದೀರಿ. ಅಂತಹ ಗುರು ಎಲ್ಲಿ ಸಿಗುವರೆಂದು ಹೇಳಬಹುದೇ?” ಎಂದು ತರುಣ ಕೇಳಿಕೊಂಡ.
ಮುದುಕ ಒಂದಷ್ಟು ವಿಳಾಸಗಳನ್ನು ಕೊಟ್ಟು, ಅವರನ್ನು ಭೇಟಿ ಮಾಡುವಂತೆ ತಿಳಿಸಿದ. ತರುಣ ಸಂತೋಷದಿಂದ ಹೊರಟುಹೋದ.

ಹೀಗೆ 12 ವರ್ಷಗಳು ಉರುಳಿದವು. ಮುದುಕ ಮರದ ಕೆಳಗೆ ಕುಳಿತೇ ಇದ್ದ. ತರುಣನೀಗ ಪ್ರಬುದ್ಧ ಪರುಷನಾಗಿದ್ದ. ಮರದಡಿಯ ಮುದುಕನ ಬಳಿ ಬಂದವನೇ ನಮಸ್ಕರಿಸಿ ಕಾಲ ಬುಡದಲ್ಲಿ ಕುಳಿತ.

“ನಾನು ಹುಡುಕುತ್ತಿದ್ದ ಪರಿಪೂರ್ಣ ಗುರು ನೀವೇ ಆಗಿದ್ದಿರಿ… ಅವತ್ತೇ ಯಾಕೆ ಹೇಳಲಿಲ್ಲ?” ಎಂದು ಕೇಳಿದವನ ದನಿಯಲ್ಲಿ ಹುಸಿ ಮುನಿಸಿತ್ತು. ತಲೆ ಎತ್ತಿ ನೋಡಿದ… ಕನಸಲ್ಲಿ ಕಂಡ ಮರವೇ ಅದಾಗಿತ್ತು.
“ಅರೆ! ಅಂದು ನಾನು ಈ ಮರವನ್ನೂ ನೋಡಲಿಲ್ಲ… ನೋಡಿದ್ದರೆ ಆಗಲೇ ಗೊತ್ತಾಗಿಬಿಡುತ್ತಿತ್ತು” ಎಂದು ತನ್ನನ್ನು ಬೈದುಕೊಂಡ.

“ನಾನು ಅವತ್ತೇ ಯಾಕೆ ಹೇಳಲಿಲ್ಲ ಗೊತ್ತಾ?” ಮುದುಕ ಕೇಳಿದ, “ನಾನೇನೋ ನಿನಗೆ ಗುರುವಾಗಲು ತಯಾರಿದ್ದೆ. ನೀನು ಶಿಷ್ಯನಾಗಲು ಇನ್ನೂ ಸಿದ್ಧವಿರಲಿಲ್ಲ. ನಿನಗೆ ಅನುಭವ – ಪ್ರಬುದ್ಧತೆಗಳ ಕೊರತೆಯಿತ್ತು. ಇಲ್ಲಿ ನಾನಿದ್ದೆ… ನಿನ್ನ ಕನಸಿನ ಮರವೂ ಇತ್ತು. ಆದರೂ ನೀನು ಗುರುತಿಸಲು ಸೋತೆ. ನಿನ್ನ ಕಣ್ಣುಗಳು ಹೊರಜಗತ್ತನ್ನು ಮಾತ್ರ ನೋಡುತ್ತಿದ್ದವು. ಅವು ಏನನ್ನೂ ಗುರುತಿಸಲಾಗದಷ್ಟು ಎಳಸಾಗಿದ್ದವು. ಈಗ ನೀನು ಮಾಗಿದ್ದೀಯ. ನಾನು ಬದುಕಿರುವಷ್ಟು ದಿನ ನೀನು ನನ್ನ ಶಿಷ್ಯನಾಗಿರುತ್ತೀಯ”

ಹೊಸ ಗುರುವಿನ ಮಾತು ಕೇಳಿ ಶಿಷ್ಯ ಕಣ್ಣೀರು ಸುರಿಸಿದ. ಅದಾಗಲೇ ಅವರಿಂದ, “ಹುಡುಕಾಟಕ್ಕೆ ಒಳಗಣ್ಣು ತೆರೆಯುವುದು ಮುಖ್ಯ, ಅದು ಮುಚ್ಚಿಕೊಂಡಿದ್ದರೆ ಏನೂ ದೊರೆಯುವುದಿಲ್ಲ” ಅನ್ನುವ ಮೊದಲ ಪಾಠ ಕಲಿತಿದ್ದ.

Leave a Reply