ಗಂಡ, ಎರಡು ಮಕ್ಕಳನ್ನು ಕಳೆದುಕೊಂಡು ಬಿಕ್ಖುಣಿಯಾದ ‘ಪಟಾಚಾರಾ’

ಗಂಡ ಹಾವಿಗೆ ಆಹುತಿ, ಒಂದು ಮಗು ಹದ್ದಿನ ಬಾಯಿಗೆ, ಇನ್ನೊಂದು ನದಿಯ ಪಾಲಿಗೆ. ಗಂಡನನ್ನೂ ಇಬ್ಬರು ಮಕ್ಕಳನ್ನೂ ಒಂದೇ ದಿನ ಕಳೆದುಕೊಂಡು ದುಃಖಿಸುತ್ತಾ ಕಂಗಾಲಾಗಿ ಶ್ರಾವಸ್ತಿ ಸೇರಿದಳು ಪಟಾಚಾರಾ. ತವರು ಮನೆಯ ಮುಂದೆ ನೂರಾರು ಜನ. ಹಿಂದಿನ ದಿನದ ಭಾರೀ ಮಳೆಗೆ ಮನೆ ಕುಸಿದು ಎಲ್ಲರೂ ಸತ್ತುಹೋಗಿದ್ದರು…. ~ ಚೇತನಾ ತೀರ್ಥಹಳ್ಳಿ

ಪಾದೇ ಪಕ್ಖಾಲಯಿತ್ವಾನ, ಉದಕೇಸು ಕರೋಮಹಂ |
ಪಾದೋದಕಞ್ಚ ದಿಸ್ವಾನ, ಥಲತೋ ನಿನ್ನಮಾಗತಂ ||
`ಕಾಲಿಗೆ ಹಾಕಿದ ನೀರು ಸ್ವಲ್ಪ ದೂರ ಹರಿದು ಇಂಗಿ ಹೋಗುತ್ತದೆ. ಹೆಚ್ಚು ಹಾಕಿದರೆ ಹೆಚ್ಚು ದೂರ ಹರಿಯಬಹುದಷ್ಟೆ, ಆದರೆ ಅದೂ ಇಂಗುತ್ತದೆ. ಹಾಗೇ ಕೆಲವರು ಸ್ವಲ್ಪ ಬೇಗ ಹೋಗುತ್ತಾರೆ, ಕೆಲವರು ದೀರ್ಘಕಾಲದವರೆಗೆ ಇರುತ್ತಾರೆ. ಆದರೆ ಉಳಿದುಕೊಳ್ಳುವಂಥವರು ಮಾತ್ರ ಯಾರೂ ಇಲ್ಲ!’
– ಇದು ಪಟಾಚಾರಾಳಿಗೆ ಆದ ಜ್ಞಾನೋದಯ.
ಇದರೊಟ್ಟಿಗೆ, ಗಂಡನ್ನ, ಇಬ್ಬರು ಮಕ್ಕಳನ್ನ, ತವರಿನ ಎಲ್ಲರನ್ನ ಕಳಕೊಂಡ ದುಃಖೋನ್ಮಾದದಲ್ಲಿದ್ದ ಅವಳು ಸಹಜವಾಗುತ್ತಾಳೆ. ತನ್ನನ್ನು ಕಂಡುಕೊಳ್ಳಲು ಬದುಕು ಮುಡಿಪಿಟ್ಟು, ಬಿಕ್ಖುಣಿಯಾಗುತ್ತಾಳೆ ಪಟಾಚಾರಾ.

