ಹೆಚ್ಚು SQ ಹೊಂದಿರುವವರು ಸುಖ, ಶಾಂತ ಜೀವನ ನಡೆಸುತ್ತಾರೆ. ಇವರು ಧರ್ಮಭೀರುಗಳಾಗಿರಲೇಬೇಕೆಂದಿಲ್ಲ. ಇಂಥವರು ನಾಸ್ತಿಕರಾಗಿರಲೂಬಹುದು. ಆದರೆ ಹೆಚ್ಚು SQ ಹೊಂದಿದವರು ಅಧರ್ಮಿಗಳಾಗಿರುವುದಿಲ್ಲ. ಇಂದು ನಮ್ಮ ಸಮಾಜಕ್ಕೆ ಅಧರ್ಮಿಗಳಲ್ಲದವರ ಅಗತ್ಯ ಹೆಚ್ಚಿದೆ ~ ಗಾಯತ್ರಿ
ಸ್ಪಿರಿಚುವಲ್ ಕೋಶೆಂಟ್ ಅಂದರೆ ಆಧ್ಯಾತ್ಮಿಕ ಅರಿವು. ಯಾವ ಅರಿವು ವ್ಯಕ್ತಿಯನ್ನು ಪ್ರಜ್ಞಾಪೂರ್ವಕವಾಗಿ ಮನುಷ್ಯರನ್ನಾಗಿರಿಸುತ್ತದೆಯೋ, ಯಾವ ಅರಿವು ಸಜ್ಜನಿಕೆಯನ್ನು ನೀಡುತ್ತದೆಯೋ, ಯಾವ ಅರಿವು ಸಹಜೀವಿಗಳೊಡನೆ ಬೆರೆತು ಬಾಳುವ ಪ್ರೇರಣೆ ನೀಡುತ್ತದೆಯೋ ಆ ಅರಿವು ಯಾವ ಮಟ್ಟದಲ್ಲಿದೆ, ಯಾರಲ್ಲಿ ಎಷ್ಟಿದೆ ಎಂದು ಅಳೆಯುವ ಮಾಪನವೇ ಸ್ಪಿರಿಚುವಲ್ ಕೋಶೆಂಟ್ ಅಥವಾ SQ. ನಮ್ಮ ಸುತ್ತಲಿನ ಸಂಗತಿಗಳನ್ನು, ಸಹಜೀವಿಗಳನ್ನು, ಅವರ ವರ್ತನೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ, ಸ್ಪಂದಿಸುವ ಮತ್ತು ಸಹಾನುಭೂತಿ ತೋರುವ ನಿಟ್ಟಿನಲ್ಲಿ ನಮ್ಮ ಸಾಮರ್ಥ್ಯ ಎಷ್ಟಿದೆ ಅನ್ನುವುದರ ಮೇಲೆ ನಮ್ಮ SQ ಎಷ್ಟಿದೆ ಅನ್ನುವುದು ನಿರ್ಧಾರವಾಗುತ್ತದೆ.
ವ್ಯಕ್ತಿಯಲ್ಲಿ SQ ಎಷ್ಟು ಹೆಚ್ಚಿದೆಯೋ ಅಷ್ಟು ಅವರು ಸಮಾಜದಲ್ಲಿ ಪ್ರೀತಿ – ಗೌರವಗಳಿಗೆ ಪಾತ್ರರಾಗುತ್ತಾರೆ. ಸ್ವತಃ ಅವರ ಬದುಕು ಬಹಿರಂತರಂಗ ಪ್ರಗತಿಯಿಂದ ಕೂಡಿರುತ್ತದೆ. ಹೆಚ್ಚು SQ ಹೊಂದಿರುವವರು ಸುಖ, ಶಾಂತ ಜೀವನ ನಡೆಸುತ್ತಾರೆ. ಇವರು ಧರ್ಮಭೀರುಗಳಾಗಿರಲೇಬೇಕೆಂದಿಲ್ಲ. ಇಂಥವರು ನಾಸ್ತಿಕರಾಗಿರಲೂಬಹುದು. ಆದರೆ ಹೆಚ್ಚು SQ ಹೊಂದಿದವರು ಅಧರ್ಮಿಗಳಾಗಿರುವುದಿಲ್ಲ. ಇಂದು ನಮ್ಮ ಸಮಾಜಕ್ಕೆ ಅಧರ್ಮಿಗಳಲ್ಲದವರ ಅಗತ್ಯ ಹೆಚ್ಚಿದೆ.
