ಒಮ್ಮೆ ಅನುಭಾವಿ ಮನ್ಸೂರ್ ಅಲ್ ಹಲ್ಲಾಜರಿಗೆ ಮೆಕ್ಕಾ ಯಾತ್ರೆ ಮಾಡುವ ಬಯಕೆಯಾಯ್ತು. ಯಾತ್ರೆ ಹೋಗುವುದೆಂದರೆ ಸುಮ್ಮನೆ ಮಾತಲ್ಲ. ಅದಕ್ಕಾಗಿ ಅವರು ಕಷ್ಟಪಟ್ಟು ಹಣ ಕೂಡಿದರು, ಅವರಿವರಿಂದ ಸಾಲ ಪಡೆದರು; ಹೇಗೋ ಯಾತ್ರೆಗೆ ಹೋಗಿಬರುವಷ್ಟು ಹಣ ಅವರಲ್ಲಿ ಸಂಗ್ರಹವಾಯಿತು. ಇದಕ್ಕೆ ತಗುಲಿದ್ದು ಪೂರಾ ಮೂರು ವರ್ಷಗಳು!
ಹಲ್ಲಾಜರು ಹೊರಟು ನಿಂತಾಗ ಊರಿನ ಜನರೆಲ್ಲ ಬಂದು ಶುಭ ಹಾರೈಸಿ ಬೀಳ್ಕೊಟ್ಟರು. ಅವರು ಕೊನೆಗೂ ತಮ್ಮ ಆಸೆ ಕೈಗೂಡಿದ ಖುಷಿಗೆ ತಮ್ಮೊಳಗೇ ಹಾಡಿಕೊಳ್ಳುತ್ತಾ, ನಡೆಯುತ್ತಾ ಊರಿನ ಹೊರ ವಲಯ ತಲುಪಿದರು.
ಅಲ್ಲೊಂದು ಮರ. ಆ ಮರದ ಕೆಳಗೊಬ್ಬ ಮುಪ್ಪಿನ ಮುದುಕ ಕುಳಿತಿದ್ದ. ಅವನ ಬಿಡುಗಣ್ಣು ಧ್ಯಾನಲೀನವಾಗಿತ್ತು. ಮುಖ ಪ್ರಶಾಂತ ಕೊಳದಂತೆ ಹೊಳೆಯುತ್ತಿತ್ತು. ಮೆಕ್ಕಾದತ್ತ ಹೊರಳುವ ದಾರಿ ಯಾವುದೆಂಬ ಗೊಂದಲದಲ್ಲಿದ್ದ ಹಲ್ಲಾಜ್, ಆ ಮುದುಕನ ಬಳಿ ಕೇಳೋಣವೆಂದು ಹತ್ತಿರ ಹೋದ. ಅದನ್ನು ಗಮನಿಸಿದ ವೃದ್ಧ, “ಏನು?” ಎಂಬಂತೆ ತಲೆ ಎತ್ತಿ ನೋಡಿದ.
“ಈ ದಾರಿ ಮೆಕ್ಕಾಕ್ಕೆ ಹೋಗುತ್ತದೆಯೇ?” ಹಲ್ಲಾಜ್ ವಿನಯದಿಂದ ಪ್ರಶ್ನಿಸಿದರು. ಆ ಪ್ರಶ್ನೆ ಕೇಳಿ ಮುದುಕ ನಗತೊಡಗಿದ. “ಈ ದಾರಿಯೇನು, ಯಾವ ದಾರಿಯೂ ಮೆಕ್ಕಾಕ್ಕೆ ಹೋಗೋದಿಲ್ಲ! ಹೋಗಬೇಕಾಗಿರೋದು ನೀನ!!” ಅಂದ ಮುದುಕ.
ಹಲ್ಲಾಜರಿಗೆ ಮೊದಲು ಅಚ್ಚರಿಯಾಯಿತು. ಈ ಮುದುಕ ನನ್ನನ್ನು ಗೇಲಿ ಮಾಡುತ್ತಿದ್ದಾನೆ ಅನ್ನಿಸಿತು. ಆದರೂ ಸಂಭಾಳಿಸಿಕೊಂಡು ಕೇಳಿದರು, “ಸರಿ. ಈ ದಾರಿಯಲ್ಲಿ ಹೋದರೆ ನಾನು ಮೆಕ್ಕಾ ತಲುಪಬಹುದೆ?”
ಮುದುಕ ಗಂಭೀರವಾದ. “ ನೀನು ಮೆಕ್ಕಾ ತಲುಪಲೇಬೇಕೆಂದು ನಿಶ್ಚಯಿಸಿದರೆ, ಎಲ್ಲಾ ದಾರಿಯೂ ನಿನ್ನದೇ. ನೀನು ತಲುಪುವ ಎಲ್ಲಾ ಗುರಿಯೂ, ಮನುಷ್ಯನೂ, ಜೀವವೂ ಮೆಕ್ಕಾ ಆಗಿರುತ್ತದೆ. ಮತ್ತು ಎಲ್ಲೆಡೆಯೂ ನಿನಗೆ ಭಗವಂತ ದೊರೆಯುತ್ತಾನೆ”.
