“ನಾನು ಯಾರು?” ರಮಣ ಮಹರ್ಷಿಗಳೊಡನೆ ಪ್ರಶ್ನೋತ್ತರ  : ಭಾಗ 1

RAMANAರಮಣ ಮಹರ್ಷಿಗಳು ಮತ್ತು ಶಿವಪ್ರಕಾಶಂ ಪಿಳ್ಳೈಯವರ  ಆಧ್ಯಾತ್ಮಿಕ ಸಂವಾದದ ಆಯ್ದ ಭಾಗ ಇಲ್ಲಿದೆ. ‘ನಾನು ಯಾರು’ ಎಂಬ  ಮೂಲಭೂತ ಪ್ರಶ್ನೆಗೆ ರಮಣರು ಇಲ್ಲಿ ಉತ್ತರಿಸಿದ್ದಾರೆ. 

ಶಿವಪ್ರಕಾಶಂ ಪಿಳ್ಳೈ : ಸಪ್ತ ಧಾತು(ಮಜ್ಜೆ, ಮೂಳೆ, ಕೊಬ್ಬು, ಮಾಂಸ, ರಕ್ತ, ಒಳಚರ್ಮ, ಹೊರಚರ್ಮ)ಗಳಿಂದ ಕೂಡಿರುವ ಸ್ಥೂಲ ಶರೀರವು ನಾನಲ್ಲ. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆನ್ನುವ ಪಂಚವಿಷಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಅರಿಯುವ ಪಂಚ ಜ್ಞಾನೇಂದ್ರಿಯಗಳೂ ನಾನಲ್ಲ. ವಾಕ್ಕು, ಕೈಕಾಲುಗಳು, ಗುದೋಪಸ್ಥಗಳೆಂಬ ಪಂಚ ಕರ್ವೇಂದ್ರಿಯಗಳೂ ನಾನಲ್ಲ. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನವೆಂಬ ಪಂಚ ಪ್ರಾಣಗಳೂ ನಾನಲ್ಲ. ಸಂಕಲ್ಪಾತ್ಮಕ (ಆಲೋಚನಾತ್ಮಕ)ವಾದ ಮನಸ್ಸೂ ನಾನಲ್ಲ. ಸರ್ವ ವಿಷಯ(ಪದಾರ್ಥ)ಗಳೂ ಸರ್ವವೃತ್ತಿಗಳೂ ಇಲ್ಲದೆ ಕೇವಲ ವಿಷಯ ವಾಸನೆಯಿಂದ ಕೂಡಿರುವ ಅಜ್ಞಾನವೂ ನಾನಲ್ಲ. ಇವೆಲ್ಲವೂ ನಾನಲ್ಲ ಎಂದಾದರೆ ನಾನು ಯಾರು?

ರಮಣ ಮಹರ್ಷಿ : ಮೇಲೆ ತಿಳಿಸಿರುವುದೆಲ್ಲವನ್ನೂ ನಾನಲ್ಲ (ನೇತಿ, ನೇತಿ) ಎಂದು ಅಲ್ಲಗಳೆದ ಬಳಿಕ ಉಳಿಯುವ ಶುದ್ಧ ಅರಿವೇ ನಾನು.

ಶಿವಪ್ರಕಾಶಂ ಪಿಳ್ಳೈ : ಈ ಅರಿವಿನ ಸ್ವರೂಪವೇನು?

ಈ ಅರಿವಿನ ಸ್ವರೂಪವೇ ಸಚ್ಚಿದಾನಂದ (ಸತ್, ಚಿತ್, ಆನಂದ).

ಶಿವಪ್ರಕಾಶಂ ಪಿಳ್ಳೈ : ಆತ್ಮಸಾಕ್ಷಾತ್ಕಾರವು ಯಾವಾಗ ಲಭಿಸುತ್ತದೆ?

ರಮಣ ಮಹರ್ಷಿ : ತೋರುತ್ತಿರುವ ಪ್ರಪಂಚವು ಇಲ್ಲವಾದಾಗ (ನಾನು ಶರೀರದಲ್ಲಿದ್ದೇನೆ. ಪ್ರಪಂಚವು ನನ್ನಿಂದ ಹೊರಗಿದೆ ಎಂಬ ಜಗದ್ದೃಷ್ಟಿಯು ನಿವಾರಣೆಯಾದಾಗ) ಸ್ವರೂಪ ದರ್ಶನವು ಆಗುತ್ತದೆ.

