ಓಶೋ ಹೇಳಿದ ಪಿಕಾಸೋ ಕಥೆ : Tea time story

imagesಒಂದು ಸಲ ಅಮೆರಿಕಾದ ಒಬ್ಬ  ಶ್ರೀಮಂತೆ ಪಿಕಾಸೋ ಬಳಿ ಬಂದು, “ನೀನು ನನ್ನದೊಂದು ಭಾವಚಿತ್ರವನ್ನು ರಚಿಸಿ ಕೊಡು. ಎಷ್ಟು ಬೇಕಾದರೂ ಹಣ ಕೊಡುತ್ತೇನೆ” ಅಂದಳು.  ಪಿಕಾಸೋ ತನ್ನ ಇಡೀ ಬದುಕಿನಲ್ಲಿ ಒಂದೇ ಒಂದು ಭಾವಚಿತ್ರ ರಚಿಸಿದವನಲ್ಲ. ಅವನ ರೇಖೆಗಳು,ಬಳಸುವ ಬಣ್ಣಗಳೆಲ್ಲವೂ ಅವನಂತೆಯೇ ವಿಲಕ್ಷಣ ಮತ್ತು ಅರ್ಥವಾಗದಷ್ಟು ಅದ್ಭುತ.

ಪಿಕಾಸೋ “ನಾನು ಈತನಕ ಯಾವ ಭಾವಚಿತ್ರವನ್ನೂ ರಚಿಸಿಲ್ಲವಲ್ಲ… ಈಗ ಪ್ರಯತ್ನಿಸಿದರೆ ಹೇಗೆ ಬರುತ್ತದೆಯೋ ಏನೋ…” ಎಂದು ಪ್ರಾಮಾಣಿಕವಾಗಿ ಉತ್ತರಿಸಿದ.

ಆಕೆ ಸುಮ್ಮನಿರದೆ,  “ಪರವಾಗಿಲ್ಲ, ನನ್ನದೇ ಮೊದಲ ಚಿತ್ರವಾಗಲಿ. ಆಗಲೇ ಹೇಳಿದಂತೆ ದೊಡ್ಡ ಸಂಭಾವನೆಯನ್ನೆ ಕೊಡುತ್ತೇನೆ” ಎಂದು ಒತ್ತಾಯಿಸಿ ಅವನನ್ನು ಒಪ್ಪಿಸಿದಳು.

ಪಿಕಾಸೋ ಅವಳನ್ನು ಎದುರು ಕೂರಿಸಿಕೊಂಡು. ಚಿತ್ರ ರಚಿಸತೊಡಗಿದ. ಮುಗಿದ ಮೇಲೆ ಅದನ್ನು ಅವಳ ಕೈಗಿತ್ತ.  ಅದನ್ನು ನೋಡಿ ಅವಳು ಗಾಬರಿಯಾದಳು. ಆ ಚಿತ್ರದ ತಲೆ ಬುಡ ಅರ್ಥವಾಗದೆ ಗೊಂದಲಗೊಂಡಳು.

“ಈ ಚಿತ್ರದಲ್ಲಿ ನನ್ನ ಮೂಗು ಎಲ್ಲಿದೆ!?” ಎಂದು ಅವಳು ಕೇಳಿದಳು.  “ನನಗೆ ಭಾವಚಿತ್ರ ರಚಿಸುವ ಅಭ್ಯಾಸವಿಲ್ಲ ಎಂದು ನಾನು ಮೊದಲೇ ಹೇಳಿರಲಿಲ್ಲವೇ? ಚಿತ್ರ ರಚನೆಯಾಗುವಾಗ ಮೂಗು ಎಲ್ಲಿದೆ ಎಂಬುದು ನನಗೆ ಗೊತ್ತಿತ್ತು. ಆದರೆ ಈಗ ಮರೆತುಹೋಗಿದೆ. ಚಿತ್ರ ರಚಿಸುವಾಗ ನನಗೆ ಚಿತ್ರದ ಮೇಲೆ ಗಮನವಿತ್ತೇ ಹೊರತು ನಿನ್ನ ಮೂಗಿನ ಮೇಲಲ್ಲ! ಈ ಚಿತ್ರವನ್ನು ಯಾರಾದರೂ ಕಲಾವಿಮರ್ಶಕರಿಗೆ ತೋರಿಸು. ಅವರು ನಿನಗೆ ನಿನ್ನ ಮೂಗನ್ನು ಪತ್ತೆ ಮಾಡಿ ಕೊಡುತ್ತಾರೆ” ಎಂದು ಹೇಳಿ ಕಳಿಸಿದ. 

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply