ಮೆ ಆಜಾದ್ ಹೂಂ, ಆಜಾದ್ ಹಿ ರಹೂಂಗಾ!! : ಈ ಘೋಷಣೆಯ ನಿಜಾರ್ಥ ಗೊತ್ತೆ?

ನಾನು ಸ್ವತಂತ್ರನಾಗಿದ್ದೇನೆ, ಸ್ವತಂತ್ರನಾಗಿಯೇ ಇರುತ್ತೇನೆ”. ಆಜಾದ್ ಈ ಮಾತನ್ನು ಭೌತಿಕ ಸ್ತರದಲ್ಲಿ ಹೇಳಿದ್ದಾಗಿರಲಿಲ್ಲ. ಸ್ವತಃ ಆಧ್ಯಾತ್ಮ ಜೀವಿಯೂ ಆಗಿದ್ದ ಆಜಾದ್, ಅದನ್ನು ಆಧ್ಯಾತ್ಮಿಕ ಸ್ತರದಲ್ಲೇ ಹೇಳಿದ್ದ. ಅದು ಹೇಗೆ ಗೊತ್ತೇ? ಈ ಲೇಖನ ನೋಡಿ. ಅಂದ ಹಾಗೆ, ಇಂದು (ಫೆ.27) ಈ ಕ್ರಾಂತಿಕಾರಿಯ ದೇಹ ತ್ಯಜಿಸಿ ಮುಕ್ತನಾದ ಪುಣ್ಯ ದಿನ ~ ಚೇತನಾ ತೀರ್ಥಹಳ್ಳಿ


ಇಂದು ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿಗಳ ಸೇನಾನಿ, ಹುತಾತ್ಮ ಚಂದ್ರಶೇಖರ್ ಆಜಾದ್ ಪುಣ್ಯ ದಿನ. ಬಾಲ್ಯದಿಂದಲೂ ಸ್ವತಂತ್ರಭಾರತದ ಕನಸುಕಟ್ಟಿಕೊಂಡು ಬೆಳೆದ ಆಜಾದ್, ಜೀವತೆತ್ತಿದ್ದೂ ಆ ಕನಸು ಕಣ್ಣಲ್ಲಿಟ್ಟುಕೊಂಡೇ.
ಬಾಲ್ಯದಲ್ಲೊಮ್ಮೆ ಬ್ರಿಟಿಷರ ವಿರುದ್ಧದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಚಂದ್ರಶೇಖರನನ್ನು ಪೊಲೀಸರು ಎಳೆದೊಯ್ಯುತ್ತಾರೆ. ಛಡಿ ಏಟಿನ ಶಿಕ್ಷೆಯೂ ಆಗುತ್ತದೆ. ನಿತ್ಯ ವ್ಯಾಯಾಮದಲ್ಲಿ 12ನೆ ವಯಸಿಗೇ ಹುರಿಗೊಂಡಿದ್ದ ಚಂದ್ರಶೇಖರ ಜೈಲರನಿಗೆ ಕೈಮುಗಿದು ಹೇಳಿದ್ದೇನು ಗೊತ್ತೆ? “ಮೆ ಆಜಾದ್ ಹೂಂ, ಆಜಾದ್ ಹಿ ರಹೂಂಗಾ!” – ನಾನು ಸ್ವತಂತ್ರನಾಗಿದ್ದೇನೆ, ಸ್ವತಂತ್ರನಾಗಿಯೇ ಇರುತ್ತೇನೆ. ಯಾವ ಸಂಕೋಲೆಗಳೂ ನನ್ನನ್ನು ಬಂಧಿಸಲಾರವು ಎಂದು!!
ಈ ಶಪಥದಿಂದಾಗಿಯೇ ಮುಂದೆ ಆತನ ಹೆಸರು ಚಂದ್ರಶೇಖರ ಆಜಾದ್ ಎಂದಾಯಿತು.
ಈ ಹೇಳಿಕೆಯ ಸೌಂದರ್ಯವನ್ನು ನೋಡಿ. “ನಾನು ಸ್ವತಂತ್ರನಾಗಿದ್ದೇನೆ, ಸ್ವತಂತ್ರನಾಗಿಯೇ ಇರುತ್ತೇನೆ”. ಆಜಾದ್ ಈ ಮಾತನ್ನು ಭೌತಿಕ ಸ್ತರದಲ್ಲಿ ಹೇಳಿದ್ದಾಗಿರಲಿಲ್ಲ. ಸ್ವತಃ ಆಧ್ಯಾತ್ಮ ಜೀವಿಯೂ ಆಗಿದ್ದ ಆಜಾದ್, ಅದನ್ನು ಆಧ್ಯಾತ್ಮಿಕ ಸ್ತರದಲ್ಲೇ ಹೇಳಿದ್ದ.
