ನಿಮ್ಮ ಬಳಿಯೂ ದುಃಖದ ಚೀಲ, ಖುಷಿಯ ಚೀಲಗಳು ಇವೆ ಅಲ್ಲವೆ? : ನಸ್ರುದ್ದೀನನ ಕಥೆ ಓದಿ!

Mullaಮುಲ್ಲಾ ನಸ್ರುದ್ದೀನನಿಗೆ ಊರ ಉಸಾಬರಿ ಜಾಸ್ತಿ. ಆದರೆ ಅದರಿಂದ ಎಲ್ಲರಿಗೂ ಅನುಕೂಲವೇ ಆಗುತ್ತಿತ್ತು, ನಸ್ರುದ್ದೀನನಿಗೂ ನಷ್ಟವಿರಲಿಲ್ಲ.

ಒಮ್ಮೆ ಹೀಗಾಯ್ತು.
ನಸ್ರುದ್ದೀನ್ ತನ್ನ ಕತ್ತೆಯ ಮೇಲೆ ಕೂತುಕೊಂಡು ಪಟ್ಟಣಕ್ಕೆ ಹೊರಟಿದ್ದ. ದಾರಿ ಬದಿಯಲ್ಲಿ ನಡುವಯಸ್ಕ ವ್ಯಕ್ತಿಯೊಬ್ಬ ಆಕಾಶ ತಲೆಯ ಮೇಲೆ ಬಿದ್ದಂತೆ ಕೂತುಕೊಂಡಿರುವುದು ಕಾಣಿಸಿತು. ಅವನು ಬಹಳ ನಿರಾಶನಾಗಿದ್ದ.

ಕತ್ತೆಯಿಂದ ಕೆಳಗಿಳಿದ ನಸ್ರುದ್ದೀನ್ ಆತನ ಬಳಿ ಏನಾಯ್ತೆಂದು ವಿಚಾರಿಸಿದ. ಆ ವ್ಯಕ್ತಿ ಮುಖ ಊದಿಸಿಕೊಂಡೇ ತನ್ನ ಬಳಿ ಇದ್ದ ಚೀಲವೊಂದನ್ನು ತೋರಿಸಿ “ಮತ್ತೇನು ಮಾಡಲಿ? ನನ್ನ ಬಳಿ ಇರುವುದೆಲ್ಲ ಈ ದರಿದ್ರ ಚೀಲವಷ್ಟೆ. ಇದರ ಹೊರತಾಗಿ ಮತ್ತೇನೂ ಇಲ್ಲ” ಅಂದ.

ಒಂದು ಕ್ಷಣ ಅವನ ಮುಖವನ್ನೇ ದಿಟ್ಟಿಸಿದ ನಸ್ರುದ್ದೀನ್, “ಈ ಚೀಲದಲ್ಲಿ ಏನಿದೆ?” ಎಂದು ಕೇಳಿದ.
“ನನ್ನ ಅಪ್ಪ ಕೂಡಿಟ್ಟಿದ್ದ ಕೆಲವು ಕಾಸುಗಳು” ಅಂದ ಆ ವ್ಯಕ್ತಿ.

ಅವನು ಪೂರ್ತಿಯಾಗಿ ಮಾತು ಮುಗಿಸುವ ಮೊದಲೇ ನಸ್ರುದ್ದೀನ್ ಆ ಚೀಲವನ್ನು ಕಿತ್ತುಕೊಂಡು ಓಡಿದ.
ನಸ್ರುದ್ದೀನನ ಹಿಂದೆ ಆ ವ್ಯಕ್ತಿಯೂ ಬೊಬ್ಬೆ ಹೊಡೆಯುತ್ತಾ ಓಡಿದ.
ಸ್ವಲ್ಪ ದೂರ ನಸ್ರುದ್ದೀನ್ ವಿಶ್ರಮಿಸಿದ. ಚೀಲವನ್ನು ರಸ್ತೆಯ ಮೇಲೆ ಇಟ್ಟು, ಆತ ಬರುವವರೆಗೂ ಹಾಗೇ ನಿಂತ.

ವ್ಯಕ್ತಿ ಬಂದವನೇ ತನ್ನ ಚೀಲವನ್ನು ಎತ್ತಿಕೊಂಡು ಕುಣಿದಾಡಿದ. ಖುಷಿಯಿಂದ ಅದನ್ನು ಅವುಚಿಕೊಂಡು ಮುತ್ತಿಟ್ಟ. ಕಳೆದುಹೋಗಿದ್ದ ನಿಧಿಯನ್ನು ಮರಳಿ ಪಡೆದ ಖುಷಿ ಅವನ ಮುಖದಲ್ಲಿ ಕಾಣುತ್ತಿತ್ತು. 

“ಇಷ್ಟೊಂದು ಸಂತೋಷ ನೀಡುವ ಚೀಲವನ್ನು ಇಟ್ಟುಕೊಂಡು ದುಃಖಿಸುತ್ತ ಕುಳಿತಿದ್ದೆಯಲ್ಲಾ ಮೂರ್ಖ!” ಎಂದು ನಗುತ್ತಾ ನಸ್ರುದ್ದೀನ್ ಕತ್ತೆಯನ್ನೇರಿ ತನ್ನ ಪ್ರಯಾಣ ಮುಂದುವರೆಸಿದ.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

1 Comment

  1. ಸರಳವಾದ ಉನ್ನತವಾದ,ಚಿಂತನೆಯುಳ್ಳ ಕಥೆ

Leave a Reply