ಯೋಗಃ ಚಿತ್ತವೃತ್ತಿ ನಿರೋಧಃ ~ ‘ಯೋಗ’ದ ಸರಳ ವಿವರಣೆ

ಯೋಗ ತತ್ತ್ವವನ್ನು ಔಪಚಾರಿಕವಾಗಿ ಪ್ರತಿಷ್ಠಾಪಿಸಿದ ಶ್ರೇಯ ಪತಂಜಲಿ ಮುನಿಗೆ ಸಲ್ಲುತ್ತದೆ. ತಮ್ಮ ಎರಡನೇ ಸೂತ್ರದಲ್ಲಿ “ಯೋಗಃ ಚಿತ್ತವೃತ್ತಿ ನಿರೋಧಃ” ಎನ್ನುವ ಮೂಲಕ ಯೋಗದ ನೇರ – ಸರಳ ವ್ಯಾಖ್ಯಾನ ನೀಡುತ್ತಾರೆ ಪತಂಜಲಿ. ಮನಸ್ಸಿನ ಚಟುವಟಿಕೆಗಳನ್ನು ನಿರೋಧಿಸುವುದೇ ಯೋಗದ ಉದ್ದೇಶ ~ ಆನಂದಪೂರ್ಣ

‘ಯೋಗ’ ಪದವು ಸಂಸ್ಕೃತದ ‘ಯುಜ್’ ಧಾತುವಿನಿಂದ ವ್ಯುತ್ಪನ್ನಗೊಂಡಿದ್ದು. ಯುಜ್ ಎಂದರೆ ನಿಯಂತ್ರಣ ಎಂದೂ ಐಕ್ಯ ಎಂದೂ ಅರ್ಥವಿದೆ. ಅದಕ್ಕೆ ಸರಿಯಾಗಿ ಮನೋದೈಹಿಕ ನಿಯಂತ್ರಣ ಹಾಗೂ (ಆ ಮೂಲಕ) ಪರಮ ಅಸ್ತಿತ್ವದೊಡನೆ ಐಕ್ಯವಾಗುವಿಕೆ – ಈ ಎರಡನ್ನೂ ಇದು ಸೂಚಿಸುತ್ತದೆ. ಆತ್ಮವು ತನ್ನನ್ನು ದೇಹದೊಡನೆ, ಮನಸ್ಸಿನೊಡನೆ ತಾದಾತ್ಮ್ಯಗೊಂಡು ವಿಸ್ಮೃತಿಗೆ ಒಳಗಾಗದಂತೆ ನಿಯಂತ್ರಿಸಲು ಯೋಗವು ಬಹು ಮುಖ್ಯ ಸಾಧನ.

ಯೋಗವು ಇದನ್ನು ಹೇಗೆ ಸಾಧಿಸುತ್ತದೆ? ಯೋಗದ ಯಾವುದೆಲ್ಲ ಪರಿಕರಗಳು ಇದಕ್ಕೆ ಪೂರಕವಾಗಿವೆ? ಇದಕ್ಕೊಂದು ಪರಂಪರೆಯೇ ಇದೆ. ಮಹಾಯೋಗಿ ಶಿವನಿಂದ ಹಿಡಿದು ಆಧುನಿಕ ಯೋಗಾಚಾರ್ಯರು ತಮ್ಮ ತಮ್ಮ ಕಾಣ್ಕೆಯಂತೆ ಯೋಗದ ಸಾಧ್ಯತೆಗಳನ್ನು ಪರಿಚಯಿಸುತ್ತಲೇ ಬಂದಿದ್ದಾರೆ. ಅವುಗಳಲ್ಲಿ ಮುಖ್ಯವಾದವು ಪ್ರಾಚೀನತಮವಾದ ರಾಜ ಯೋಗ (ಪಾತಂಜಲ ಯೋಗ), ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ ಮತ್ತು ಹಠ ಯೋಗ. ಈ ಹೆಸರುಗಳೇ ಸಾರುವಂತೆ ರಾಜಸ (ಅಷ್ಟಾಂಗ) ಮಾರ್ಗ, ಕರ್ಮ ಮಾರ್ಗ, ಜ್ಞಾನ ಮಾರ್ಗ, ಭಕ್ತಿ ಮಾರ್ಗ ಹಾಗೂ ಹಠ ಮಾರ್ಗಗಳ ಮುಖಾಂತರ ಐಕ್ಯತೆ ಸಾಧಿಸುವುದು ಆಯಾ ಯೋಗದ ವೈಶಿಷ್ಟ್ಯ. ಈ ಪ್ರತಿಯೊಂದೂ ತನ್ನದೇ ಆದ ಬಗೆಯಲ್ಲಿ ಮನೋ ನಿಯಂತ್ರಣದ ಮೂಲಕ ಐಕ್ಯತೆ ಸಾಧಿಸುವ ಸಾಮಾನ್ಯ ಉದ್ದೇಶ ಈಡೇರಿಕೆಯನ್ನು ಸಾಧಿಸಲು ಸಹಕರಿಸುತ್ತವೆ. ಈ ನಿಟ್ಟಿನಲ್ಲಿ ಇದು ಪ್ರತಿಯೊಬ್ಬ ಮಾನವ ಜೀವಿ ಅಳವಡಿಸಿಕೊಳ್ಳಬೇಕಾದ ಉನ್ನತ ಮೌಲ್ಯವಾಗಿದೆ.