pataachaara

ಎಲ್ಲ ಬಗೆಯ ಆಸರೆಯನ್ನೂ ಕಳೆದುಕೊಂಡು ದಿಕ್ಕೆಟ್ಟು ನಿಂತಿದ್ದ ಹೆಣ್ಣೊಬ್ಬಳು ಬುದ್ಧ ಕಾರುಣ್ಯದಿಂದ ನಿಜ ಬದುಕನ್ನು ಪಡೆದ, ಶಾಂತಿಯನ್ನು ಹೊಂದಿ ಶಾಶ್ವತ ದಿವ್ಯಾನುಭೂತಿಯ ಹಾದಿಯಲ್ಲಿ ನಡೆದ ಕಥೆ ಧಮ್ಮಪದಗಾಥಾ ಕೃತಿಯಲ್ಲಿ ಸಿಗುತ್ತದೆ. ಒಂದು ಹೆಣ್ಣಿಗೆ ಅಂತಲೇ ಅಲ್ಲ, ಒಬ್ಬ ಮನುಷ್ಯನಿಗೆ ಒದಗಬಹುದಾದ ಅತ್ಯಂತ ಕಠಿಣ ಪರಿಸ್ಥಿತಿ ಪಟಾಚಾರಾಳ ಮೇಲೆರಗುತ್ತದೆ. ಈ ಕಷ್ಟ ಪರಂಪರೆಯ ಕಥನವೇ ನಾವು ಕಲಿಯಬಹುದಾದ ಮೊದಲ ಪಾಠವನ್ನು ತೆರೆದಿಡುತ್ತದೆ.

ಶೋಕ ಪರಂಪರೆ
ಶ್ರಾವಸ್ತಿಯಲ್ಲಿ ಅತ್ಯಂತ ಶ್ರೀಮಂತ ವ್ಯಾಪಾರಿಯ ಮಗಳು ಪಟಾಚಾರಾ, ಬಹಳ ಚೆಂದದ ಹೆಣ್ಣು. ಆಕೆಗೆ ಮನೆಯ ಕಾವಲುಗಾರನ ಮೇಲೆ ಪ್ರೇಮವುಂಟಾಯಿತು. ಅವರಿಬ್ಬರೂ ಕದ್ದು ಪ್ರೇಮಿಸುತ್ತಾರೆ. ತಂದೆಗೆ ವಿಷಯ ತಿಳಿದು, ಮಗಳನ್ನು ಬೈದು, ಶ್ರೀಮಂತ ಹುಡುಗನೊಟ್ಟಿಗೆ ಅವಳ ಮದುವೆ ನಿಶ್ಚಯಿಸಿದ. ಇದರಿಂದ ನೊಂದರೂ ಪಟಾಚಾರಾ ತಂದೆಯ ಮಾತಿಗೆ ಎದುರಾಡುವಂತಿರಲಿಲ್ಲ. ಆದರೆ ಆಕೆ ಕಾವಲುಗಾರನನ್ನೂ ಬಿಟ್ಟಿರಲಾರಳು. ಬದುಕಿದರೂ ಸತ್ತರೂ ಅವನೊಂದಿಗೇ ಎಂದು ನಿರ್ಧರಿಸಿ, ಯಾರಿಗೂ ತಿಳಿಯದಂತೆ ಆ ಕಾವಲುಗಾರನೊಡನೆ ಓಡಿಹೋದಳು.

ದೂರದ ಕಾಡಿನ ಪಕ್ಕದ ಹಳ್ಳಿಯಲ್ಲಿ ಇಬ್ಬರೂ ನೆಲೆಸಿದರು. ಒಂದು ಪುಟ್ಟ ಗುಡಿಸಲು ಕಟ್ಟಿಕೊಂಡರು. ಗಂಡ ಹೊಲ ಉಳುವನು, ಕಾಡಿನಿಂದ ಸೌದೆ ತರುವನು. ಈಕೆ ನೀರು ತಂದು, ಹಿಟ್ಟು ಬೇಯಿಸಿ ಅಡುಗೆ ಮಾಡುವಳು. ಹೀಗೆಯೇ ಕೆಲಕಾಲ ಸಂಸಾರ ನಡೆಯಿತು. ಸಂತೋಷದಿಂದಲೇ ಇದ್ದ ಪಟಾಚಾರಾ ಗರ್ಭವತಿಯಾದಳು. ಹೆರಿಗೆಯ ದಿನ ಸಮೀಪಿಸಿದಾಗ ಗರ್ಭಿಣಿ ಬಯಕೆಯಿಂದಲೂ ಹೆರಿಗೆ ಸುಸೂತ್ರವಾಗಲಿ ಎಂತಲೂ ತಾಯಿಯ ಮನೆಗೆ ಹೋಗಲು ಬಯಸಿದಳು. ಗಂಡ, ಮನೆಯವರು ಅವಮಾನಿಸುತ್ತಾರೆ ಹೋಗಬೇಡವೆಂದ. ಆದರೆ ಆಕೆ ಕೇಳದೇ ಹೊರಟು ಬಿಟ್ಟಳು. ದಾರಿಯಲ್ಲಿ ಪ್ರಸವ ವೇದನೆ ಹೆಚ್ಚಾದಾಗ ಗಂಡ ಅಲ್ಲಿಯೇ ಸೊಪ್ಪು ಸದೆಗಳಿಂದ ಹಾಸಿಗೆ ಮಾಡಿದ. ಪಟಾಚಾರಾ ಗಂಡು ಮಗುವಿಗೆ ಜನ್ಮ ನೀಡಿದಳು. ಇನ್ನು ಗಂಡನನ್ನು ಬೇಸರಪಡಿಸಿ ತಾಯಿಯ ಮನೆಗೆ ಹೋಗುವುದೇಕೆ ಎಂದು ಮರಳಿ ಬಂದಳು.

