ಕುರು ಕುಲದ ವಂಶಾವಳಿ : ಮಹಾಭಾರತ, ನಮಗೆಷ್ಟು ಗೊತ್ತು?

ಮಹಾಭಾರತ ಮತ್ತು ಪುರಾಣಗಳಲ್ಲಿ ಕಂಡುಬರುವಂತೆ, ಕುರುಕುಲದ ವಂಶಾವಳಿ ಇಲ್ಲಿದೆ…

ಶಂತನುವು ಗಂಗೆ ಭಾಗೀರಥಿಯನ್ನು ವಿವಾಹವಾದನು. ಅವಳಲ್ಲಿ ದೇವವ್ರತನು ಜನಿಸಿದನು. ಅವನನ್ನು ಭೀಷ್ಮ ಎಂದು ಕರೆದರು. ತನ್ನ ತಂದೆಗೆ ಪ್ರಿಯವಾದದ್ಡನ್ನು ಮಾಡಲೋಸುಗ ಭೀಷ್ಮನು ತಾಯಿ ಸತ್ಯವತಿಯನ್ನು ಕರೆತಂದು ಅವನಿಗೆ ಮದುವೆ ಮಾಡಿಸಿದನು. ಅವಳನ್ನು ಗಂಧಕಾಲೀ ಎಂದೂ ಕರೆಯುತ್ತಿದ್ದರು. ಅವಳು ಕನ್ಯೆಯಾಗಿರುವಾಗಲೇ ಪರಾಶರನಿಂದ ದ್ವೈಪಾಯನನಿಗೆ ಜನ್ಮವಿತ್ತಿದ್ದಳು. ಅವಳು ಶಂತನುವಿನಿಂದ ಈರ್ವರು ಪುತ್ರರನ್ನು ಪಡೆದಳು: ಚಿತ್ರಾಂಗದ ಮತ್ತು ವಿಚಿತ್ರವೀರ್ಯ.

ಚಿತ್ರಾಂಗದನು ಯೌವನ ಪ್ರಾಪ್ತಿಯಾಗುವುದರೊಳಗೇ ಗಂಧರ್ವನೋರ್ವನಿಂದ ಹತನಾದನು. ನಂತರ ವಿಚಿತ್ರವೀರ್ಯನು ರಾಜನಾದನು. ವಿಚಿತ್ರವೀರ್ಯನು ಕಾಶಿರಾಜ ಮತ್ತು ಕೌಶಲ್ಯಳ ಪುತ್ರಿಯರೀರ್ವರನ್ನು ವಿವಾಹವಾದನು: ಅಂಬಿಕಾ ಮತ್ತು ಅಂಬಾಲಿಕಾ. ವಿಚಿತ್ರವೀರ್ಯನು ಮಕ್ಕಳಿಲ್ಲದೆಯೇ ತೀರಿಕೊಂಡನು. ದೌಃಷಂತನ ಈ ವಂಶಾವಳಿಯು ನಿಂತು ಹೋಗುತ್ತದೆಯೋ ಎಂದು ಸತ್ಯವತಿಯು ಚಿಂತಿಸತೊಡಗಿದಳು. ಅವಳು ಋಷಿ ದ್ವೈಪಾಯನನನ್ನು ನೆನಪಿಸಿಕೊಂಡಳು. ಅವನು ಅವಳ ಎದುರು ಬಂದು “ಏನು ಮಾಡಲಿ?” ಎಂದನು. “ನಿನ್ನ ತಮ್ಮ ವಿಚಿತ್ರವೀರ್ಯನು ಮಕ್ಕಳಿಲ್ಲದೆಯೇ ತೀರಿಕೊಂಡಿದ್ದಾನೆ. ಅವನ ಪತ್ನಿಯರಲ್ಲಿ ಅವನ ಮಕ್ಕಳ ತಂದೆಯಾಗು!”. “ಹಾಗೆಯೇ ಆಗಲಿ!” ಎಂದು ಅವನು ಮೂವರು ಮಕ್ಕಳ ತಂದೆಯಾದನು: ಧೃತರಾಷ್ಟ್ರ, ಪಾಂಡು ಮತ್ತು ವಿದುರ.

ಅವರಲ್ಲಿ ಧೃತರಾಷ್ಟ್ರನು ದ್ವೈಪಾಯನನ ವರದಾನದಿಂದ ಗಾಂಧಾರಿಯಲ್ಲಿ ನೂರು ಪುತ್ರರನ್ನು ಪಡೆದನು.
ಧೃತರಾಷ್ಟ್ರನ ಆ ಪುತ್ರರಲ್ಲಿ ನಾಲ್ವರು ಪ್ರಧಾನರಾಗಿದ್ದರು: ದುರ್ಯೋಧನ, ದುಃಶಾಶನ, ವಿಕರ್ಣ ಮತ್ತು ಚಿತ್ರಸೇನ. ಪಾಂಡುವಿಗೆ ಇಬ್ಬರು ಪತ್ನಿಯರಿದ್ದರು: ಕುಂತೀ ಮತ್ತು ಮಾದ್ರೀ. ಕುಂತಿಗೆ ಧರ್ಮನಿಂದ ಯುಧಿಷ್ಠಿರ, ವಾಯುವಿನಿಂದ ಭೀಮಸೇನ, ಮತ್ತು ಶಕ್ರನಿಂದ ಅರ್ಜುನ. ಮಾದ್ರಿಗೆ ಅಶ್ವಿನಿಯರಿಂದ ನಕುಲ ಸಹದೇವರು ಹುಟ್ಟಿದರು.