ವಿವಿಧ ವ್ಯಾಖ್ಯಾನಗಳು
ಯೋಗ ಪದದ ಮೊದಲ ಉಲ್ಲೇಖ ಕಾಣಸಿಗುವುದು ಕಠೋಪನಿಷತ್ತಿನಲ್ಲಿ. ಅದರಲ್ಲಿ ಮನಸ್ಸು ಹಾಗೂ ಇಂದ್ರಿಯಗಳ ನಿಯಂತ್ರಿಸಿ ಉತ್ತುಂಗ ಸ್ಥಿತಿಗೆ ತಲುಪುವ ಬಗೆಯನ್ನು ಉಲ್ಲೇಖಿಸಲಾಗಿದೆ. ಉಪನಿಷತ್ತುಗಳ ನಂತರ ಯೋಗ ಪರಿಕಲ್ಪನೆಯ ಪ್ರಮುಖ ಆಕರ ಗ್ರಂಥಗಳೆಂದರೆ ಭಗವದ್ಗೀತೆ ಹಾಗೂ ಪತಂಜಲಿಯ ಯೋಗಸೂತ್ರಗಳು.

ಯೋಗ ತತ್ತ್ವವನ್ನು ಔಪಚಾರಿಕವಾಗಿ ಪ್ರತಿಷ್ಠಾಪಿಸಿದ ಶ್ರೇಯ ಪತಂಜಲಿ ಮುನಿಗೆ ಸಲ್ಲುತ್ತದೆ. ತಮ್ಮ ಎರಡನೇ ಸೂತ್ರದಲ್ಲಿ “ಯೋಗಃ ಚಿತ್ತವೃತ್ತಿ ನಿರೋಧಃ” ಎನ್ನುವ ಮೂಲಕ ಯೋಗದ ನೇರ – ಸರಳ ವ್ಯಾಖ್ಯಾನ ನೀಡುತ್ತಾರೆ ಪತಂಜಲಿ. ಮನಸ್ಸಿನ ಚಟುವಟಿಕೆಗಳನ್ನು ನಿರೋಧಿಸುವುದೇ ಯೋಗದ ಉದ್ದೇಶ. ಸ್ವಾಮಿ ವಿವೇಕಾನಂದರು ಈ ಸೂತ್ರವನ್ನು “ಯೋಗವೆಂದರೆ ಮನಸ್ಸಿನ ಅಂತರಾಳವು ವಿವಿಧ ರೂಪಗಳನ್ನು ತಳೆಯದಂತೆ ನಿಗ್ರಹಿಸುವುದು” ಎಂದು ವ್ಯಾಖ್ಯಾನಿಸಿದ್ದಾರೆ.

ಭಗವದ್ಗೀತೆಯು ಯೋಗವನ್ನು ಅತ್ಯಂತ ವಿಸ್ತøತಾರ್ಥದಲ್ಲಿ ಬಳಸುತ್ತದೆ. ಮುಖ್ಯವಾಗಿ ಇದು ಕರ್ಮ, ಭಕ್ತಿ, ಜ್ಞಾನಗಳೆಂಬ ಯೋಗದ ಮೂರು ಪ್ರಧಾನ ವಿಧಗಳನ್ನು ಪರಿಚಯಿಸುತ್ತದೆ. ಗೀತೆಯ ಪ್ರತಿ ಅಧ್ಯಾಯವನ್ನೂ ಒಂದೊಂದು ಯೋಗವೆಂದು ಗುರುತಿಸಲಾಗಿದೆ. ವಿದ್ವಾಂಸರು ಅದರ ಮೊದಲ ಆರು ಅಧ್ಯಾಯಗಳನ್ನು ಕರ್ಮ ಯೋಗವೆಂದೂ ನಡುವಿನ ಆರು ಅಧ್ಯಾಯಗಳನ್ನು ಭಕ್ತಿ ಯೋಗವೆಂದೂ ಕೊನೆಯ ಆರನ್ನು ಜ್ಞಾನ ಯೋಗವೆಂದೂ ಗುರುತಿಸುತ್ತಾರೆ.