ಸ್ವಾತಂತ್ರ್ಯ ಹೋರಾಟ, ಅದರಲ್ಲೂ ಬ್ರಿಟಿಷರ ಎದೆ ನಡುಗಿಸಿದ್ದ ಕ್ರಾಂತಿಮಾರ್ಗದಲ್ಲಿ ಸಾಗಿದ್ದ ಆಝಾದನಿಗೆ ಮನೆಯಿಂದ ಹೊರಗೆ ತನ್ನ ನಿಜ ರೂಪದಲ್ಲಿ ಬರುವುದೂ ಕಷ್ಟವಾಗಿತ್ತು. ರಸ್ತೆಗಳಲ್ಲಿ ನಿಶ್ಚಿಂತನಾಗಿ ನಡೆಯಲು ಸಾಧ್ಯವಿರುತ್ತಿರಲಿಲ್ಲ. ಆತ ತನ್ನ ಜೀವನದ ಬಹುಪಾಲು ಅಜ್ಞಾತ ವಾಸದಲ್ಲಿ, ಮಾರುವೇಷದಲ್ಲಿ ಮತ್ತು ಬೇರೊಬ್ಬರ ಹೆಸರಿಟ್ಟುಕೊಂಡೇ ಕಳೆದ! ಹೀಗಿರುವಾಗ ಆತ “ನಾನು ಸ್ವತಂತ್ರನಾಗಿದ್ದೇನೆ” ಎಂದು ಹೇಳಿಕೊಳ್ಳುವುದು ಹೇಗೆ ಸಾಧ್ಯವಾಯಿತು? ಹೆಜ್ಜೆ ಹೆಜ್ಜೆಗೂ ಪಹರೆಯಿತ್ತು. ಅವನ ಮೇಲೆ ಕಣ್ಗಾವಲಿತ್ತು. ಆತ ಸೆರೆಮನೆಯಲ್ಲಿ ಇಲ್ಲದಿದ್ದರೂ ಅವನ ಸುತ್ತ ಅದೃಶ್ಯ ಸರಳುಗಳಂತೆ ಕಾವಲು ಹಾಕಲಾಗಿತ್ತು. ಹೀಗಿದ್ದಾಗ ಚಂದ್ರಶೇಖರನಿಗೆ ಅದೆಂಥ ಆಜಾದಿಯಿತ್ತು!?
ವಾಸ್ತವದಲ್ಲಿ ಚಂದ್ರಶೇಖರ ಮಾನಸಿಕವಾಗಿ ಸ್ವತಂತ್ರನಾಗಿದ್ದ. ಆತನ ಪ್ರಜ್ಞೆ ಸ್ವತಂತ್ರವಾಗಿತ್ತು. ಗುಲಾಮೀತನ ಇರುವುದು ವ್ಯಕ್ತಿಯ ಮನಸ್ಥತಿಯಲ್ಲಿ. ಅಂಥಾ ಮನಸ್ಥಿತಿಯ ವ್ಯಕ್ತಿಗಳು ದೈಹಿಕವಾಗಿ ಸಂಕೋಲೆ ತೊಟ್ಟಿಲ್ಲದಿದ್ದರೂ ಮಾನಸಿಕವಾಗಿ ಸ್ವಾತಂತ್ರ್ಯ ಕಳೆದುಕೊಂಡು ಬಂಧಿಗಳಾಗಿರುತ್ತಾರೆ. ಆದರೆ ಆಜಾದ್, ಕಾವಲಿನ ಕಣ್ಣ ಸರಳುಗಳಲ್ಲಿ ಇದ್ದರೂ ಮಾನಸಿಕವಾಗಿ, ಪ್ರಜ್ಞಾಪೂರ್ವಕವಾಗಿ ಸ್ವತಂತ್ರವಾಗಿದ್ದ. ಅವನ ಮನಸ್ಸು ಸ್ವತಂತ್ರ ಚಿಂತನೆ ಹೊಂದಿತ್ತು. ಅವನು ಮುಕ್ತವಾಗಿ ಯೋಚಿಸಬಲ್ಲವನಾಗಿದ್ದ. ಯಾರ ಪ್ರಭಾವಕ್ಕೂ ಸಿಲುಕದೆ, ಅಂಜದೆ, ಅನುಮಾನಿಸಿದೆ ಬದುಕಬಲ್ಲವನಾಗಿದ್ದ. ಇಂಥಾ ಆಜಾದಿ ಆತನಲ್ಲಿ ಬಾಲ್ಯದಲ್ಲಿಯೂ ಇತ್ತು, ಸಾಯುವಾಗಲೂ ಇತ್ತು.
