ನಂಬಿ ಕೆಟ್ಟವರಿಲ್ಲ… ಮೂಢನಂಬಿಕೆಯಲ್ಲಿ ಉದ್ಧಾರವಾದವರಿಲ್ಲ!

ಸ್ವಾಮಿ ವಿವೇಕಾನಂದರಂತೂ ತಮ್ಮ ಜನರು ಮೌಢ್ಯದಿಂದ ರೂಢಿಸಿಕೊಂಡ ನಂಬಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ದೇಶ ಹಿಂದುಳಿದಿರುವುದಕ್ಕೆ ಜನರಲ್ಲಿನ ಮೂಢನಂಬಿಕೆ ಮತ್ತು ಕಂದಾಚಾರಗಳೇ ಕಾರಣ ಎನ್ನುತಿದ್ದ ವಿವೇಕಾನಂದರು, ತಮ್ಮ ಬಹುತೇಕ ಉಪನ್ಯಾಸಗಳಲ್ಲಿ ಈ ಕುರಿತು ಎಚ್ಚರಿಸಿದ್ದಾರೆ ~ ಗಾಯತ್ರಿ

ನಂಬಿಕೆ ಇದ್ದಲ್ಲಿ ಶ್ರದ್ಧೆ ಮೂಡುತ್ತದೆ. ತಾನು ಉತ್ತಮ ಕೆಲಸ ಮಾಡುತ್ತಿದ್ದೇನೆ ಎನ್ನುವ ನಂಬಿಕೆ, ಒಂದು ಕೆಲಸವನ್ನು ಮಾಡುವುದರಿಂದ ತನಗೆ ಒಳಿತಾಗುತ್ತದೆ ಎನ್ನುವ ನಂಬಿಕೆಯೇ ಶ್ರದ್ಧೆಯ ಹುಟ್ಟು – ಬೆಳವಣಿಗೆಗೆ ಇಂಬಾಗುತ್ತದೆ.

ರಾಮಾಯಣದಲ್ಲಿ ಹನುಮಂತ ಸಾಗರೋಲ್ಲಂಘನ ಮಾಡಿದ ಪ್ರಸಂಗ ಇದಕ್ಕೆ ಅತ್ಯುತ್ತಮ ಉದಾಹರಣೆ. ರಾಮ ನಾಮ ಬಲದ ಮೇಲೆ ಅವನಿಗಿದ್ದ ನಂಬಿಕೆ ಅವನಿಂದ ಆ ಕೆಲಸವನ್ನು ಮಾಡಿಸಿತು. ಹೆಜ್ಜೆ ಇಡುವ ಪುಟ್ಟ ಕಂದ, ಬಿದ್ದರೆ ಅಮ್ಮ ಹಿಡಿಯುವಳೆಂಬ ನಂಬಿಕೆಯ ಮೇಲೆಯೇ ಗಟ್ಟಿ ಕಾಲೂರುವುದನ್ನು ರೂಢಿಸಿಕೊಳ್ಳುತ್ತದೆ. ಅಪ್ಪ ಆಡಿಸುವಾಗ ಮೇಲಕ್ಕೆ ಬೀಸಿದರೆ ಮಗು ನಗುವುದೂ ಅವನು ತನ್ನನ್ನು ಹಿಡಿಯುವನೆಂಬ ನಂಬಿಕೆಯಿಂದಲೇ.

ಒಂದು ಸಿನಿಮಾ ಗೀತೆ ಹೇಳುವಂತೆ, “ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ” ಕೆಲಸ ಮುಂದೆ ಸಾಗುವುದಿಲ್ಲ. ಈ ಮಾತಿಗೆ ವಿಶ್ವೇಶ್ವರಯ್ಯನಂಥವರ ಉದಾಹರಣೆಯನ್ನೂ ಈ ಹಾಡು ನೀಡುತ್ತದೆ. ಕಗ್ಗಲ್ಲು ಕಡೆದು ಶಿಲ್ಪಿಯು ವಿಗ್ರಹ ಅರಳಿಸುವುದು ಕೂಡ ನಂಬಿಕೆಯ ಬಲದಿಂದಲೇ. ವಿದ್ಯೆ ಕಲಿತಿದ್ದರಾಗದು. ಅದನ್ನು ಸಮರ್ಥವಾಗಿ ಬಳಸಬಲ್ಲೆ ಎಂಬ ನಂಬಿಕೆ ಇರಬೇಕು. ಇಲ್ಲವಾದರೆ ವಿಶ್ವ ವಿದ್ಯಾಲಯಗಳಿಂದ ಹೊರ ಬಂದವರೆಲ್ಲರೂ ಮೇಧಾವಿಗಳೇ ಆಗಿರುತ್ತಿದ್ದರಲ್ಲವೆ? ಹಾಗೇಕೆ ಆಗುವುದಿಲ್ಲ? ಏಕೆಂದರೆ ಅವರಿಗೆ ತಾವು ಕಲಿತ ವಿದ್ಯೆಯ ಬಗ್ಗೆ ನಂಬಿಕೆ ಇರುವುದಿಲ್ಲ. ಕೆಲವರು ಮಾತ್ರ ಕಲಿತ ವಿದ್ಯೆಯನ್ನು ಅನ್ವಯಗೊಳಿಸಿಕೊಂಡು ಯಶಸ್ಸು ಪಡೆಯೋದು ತಾವೀಗ ಬಲ್ಲವರಾಗಿದ್ದೇವೆ ಎಂಬ ನಂಬಿಕೆ ಕಟ್ಟಿ ಕೊಡುವ ಆತ್ಮ ವಿಶ್ವಾಸದಿಂದಲೇ.

