ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾದ ಈಡಿಪಸ್: ಗ್ರೀಕ್ ಪುರಾಣ ಕಥೆಗಳು ~ 1

ಈಡಿಪಸ್’ನಿಂದ ಕೊಲ್ಲಲ್ಪಟ್ಟವನು ಥೀಬ್ಸ್ ರಾಜ ಲೇಯಿಯಿಸನೇ ಆಗಿದ್ದ! ಈಡಿಪಸ್’ನ ತಂದೆ ಲೇಯಿಯಸ್!! ಅಲ್ಲಿಗೆ, ದೈವವಾಣಿಯ ಮೊದಲರ್ಧ ನಿಜವಾಗಿತ್ತು. ಜೊಕಾಸ್ಟಳನ್ನು ಮದುವೆಯಾದಾಗ ದೈವವಾಣಿಯ ಉತ್ತರಾರ್ಧವೂ ನಿಜವಾಯಿತು….

Oedipus

ಸಂಗ್ರಹ ಮತ್ತು ಪುನರ್ ನಿರೂಪಣೆ: ಚೇತನಾ ತೀರ್ಥಹಳ್ಳಿ

ಥೀಬ್ಸ್ ದೊರೆ ಲೇಯಿಯಸ್’ಗೆ ಮದುವೆಯಾಗಿ ಬಹಳ ಕಾಲವಾದರೂ ಮಕ್ಕಳಾಗಲಿಲ್ಲ. ಅವನ ಹೆಂಡತಿ ಜೊಕಾಸ್ಟಳಿಗೂ ಅದೇ ಚಿಂತೆಯಾಗಿತ್ತು. ತಾನು ಸತ್ತಮೇಲೆ ತನ್ನ ರಾಜ್ಯಕ್ಕೆ ಉತ್ತರಾಧಿಕಾರಿ ಯಾರು ಎಂದು ಲೇಯಿಯಸ್ ಕೂಡಾ ಚಿಂತಿತನಾದ. ಇದಕ್ಕೇನು ಪರಿಹಾರವೆಂದು ಡೆಲ್ಫಿಯಲ್ಲಿದ್ದ ದೇವ ಮಂದಿರಕ್ಕೆ ಒಬ್ಬನೇ ಹೋದ.  ದೇವವಾಣಿಯು ಅವನಿಗೆ “ಮಕ್ಕಳಿಲ್ಲವೆಂದು ಚಿಂತಿಸಬೇಡ. ನಿನಗೆ ಮಗ ಹುಟ್ಟಿದರೆ, ಅವನು ನಿನ್ನನ್ನು ಕೊಂದು, ನಿನ್ನ ಹೆಂಡತಿಯನ್ನು ಮದುವೆಯಾಗುತ್ತಾನೆ. ಆದ್ದರಿಂದ ಮಕ್ಕಳಾಗದಂತೆ ಎಚ್ಚರವಹಿಸು” ಎಂದು ಹೇಳಿತು.

ಈಗ ಲೇಯಿಯಸ್’ನ ಚಿಂತೆ ಇನ್ನೂ ಹೆಚ್ಚಿತು. ಮಕ್ಕಳಾಗಲಿಲ್ಲ ಅನ್ನುವ ಚಿಂತೆಯು ಮಕ್ಕಳಾಗಿಬಿಟ್ಟರೆ ಏನು ಗತಿ ಎಂಬ ಚಿಂತೆಯಾಗಿ ಬದಲಾಯಿತು. ಅದನ್ನೇ ತಲೆಗೆ ಹಚ್ಚಿಕೊಂಡು ಮತ್ತಷ್ಟು ಕುಗ್ಗಿಹೋದ. ಡೆಲ್ಫಿಗೆ ಹೋಗಿಬಂದಾಗಿನಿಂದ ಲೇಯಿಯಸ್ ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾನೆ ಎಂದು ಗೊತ್ತಾಗಲು ಜೊಕಾಸ್ಟಳಿಗೆ ಬಹಳ ದಿನ ಬೇಕಾಗಲಿಲ್ಲ. ಎಷ್ಟು ಬಗೆಬಗೆಯಾಗಿ ಕೇಳಿದರೂ ಅವನು ಬಾಯಿಬಿಡಲಿಲ್ಲ.

