“ನಾನು ಯಾರು?” ರಮಣ ಮಹರ್ಷಿಗಳೊಡನೆ ಪ್ರಶ್ನೋತ್ತರ  : ಭಾಗ 2

RAMANAರಮಣ ಮಹರ್ಷಿಗಳು ಮತ್ತು ಶಿವಪ್ರಕಾಶಂ ಪಿಳ್ಳೈಯವರ  ಆಧ್ಯಾತ್ಮಿಕ ಸಂವಾದದ ಆಯ್ದ ಭಾಗ ಇಲ್ಲಿದೆ. ಇದು  ಪ್ರಶ್ನೋತ್ತರ ಸರಣಿಯ ಎರಡನೇ ಭಾಗ. ಮೊದಲ ಭಾಗ ಇಲ್ಲಿದೆ : https://aralimara.com/2019/02/16/ramana-6/

ಶಿವಪ್ರಕಾಶಂ ಪಿಳ್ಳೈ :  ಮನೋನಿಗ್ರಹಕ್ಕೆ ಬೇರೆ ಯಾವ ಉಪಾಯಗಳೂ ಇಲ್ಲವೆ?

ರಮಣ ಮಹರ್ಷಿ : ಮನೋನಿಗ್ರಹಕ್ಕೆ ಆತ್ಮ ವಿಚಾರವನ್ನು ಬಿಟ್ಟು ಬೇರೆ ಯಾವ ಉಪಾಯಗಳೂ ಇಲ್ಲ. ಇತರ ಉಪಾಯಗಳಿಂದ ಮನಸ್ಸು ನಿಗ್ರಹಿಸಲ್ಪಟ್ಟಂತೆ ಕಂಡುಬಂದರೂ ಅದು ಮತ್ತೆ ತಲೆದೋರುವುದು. ಪ್ರಾಣಾಯಾಮದಿಂದ ಮನಸ್ಸು ನಿಗ್ರಹಿಸಿದಂತೆ ತೋರಿದರೂ ಪ್ರಾಣಾಯಾಮದ ಬಳಿಕ ಮತ್ತೆ ಉಸಿರಾಟವು ಪ್ರಾರಂಭವಾದಾಗ ಮನಸ್ಸೂ ಮತ್ತೆ ಹೊರಮುಖವಾಗಿ ವಾಸನೆಗಳ ವಶವಾಗಿ ಹೊರಗೆ ಅಲೆದಾಡುತ್ತಿರುತ್ತದೆ. ಮನಸ್ಸಿಗೂ ಉಸಿರಿಗೂ ಉಗಮಸ್ಥಾನವೊಂದೇ. ಮನಸ್ಸಿಗೆ ಸಂಕಲ್ಪವೇ ಸ್ವರೂಪ. ‘ನಾನು’ ಎಂಬ ಭಾವನೆಯೇ ಮನಸ್ಸಿನ ಮೊದಲನೆಯ ಕಲ್ಪನೆ. ಅದಕ್ಕೆ ‘ಅಹಂಕಾರ’ವೆಂದು ಹೆಸರು.

ಅಹಂಕಾರವು ಎಲ್ಲಿಂದ ಉದಿಸುತ್ತದೋ ಅಲ್ಲಿಂದಲೇ ಉಸಿರೂ ಉದಿಸುತ್ತದೆ. ಆದುದರಿಂದ ಮನಸ್ಸನ್ನು ನಿಗ್ರಹಿಸಿದಾಗ ಉಸಿರೂ, ಉಸಿರನ್ನು ನಿಗ್ರಹಿಸಿದಾಗ ಮನಸ್ಸೂ ನಿಗ್ರಹಿಸಲ್ಪಟ್ಟಿರುತ್ತದೆ. ಆದರೆ ಸುಷುಪ್ತಿಯಲ್ಲಿ ಮನಸ್ಸು ನಿಗ್ರಹಿಸಲ್ಪಟ್ಟಿದ್ದರೂ ಉಸಿರಾಟವು ನಿಂತಿರುವುದಿಲ್ಲ. ದೇಹದ ಸಂರಕ್ಷಣೆಯ ಕಾರಣವಾಗಿಯೂ, ದೇಹವು ಮರಣ ಹೊಂದಿರುವುದೋ ಎಂಬ ಸಂಶಯವು ಉಂಟಾಗದಿರುವುದಕ್ಕಾಗಿಯೂ ಈ ವಿಧವಾಗಿ ಈಶ್ವರನ ನಿಯಮವು ಏರ್ಪಟ್ಟಿರುವುದು. ಎಚ್ಚರ ಮತ್ತು ಸಮಾಧಿ ಸ್ಥಿತಿಗಳಲ್ಲಿ ಮನಸ್ಸು ನಿಗ್ರಹಿಸಲ್ಪಟ್ಟಿರುವಾಗ ಉಸಿರೂ ನಿಗ್ರಹಿಸಲ್ಪಟ್ಟಿರುವುದು.