ಹಠ ಯೋಗವು ಭೌತಿಕ ಶರೀರವನ್ನು ಶುದ್ಧೀಕರಿಸಿ, ತನ್ಮೂಲಕ ಮನಸ್ಸು ಹಾಗೂ ಚೈತನ್ಯವನ್ನು ಶುದ್ಧೀಕರಿಸುವ ಪ್ರಕ್ರಿಯೆಗೆ ಆದ್ಯತೆ ನೀಡುವಂಥದ್ದು. ಇಂದಿನ ಯೋಗಾಸನಗಳ ಬಹುತೇಕ ಭಂಗಿಗಳು ಇದನ್ನೇ ಆಧರಿಸಿ ವಿಕಸನಗೊಂಡಂಥವು. ಹದಿನೈದನೇ ಶತಮಾನದಲ್ಲಿ ಆಗಿಹೋದ ಯೋಗಿ ಸ್ವಾತ್ಮಾರಾಮರು ಈ ಪದ್ಧತಿಯ ವಿವರಗಳುಳ್ಳ `ಹಠಯೋಗ ಪ್ರದೀಪಿಕಾ’ ಎಂಬ ಗ್ರಂಥವನ್ನು ಸಂಪಾದಿಸಿ ಪ್ರಚುರಪಡಿಸಿದರು.

ಹೀಗೆ ಹಲವು ವ್ಯಾಖ್ಯಾನಗಳುಳ್ಳ ಯೋಗವು ದೊಡ್ಡ ಮಟ್ಟದಲ್ಲಿ ಜಗತ್ತನ್ನು ತಲುಪಿದ್ದು ಸ್ವಾಮಿ ವಿವೇಕಾನಂದರ ಮೂಲಕ. ಹದಿನೆಂಟನೇ ಶತಮಾನದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆಂದು ಷಿಕಾಗೋಗೆ ತೆರಳಿದ ಸ್ವಾಮೀಜಿ, ನಂತರದ ದಿನಗಳಲ್ಲಿ ಭಾರತೀಯ ವೇದಾಂತ – ತತ್ತ್ವಜ್ಞಾನಗಳ ಉಪನ್ಯಾಸ ಮಾಲೆಯನ್ನು ನೀಡುತ್ತ ಹಲವು ದೇಶಗಳನ್ನು ತಿರುಗಿದ್ದು ತಿಳಿದ ವಿಚಾರವೇ. ಈ ತಿರುಗಾಟದ ಸಂದರ್ಭದಲ್ಲಿ ಅವರು ಯೋಗ ದರ್ಶನದ ಬಗ್ಗೆ ನೀಡಿದ ಉಪನ್ಯಾಸಗಳು ಸುಪ್ರಸಿದ್ಧವಾಗಿದೆ.

ಆಧುನಿಕ ಕಾಲಮಾನದಲ್ಲಿ ಯೋಗ
ನಿರ್ದಿಷ್ಟವಾಗಿ ಕರ್ಮಯೋಗದ ಬಗ್ಗೆ ಮಾತನಾಡಿದ ಸ್ವಾಮೀಜಿ, ಆ ಮೂಲಕ ಪಾಶ್ಚಾತ್ಯರು ಈ ದರ್ಶನವನ್ನು ಕುತೂಹಲದಿಂದ ಅಭ್ಯಸಿಸುವಂತೆ ಪ್ರೇರಣೆ ನೀಡಿದರು. ಅನಂತರದಲ್ಲಿ ಸ್ವಾಮಿ ರಾಮತೀರ್ಥರು ಅನುಷ್ಠಾನ ವೇದಾಂತ ಅಥವಾ ಪ್ರಾಯೋಗಿಕ ವೇದಾಂತವೆಂಬ ನೂತನ ಸಿದ್ಧಾಂತ ರೂಪಿಸಿಕೊಂಡು ಜಗತ್ತಿಗೆ ತಲುಪಿಸುವ ಕೆಲಸ ಮಾಡಿದರು. ಈ ನಿಟ್ಟಿನ ಅವರ ಪಠ್ಯದಲ್ಲಿ ಮುಖ್ಯವಾಗಿ ಇದ್ದುದು ವೇದಾಂತ ಹಾಗೂ ಯೋಗ ತತ್ತ್ವಗಳು.