ಶಿವಪ್ರಕಾಶಂ ಪಿಳ್ಳೈ : ತೋರುತ್ತಿರುವ ಪ್ರಪಂಚವು ಇಲ್ಲವಾಗುವುದು ಯಾವಾಗ?

ರಮಣ ಮಹರ್ಷಿ : ಎಲ್ಲ ಅರಿವಿಗೂ ಮತ್ತು ಎಲ್ಲ ಕಾರ್ಯಗಳಿಗೂ ಕಾರಣವಾದ ಮನಸ್ಸು ಲಯವಾದಾಗಲೇ ಪ್ರಪಂಚವೂ ಇಲ್ಲವಾಗುವುದು.

ಶಿವಪ್ರಕಾಶಂ ಪಿಳ್ಳೈ : ಮನಸ್ಸಿನ ಸ್ವರೂಪವೇನು?

ರಮಣ ಮಹರ್ಷಿ : ಮನಸ್ಸು ಎಂದು ಕರೆಯಲ್ಪಡುವುದು ಆತ್ಮಸ್ವರೂಪದಲ್ಲಿನ ಒಂದಾನೊಂದು ಅತಿಶಯವಾದ ಶಕ್ತಿ. ಅದೇ ಎಲ್ಲ ಸಂಕಲ್ಪಗಳಿಗೂ ಕಾರಣ. ಆಲೋಚನೆಗಳ ಸಮೂಹದ ಹೊರತಾಗಿ ಪ್ರತ್ಯೇಕವಾಗಿ ಮನಸ್ಸೆಂಬುದು ಇಲ್ಲ. ಆದ ಕಾರಣ ಸಂಕಲ್ಪವೇ ಮನಸ್ಸಿನ ಸ್ವರೂಪ. ಸಂಕಲ್ಪಗಳನ್ನು ಬಿಟ್ಟು ಪ್ರಪಂಚವೆಂಬ ವಸ್ತು ಸ್ವತಂತ್ರವಾಗಿ ಬೇರೆ ಇಲ್ಲ. ಎಚ್ಚರ ಮತ್ತು ಕನಸುಗಳಲ್ಲಿ ಆಲೋಚನೆಗಳೂ ಇವೆ; ಪ್ರಪಂಚವೂ ಇದೆ. ಜೇಡರ ಹುಳುವು ಹೇಗೆ ತನ್ನ ಶರೀರದೊಳಗಿನಿಂದ ಬಲೆಯ ನೂಲನ್ನು ಹೊರತಂದು ಬಳಿಕ ಅದನ್ನು ತನ್ನೊಳಗೇ ಸೆಳೆದುಕೊಂಡು ವಿಲೀನಗೊಳಿಸಿಕೊಳ್ಳುತ್ತದೆಯೋ ಅಂತೆಯೇ ಮನಸ್ಸೂ ತನ್ನೊಳಗಿನ ಜಗತ್ತನ್ನು ಹೊರದೋರಿ ಮತ್ತೆ ಅದನ್ನು ತನ್ನೊಳಗೇ ವಿಲೀನಗೊಳಿಸಿ ಕೊಳ್ಳುತ್ತದೆ. ಮನಸ್ಸು ಬಹಿಮುಖವಾದಾಗ (ಆತ್ಮ ಸ್ವರೂಪದಿಂದ ಹೊರಬಂದಾಗ) ಪ್ರಪಂಚವು ತೋರಿಕೊಳ್ಳುತ್ತದೆ. ಆದ್ದರಿಂದ ಪ್ರಪಂಚವು ತೋರುತ್ತಿರುವಾಗ ಸ್ವರೂಪವು ತೋರುವುದಿಲ್ಲ. ಸ್ವರೂಪವು ಪ್ರಕಾಶಿಸುತ್ತಿರುವಾಗ ಪ್ರಪಂಚವು ತೋರುವುದಿಲ್ಲ. ಮನಸ್ಸಿನ ಸ್ವರೂಪವನ್ನು ಎಡಬಿಡದೆ ವಿಚಾರಕ್ಕೆ ಒಳಪಡಿಸುತ್ತಲೇ ಇದ್ದರೆ ಮನಸ್ಸು ಆತ್ಮವೇ ಆಗಿಬಿಡುವುದು. ಮನಸ್ಸು ಎನ್ನುವುದು ಯಾವಾಗಲೂ ಒಂದು ಸ್ಥೂಲ ವಸ್ತುವನ್ನು ಆಶ್ರಯಿಸಿಯೇ ಇರುತ್ತದೆ. ಹಾಗೆ ಆಶ್ರಯಿಸದೆ ಅದು ಬೇರೆ ಯಾಗಿರುವುದಿಲ್ಲ. ಮನಸ್ಸನ್ನೇ ವ್ಯವಹಾರದಲ್ಲಿ ಸೂಕ್ಷ್ಮ ಶರೀರವೆಂದೂ ಅಥವಾ ಜೀವನೆಂದೂ ಕರೆಯಲಾಗುತ್ತದೆ.