ಹೀಗೇ ಇದ್ದರೆ ತನಗೆ ಮಗುವಾಗುವುದು ಹೇಗೆ ಎಂಬ ಪ್ರಶ್ನೆ ಜೊಕಾಸ್ಟಳನ್ನು ಕಾಡಿತು. ಒಂದು ದಿನ ಲೇಯಿಯಸ್’ನಿಗೆ ಮಿತಿಮೀರಿ ಮದ್ಯ ಕುಡಿಸಿ, ಅವನು ಅಮಲಿನಲ್ಲಿದ್ದಾಗ ಅವನನ್ನು ಕೂಡಿದಳು. ಗರ್ಭಿಣಿಯೂ ಆದಳು. ಕಾಲಕ್ಕೆ ಸರಿಯಾಗಿ ಒಂದು ಗಂಡುಮಗುವನ್ನೂ ಹೆತ್ತಳು.

ತಾನೆಷ್ಟು ಜಾಗರೂಕನಾಗಿದ್ದರೂ ಹೀಗಾಯಿತಲ್ಲ ಎಂದು ಲೇಯಿಯಸ್ ಆತಂಕಗೊಂಡ. ಮಗುವಿನ ಪಾದಗಳಿಗೆ ರಂಧ್ರ ಕೊರೆಸಿ, ಹಗ್ಗದಿಂದ ಜೋಡಿಸಿ ಕಟ್ಟಿ, ಸಿಥಿರಾನ್ ಬೆಟ್ಟದ ಮೇಲೆ ಬಿಸಾಡಿ ಬನ್ನಿ ಎಂದು ಸೇವಕರಿಗೆ ಆಜ್ಞಾಪಿಸಿದ. ಸೇವಕರು ಮಗುವಿನ ಮೇಲೆ ಅನುಕಂಪ ಹುಟ್ಟಿ, ಅದನ್ನು ಬಿಸಾಡದೆ, ಬೆಟ್ಟದ ಮೇಲೆ ಹಾಗೆಯೇ ಮಲಗಿಸಿ ಬಂದರು. ಲೇಯಿಯಸ್, ಕಾಟ ತೀರಿತು ಎಂದು ಸಮಾಧಾನಗೊಂಡ.

ಕಾರಿಂಥಿನ ದೊರೆ ಪಾಲಿಬಸ್’ನ ಸೇವಕರಲ್ಲೊಬ್ಬ ಸಿಥಿರಾನ್ ಬೆಟ್ಟದ ಮೇಲೆ ಹಾದು ಹೋಗುವಾಗ ಈ ಮಗುವನ್ನು ಕಂಡ. ಅದನ್ನು ತಂದು, ಮಕ್ಕಳಿಲ್ಲದ ತನ್ನ ದೊರೆಗೆ ಅದನ್ನು ಒಪ್ಪಿಸಿದ. ಪಾಲಿಬಸ್’ನ ರಾಣಿ ಮೆರೋಪಿ ಮಗುವನ್ನು ಮುಚ್ಚಟೆಯಿಂದ ಸಾಕತೊಡಗಿದಳು. ರಂಧ್ರ ಕೊರೆದಿದ್ದರಿಂದ ಮಗುವಿನ ಪಾದಗಳು ಊದಿಕೊಂಡಿದ್ದು, ಊದಿದ ಪಾದದವನು ಎಂಬರ್ಥ ಬರುವ ‘ಈಡಿಪಸ್’ ಎಂಬ ಹೆಸರನ್ನು ಮಗುವಿಗೆ ಇಟ್ಟರು.