ಮರುವರ್ಷ ಮತ್ತೊಂದು ಗರ್ಭ ಮೊಳೆಯಿತು. ಈ ಬಾರಿಯಾದರೂ ಪ್ರಸವದ ಹೊತ್ತಿಗೆ ತಾಯಿಯ ಊರು ಸೇರಬೇಕೆಂದು ಹೊರಟಳು. ಗಂಡ ಆಕೆಯ ಬಯಕೆಗೆ ಅಡ್ಡಿ ಬರಲಿಲ್ಲ. ಆದರೆ ಈ ಸಲವೂ ಕಳೆದ ಬಾರಿಯಂತೆ ದಾರಿಯಲ್ಲೇ ಪ್ರಸವವೇದನೆ ಆರಂಭವಾಯಿತು. ಗಂಡ ಮೆದುವಾದ ಹಾಸಿಗೆ ಮಾಡಲು ಹುಲ್ಲು ಕೀಳುತ್ತಿರುವಾಗ ಹಾವು ಕಚ್ಚಿ ಸಾವನ್ನಪ್ಪಿದ.
ಪಟಾಚಾರಾಳಿಗೆ ಅದು ತಿಳಿಯಲೇ ಇಲ್ಲ. ಬಹಳ ಸಂಕಟಪಡುತ್ತ ಮತ್ತೊಂದು ಗಂಡು ಮಗುವನ್ನು ಹೆತ್ತಳು. ಆ ಹೊತ್ತಿಗೆ ಭಾರೀ ಮಳೆ ಅಪ್ಪಳಿಸಿತು. ಎಲ್ಲೂ ಆಸರೆಯಿಲ್ಲ. ಈಗ ತಾನೇ ಹುಟ್ಟಿದ ಮಗು ಮಳೆಯಲ್ಲಿ ನೆನೆದು ಅರಚುತ್ತಿದೆ, ಅದರ ಮೈ ಜ್ವರದಿಂದ ಕೆಂಡವಾಗಿದೆ. ಎರಡೂ ಮಕ್ಕಳನ್ನು ಎದೆಗವಚಿಕೊಂಡು ಗಂಡನನ್ನು ಹುಡುಕಿದಳು. ಹತ್ತಿರದಲ್ಲೇ ಶವವಾಗಿ ಬಿದ್ದಿದ್ದ ಗಂಡನನ್ನು ನೋಡಿ ಕಂಗೆಟ್ಟಳು. ಮನಸ್ಸು ಕಲ್ಲು ಮಾಡಿಕೊಂಡು, ಮಕ್ಕಳನ್ನು ಕಟ್ಟಿಕೊಂಡು ತಾಯಿಯ ಊರು ಶ್ರಾವಸ್ತಿಗೆ ನಡೆದಳು.