ಹಲ್ಲಾಜರಿಗೆ ಮುದುಕನ ಮಾತು ನಾಟಿತು. ತಾವು ಸಂಗ್ರಹಿಸಿದ್ದ ಹಣವೆಲ್ಲವನ್ನೂ ಮುದುಕನ ಮುಂದಿಟ್ಟು, ಕಾಬಾ ಸುತ್ತುವಂತೆ ಆತನನ್ನೇ ಏಳು ಬಾರಿ ಸುತ್ತಿದರು. “ನಾನು ಮೆಕ್ಕಾ ತಲುಪಿದೆ. ಧನ್ಯವಾದ” ಎಂದವರೇ ಅಲ್ಲಿಂದ ಮರಳಿ ತನ್ನೂರಿನತ್ತ ಹೆಜ್ಜೆ ಹಾಕಿದರು. ಹೊಸ ಅರಿವಿನಿಂದ, ಹೊಸ ಕಾಣ್ಕೆಯಿಂದ ಅವರಲ್ಲಿ ಆನಂದ ತುಂಬಿ ತುಳುಕುತ್ತಿತ್ತು. ಅದನ್ನು ಹಿಡಿದಿಟ್ಟುಕೊಳ್ಳಲಾಗದೆ ಹಾಡುತ್ತಾ ಕುಣಿಯುತ್ತಾ ಊರನ್ನು ಪ್ರವೇಶಿಸಿದರು.
ಹಲ್ಲಾಜ್ ಊರಿನ ಮುಖ್ಯರಸ್ತೆ ತಲುಪಿದಾಗ ಅವನನ್ನು ಬೀಳ್ಕೊಡಲು ಬಂದಿದ್ದ ಜನರಿನ್ನೂ ಚದುರುತ್ತಿದ್ದರು. ಬಹಳ ದಿನಗಳ ನಂತರ ಪರಸ್ಪರ ಭೇಟಿಯಾಗಿದ್ದ ಅವರೆಲ್ಲರೂ ಮೆಕ್ಕಾಗೆ ಹೋಗಲಿರುವ ಹಲ್ಲಾಜರ ಅದೃಷ್ಟವನ್ನು ಚರ್ಚಿಸುತ್ತಾ, ತಮಗೆ ಅಂಥಾ ಅವಕಾಶ ಸಿಗುವ ಬಗ್ಗೆ ಕನಸು ಕಾಣುತ್ತಾ ಅಲ್ಲೇ ಕುಳಿತಿದ್ದರು.
ಅವರೆಲ್ಲರಿಗೂ ಹಲ್ಲಾಜರನ್ನು ನೋಡಿ ಅಚ್ಚರಿ. “ಇದೇನು ಮನ್ಸೂರ್, ಮೆಕ್ಕಾಗೆ ಹೋಗೋದಿಲ್ಲವೆ? ಏನಾದರೂ ಮರೆತುಹೋಗಿದ್ದೆಯಾ?” ಎಂದೆಲ್ಲ ವಿಚಾರಿಸತೊಡಗಿದರು. ಏಕೆಂದರೆ, ಆ ಊರಿಂದ ಮೆಕ್ಕಾಗೆ ಹೋಗಿಬರಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತಿತ್ತು!
“ಹಾಗೇನಿಲ್ಲ, ನಾನು ಮೆಕ್ಕಾಗೆ ಹೋಗಿಬಂದೆ. ಈಗ ನನ್ನ ಯಾತ್ರೆ ಆರಂಭವಾಗಿದೆ” ಅಂದರು ಹಲ್ಲಾಜ್. ಮೆಕ್ಕಾಗೆ ಹೋಗಿಬಂದೆ ಅನ್ನುತ್ತಿದ್ದಾರೆ… ಬಂದ ಮೇಲೆ ಯಾತ್ರೆ ಆರಂಭವಾಗುವುದು ಹೇಗೆ? ಇದೇನು ಹೇಳುತ್ತಿದ್ದಾರೆ!? – ಜನರಿಗೆ ಏನೊಂದೂ ಅರ್ಥವಾಗಲಿಲ್ಲ. ಆದರೆ ಹಲ್ಲಾಜ್, ತೀರ್ಥಯಾತ್ರೆಯ ನಿಜ ಅರ್ಥವನ್ನು ಕಂಡುಕೊಂಡು, ನಿತ್ಯ ಯಾತ್ರೆಯ ಸಂಭ್ರಮವನ್ನು ಬದುಕಿಡೀ ಅನುಭವಿಸಿದರು.
(ಸಂಗ್ರಹ ಮತ್ತು ಅನುವಾದ : ಅಲಾವಿಕಾ )