ನಂಬಿ ಕೆಟ್ಟವರಿಲ್ಲ
‘ನಂಬಿಕ ಕೆಟ್ಟವರಿಲ್ಲವೋ ರಂಗಯ್ಯನಾ…’ ಅನ್ನುವುದೊಂದು ದಾಸ ವಾಣಿ. ಭಗವಂತನನ್ನು ನಂಬಿದವರು ಕೆಡುವುದುಂಟೆ? ಭಗವಂತ ಮಾತ್ರವಲ್ಲ, ಯಾರನ್ನು ನಂಬಿದರೂ ಕೆಡುಕಿಲ್ಲ. ಏಕೆಂದರೆ ಪರಿಣಾಮಗಳು ನಮ್ಮದೇ ಯೋಚನೆಯ ಪ್ರತಿಬಿಂಬವಾಗಿರುತ್ತವೆ. ನಾನು ಕೆಟ್ಟೆ ಅಂದುಕೊಂಡರಷ್ಟೆ ಅದು ಕೆಡುಕು. ಒಳಿತಾಯ್ತು ಅಂದುಕೊಂಡರಷ್ಟೆ ಅದು ಒಳಿತು.

ಕೆಲವರಿದ್ದಾರೆ. ಪಲಾಯನವಾದವನ್ನೆ ನಂಬಿಕೆ ಎಂದು ಕರೆದು ಅದನ್ನು ದೂರುತ್ತಾರೆ. ಯಾವುದೋ ಒಂದು ಕೆಲಸಕ್ಕೆ ಮತ್ಯಾರನ್ನೋ ನಂಬುತ್ತೇನೆ ಎಂದು ಹೇಳುವುದೇ ತಪ್ಪು ಪ್ರಯೋಗ. ಅದು ಅವಲಂಬನೆಯೆ ಹೊರತು ನಂಬಿಕೆಯಲ್ಲ. ಯಾರಾದರೂ ಬಂದು, ‘ನಿನ್ನ ಉಸಿರನ್ನು ನಾನು ಆಡುತ್ತೇನೆ. ನೀನು ಮೂಗು – ಬಾಯಿಗಳಿಗೆ ಬಟ್ಟೆ ತುರುಕಿಕೋ’ ಎಂದು ಹೇಳಿದರೆ ನಾವು ಅದನ್ನು ಮಾಡುತ್ತೇವೆಯೆ? ಅವರು ಅದೆಷ್ಟೆ ಪ್ರೀತಿಯ ವ್ಯಕ್ತಿಯಾಗಿರಲಿ, ನಾವು ಹಾಗೆ ಮಾಡುತ್ತೇವೆಯೆ? ಖಂಡಿತ ಇಲ್ಲ. ನಮ್ಮ ಲೌಕಿಕದ ನಂಬಿಕೆಗಳು ವ್ಯಾವಹಾರಿಕ ಕೊಡು ಕೊಳ್ಳುವಿಕೆಗಳು ಹಾಗೂ ಅವಲಂಬನೆಗಳೇ ಆಗಿರುತ್ತವೆ. ನಮ್ಮ ಜವಾಬ್ದಾರಿಗಳನ್ನೆಲ್ಲ ಇತರರ ಮೇಲೆ ಹಾಕಿ, ಅದರ ಸೋಲು ಗೆಲುವುಗಳಿಗೆ ಆ ಎಲ್ಲರನ್ನೆ ಹೊಣೆಯಾಗಿಸುತ್ತ ಪಲಾಯನವಾದ ಹೂಡುತ್ತೇವೆ.