ನಡುವೆ ನದಿ. ಮಳೆಯಿಂದ ನೆರೆಬಿದ್ದು ಹರಿಯುತ್ತಿದೆ. ವರ್ಷದ ಮಗುವನ್ನು ಈ ದಂಡೆಯಲ್ಲಿ ಕೂರಿಸಿ, ಆಗ ತಾನೇ ಹುಟ್ಟಿದ ಮಗುವನ್ನು ಎತ್ತಿಕೊಂಡು ಆ ದಡಕ್ಕೆ ಹೋದಳು. ಅದನ್ನು ಅಲ್ಲಿ ಮರದ ಕೆಳಗೆ ಮಲಗಿಸಿ ಮತ್ತೆ ಈ ದಡಕ್ಕೆ ಬಂದು ದೊಡ್ಡ ಮಗುವನ್ನು ಕರೆದುಕೊಳ್ಳಲು ಸಾಗಿದಳು. ಅರ್ಧ ನದಿ ದಾಟಿದಾಗ ತಿರುಗಿ ನೋಡಿದರೆ ದೊಡ್ಡ ಹದ್ದೊಂದು ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಹೋಗುತ್ತಿದೆ. ಅಯ್ಯೋ ಎಂದು ಕೈ ಎತ್ತಿ ಕೂಗಿದಾಗ ಈ ದಡದಲ್ಲಿದ್ದ ಮಗು ತನ್ನನ್ನು ತಾಯಿ ಕರೆಯುತ್ತಿದ್ದಾಳೆ ಎಂದು ಭಾವಿಸಿ ನೀರಿಗಿಳಿದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಯಿತು. ಗಂಡ ಹಾವಿಗೆ ಆಹುತಿ, ಒಂದು ಮಗು ಹದ್ದಿನ ಬಾಯಿಗೆ, ಇನ್ನೊಂದು ನದಿಯ ಪಾಲಿಗೆ. ಗಂಡನನ್ನೂ ಇಬ್ಬರು ಮಕ್ಕಳನ್ನೂ ಒಂದೇ ದಿನ ಕಳೆದುಕೊಂಡು ದುಃಖಿಸುತ್ತಾ ಕಂಗಾಲಾಗಿ ಶ್ರಾವಸ್ತಿ ಸೇರಿದಳು ಪಟಾಚಾರಾ. ಅಲ್ಲೇನು ನೋಡುವುದು!? ತಾಯಿಯ ಮನೆ ಮುಂದೆ ನೂರಾರು ಜನ! ಹಿಂದಿನ ದಿನದ ಭಾರೀ ಮಳೆಗೆ ಮನೆ ಕುಸಿದು ಎಲ್ಲರೂ ಸತ್ತುಹೋಗಿದ್ದರು…. ಒಂದು ಮರಣ ಮಳೆ, ಒಂದೇ ದಿನ ಪಟಾಚಾರಾಳ ಗಂಡ, ಮಕ್ಕಳು, ತವರಿನ ಪ್ರತಿಯೊಬ್ಬರನ್ನೂ ಕೊಚ್ಚಿಕೊಂಡು ಹರಿದಿತ್ತು. 

ಥೇರಿಯರ ನಡುವೆ ತಾವು ಸಿಕ್ಕಿತು…
ಪಟಾಚಾರಾ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಳು, ಹುಚ್ಚಿಯಂತಾದಳು. ಕಂಗೆಟ್ಟು ಕಿರುಚಾಡಿದಳು. ವಿಧಿಯತ್ತ ಮಣ್ಣು ತೂರಿ ನೆಲ ಬಡಿದು ಅತ್ತಳು. ವಿವಸ್ತ್ರಳಾಗಿ ಬೀದಿಬೀದಿಯಲ್ಲಿ ಹೊರಳಾಡತೊಡಗಿದಳು. ಭಿಕ್ಷೆಗೆ ಹೊರಟಿದ್ದ ಬುದ್ಧದೇವ ಆ ಬೀದಿಯಲ್ಲಿ ಬಂದ. ಅವಳನ್ನು ಕರೆದು ಕರುಣೆಯಿಂದ ಪ್ರೀತಿಯಿಂದ ಮಾತನಾಡಿಸಿದ. ತನ್ನ ಮೇಲು ಹೊದಿಕೆಯನ್ನೇ ಅವಳಿಗೆ ತೊಡಿಸಿದ. ಅವನ ಕರುಣೆಯ ಹಸ್ತ ತಲೆ ಸೋಕಿ ಕೊಂಚ ನಿರುಮ್ಮಳ ಕಂಡ ಪಟಾಚಾರಾ, ಬುದ್ಧ ಗಣದ ಹಿಂದೆಯೇ ನಡೆದುಬಿಟ್ಟಳು. ಥೇರಿಯರ ಗುಂಪಿನಲ್ಲಿ ಅವಳಿಗೊಂದು ತಾವು ಸಿಕ್ಕಿತು.