ಉಸಿರು ಮನಸ್ಸಿನ ಸ್ಥೂಲರೂಪವೇ. ಮರಣಕಾಲದವರೆಗೆ ಮನಸ್ಸು ಶರೀರದಲ್ಲಿ ಉಸಿರನ್ನು ಧರಿಸಿಕೊಂಡಿದ್ದು ಶರೀರವು ಮರಣ ಹೊಂದುವ ಸಮಯದಲ್ಲಿ ಆ ಮನಸ್ಸೇ ಉಸಿರನ್ನು ತನ್ನಲ್ಲಿ ಸೇರಿಸಿಕೊಂಡು ಹೊರಟುಹೋಗುತ್ತದೆ. ಆದ ಕಾರಣ ಮನೋನಿಗ್ರಹಕ್ಕೆ ಪ್ರಾಣಾಯಾಮವು ನೆರವಾಗಬಹುದೇ ಹೊರತು ಅದರಿಂದ ಮನೋನಾಶವಾಗುವುದಿಲ್ಲ. ಪ್ರಾಣಾಯಾಮದಂತೆಯೇ ಮೂರ್ತಿಧ್ಯಾನ, ಮಂತ್ರಜಪ, ಆಹಾರ ನಿಯಮಗಳೇ ಮೊದಲಾದವು ಮನೋನಿಗ್ರಹಕ್ಕೆ ನೆರವಾಗುತ್ತವೆ. ಮೂರ್ತಿಧ್ಯಾನ ಮತ್ತು ಮಂತ್ರಜಪಗಳಿಂದ ಮನಸ್ಸಿಗೆ ಏಕಾಗ್ರತೆಯುಂಟಾಗುತ್ತದೆ. ಮನಸ್ಸು ಸದಾ ಚಂಚಲ ಸ್ವಭಾವದಿಂದ ಕೂಡಿದೆ. ಸದಾ ಚಲಿಸುತ್ತಿರುವ ಆನೆಯ ಸೊಂಡಿಲಿಗೆ ಒಂದು ಸರಪಳಿಯನ್ನು ಕೊಟ್ಟರೆ ಅದು ಹೇಗೆ ಅದನ್ನೇ ಹಿಡಿದುಕೊಂಡು ತನ್ನ ಸೊಂಡಿಲಿನ ಚಲನೆಯನ್ನು ನಿಲ್ಲಿಸುವುದೋ, ಹಾಗೆಯೇ ಚಂಚಲವಾದ ಮನಸ್ಸನ್ನೂ ಯಾವುದಾದರೊಂದು ನಾಮ ಅಥವಾ ರೂಪದಲ್ಲಿ ಚಿರಕಾಲ ಪಳಗಿಸಿದರೆ ಅದು ಅದೊಂದನ್ನೇ ಹಿಡಿದುಕೊಂಡು ತನ್ನ ಚಂಚಲತೆ ಕಳೆದುಕೊಳ್ಳುವುದು.

ಮನಸ್ಸು ಲೆಕ್ಕವಿಲ್ಲದಷ್ಟು ಸಂಕಲ್ಪಗಳಾಗಿ ಹರಡಿಹೋದಾಗ ಪ್ರತಿಯೊಂದು ಸಂಕಲ್ಪವೂ ಬಲಹೀನವಾಗುತ್ತದೆ; ಆದರೆ ಸಂಕಲ್ಪಗಳು ಕಡಿಮೆಯಾಗುತ್ತ ಬಂದಾಗ ಮನಸ್ಸು ಏಕಾಗ್ರತೆ ಹೊಂದಿ ಅದರಿಂದ ಬಲಶಾಲಿಯಾದ ಅಂತಹ ಮನಸ್ಸಿಗೆ ಆತ್ಮವಿಚಾರವು ಸುಲಭವಾಗಿ ಸಿದ್ಧಿಸುವುದು. ಸಕಲ ನಿಯಮಗಳಲ್ಲಿ ಶ್ರೇಷ್ಠವಾಗಿರುವ ಹಿತಮಿತ ಸಾತ್ವಿಕ ಆಹಾರ ಸೇವನೆಯ ನಿಮಯಗಳಿಂದ ಮನಸ್ಸಿನ ಸತ್ವಗುಣವು ವೃದ್ಧಿಯಾಗಿ ಆತ್ಮವಿಚಾರಕ್ಕೆ ನೆರವಾಗುವುದು.

