ಅಷ್ಟಾವಕ್ರ ಗೀತೆ : ಮೂಲ ಮತ್ತು ಭಾವಾರ್ಥ ಸರಣಿ #7

ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರ ನೀಡಲಾರಂಭಿಸುತ್ತಾನೆ. ಈ ಸಂವಾದದ ಮುಂದುವರಿದ ಭಾಗ ಇದು ~ ಸಾ.ಹಿರಣ್ಮಯಿ

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2019/01/09/ashta-4/

ಅಹಂ ಕರ್ತೇತ್ಯಹಮ್ಮಾನಮಹಾಕೃಷ್ಣಾಹಿದಂಶಿತಃ |
ನಾಹಂ ಕರ್ತೇತಿ ವಿಶ್ವಾಸಾಮೃತಂ ಪೀತ್ವಾ ಸುಖೀ ಭವ || 8 ||
ಏಕೋ ವಿಶುದ್ಧ ಬೋಧೋSಹಮಿತಿ ನಿಶ್ಚಯವಹ್ನಿನಾ |
ಪ್ರಜ್ವಾಲ್ಯಾಜ್ಞಾನಗಹನಂ ವೀತಶೋಕಃ ಸುಖೀ ಭವ || 9 ||

ಅರ್ಥ: “ನಾನು ಕರ್ತಾ” ಎಂಬ ಮಹಾಕೃಷ್ಣದಿಂದ ಕಚ್ಚಿಸಿಕೊಂಡವನೇ, “ನಾನು ಕರ್ತನಲ್ಲ” ಎಂಬ ಅಮೃತವನ್ನು ಉಂಡು ಸುಖಿಯಾಗಿರು.
“ನಾನೇ ಏಕ ವಿಶುದ್ಧಬೋಧ” ಎಂಬ ಜ್ಞಾನಾಗ್ನಿಯಲ್ಲಿ ನಿನ್ನ ಅಜ್ಞಾನವನ್ನೆಲ್ಲಾ ಭಸ್ಮ ಮಾಡಿ ವೀತಶೋಕನಾಗಿ  ಸುಖಿಯಾಗು.
“ನೀನು ಆಶ್ರಯ ಪಡೆದಿರುವ ದೇಹದ ಕರ್ಮಗಳಿಗೂ ಅವುಗಳ ಫಲಕ್ಕೂ ನೀನು ಬಾಧ್ಯಸ್ತನಲ್ಲ. ಆತ್ಮನಾಗಿರುವ ನೀನು ಅವುಗಳಿಗೆ ಕರ್ತನಲ್ಲ” ಎಂದು ಹೇಳುವ ಅಷ್ಟಾವಕ್ರ; ಜನಕ ಮಹಾರಾಜನನ್ನು ‘ನಾನು ಕರ್ತಾ’ ಎಂಬ ಮಹಾಸರ್ಪದಿಂದ (ಕೃಷ್ಣ ಸರ್ಪದಿಂದ) ಕಚ್ಚಿಸಿಕೊಂಡವನೇ” ಎಂದು ಸಂಬೋಧಿಸುತ್ತಾನೆ.

ಅಷ್ಟಾವಕ್ರ ಹಾಗೇಕೆ ಸಂಬೋಧಿಸುತ್ತಿದ್ದಾನೆ? ಕಾರಣ ಇಷ್ಟೇ; ಹೇಗೆ ಕೃಷ್ಣ ಸರ್ಪದಿಂದ ಕಚ್ಚಿಸಿಕೊಂಡವರು ಬದುಕುಳಿಯುವುದು ಸಾಧ್ಯವೇ ಇಲ್ಲವೋ, ಹಾಗೆಯೇ ನಾನು ಕರ್ತಾ, ನಾನೇ ಎಲ್ಲವನ್ನೂ ಮಾಡುತ್ತಿರುವವನು – ಎಂಬ ಭಾವನೆ ಹೊಂದಿರುವವರೂ ಮುಕ್ತಿಯನ್ನು ಪಡೆಯುವುದು ಸಾಧ್ಯವಿಲ್ಲ. ಜನಕ ಮಹಾರಾಜ ಇನ್ನೂ ಕೂಡ ಕರ್ತೃ ಭಾವನೆ ಹೊಂದಿದ್ದಾನೆ. ದೇಹದೊಡನೆ ಗುರುತಿಸಿಕೊಂಡು ತನ್ನನ್ನು ತನ್ನ ಕರ್ಮಗಳ ಕರ್ತನೆಂದುಕೊಂಡಿದ್ದಾನೆ. ಹೀಗಿರುವಾಗ ಅವನು ಮುಕ್ತನಾಗಲು ಹೇಗೆ ಸಾಧ್ಯ?
ಆದ್ದರಿಂದ, “ಮಹಾರಾಜ! ನಾನು ಕರ್ತನಲ್ಲ ಅನ್ನುವ ಅಮೃತವನ್ನುಂಡು ಸುಖವಾಗಿರು” ಅನ್ನುತ್ತಿದ್ದಾನೆ ಅಷ್ಟಾವಕ್ರ.