ಪಾಂಡು ಪುತ್ರರಿಗೆ ದ್ರೌಪದಿಯು ಪತ್ನಿಯಾದಳು. ಅವಳು ಯುಧಿಷ್ಠಿರನಿಂದ ಪ್ರತಿವಿಂಧ್ಯ, ವೃಕೋದರನಿಂದ ಸುತಸೋಮ, ಅರ್ಜುನನಿಂದ ಶೃತಕೀರ್ತಿ, ನಕುಲನಿಂದ ಶತಾನೀಕ, ಮತ್ತು ಸಹದೇವನಿಂದ ಶೃತಕರ್ಮನನ್ನು ಪಡೆದಳು.

ಯುಧಿಷ್ಠಿರನು ಶೈಬ್ಯ ಗೋವಾಸನನ ದೇವಕಿ ಎಂಬ ಹೆಸರಿನ ಕನ್ಯೆಯನ್ನು ಸ್ವಯಂವರದಲ್ಲಿ ಗೆದ್ದನು. ಅವಳಲ್ಲಿ ಯೌಧೇಯ ಎಂಬ ಹೆಸರಿನ ಪುತ್ರನನ್ನು ಪಡೆದನು. ಭೀಮಸೇನನು ಕಾಶಿಯ ಬಲಧರಾ ಎಂಬ ಹೆಸರಿನವಳನ್ನು ವೀರ್ಯಶುಲ್ಕವಾಗಿ ಪಡೆದು ಮದುವೆಯಾದನು. ಅವಳಲ್ಲಿ ಸರ್ವಗ ಎಂಬ ಹೆಸರಿನ ಪುತ್ರನನ್ನು ಪಡೆದನು. ಅರ್ಜುನನು ದ್ವಾರವತಿಗೆ ಹೋಗಿ ವಾಸುದೇವನ ಭಗಿನಿ ಸುಭದ್ರೆಯನ್ನು ವಿವಾಹವಾದನು. ಅವಳಲ್ಲಿ ಅಭಿಮನ್ಯು ಎನ್ನುವ ಪುತ್ರನನ್ನು ಪಡೆದನು. ನಕುಲನು ಚೈದ್ಯದೇಶದ ಕರೇಣುವತಿ ಎನ್ನುವವಳನ್ನು ಮದುವೆಯಾದನು. ಅವಳಲ್ಲಿ ನಿರಮಿತ್ರ ಎನ್ನುವ ಮಗನನ್ನು ಪಡೆದನು. ಸಹದೇವನು ಮಾದ್ರಿ ವಿಜಯಳನ್ನು ಸ್ವಯಂವರದಲ್ಲಿ ಗೆದ್ದು ಮದುವೆಯಾದನು. ಅವಳಲ್ಲಿ ಸುಹೋತ್ರ ಎನ್ನುವ ಪುತ್ರನನ್ನು ಪಡೆದನು. ಭೀಮಸೇನನು ಮೊದಲೇ ರಾಕ್ಷಸಿ ಹಿಡಿಂಬಿಯಲ್ಲಿ ಘಟೋತ್ಕಚ ಎಂಬ ಪುತ್ರನ್ನನ್ನು ಪಡೆದಿದ್ದನು. ಇವರೆಲ್ಲರೂ ಪಾಂಡವರ ಹನ್ನೊಂದು ಪುತ್ರರು.

ಅಭಿಮನ್ಯುವು ವಿರಾಟನ ಮಗಳು ಉತ್ತರೆಯನ್ನು ವಿವಾಹವಾದನು. ಅವಳಲ್ಲಿ ಅವನು ಮೊದಲೇ ಮೃತವಾಗಿದ್ದ ಮಗುವನ್ನು ಪಡೆದನು. ಪುರುಷೋತ್ತಮ ವಾಸುದೇವನು “ಈ ಆರು ತಿಂಗಳ ಗರ್ಭವನ್ನು ನಾನು ಬದುಕಿಸುತ್ತೇನೆ ಪೃಥಾಳು ಅವನನ್ನು ತನ್ನ ಬಾಹುಗಳಲ್ಲಿ ತೆಗೆದುಕೊಳ್ಳಲಿ!” ಎಂದು ಹೇಳಿದನು. ಅವನನ್ನು ಬದುಕಿಸಿ ಹೇಳಿದನು: “ಪರಿಕ್ಷೀಣವಾಗುತ್ತಿದ್ದ ಕುಲದಲ್ಲಿ ಹುಟ್ಟಿದುದರಿಂದ ಇವನು ಪರಿಕ್ಷಿತನೆಂದಾಗಲಿ!”ಎಂದನು. ಪರೀಕ್ಷಿತನು ಮಾದ್ರವತಿ ಎನ್ನುವವಳನ್ನು ವಿವಾಹವಾದನು. ಅವಳಲ್ಲಿ ಜನಮೇಜಯನನ್ನು ಪಡೆದನು.

ಜನಮೇಜಯನಿಗೆ ವಪುಷ್ಟಮೆಯಲ್ಲಿ ಈರ್ವರು ಪುತ್ರರು ಜನಿಸಿದರು: ಶತಾನೀಕ ಮತ್ತು ಶಂಕು. ಶತಾನೀಕನು ವೈದೇಹಿಯನ್ನು ಮದುವೆಯಾದನು. ಅವಳಲ್ಲಿ ಪುತ್ರ ಅಶ್ವಮೇಧದತ್ತನು ಜನಿಸಿದನು.

ಇದು  ಪುರಾಣಗಳಲ್ಲಿ ಬಹುವಾಗಿ ಕಂಡುಬರುವ ಕುರುಕುಲದ ವಂಶಾವಳಿ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.