ಬೆಳೆದು ದೊಡ್ಡವನಾದ ಮೇಲೆ ಈಡಿಪಸ್’ನಿಗೆ ತಾನು ಪಾಲಿಬಸ್ ಹಾಗೂ ಮೆರೋಪಿಯ ಮಗನಲ್ಲ ಎಂಬ ಅನುಮಾನ ಬಂದಿತು. ಗೆಳೆಯರು ತನ್ನನ್ನು ಹಾಗೆ ಅಪಹಾಸ್ಯ ಮಾಡುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ಸತ್ಯವೇನೆಂದು ತಿಳಿಯಲು ಈಡಿಪಸ್ ಡೆಲ್ಫಿಯ ದೇವ ಮಂದಿರಕ್ಕೆ ಹೋದ. ಅವನ ಪ್ರಶ್ನೆಗೆ ನೇರವಾಗಿ ಉತ್ತರಿಸದ ದೇವವಾಣಿಯು, “ನೀನು ತಂದೆಯನ್ನು ಕೊಂದು ತಾಯಿಯನ್ನು ವರಿಸುವೆ” ಎಂದಿತು.

ಗಾಬರಿಗೊಂಡ ಈಡಿಪಸ್, ಅಕಸ್ಮಾತ್ ಪಾಲಿಬಸ್ ಹಾಗೂ ಮೆರೋಪಿ ತನ್ನ ನಿಜವಾದ ತಾಯ್ತಂದೆಯರೇ ಆಗಿದ್ದರೆ, ಅವರಿಗೆ ಕೇಡಾಗುವುದು ಬೇಡವೆಂದು ತೀರ್ಮಾನಿಸಿದ. ಅದಕ್ಕಾಗಿ ತಾನಿನ್ನು ಕಾರಿಂಥಿನ ಕಡೆ ಸುಳಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿಕೊಂಡ. ಹಾಗೆ ಡೆಲ್ಫಿಯಿಂದ ಹೊರಟ ಈಡಿಪಸ್’ಗೆ ದಾರಿಯಲ್ಲಿ ಎಂದು ರಾಜಬಂಡಿ ಎದುರಾಯ್ತು. ಅದರ ಸಾರಥೀಯೊಡನೆ ಸ್ವಲ್ಪ ಜೋರುಜೋರಾದ ಮಾತುಕತೆಯಾಯಿತು. ಸಾರಥಿ ಕೋಪದಿಂದ ಬಂಡಿಯ ಗಾಲಿಯನ್ನು ಈಡಿಪಸ್’ನ ಕಾಲಿನ ಮೇಲೆ ಹರಿಸಿದ. ಮೊದಲೇ ಊದಿದ ಪಾದಗಳಿದ್ದ ಈಡಿಪಸ್, ತನ್ನ ದೊಣ್ಣೆಯನ್ನು ಬೀಸಿ ಒಂದೇ ಏಟಿಗೆ ಸಾರಥಿಯನ್ನು ಕೊಂದುಹಾಕಿದ. ಈ ಗಲಭೆಯಿಂದ ವಿಚಲಿತನಾಗಿ ಬಂಡಿಯಿಂದ ಹೊರಬಂದ ರಾಜ ತಾನು ಈಡಿಪಸ್ ವಿರುದ್ಧ ಹೋರಾಡಲು ನಿಂತ. ಈಡಿಪಸ್ ಅವನನ್ನೂ ಕೊಂದುಹಾಕಿದ.

ಹಾಗೆ ಈಡಿಪಸ್’ನಿಂದ ಕೊಲ್ಲಲ್ಪಟ್ಟವನು ಥೀಬ್ಸ್ ರಾಜ ಲೇಯಿಯಿಸನೇ ಆಗಿದ್ದ! ಈಡಿಪಸ್’ನ ತಂದೆ ಲೇಯಿಯಸ್!! ಅಲ್ಲಿಗೆ, ದೈವವಾಣಿಯ ಮೊದಲರ್ಧ ನಿಜವಾಗಿತ್ತು.