ನಾನು ಕರ್ತನಲ್ಲ ಅನ್ನುವ ಭಾವನೆ ವ್ಯಕ್ತಿಯನ್ನು ಜನನ ಮರಣ ಚಕ್ರದಿಂದ ಮುಕ್ತಗೊಳಿಸುತ್ತದೆ. ಕರ್ತೃ ಭಾವನೆ ಮೃತ್ಯುವನ್ನು ತಂದೊಡ್ಡಿದರೆ, ತಾನು ಕರ್ತನಲ್ಲ ಎಂಬ ಭಾವನೆ ಮುಕ್ತಿಯನ್ನು ನೀಡುತ್ತದೆ. ಈ ಎರಡರ ನಡುವಿನ ವ್ಯತ್ಯಾಸವನ್ನು ಹಿಂದಿನ ಶ್ಲೋಕಗಳ ಅರ್ಥ ವಿವರಣೆಯಲ್ಲಿ ನೀವು ನೋಡಿದ್ದೀರಿ. ಅಮೃತ ಪಾನವು ನಮ್ಮನ್ನು ಸಾವಿನಿಂದ ಪಾರು ಮಾಡುತ್ತದೆ. ಮುಕ್ತಿಯು ನಮ್ಮನ್ನು ಮರ್ತ್ಯಲೋಕದಿಂದ ಹೊರಗೆ ಕೊಂಡೊಯ್ಯುತ್ತದೆ. ಜನನ ಮರಣಗಳಿಲ್ಲದ ಶುದ್ಧಾತ್ಮ ಸ್ವರೂಪದಲ್ಲಿ ಲೀನಗೊಳಿಸುತ್ತದೆ.
ಆದ್ದರಿಂದ, ನಾನೇ ಕರ್ಮಿ ಎಂಬ ವಿಷಸರ್ಪದ ಕಡಿತಕ್ಕೊಳಗಾಗಿ ಮೃತ್ಯುಮುಖನಾದ ನೀನು, ನಾನು ಅಕರ್ಮಿ ಎಂಬ ಅಮೃತಪಾನ ಮಾಡು ಸುಖಿಯಾಗಿರು ಅನ್ನುತ್ತಿದ್ದಾನೆ ಅಷ್ಟಾವಕ್ರ.  

ಮುಂದುವರಿದು, “ನಾನೇ ಏಕ, ವಿಶುದ್ಧಬೋಧ”ನೆಂಬ ಜ್ಞಾನಾಗ್ನಿಯಲ್ಲಿ ನಿನ್ನ ಅಜ್ಞಾನವನ್ನೆಲ್ಲ ಭಸ್ಮ ಮಾಡಿ ಸುಖಿಯಾಗಿರು ಎಂದು ಹಾರೈಸುತ್ತಾನೆ.

ನಾನು ಬ್ರಹ್ಮಾಂಡದ ಎಲ್ಲ ಜಡ ಚೇತನಗಳ ಮೂಲಕ ಹರಡಿಕೊಂಡಿರುವ ಮೂಲ ಸದ್ ವಸ್ತು. ಕಾಣದ್ದು, ಕಾಣುತ್ತಿರುವುದು – ಇವೆಲ್ಲ ಏನಿದೆಯೋ, ಎಲ್ಲವೂ ನಾನೇ ಆಗಿದ್ದೇನೆ. “ಇರುವುದು ಒಂದೇ, ಪರಮಾತ್ಮ. ಅದು ನಾನೇ ಆಗಿದ್ದೇನೆ” ಅನ್ನುವ ಜ್ಞಾನವೇ ವಿಶುದ್ಧಬೋಧೆ. ಈ ಜ್ಞಾನವನ್ನು ಹೊಂದಿದವರಲ್ಲಿ ಲೌಕಿಕದ ಅಜ್ಞಾನ ಇರಲು ಸಾಧ್ಯವಿಲ್ಲ. ಅವಿದ್ಯೆ ಇರಲು ಸಾಧ್ಯವಿಲ್ಲ. ಎಲ್ಲ ಲೌಕಿಕ ಭಾವನೆ, ಚಿಂತನೆಗಳೂ, ಗುರುತುಗಳೂ ಈ ಜ್ಞಾನಾಗ್ನಿಯಲ್ಲಿ ಉರಿದು ಭಸ್ಮವಾಗಿಬಿಡುತ್ತವೆ. ಆದ್ದರಿಂದ ಈ ಜ್ಞಾನಾಗ್ನಿಯನ್ನು ನಿನ್ನೊಳಗೆ ಹೊತ್ತಿಸಿಕೋ ಎಂದು ಅಷ್ಟಾವಕ್ರ ಸೂಚಿಸುತ್ತಿದ್ದಾನೆ. ಅರಿವಿನ ಅಗ್ನಿಯಲ್ಲಿ ಅಜ್ಞಾನವನ್ನು ಸುಟ್ಟು ಸುಖಿಯಾಗಿರು ಎಂದು ಹಾರೈಸುತ್ತಿದ್ದಾನೆ.

(ಮುಂದುವರಿಯುವುದು….)

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.