ಶಿವಪ್ರಕಾಶಂ ಪಿಳ್ಳೈ :  ಅನಾದಿ ಕಾಲದಿಂದಲೂ ಬಂದಿರುವ ಎಲ್ಲ ವಿಷಯ ವಾಸನೆಗಳೂ ಇಲ್ಲವಾಗಿ ಕೇವಲ ಸ್ವರೂಪಮಾತ್ರನಾಗಿಯೇ ನೆಲೆಸಲು ಸಾಧ್ಯವೇ?

ರಮಣ ಮಹರ್ಷಿ : ಸ್ವರೂಪ ಮಾತ್ರನಾಗಿಯೇ ನೆಲೆಸುವ ಸ್ಥಿತಿ ಉಂಟಾಗುತ್ತದೆಯೇ ಇಲ್ಲವೇ ಎಂಬ ಸಂದೇಹಗಳಿಗೆ ಸ್ವಲ್ಪವೂ ಎಡೆಕೊಡದೆ ಸ್ವರೂಪ ಧ್ಯಾನವನ್ನೇ ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಒಬ್ಬನು ಎಷ್ಟೇ ಪಾಪಿಯಾಗಿದ್ದರೂ ‘‘ನಾನು ಪಾಪಿಯಾಗಿದ್ದೇನೆ, ಹೇಗೆ ತಾನೆ ನಾನು ಸಂಸಾರ ಸಾಗರವನ್ನು ದಾಟಬಲ್ಲೆ?’’ ಎನ್ನುವ ಸಂತಾಪ ಚಿಂತೆಯನ್ನೇ ಬುಡಸಹಿತವಾಗಿ ತೆಗೆದುಹಾಕಿ ದೃಢವಾಗಿ ಸ್ವರೂಪಧ್ಯಾನದಲ್ಲಿ ತತ್ಪರನಾಗಿದ್ದಲ್ಲಿ ನಿಶ್ಚಯವಾಗಿಯೂ ಅವನು ಕೃತಕೃತ್ಯನಾಗುವನು.

ಒಳ್ಳೆಯ ಮನಸ್ಸು ಮತ್ತು ಕೆಟ್ಟ ಮನಸ್ಸು ಎಂಬ ಎರಡು ಬಗೆಯ ಮನಸ್ಸುಗಳಿಲ್ಲ. ಮನಸ್ಸು ಒಂದೇ. ಆದರೆ ವಾಸನೆಗಳಲ್ಲಿ ಶುಭ, ಅಶುಭವೆಂದು ಎರಡು ವಿಧ. ಮನಸ್ಸು ಶುಭವಾದ ವಾಸನೆಗಳ ವಶವಾಗಿದ್ದರೆ ಒಳ್ಳೆಯದೆಂದೂ, ಅಶುಭವಾದ ವಾಸನೆಗಳ ವಶವಾಗಿದ್ದರೆ ಕೆಟ್ಟದ್ದೆಂದೂ ಕರೆಯಲ್ಪಡುತ್ತದೆ. ಮನಸ್ಸನ್ನು ಪ್ರಪಂಚದ ವಿಷಯಗಳಲ್ಲಿಯಾಗಲೀ ಇತರರ ವಿಷಯಗಳಲ್ಲಿಯಾಗಲೀ ತೊಡಗಿಸಿಕೊಳ್ಳಕೂಡದು. ಇತರರು ಎಷ್ಟೇ ಕೆಟ್ಟ ಸ್ವಭಾವದವರಾಗಿರಲಿ ಅವರನ್ನು ದ್ವೇಷಿಸಕೂಡದು. ರಾಗದ್ವೇಷಗಳೆರಡನ್ನೂ ತ್ಯಜಿಸಬೇಕು. ಇತರರಿಗೆ ಮಾಡುವ ಉಪಕಾರಗಳೆಲ್ಲವೂ ತನಗೇ ಮಾಡಿಕೊಂಡಂತೆಯೇ ಆಗುತ್ತವೆ.