ಶಿವಪ್ರಕಾಶಂ ಪಿಳ್ಳೈ : ಮನಸ್ಸು ಇಲ್ಲವಾಗುವುದು ಹೇಗೆ?

ರಮಣ ಮಹರ್ಷಿ : “ನಾನು ಯಾರು?” ಎಂದು ನಿರಂತರವಾಗಿ ಶೋಸುವುದರಿಂದ ಮಾತ್ರವೇ ಮನಸ್ಸು ಇಲ್ಲವಾಗುತ್ತದೆ. ನಾನು ಯಾರು ಎಂಬ ಚಿಂತನೆಯೇ ಇತರ ಎಲ್ಲ ಆಲೋಚನೆಗಳನ್ನೂ ನಾಶಗೊಳಿಸಿ ಶವವನ್ನು ಸುಡಲು ಉಪಯೋಗಿಸುವ ಕಟ್ಟಿಗೆಯಂತೆ ಕೊನೆಗೆ ತಾನೂ ನಾಶವಾಗಿ ಬಿಡುತ್ತದೆ. ಬಳಿಕ ಸ್ವರೂಪ ದರ್ಶನವಾಗುವುದು.

ಶಿವಪ್ರಕಾಶಂ ಪಿಳ್ಳೈ : “ನಾನು ಯಾರು?” ಎಂಬ ವಿಚಾರ ಮಾರ್ಗದ ಶೋಧನೆಯನ್ನು ಎಡಬಿಡದೆ ಕೈಗೊಳ್ಳುವುದು ಹೇಗೆ?