ಮಹರ್ಷಿ ಅರವಿಂದರಂತೂ ‘ಪೂರ್ಣ ಯೋಗ’ವೆಂಬ ಹೊಸ ಪರಿಕಲ್ಪನೆಯನ್ನೇ ಜಗತ್ತಿಗೆ ನೀಡಿದರು. ಮುಂದೆ ಆಧುನಿಕ ಜಗತ್ತನ್ನು, ಆಧುನಿಕ ಮನಸ್ಥಿತಿಯನ್ನು ಅಲೌಕಿಕ ಚಿಂತನೆಗಳತ್ತ ಸೆಳೆದ ಓಶೋ ರಜನೀಶ್, ಪತಂಜಲಿ ಯೋಗಸೂತ್ರಗಳಿಗೆ ತಮ್ಮದೇ ಆದ ವ್ಯಾಖ್ಯಾನ ನೀಡಿ, ಆಕರ್ಷಕವಾಗಿ ಜನರ ಮುಂದಿಟ್ಟರು. ಝೆನ್, ಸೂಫೀ ಮೊದಲಾದ ಕವಲು ಪಂಥಗಳಲ್ಲಿನ ಭಕ್ತಿ ಯೋಗ, ಪ್ರೇಮ ಯೋಗ, ಧ್ಯಾನ ಯೋಗಗಳ ಬಗೆ ಬೆರಗನ್ನೂ ಚರ್ಚಿಸಿದರು.

ಜೈನ ಹಾಗೂ ಬೌದ್ಧ ಮತಗಳಲ್ಲಿ ಯೋಗದ ಅಳವಡಿಕೆಯಿರುವ ಚರ್ಚೆ ಹೊಸತೇನಲ್ಲ. ಬೌದ್ಧ ಮತವನ್ನು ಯೋಗಾಚಾರ ಪಂಥವೆಂದೂ ಕರೆಯುವುದುಂಟು. ಹಲವು ಜೈನ ಸಾಧಕರು ವಿವಿಧ ಯೋಗ ಮುದ್ರೆಗಳಲ್ಲಿ ಕೈವಲ್ಯ ಪಡೆದ, ಮುಕ್ತಿ ಹೊಂದಿದ ನಿದರ್ಶನಗಳೂ ಇವೆ. ಯೋಗ ಆಯಾ ಪಂಥಗಳ ಉದ್ದೇಶಕ್ಕೆ, ಸಿದ್ಧಾಂತಕ್ಕೆ ತಕ್ಕಂತೆ ನಿರ್ವಚನೆಗೆ ಒಳಗಾಗಿದೆ. ಅದ್ವೈತ ವೇದಾಂತ ಹಾಗೂ ಶೈವ ಪಂಥಗಳಲ್ಲಿ, ಜೈನ ಮತದಲ್ಲಿ ಯೋಗದ ಗುರಿಯು ಜನನ ಮರಣ ನಿರಂತರ ಚಕ್ರದಿಂದ ಬಿಡುಗಡೆ ಹೊಂದಲು ಇರುವ ಉಪಾಯವಾಗಿದೆ. ಮೋಕ್ಷ ಹೊಂದುವ ನಿಟ್ಟಿನಲ್ಲಿ ಬ್ರಹ್ಮಜ್ಞಾನ ಪಡೆಯುವುದೇ (ಅಥವಾ ಕೇವಲ ಜ್ಞಾನ) ಯೋಗದ ಮೂಲೋದ್ದೇಶ ಈ ಪಂಥಗಳಿಗೆ. ವೈಷ್ಣವ ಹಾಗೂ ಭಕ್ತಿ ಪಂಥಗಳ ಪಾಲಿಗೆ ಭಕ್ತಿ ಯೋಗವೇ ಪರಮ ಯೋಗ. ದೇವೋತ್ತಮ ಪರಮ ಪುರುಷನಿಗೆ ಭಕ್ತಿ ಸೇವೆ ಸಲ್ಲಿಸುವ ಪ್ರಕ್ರಿಯೆಯೇ ಯೋಗದ ಪರಮೋನ್ನತ ಪ್ರಕ್ರಿಯೆ. ಇಲ್ಲಿ, ಮಹಾವಿಷ್ಣುವಿನ ಪರಂಧಾಮ ಸೇರುವುದೇ ಆತ್ಯಂತಿಕ ಗುರಿ. ತಾಂತ್ರಿಕರು ಕುಂಡಲಿನಿಯನ್ನು ಉದ್ದೀಪಿಸಿ, ಷಟ್ಚಕ್ರಗಳನ್ನು ಹಾದು ಸಹಸ್ರಾರ ತಲಪುವ ಕುಂಡಲಿನಿ ಯೋಗಕ್ಕೆ ಪ್ರಾಶಸ್ತ್ಯ ನೀಡುತ್ತಾರೆ.