ಈ ತತ್ತ್ವವನ್ನು ಅರಿತರೆ ಯಾರು ಇನ್ನೊಬ್ಬರಿಗೆ ಕೊಡದಿರಲು ಸಾಧ್ಯ? ನಾನು ಎಂಬುದು ಹುಟ್ಟಿದ ಕೂಡಲೇ ಎಲ್ಲವೂ ಹುಟ್ಟುವುದು. ನಾನು ಎಂಬುದು ಇಲ್ಲವಾದರೆ ಎಲ್ಲವೂ ಇಲ್ಲವಾಗುವುದು. ಎಲ್ಲಿಯವರೆಗೆ ನಾವು ವಿನಯದಿಂದ ವರ್ತಿಸುತ್ತೇವೆಯೋ ಅಲ್ಲಿಯವರೆಗೆ ಎಲ್ಲವೂ ಒಳ್ಳೆಯದೇ ಆಗುವುದು. ಮನಸ್ಸು ಶಾಂತವಾಗಿದ್ದರೆ ಯಾರು ಎಲ್ಲಿ ಬೇಕಾದರೂ ನೆಲೆಸಬಹುದು. ಎಲ್ಲವೂ ನೆಮ್ಮದಿಯಾಗಿಯೇ ಇರುತ್ತದೆ.

ಶಿವಪ್ರಕಾಶಂ ಪಿಳ್ಳೈ :  ವಿಚಾರವನ್ನು ಎಷ್ಟು ಕಾಲದವರೆಗೆ ಮಾಡಬೇಕು?

ರಮಣ ಮಹರ್ಷಿ : ಮನಸ್ಸಿನಲ್ಲಿ ಎಲ್ಲಿಯವರೆಗೆ ವಿಷಯ ವಾಸನೆಗಳು ಉಳಿದುಕೊಂಡಿರುತ್ತವೆಯೋ ಅಲ್ಲಿಯವರೆಗೆ ‘ನಾನು ಯಾರು?’ ಎನ್ನುವ ವಿಚಾರವನ್ನು ಮಾಡುತ್ತಿರಬೇಕು. ಆಲೋಚನೆಗಳು ಉದಿಸುತ್ತಿದ್ದಂತೆಯೇ ಕೂಡಲೇ ಅವುಗಳನ್ನು ಅವುಗಳ ಉಗಮ ಸ್ಥಾನದಲ್ಲಿಯೇ ವಿಚಾರದಿಂದ ನಶಿಸುವಂತೆ ಮಾಡುತ್ತಿರಬೇಕು. ಆತ್ಮಸಾಕ್ಷಾತ್ಕಾರವಾಗುವವರೆಗೆ ಎಡೆಬಿಡದೆ ಸ್ವರೂಪ ಧ್ಯಾನವನ್ನೇ ಮಾಡುತ್ತಿದ್ದರೆ ಅಷ್ಟೇ ಸಾಕು. ಕೋಟೆಯೊಳಗೆ ಶತ್ರುಗಳು ಇರುವವರೆಗೂ ಅವರು ಹೊರಬರುತ್ತಲೇ ಇರುತ್ತಾರೆ. ಅವರು ಹೊರ ಬರುತ್ತಿದ್ದಂತೆಯೇ ಅವರನ್ನು ನಾಶಗೊಳಿಸಿದರೆ ಅಂತ್ಯದಲ್ಲಿ ಕೋಟೆಯು ನಮ್ಮ ವಶವಾಗುತ್ತದೆ.

~

ಶಿವಪ್ರಕಾಶಂ ಪಿಳ್ಳೈಯವರ  ಸಂದೇಹಗಳಿಗೆ ರಮಣ ಮಹರ್ಷಿಗಳು ಲಿಖಿತರೂಪದಲ್ಲಿ ನೀಡಿದ ಉತ್ತರಗಳನ್ನು ಸಂಕಲಿಸಿ ‘ನಾನು ಯಾರು?’ ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸಲಾಗಿದೆ. ಡಾ. ಕೆ.ಎ. ನಾರಾಯಣನ್ ಕನ್ನಡಕ್ಕೆ ಅನುವಾದಿಸಿದ ಸಂಗ್ರಹದ ಆಯ್ದ ಭಾಗಗಳು ಇಲ್ಲಿವೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. […] ರಮಣ ಮಹರ್ಷಿಗಳು ಮತ್ತು ಶಿವಪ್ರಕಾಶಂ ಪಿಳ್ಳೈಯವರ  ಆಧ್ಯಾತ್ಮಿಕ ಸಂವಾದದ ಆಯ್ದ ಭಾಗ ಇಲ್ಲಿದೆ. ಇದು  ಪ್ರಶ್ನೋತ್ತರ ಸರಣಿಯ ಮೂರನೇ ಭಾಗ. ಎರಡನೇ ಭಾಗ ಇಲ್ಲಿದೆ : https://aralimara.com/2019/02/19/ramana-7/ […]

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.