ರಮಣ ಮಹರ್ಷಿ : ಈ ಶೋಧನೆಯ ಮಾರ್ಗದಲ್ಲಿ ಸಂಕಲ್ಪಗಳು ಮತ್ತೆ ಮತ್ತೆ ಉಂಟಾಗುತ್ತಿದ್ದರೂ ಅವುಗಳನ್ನು ಹಿಂಬಾಲಿಸಲು ಪ್ರಯತ್ನಿಸದೆ, ‘‘ಈ ಸಂಕಲ್ಪಗಳು ಯಾರಿಗೆ ಉಂಟಾಗುತ್ತಿದೆ?’’ ಎಂದು ವಿಚಾರಿಸಬೇಕು. ಎಷ್ಟೇ ಸಂಕಲ್ಪಗಳು ಬರುತ್ತಿರಲಿ ಅದರಿಂದೇನು? ಪ್ರತಿಯೊಂದು ಸಂಕಲ್ಪವೂ ಹೊರಬರುತ್ತಿರುವಾಗಲೇ ‘‘ಇದು ಯಾರಿಗೆ?’’ ಎಂದು ಎಚ್ಚರಿಕೆಯಿಂದ ವಿಚಾರಿಸಿದಾಗ, ‘‘ನನಗೆ” ಎಂದು ತೋರುವುದು. ಆಗ ‘‘ನಾನು ಯಾರು?’’ ಎಂದು ಪಟ್ಟುಬಿಡದೆ ವಿಚಾರ ಮಾಡುತ್ತಿದ್ದರೆ ಮನಸ್ಸು ತನ್ನ ಉಗಮಸ್ಥಾನಕ್ಕೆ ಹಿಂತಿರುಗುವುದು. ನಿರಂತರವಾಗಿ ಹೀಗೆಯೇ ಅಭ್ಯಾಸ ಮಾಡುತ್ತಿದ್ದರೆ ಮನಸ್ಸಿಗೆ ತನ್ನ ಉಗಮಸ್ಥಾನದಲ್ಲಿ ನೆಲೆಸುವ ಶಕ್ತಿಯು ಹೆಚ್ಚುತ್ತಾ ಬರುತ್ತದೆ. ಸೂಕ್ಷ್ಮವಾದ ಮನಸ್ಸು ಮಿದುಳೇ ಮೊದಲಾದ ಇಂದ್ರಿಯಗಳ ಮೂಲಕ ಹೊರ ಮುಖವಾದರೆ ಸ್ಥೂಲವಾದ ನಾಮರೂಪಗಳನ್ನು ಅರಿಯುತ್ತದೆ; ಅದು ಹೃದಯದಲ್ಲೇ ನೆಲೆನಿಂತರೆ ಆಗ ನಾಮರೂಪಗಳು ಮರೆಯಾಗುವುವು. ಹೊರ ಮುಖವಾಗಿ ಹರಿಯುವ ಮನಸ್ಸನ್ನು ಹಿಂತಿರುಗಿಸಿ ಹೃದಯದಲ್ಲಿ ನೆಲೆಸುವುದನ್ನೇ ಅಂತಮುಖ ಎಂದು ಕರೆಯಲಾಗುತ್ತದೆ. ಹೀಗೆ ಮನಸ್ಸನ್ನು ಹೃದಯದಲ್ಲೇ ನೆಲೆಸುವಂತೆ ಮಾಡಿದಲ್ಲಿ ಎಲ್ಲ ಸಂಕಲ್ಪ ವಿಕಲ್ಪಗಳಿಗೆ ಕಾರಣವಾದ ‘ನಾನು’ ಎಂಬ ಅಹಂಕಾರವು ವಿಲೀನವಾಗಿ ಸದಾ ಇರುವ ಸ್ವಸ್ವರೂಪವಾದ ಆತ್ಮವೇ ಬೆಳಗುತ್ತಿರುತ್ತದೆ. ಮಾಡುವ ಎಲ್ಲ ಕಾರ್ಯಗಳನ್ನೂ ‘ನಾನು’ ಎನ್ನುವ ಅಹಂಕಾರವಿಲ್ಲದವನಾಗಿ ಮಾಡಬೇಕು. ಹಾಗೆ ಮಾಡಿದರೆ ಎಲ್ಲವೂ ಶಿವನ (ಭಗವಂತನ, ಆತ್ಮದ) ಸ್ವರೂಪವಾಗಿಯೇ ಕಾಣುತ್ತದೆ.

ಆಕರ ಕೃಪೆ : ಶಿವಪ್ರಕಾಶಂ ಪಿಳ್ಳೈಯವರ  ಸಂದೇಹಗಳಿಗೆ ರಮಣ ಮಹರ್ಷಿಗಳು ಲಿಖಿತರೂಪದಲ್ಲಿ ನೀಡಿದ ಉತ್ತರಗಳನ್ನು ಸಂಕಲಿಸಿ ‘ನಾನು ಯಾರು?’ ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸಲಾಗಿದೆ. ಡಾ. ಕೆ.ಎ. ನಾರಾಯಣನ್ ಕನ್ನಡಕ್ಕೆ ಅನುವಾದಿಸಿದ ಸಂಗ್ರಹದ ಆಯ್ದ ಭಾಗಗಳು ಇಲ್ಲಿವೆ.

(ಮುಂದುವರಿಯುವುದು…)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. […] ರಮಣ ಮಹರ್ಷಿಗಳು ಮತ್ತು ಶಿವಪ್ರಕಾಶಂ ಪಿಳ್ಳೈಯವರ  ಆಧ್ಯಾತ್ಮಿಕ ಸಂವಾದದ ಆಯ್ದ ಭಾಗ ಇಲ್ಲಿದೆ. ಇದು  ಪ್ರಶ್ನೋತ್ತರ ಸರಣಿಯ ಎರಡನೇ ಭಾಗ. ಮೊದಲ ಭಾಗ ಇಲ್ಲಿದೆ : https://aralimara.com/2019/02/16/ramana-6/ […]

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.