ಈಡಿಪಸ್’ಗೆ ಇದರ ಅರಿವಿಲ್ಲ. ಕಾರಿಂಥಿನ ಕಡೆ ಕಾಲಿಡಬಾರದೆಂದು ಥೀಬ್ಸ್ ಕಡೆಗೆ ಹೊರಟ. ಅತ್ತ ಥೀಬ್ಸ್’ನಲ್ಲಿ ಲೇಯಿಯಸ್ ಸತ್ತ ಸುದ್ದಿ ತಲ್ಲಣ ಮೂಡಿಸಿತ್ತು. ದರೋಡೆಕೋರರ ಜೊತೆ ಹೋರಾಡುತ್ತಾ ರಾಜ ವೀರಸ್ವರ್ಗ ಕಂಡನೆಂದು ಸೈನಿಕರು ಸುದ್ದಿ ಹಬ್ಬಿಸಿದ್ದರು. ಲೇಯಿಯಸನ ಹೆಂಡತಿ ಜೊಕಾಸ್ಟಳ ತಮ್ಮ ಕ್ರೆಯೋನ್, ಯಾರು ಊರ ಬಾಗಿಲು ಕಾಯುವ ಸ್ಫಿಂಕ್ಸ್ ರಾಕ್ಷಸಿಯ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೋ ಅವರಿಗೆ ರಾಜ್ಯದ ದೊರೆತನವನ್ನು ಕೊಟ್ಟು, ರಾಣಿ ಜೊಕಾಸ್ಟಳೊಂದಿಗೆ ಮದುವೆ ಮಾಡಿಸುವುದಾಗಿ ಡಂಗುರ ಹೊಡೆಸಿದ.

ಈಡಿಪಸ್ ಒಂದು ಕೈ ನೋಡೋಣ ಅಂದುಕೊಂಡು ಸ್ಫಿಂಕ್ಸ್ ಎದುರು ಬಂದು ನಿಂತ. “ಬೆಳಗ್ಗೆ ನಾಲ್ಕು ಕಾಲಿನಲ್ಲಿ, ಮಧ್ಯಾಹ್ನ ಎರಡು ಕಾಲಿನಲ್ಲಿ, ಸಂಜೆ ಮೂರು ಕಾಲಿನಲ್ಲಿ ನಡೆಯುವ ಪ್ರಾಣಿ ಯಾವುದು?” ಸ್ಫಿಂಕ್ಸ್ ಕೇಳಿತು. ಒಂದು ಕ್ಷಣ ಯೋಚಿಸಿದ ಈಡಿಪಸ್, “ಶೈಶವದಲ್ಲಿ ಅಂಬೆಗಾಲಿಟ್ಟ ನಾಲ್ಕು ಕಾಲಿನಲ್ಲಿ, ಬೆಳೆದ ಮೇಲೆ ಎರಡು ಕಾಲಿನಲ್ಲಿ, ಮುದುಕರಾದಾಗ ಊರುಗೋಲಿನ ಆಸರೆ ಪಡೆದು ಮೂರು ಕಾಲಿನಲ್ಲಿ ನಡೆಯುವ ಮನುಷ್ಯನೇ ಆ ಪ್ರಾಣಿ” ಎಂದು ಉತ್ತರಿಸಿದ.

ಸ್ಫಿಂಕ್ಸ್ ಅವನಿಗೆ ಊರೊಳಗೆ ಪ್ರವೇಶಿಸಲು ಅವಕಾಶ ಕೊಟ್ಟು, ತಾನು ಸಮುದ್ರಕ್ಕೆ ಹಾರಿಕೊಂಡಿತು. ಕ್ರೆಯೋನ್ ಥೀಬ್ಸ್ ರಾಜ್ಯವನ್ನು ಈಡಿಪಸ್’ನಿಗೆ ಒಪ್ಪಿಸಿ, ಜೊಕಾಸ್ಟಳನ್ನು ಮದುವೆ ಮಾಡಿಸಿಕೊಟ್ಟ. ಹೀಗೆ ಈಡಿಪಸ್ ತನಗೇ ಅರಿವಿಲ್ಲದೆ ತನ್ನ ತಾಯಿಯನ್ನು ಮದುವೆಯಾದ. ದೈವವಾಣೀಯ ಉತ್ತರಾರ್ಧವೂ ಈ ಮೂಲಕ ನೆರವೇರಿತು. ಅವರಿಬ್ಬರಿಗೆ ನಾಲ್ಕು ಮಕ್ಕಳೂ ಹುಟ್ಟಿದರು.