ಚಂದ್ರಶೇಖರ ಆಜಾದ್, “ಮೆ ಆಜಾದ್ ಹೂ.. ಆಜಾದ್ ಹಿ ರಹೂಂಗಾ” ಅನ್ನುವಾಗ ಅವನು ರಾಜಕೀಯ ಸ್ವಾತಂತ್ರ್ಯದ ಬಗ್ಗೆ ಅಲ್ಲ, ಸರ್ವೋತ್ಕೃಷ್ಟವಾದ ಆಧ್ಯಾತ್ಮಿಕ ಸ್ವಾತಂತ್ರ್ಯದ ಬಗ್ಗೆ ಹೇಳುತ್ತಿದ್ದ. ಆ ಮಾತುಗಳನ್ನಾಡುವಾಗ ಖಂಡಿತವಾಗಿಯೂ ಆಜಾದ್ ತನ್ನ ಕುರಿತು ತಾನೊಂದು ದೇಹವಾಗಿ ಯೋಚಿಸಿರಲಿಕ್ಕಿಲ್ಲ. ವಿದೇಶೀ ಆಡಳಿತಕ್ಕೆ ಒಳಪಟ್ಟ ನೆಲದಲ್ಲಿ ಹುಟ್ಟಿ ಬದುಕುತ್ತಿರುವ ತನ್ನನ್ನು ತಾನು ಸ್ವತಂತ್ರ ಎಂದು ಘೋಷಿಸಿಕೊಂಡ ಎಂದರೆ, ಆತ ತನ್ನ ದೇಹದ ಬಗ್ಗೆ ಅಲ್ಲ, ಆತ್ಮದ ಬಗ್ಗೆಯೇ ಹೇಳಿರಬೇಕು. ಸಂಸ್ಕೃತ ವಿದ್ಯಾರ್ಥಿಯೂ ಪಂಡಿತನೂ (ಚಂದ್ರಶೇಖರ ಆಜಾದ್’ನನ್ನು “ಪಂಡಿತ್ ಜೀ” ಎಂದೂ ಕರೆಯುತ್ತಿದ್ದರು. ಇದಕ್ಕೆ ಆತ ಪಂಡಿತರಂತೆ ಮಾರುವೇಷ ಧರಿಸುತ್ತಿದ್ದುದು ಒಂದು ಕಾರಣವಾದರೆ, ಆತನ ಅಗಾಧ ಜ್ಞಾನ ಮತ್ತೊಂದು ಕಾರಣವಾಗಿತ್ತು) ಆಗಿದ್ದ ಆಜಾದ್, ತಾನು ಯಾವ ಬಂಧನಕ್ಕೂ ಸಿಲುಕದ ನಿತ್ಯ ಮುಕ್ತಾತ್ಮವೆಂದು ಅರಿತಿದ್ದ. ದೈಹಿಕವಾಗಿಯೂ ಅದನ್ನು ಅಭಿವ್ಯಕ್ತಗೊಳಿಸಲೆಂದೇ ಆತ ಪೊಲೀಸರ ಕೈಗೆ ಸಿಗದೆ ತನಗೆ ತಾನೆ ಗುಂಡು ಹಾರಿಸಿಕೊಂಡು ಹುತಾತ್ಮನಾಗಿದ್ದು.
ನಾವು ಇಂದು ರಾಜಕೀಯವಾಗಿ ಸ್ವತಂತ್ರರಾಗಿದ್ದೇವೆ. ಆದರೆ ವೈಯಕ್ತಿಕವಾಗಿ, ಸಮಾಜೋಆರ್ಥಿಕವಾಗಿ, ಆಲೋಚನಾ ಕ್ರಮದಲ್ಲಿ ಕೂಡ ಮತ್ತೊಬ್ಬರ ಅಡಿಯಾಳಾಗಿದ್ದೇವೆ. ಈ ಸಂದರ್ಭದಲ್ಲಿ ಚಂದ್ರಶೇಖರ್ ಆಜಾದನ ಮಾತುಗಳನ್ನು ನೆನೆದು ಅದರಂತೆ ನಡೆಯುವ ತುರ್ತಿದೆ. ಆಜಾದನಿಗೆ ಅಂಥಾ ಧೀರತನ ಸಾಧ್ಯವಾಗಿದ್ದೇ ಆತನ ಆಧ್ಯಾತ್ಮಿಕ ಸ್ವತಂತ್ರಪ್ರವೃ್ತಿಯಿಂದ. ಆ ಪ್ರವೃತ್ತಿಯನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸುವುದೇ ಈ ಧೀರಶಕ್ತಿಯ ಪುಣ್ಯದಿನದಂದು ನಾವು ಸಲ್ಲಿಸಬಹುದಾದ ನಿಜ ಗೌರವ.

Leave a Reply