ಟಿಬೆಟನ್ ಬೌದ್ಧ ಮತಕ್ಕೆ ಯೋಗವೇ ಪ್ರಮುಖ ಅಂಶ. ಯಂತ್ರ – ತಂತ್ರ ಯೋಗಗಳನ್ನು ಅನುಸರಿಸುವ ಈ ಮತ ಪಂಥವು ತನ್ನ ಒಂಭತ್ತು ಯಾನಗಳಲ್ಲಿ ಕೊನೆಯ ಆರು ಯಾನಗಳನ್ನು ಯೋಗಯಾನಗಳೆಂದು ವರ್ಣಿಸಿದೆ. ಝೆನ್ ಮತಪಂಥವು ಧ್ಯಾನಯೋಗದ ವಕ್ತಾರ.

ಯೋಗಾಸನವೆಂದರೆ…
ಯೋಗ ಆಧ್ಯಾತ್ಮಿಕ, ಮಾನಸಿಕ ಹಾಗೂ ದೈಹಿಕ – ಈ ಮೂರೂ ಸ್ತರಗಳಲ್ಲಿ ಸಲ್ಲುವ ದಿವ್ಯ ಚಿಕಿತ್ಸೆ. ಮುಮುಕ್ಷುಗಳು ಮೇಲೆ ವಿವರಿಸಲಾದ ಯೋಗ ವಿಧಾನಗಳಿಂದ ಮುಕ್ತಿ ಪಡೆಯುವರಾದರೆ, ಮಾನಸಿಕ ಸಮಸ್ಯೆಯುಳ್ಳವರಿಗೂ ಯೋಗ ಚಿಕಿತ್ಸೆ ನೀಡುತ್ತದೆ. ಒಟ್ಟಾರೆಯಾಗಿ ಯೋಗದ ಎಲ್ಲ ಹಾದಿಗಳೂ ಜೀವಿಯನ್ನು ನೋವಿನಿಂದ ಹೊರತರಲು ಉದ್ದಿಷ್ಟವಾದಂಥವೇ.

‘ಯೋಗ’ ಎಂದ ಕೂಡಲೆ ನಮ್ಮ ಮನಸ್ಸಿನಲ್ಲಿ ನಾನಾ ಬಗೆಯ ದೇಹ ಭಂಗಿಗಳು ಹಾದು ಹೋಗುತ್ತವೆ. ನಾವು ಯೋಗಾಸನವನ್ನೇ ಯೋಗ ಎಂದು ಸರಳವಾಗಿ ವ್ಯಾಖ್ಯಾನಿಸುತ್ತೇವೆ. ಇಂದು ಯೋಗವು ಹೆಚ್ಚಾಗಿ ಪ್ರಚಲಿತದಲ್ಲಿರುವುದು ಆಸನಾಭ್ಯಾಸಗಳ ಮೂಲಕವೇ ಹೌದಾದರೂ ಅಷ್ಟು ಮಾತ್ರ ಯೋಗವಲ್ಲ. ಅದೊಂದು ಭಾಗವಷ್ಟೇ. ಅಷ್ಟಾಂಗ ಯೋಗದಲ್ಲಿ ಯಮ, ನಿಯಮ, ಆಸನ ಮೊದಲಾದವು ಬರುತ್ತವೆಯಷ್ಟೆ? ಈ ಯಾದಿಯಲ್ಲಿ ಬರುವ ‘ಆಸನ’ವೇ ಇಂದು ಪ್ರಚಲಿತದಲ್ಲಿರುವ ಯೋಗ. ಪ್ರಾಚೀನ ಹಠಯೋಗದಲ್ಲಿ ದೇಹಶುದ್ಧಿಗೆ ಹೇಳಲಾಗಿರುವ ವಿವಿಧ ಭಂಗಿಗಳ, ಆಸನಗಳ ಆಧುನಿಕ ರೂಪವೇ ಇಂದಿನ ಯೋಗಾಸನ.

 

 

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.