ಆಧ್ಯಾತ್ಮಿಕ ಅರಿವು ಅಥವಾ ಸ್ಪಿರಿಚುವಲ್ ಕೋಶೆಂಟ್ ಅನ್ನು ಹಲವು ಮಾನದಂಡಗಳಲ್ಲಿ ಅಳೆಯಲಾಗುತ್ತದೆ. ವ್ಯಕ್ತಿಯು ಎಷ್ಟು ಸಮಾಜಮುಖಿಯಾಗಿದ್ದಾನೆ, ಶೋಧನಾ ನಿರತನಾಗಿದ್ದಾನೆ (ಆಂತರಿಕ ಶೋಧನೆ), ಕಲಾತ್ಮಕ ಪ್ರವೃತ್ತಿಯವನಾಗಿದ್ದಾನೆ, ವಾಸ್ತವ ಪ್ರಜ್ಞೆಯುಳ್ಳವನಾಗಿದ್ದಾನೆ ಇತ್ಯಾದಿಗಳ ಆಧಾರದ ಮೇಲೆ ಆತನ ಆಧ್ಯಾತ್ಮಿಕತೆಯನ್ನು ಅಳೆಯಲಾಗುತ್ತದೆ. ಯಾರು ಒತ್ತಡರಹಿತ ಜೀವನ ನಡೆಸುತ್ತಾರೋ, ಪ್ರತಿಯೊಂದು ಸಮಸ್ಯೆಗೂ ತಾವೇ ಮೂಲ ಎಂಬುದನ್ನರಿತುಕೊಂಡು ಪರಿಹಾರವನು ತಮ್ಮೊಳಗೇ ಹುಡುಕುತ್ತಾರೋ, ದುಶ್ಚಟಗಳಿಂದ ದೂರವಿರುತ್ತಾರೋ, ಸಮಾಜದ ಹಿತಚಿಂತನೆಯಲ್ಲಿ ತೊಡಗಿರುತ್ತಾರೋ, ಆತ್ಮವಿಶ್ವಾಸಿಗರಾಗಿರುತ್ತಾರೋ ಅವರ ಎಸ್‍ಕ್ಯೂ ಅತ್ಯುನ್ನತ ಸ್ತರದಲ್ಲಿರುತ್ತದೆ.
ಇಂಟೆಲಿಜೆನ್ಸ್ ಕೋಶೆಂಟ್ (IQ) ನಮ್ಮ ಎಡ ಮಿದುಳಿನಲ್ಲಿದ್ದರೆ, ಇಮೋಶನಲ್ ಕೋಶೆಂಟ್ (EQ) ನಮ್ಮ ಬಲ ಮಿದುಳಿನಲ್ಲಿರುತ್ತದೆ. ಆದರೆ ಸ್ಪಿರಿಚುವಲ್ ಕೋಶೆಂಟ್ (SQ) ನಮ್ಮ ಸಂಪೂರ್ಣ ಮಿದುಳನ್ನು ಆವರಿಸಿಕೊಂಡಿರುತ್ತದೆ. IQ, EQ ಮತ್ತು SQಗಳನ್ನು ಪಿರಮಿಡ್ ಆಕೃತಿಯಲ್ಲಿ ಹೊಂದಿಸಿದರೆ, ಐಕ್ಯೂ ಪಿರಮಿಡಡಿನ ತುತ್ತ ತುದಿ, ಎಸ್‍ಕ್ಯೂ ತಳಪಾಯದಂತೆ. ಸ್ಪಿರಿಚುವಲ್ ಕೋಶೆಂಟ್‍ನ ಪ್ರಮಾಣದ ಮೇಲೆ ಉಳಿದೆರಡರ ಸಾರ್ಥಕತೆ ನಿರ್ಧಾರಗೊಳ್ಳುತ್ತದೆ.
ಪಿರಮಿಡ್ಡಿನ ತುದಿ ದೂರದೂರಕ್ಕೂ ಕಾಣುವಂತೆ ಐಕ್ಯೂ ಬಹಳ ಬೇಗ ಗಮನಕ್ಕೆ ಬರುವಂಥದ್ದು. ಆದರೆ ಅದರ ಮಹತ್ವ ಆ ತುದಿಯ ವ್ಯಾಪ್ತಿಯಷ್ಟೇ ಸಂಕುಚಿತವಾಗಿರುತ್ತದೆ. ಹಾಗೆಯೇ ಹತ್ತಿರ ಬರದ ಹೊರತು ಸುಲಭಕ್ಕೆ ಕಾಣಸಿಗದ ತಳಪಾಯದಂತೆ ಸ್ಪಿರಿಚುವಲ್ ಕೋಶೆಂಟ್ ಕೂಡಾ. ಮಹತ್ವದ ದೃಷ್ಟಿಯಿಂದಲೂ ಅದು ತಳಪಾಯದಷ್ಟೇ ಪ್ರಾಮುಖ್ಯತೆಯುಳ್ಳದ್ದು, ವ್ಯಾಪ್ತವಾದದ್ದು.
ಆದ್ದರಿಂದ ಮನುಷ್ಯನ ಶ್ರೇಷ್ಠತೆಯನ್ನು ಅಳೆಯುವಾಗ ಆತನ ಐಕ್ಯೂ ಕಂಡು ಮರುಳಾಗಬಾರದು. ಎಸ್‍ಕ್ಯೂ ಆಧಾರದ ಮೇಲೆ ಆ ವ್ಯಕ್ತಿಗೆ ಪ್ರಾಮುಖ್ಯತೆ ನೀಡಬೇಕು. ಏಕೆಂದರೆ ಕೊನೆಗೂ ನಮ್ಮನ್ನು, ನಮ್ಮ ಸಮಾಜವನ್ನು ಕಾಯುವುದು ಅಂತರಂಗದ ಗಟ್ಟಿತನವೇ ಹೊರತು ತೋರುಗಾಣಿಕೆಯ ಬುದ್ಧಿವಂತಿಕೆಯಲ್ಲ, ಅಲ್ಲವೆ?