ಆತ್ಮದ ವಿಷಯ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 16

Inspirational Quotes Kahlil Gibran Life Kahlil Gibran Quotes | K

ಮೇಲೆ, ಆತ್ಮದ ಬಗ್ಗೆ ಪ್ರಶ್ನೆ ಮಾಡಿದ ಮನುಷ್ಯನಿಗೆ
ಅವನು ಉತ್ತರಿಸತೊಡಗಿದ.

ನಿಮ್ಮ ಹೃದಯಗಳು
ಮೌನದಲ್ಲಿ
ಹಗಲು ಮತ್ತು ರಾತ್ರಿಯ ರಹಸ್ಯಗಳಿಗೆ
ತೆರೆದುಕೊಳ್ಳುತ್ತವೆ.

ಆದರೆ ನಿಮ್ಮ ಕಿವಿಗಳಿಗೆ
ಹೃದಯದ ತಿಳುವಳಿಕೆಯನ್ನು
ಶಬ್ದಗಳಲ್ಲಿ ಕೇಳುವ ಹಂಬಲ.

ನಿಮ್ಮ ಮನಸ್ಸಿಗೆ
ಮೊದಲೇ ಗೊತ್ತಿರುವ ವಿಷಯ,
ಆಗಲೇ ಶಬ್ದಗಳ ಮೂಲಕ
ನಿಮಗೆ ತಿಳಿಯುತ್ತದೆ.

ಕನಸಿನ ಬೆತ್ತಲೆ ದೇಹವನ್ನು ನೀವು
ಬೆರಳುಗಳಿಂದ ಮುಟ್ಟ ಬಯಸುತ್ತೀರಿ.

ಒಳಗೆ ಅದೃಶ್ಯವಾಗಿರುವ
ನಿಮ್ಮ ಆತ್ಮದ ಮೂಲ ಸ್ರೋತ ಚಿಮ್ಮಿ
ಕಲರವ ಮಾಡುತ್ತ ಸಾಗರದತ್ತ ಧಾವಿಸುವಾಗ;
ಅಪರಿಮಿತ ಆಳದ ನಿಧಿ
ಕಣ್ಣಿಗೆ ಕಾಣಿಸಿಕೊಳ್ಳುವುದು.

ಆದರೆ, ಈ ಅಜ್ಞಾತ ನಿಧಿಯನ್ನು
ತೂಕ ಹಾಕುವ ತಕ್ಕಡಿ
ಇನ್ನೂ ಸೃಷ್ಟಿಯಾಗಿಲ್ಲ ಬಿಡಿ.

ಅರಿವಿನ ಆಳವನ್ನು ಅಳೆಯಲು
ಅಳತೆ ಪಟ್ಟಿ ಹುಡುಕುತ್ತ ಕುಳಿತು ಬಿಡಬೇಡಿ.

ಆತ್ಮವೆಂಬುದು ಅಸೀಮ, ಅಪ್ರಮಾಣ.

ಸತ್ಯವನ್ನು ಕಂಡೆ ಎನ್ನದಿರಿ,
ಬೇಕಾದರೆ, ಸತ್ಯವೊಂದನ್ನು ಕಂಡೆ ಎನ್ನಿ.

ಆತ್ಮದ ದಾರಿಯನ್ನು ಕಂಡೆ ಎನ್ನದಿರಿ,
ಬೇಕಾದರೆ, ನಾನು ಓಡಾಡುವ ದಾರಿಯಲ್ಲಿ
ಆತ್ಮವನ್ನು ಭೇಟಿ ಮಾಡಿದೆ ಎನ್ನಿ.

ಆ ದಾರಿ, ಈ ದಾರಿ ಎನ್ನುವುದಿಲ್ಲ
ಎಲ್ಲವೂ ಆತ್ಮದ ದಾರಿಗಳೇ.
ಆತ್ಮ, ಎಳೆದ ಗೆರೆಯ ಮೇಲೆ ನಡೆಯುವುದಿಲ್ಲ,
ಜೊಂಡು ಬೆಳೆದಂತೆ ಬೆಳೆಯುವುದಿಲ್ಲ.

ಆತ್ಮ ಅರಳುತ್ತದೆ
ಅಸಂಖ್ಯ ದಳದ ಕಮಲದಂತೆ.

ಮುಂದುವರೆಯುತ್ತದೆ……….

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/09/15/pravadi-3/

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

1 Comment

Leave a Reply