ಧ್ಯಾನದಲ್ಲಿ ಮನಸ್ಸು ನಿಲ್ಲಿಸುವ ಪ್ರಯತ್ನ ಶುರುವಿಟ್ಟಳು ಪಟಾಚಾರಾ. ಒಂದು ದಿನ ಅವಳು ಕಾಲು ತೊಳೆದುಕೊಳ್ಳುವಾಗ ಹರಿದ ನೀರು ಸ್ವಲ್ಪ ದೂರ ಹೋಗಿ ಇಂಗಿತು. ಇನ್ನಷ್ಟು ನೀರು ಹಾಕಿದರೆ ಮತ್ತಷ್ಟು ದೂರ ಹೋಗಿ ಒಣಗಿತು. ಮತ್ತಷ್ಟು ಹೆಚ್ಚು ನೀರು ಸುರಿದಾಗ ಇನ್ನು ಹೆಚ್ಚು ದೂರ ಹೋಗಿ ಇಂಗಿತು. ತಕ್ಷಣ ಪಟಾಚಾರಾಳಿಗೆ ಜ್ಞಾನೋದಯವಾಯಿತು.

ಆಕೆ ಹೇಳಿಕೊಂಡಳು, `ಮೊದಲನೆ ಸಲ ಸ್ವಲ್ಪ ದೂರವೇ ಹರಿದು ಮರೆಯಾದ ನೀರಿನಂತೆ ಕೆಲವರು ಬಾಲ್ಯದಲ್ಲೆ ಸಾಯುತ್ತಾರೆ. ಎರಡನೇ ಬಾರಿಯ ಹೆಚ್ಚು ಹೆಚ್ಚು ನೀರಿನಂತೆ ಕೆಲವರು ಪ್ರಾಯಕ್ಕೆ ಬಂದು ಸಾಯುತ್ತಾರೆ. ಮೂರನೇ ಬಾರಿಯ ಮತ್ತಷ್ಟು ಹೆಚ್ಚು ನೀರಿನಂತೆ ಕೆಲವರು ವೃದ್ಧಾಪ್ಯದವರೆಗೂ ಬದುಕಿ ಸಾಯುತ್ತಾರೆ. ಅಂತೂ ಸಾಯದೇ ಉಳಿದವರು ಯಾರೂ ಇಲ್ಲ !’
ತಾನು ಕಂಡುಕೊಂಡ ತಿಳಿವನ್ನು ಬುದ್ಧನ ಎದುರಿಟ್ಟಳು. ಬುದ್ಧ ಮೆಚ್ಚಿ ನುಡಿದ, ‘ಮಗೂ, ಈ ತತ್ತ್ವವನ್ನು ತಿಳಿದು ಒಂದೇ ಕ್ಷಣ ಬದುಕಿರುವುದು, ಅದನ್ನು ತಿಳಿಯದೇ ನೂರು ವರ್ಷ ಬದುಕಿರುವುದಕ್ಕಿಂತ ಉತ್ತಮ’.
ಪಟಾಚಾರಾ ಮುಂದಿನ ದಿನಗಳನ್ನೆಲ್ಲ ಪ್ರಜ್ಞಾಪೂರ್ವಕ ಬದುಕಿದಳು. ಥೇರಿ (ಹಿರಿಯ ಬಿಕ್ಖುಣಿ) ಎಂಬ ಗೌರವ ಪಡೆದಳು.

2 Comments

  1. Yaaroo bayasada oorige ellaru ondi na hogale beku… payanisuvaga sukha vo dhukha vo nildana bandentella ilidu hatti oorinedege munde sagale beku.. nanna jeevada melaste alla yara jeevada melu vyamoha bedenisuva kathe patacharaladu…

  2. Heart wrenching story. She got enlightened because she realized the truth, and followed the path. We not only fail to see the truth, but also fail to follow the path, because we remain mere mortals till we breathe our last!

Leave a Reply