ಮುಂದೊಮ್ಮೆ ರಾಜ್ಯ ಭೀಕರ ಕ್ಷಾಮಕ್ಕೆ ತುತ್ತಾಗಿ, ಅದಕ್ಕೆ ಕಾರಣವೇನೆಂದು ಡೆಲ್ಫಿಯ ದೇವ ಮಂದಿರದಲ್ಲಿ ವಿಚಾರಿಸಿದಾಗ ‘ತಂದೆಯನ್ನು ಕೊಂದು ತಾಯಿಯನ್ನು ವರಿಸಿದ ಈಡಿಪಸನೇ ಇದಕ್ಕೆ ಕಾರಣ’ ಎಂಬ ಉತ್ತರ ಬಂತು. ಇದನ್ನು ಕೇಳಿ ದುಃಖಿತಳಾದ ಜೊಕಾಸ್ಟ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಪಾಪಪ್ರಜ್ಞೆಯಿಂದ ಕುಗ್ಗಿಹೋದ ಈಡಿಪಸ್, ತನ್ನದೇನೂ ತಪ್ಪಿಲ್ಲದೆ ಇದ್ದರೂ ಖತಿಗೊಂಡ. ಜೊಕಾಸ್ಟಳ ಲಂಗಕ್ಕೆ ಸಿಕ್ಕಿಸಿದ್ದ ಸೂಜಿಯಿಂದ ತನ್ನ ಕಣ್ಣುಗಳನ್ನು ಚುಚ್ಚಿಕೊಂಡು ಕುರುಡುತನ ತಂದುಕೊಂಡ. ಇದೇ ನನ್ನ ಪಾಪಕ್ಕೆ ತಕ್ಕ ಶಿಕ್ಷೆ ಎಂದು ನರಳುತ್ತಾ, ಆಡಳಿತವನ್ನು ಮಕ್ಕಳಿಗೊಪ್ಪಿಸಿ ರಾಜ್ಯ ಬಿಟ್ಟು ಹೊರಟ.

“ತಾಯಿಯನ್ನೆ ಮದುವೆಯಾದ ಈಡಿಪಸ್ ಕಥೆಯ ಕಲ್ಪನೆ ತಾಯಿಯನ್ನು ಸಂಭೋಗಿಸುವ ಗಂಡುಮಕ್ಕಳ ಮನಸ್ಥಿತಿಯನ್ನು ಸೂಚಿಸುತ್ತದೆ” ಅನ್ನೋದು ಸಿಗ್ಮಂಡ್ ಫ್ರಾಯ್ಡನ ವಿವರಣೆ. ಈ ಮನಸ್ಥಿತಿಯನ್ನು ಫ್ರಾಯ್ಡ್ ‘ಈಡಿಪಸ್ ಕಾಂಪ್ಲೆಕ್ಸ್’ ಎಂದೇ ಕರೆದಿದ್ದಾನೆ.

1 Comment

  1. ಗ್ರೀಕ್ ಪುರಾಣಗಳು ಮೂಲತಃ ಹಿಂದೂ ಪುರಾಣಗಳಿಂದಲೇ ಪ್ರಭಾವಿಗೊಂಡಿವೆ. ತುಲನಾತ್ಮಕವಾಗಿ ಬರೆದರೆ ಇನ್ನೂ ಚೆನ್ನು

Leave a Reply