ಮೌಢ್ಯವು ನಂಬಿಕೆಯಲ್ಲ
ಮೂಢ ನಂಬಿಕೆ ಒಂದು ದೊಡ್ಡ ಪಿಡುಗು. ಸ್ವಾಮಿ ವಿವೇಕಾನಂದರಂತೂ ತಮ್ಮ ಜನರು ಮೌಢ್ಯದಿಂದ ರೂಢಿಸಿಕೊಂಡ ನಂಬಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ದೇಶ ಹಿಂದುಳಿದಿರುವುದಕ್ಕೆ ಜನರಲ್ಲಿನ ಮೂಢನಂಬಿಕೆ ಮತ್ತು ಕಂದಾಚಾರಗಳೇ ಕಾರಣ ಎನ್ನುತಿದ್ದ ವಿವೇಕಾನಂದರು, ತಮ್ಮ ಬಹುತೇಕ ಉಪನ್ಯಾಸಗಳಲ್ಲಿ ಈ ಕುರಿತು ಎಚ್ಚರಿಸಿದ್ದಾರೆ.

ತಮ್ಮ ಸೋದರ ಸನ್ಯಾಸಿಯೊಬ್ಬರಿಗೆ ಬರೆದ ಪತ್ರದಲ್ಲಿ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ;
“ಈ ಕಂದಾಚಾರದವರಿಂದಾಗಿ ನಮ್ಮ ರಾಷ್ಟ್ರಕ್ಕೆ ಯಾವ ಭರವಸೆಯೂ ಇಲ್ಲ. ಯಾರ ತಲೆಯಲ್ಲೂ ಒಂದು ಹೊಸ ಸ್ವತಂತ್ರ ಆಲೋಚನೆ ಸುಳಿಯುವಂತೆ ಇಲ್ಲ. ಎಲ್ಲ ಹಳೆಯ ಕಂತೆಯ ಪುರಾಣದ ಮೇಲೆಯೇ ಇನ್ನೂ ಕಾದಾಡುತ್ತಿರುವರು. ಇವತ್ತು ದೇವರ ಕೋಣೆಯಲ್ಲಿ ಒಂದು ಘಂಟೆ ಇದೆ. ನಾಳೆ ಒಂದು ಕೊಂಬನ್ನು ಸೇರಿಸುತ್ತೀರಿ. ನಾಡಿದ್ದು ಒಂದು ಚಾಮರವನ್ನು ಸೇರಿಸುತ್ತೀರಿ. ಹೀಗೆ ಮಾಡುತ್ತ ಒಂದೆರಡು ಸಾವಿರ ಕಟ್ಟು ಕಥೆಗಳನ್ನು ನೇಯುತ್ತಿರಿ. ನಿಮ್ಮಲ್ಲಿರುವುದು ಬಾಹ್ಯ ಆಚಾರವಲ್ಲದೆ ಮತ್ತೇನೂ ಇಲ್ಲ. ಇದನ್ನು ಮಾನಸಿಕ ದೌರ್ಬಲ್ಯ ಎನ್ನುವರು. ಯಾರ ಬುದ್ಧಿಗೆ ಇಂತಹ ಕೆಲಸಕ್ಕೆ ಬಾರದ ಕಥೆಗಳಲ್ಲದೆ ಬೇರೆ ರುಚಿಸದೋ ಅವರನ್ನು ಕಡು ಮೂರ್ಖರೆಂದು ಕರೆಯುತ್ತಾರೆ. ಘಂಟೆಯನ್ನು ಬಲಗಡೆ ಬಾರಿಸುವುದೋ ಅಥವಾ ಎಡಗಡೆ ಬಾರಿಸುವುದೋ, ಚಂದನದ ಗುರುತನ್ನು ತಲೆಯ ಮೇಲೆ ಇಡುವುದೋ ಅಥವಾ ಬೇರೆ ಇನ್ನೆಲ್ಲಿಯಾದರೂ ಇಡುವುದೋ, ಮಂಗಳಾರತಿಯನ್ನು ಎರಡು ಸಲ ಬೆಳಗುವುದೋ ಅಥವಾ ನಾಲ್ಕು ಸಲ ಬೆಳಗುವುದೋ ಇಂತಹ ಮಹಾ ಪ್ರಶ್ನೆಗಳನ್ನು ಯಾರ ಮಿದುಳು ಹಗಲಿರುಳು ಆಲೋಚಿಸುತ್ತದೆಯೋ ಅಂತಹವರನ್ನು ದೌರ್ಭಾಗ್ಯರೆಂದು ಕರೆಯಬೇಕಾಗುವುದು. ಇಂತಹ ಅಭಿಪ್ರಾಯಗಳು ನಮಗೆ ಇರುವುದರಿಂದಲೇ ನಾವು ಭಾಗ್ಯಹೀನರಾಗಿರುವುದು”

ಸ್ವಾಮೀಜಿಯವರ ಈ ಮಾತುಗಳು ನಮಗೆ ಸದಾ ಸ್ಮರಣೀಯವಾಗಬೇಕು. ಆಗಷ್ಟೆ ನಂಬಿಕೆಗೂ ಮೌಢ್ಯಾಚರಣೆಗಳಿಗೂ ತಳಕು ಹಾಕುವುದು ತಪ್ಪುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.