ಶ್ರೀಮಂತ ತರುಣನಿಗೆ ಪಾಠ ಕಲಿಸಿದ ಚೆಲುವೆ

ಒಂದೂರಿನಲ್ಲಿ ಒಬ್ಬ ಚೆಲುವೆ. ಅವಳ ಚೆಲುವಿಗೆ ಮನಸೋತ ಶ್ರೀಮಂತ ತರುಣನೊಬ್ಬ ಮದುವೆಯಾಗೆಂದು ಅವಳನ್ನು ಪೀಡಿಸುತ್ತಾನೆ. ಪೆಟ್ಟಿಗೆ ತುಂಬಾ ಉಡುಗೊರೆ ತಂದು ಅವಳ ಮುಂದೆ ಸುರಿಯುತ್ತಾನೆ. “ನನ್ನದು ಆಗರ್ಭ ಶ್ರೀಮಂತ ಮನೆತನ. ಒಡವೆ – ವಸ್ತುಗಳಿಂದ ತುಂಬಿದ ಪೆಟ್ಟಿಗೆಗಳೇ ನಮ್ಮ ಮನೆಯಲ್ಲಿದೆ. ಆದರೆ ನಿನ್ನಂಥ ಚೆಲುವಿನ ಖನಿ ಇಲ್ಲದಿರುವುದೇ ಕೊರತೆ. ನನ್ನನ್ನು ಮದುವೆಯಾಗು” ಎಂದು ಬೇಡುತ್ತಾನೆ.

ಚೆಲುವೆಗೆ ಆತನ ಬೇಡಿಕೆಯಲ್ಲೂ ಶ್ರೀಮಂತಿಕೆಯ ಗತ್ತು ತುಂಬಿರುವುದು ರುಚಿಸುವುದಿಲ್ಲ. ಆತನಿಗೆ ಒಂದು ತಿಂಗಳು ಬಿಟ್ಟು ತನ್ನ ಮನೆಗೆ ಬಂದು, ಪೋಷಕರಲ್ಲಿ ಪ್ರಸ್ತಾಪವಿಡುವಂತೆ ಹೇಳುತ್ತಾಳೆ. ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಅನ್ನುವ ಉಪಾಯ ಒಂದೆಡೆಯಾದರೆ, ಆ ತರುಣನಿಗೆ ಸರಿಯಾದ ಪಾಠ ಕಲಿಸುವುದು ಆಕೆಯ ಮತ್ತೊಂದು ಯೋಚನೆ. 

ಅದರಂತೆ ತಿಂಗಳು ಕಳೆದು ತರುಣ ಆಕೆಯ ಮನೆಗೆ ಬರುತ್ತಾನೆ. ಮುಂಬಾಗಿಲ ಹೊಸ್ತಿಲ ಬಳಿಯೊಬ್ಬಳು ಮೂಳೆ ಚಕ್ಕಳ ಕಾಣುವಂತೆ ಬಡಕು ಮೈಯಿನ ಹೆಣ್ಣೊಬ್ಬಳು ನಿಂತಿರುತ್ತಾಳೆ. ತರುಣ ಆ ಸುಂದರಿ ಎಲ್ಲಿದ್ದಾಳೆಂದು ವಿಚಾರಿಸುತ್ತಾನೆ.

ಅದಕ್ಕೆ ಆಕೆ, “ಯಾಕೆ? ನನ್ನ ಗುರುತು ಸಿಗಲಿಲ್ಲವೆ? ನಾನು ಹೊಸ್ತಿಲಲ್ಲಿ ನಿಂತು ನಿನಗಾಗಿಯೇ ಕಾಯುತ್ತಿದ್ದೆ” ಎಂದು ಸ್ವಾಗತಕ್ಕೆ ಮುಂದಾಗುತ್ತಾಳೆ. ಬತ್ತಿದ ಕೆನ್ನೆ, ಎಲುಬಿನ ಹಂದರದ ದೇಹ ಹೊಂದಿದ್ದ ಆಕೆಯನ್ನು ಕಂಡು ಅಸಹ್ಯದಿಂದ ದೂರ ತಳ್ಳುತ್ತಾನೆ ಆತ. ಆಗ ತರುಣಿ, “ಯಾಕಯ್ಯಾ ಹುಡುಗ ಹೀಗೆ ತಳ್ಳುತ್ತಿದ್ದೀಯ? ತಿಂಗಳ ಹಿಂದೆ ನನ್ನ ಕಾಲ ಬಳಿ ಉಡುಗೊರೆ ಸುರಿದು ಮದುವೆಯಾಲು ಸಮ್ಮತಿಸು ಎಂದು ಬೇಡಿದ್ದು ನೀನೇ ಅಲ್ಲವೆ?” ಎಂದು ಕೇಳುತ್ತಾಳೆ.

ತರುಣನಿಗೆ ಗಾಬರಿ. “ನೀನಷ್ಟು ಸುಂದರಿಯಾಗಿದ್ದೆ. ನಿನ್ನ ಚೆಲುವೆಲ್ಲ ಎಲ್ಲಿ ಹೋಯ್ತು!? ನಿಜವಾಗಿಯೂ ನೀನು ಅವಳೇ ಏನು?” ಎಂದು ಆತ ಕೇಳುತ್ತಾನೆ. ತರುಣಿ ಆತನನ್ನು ಹಿತ್ತಿಲಿಗೆ ಕರೆದುಕೊಂಡು ಹೋಗಿ ಮೂರು ಬಾನಿಗಳನ್ನು ತೋರಿಸಿ, ಮುಚ್ಚಳ ತೆಗೆಯಲು ಹೇಳುತ್ತಾಳೆ. ಅವುಗಳಲ್ಲಿ ಮಲ, ಮೂತ್ರ, ವಮನಗಳಿರುತ್ತವೆ. ಹೇಸಿಗೆಯಿಂದ ಮೂರ್ಛೆ ಹೋಗುತ್ತಾನೆ.

ತರುಣ ಸಾವರಿಸಿಕೊಂಡ ನಂತರ ಆ ತರುಣಿ, “ಸೌಂದರ್ಯ ಶಾಶ್ವತವಲ್ಲ ಎಂದು ಈಗಲಾದರೂ ತಿಳಿಯಿತೆ? ನಾನು ವಾರಗಟ್ಟಲೆ ಉಪವಾಸವಿದ್ದು, ದೇಹದೊಳಗಿನ ಕಲ್ಮಷವೆಲ್ಲ ಹೊರಹಾಕಿ, ಹೀಗಿದ್ದೇನೆ ನೋಡು. ನೋಡಲು ಸುಂದರವಾಗಿ ಕಾಣುವ ದೇಹ ಮಲಮೂತ್ರಗಳ ಮಡಿಕೆ ಅಷ್ಟೇ. ಇದು ನಿನಗೆ ಮನದಟ್ಟಾದ ನಂತರ ಮತ್ತೆ ಮಾತಾಡೋಣ. ನೀನಿನ್ನು ಹೊರಡು” ಎಂದು ಬುದ್ಧಿವಾದ ಹೇಳಿ ಬೀಳ್ಕೊಡುತ್ತಾಳೆ. 

(ಶ್ರೀಲ ಪ್ರಭುಪಾದರು ಹೇಳಿದ ದೃಷ್ಟಾಂತ ಕಥೆ)

1 Comment

Leave a Reply