ಬದುಕುವ ಇಚ್ಛೆ ಎಂದರೇನು? : ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನ ಉತ್ತರ

ಎಂತಹ ಹೀನಸ್ಥಿತಿಯಲ್ಲಿ ಜೀವಿಸುವವರೂ ಪ್ರಾಣ ಕಳೆದುಕೊಳ್ಳಲು ಬಯಸುವುದಿಲ್ಲ. ಜೀವಿಗಳಲ್ಲಿರುವ ಈ ‘ಬದುಕುವ ಇಚ್ಛೆ’ಯ ವಿಶೇಷವನ್ನು ದಯವಿಟ್ಟು ಅರ್ಥಮಾಡಿಸಿ” ಎಂದು ಯುಧಿಷ್ಠಿರ ಕೇಳಿಕೊಂಡಾಗ ಭೀಷ್ಮ ಒಂದು ದೃಷ್ಟಾಂತದ ಮೂಲಕ ಉತ್ತರಿಸುತ್ತಾರೆ…


ಶರಶಯ್ಯೆಯ ಮೇಲೆ ಮಲಗಿದ್ದ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧಿಸಿದನು. ಈ ಸಂದರ್ಭ ‘ಬದುಕುವ ಇಚ್ಛೆ’ಯ ಕುರಿತು ಯುಧಿಷ್ಠಿರ ತಿಳಿಯಬಯಸಿದನು. ಪ್ರತಿಯೊಂದು ಜೀವಿಗೂ ತನ್ನದೇ ಬದುಕಿದೆ ಮತ್ತು ಬದುಕಿನ ಇಚ್ಛೆಯಿದೆ ಎಂದು ಹೇಳುತ್ತಾ ವ್ಯಾಸ ಮತ್ತು ಇರುವೆಯ ನಡುವೆ ನಡೆದ ಸಂವಾದವನ್ನು ಉಲ್ಲೇಖಿಸಿದನು. ಈ ಸಂವಾದ ಹೀಗಿದೆ:
ಯುಧಿಷ್ಠಿರನ ಪ್ರಶ್ನೆ: “ಪಿತಾಮಹ! ಉದ್ದೇಶ ಎಷ್ಟೇ ಮಹತ್ತರವಾಗಿರಲಿ, ಪ್ರಾಣತ್ಯಾಗ ಮಾಡುವುದು ಎಲ್ಲರಿಗೂ ಸಾಧ್ಯವಾಗದ ಸಂಗತಿ. ಪ್ರಪಂಚದಲ್ಲಿ ಪ್ರತಿ ಜೀವಿಗೆ ಬದುಕಬೇಕೆಂಬ ಅಭಿಲಾಷೆಯಿರುತ್ತದೆ. ಎಂತಹ ಹೀನಸ್ಥಿತಿಯಲ್ಲಿ ಜೀವಿಸುವವರೂ ಪ್ರಾಣ ಕಳೆದುಕೊಳ್ಳಲು ಬಯಸುವುದಿಲ್ಲ. ಜೀವಿಗಳಲ್ಲಿರುವ ಈ ‘ಬದುಕುವ ಇಚ್ಛೆ’ಯ ವಿಶೇಷವನ್ನು ದಯವಿಟ್ಟು ಅರ್ಥಮಾಡಿಸಿ.
ಭೀಷ್ಮನ ಉತ್ತರ : ಧರ್ಮನಂದನ! ಈ ವಿಷಯದಲ್ಲಿ ನಾನು ಬಹಳ ಹಿಂದೆ ಕೇಳಿದ್ದ ‘ವ್ಯಾಸ-ಕೀಟ ಸಂವಾದ’ವನ್ನೇ ನಿನಗೆ ಹೇಳುತ್ತೇನೆ, ಕೇಳು.
ಒಮ್ಮೆ ವ್ಯಾಸ ಮಹರ್ಷಿಯು ಎಲ್ಲಿಗೋ ಹೋಗುತ್ತಿದ್ದರು. ಅದೇ ದಾರಿಯಲ್ಲಿ ಒಂದು ಎತ್ತಿನ ಬಂಡಿ ಸಾಗುತ್ತಿತ್ತು. ಬಂಡಿಯ ಚಕ್ರದ ಶಬ್ದಕ್ಕೆ ಭಯಪಟ್ಟು ಒಂದು ಇರುವೆಯು ಅದರಿಂದ ತಪ್ಪಿಸಿಕೊಳ್ಳಲು ಅದೇ ದಾರಿಯಲ್ಲಿ ಜೋರಾಗಿ ಹೋಗುತ್ತಿತ್ತು. ಇದನ್ನು ವ್ಯಾಸ ಮಹರ್ಷಿ ಗಮನಿಸಿದರು, ಮತ್ತು ಇರುವೆಯನ್ನು ಕೇಳಿದರು, “ಓ ಇರುವೆಯೇ! ಏಕೆ ಈ ಧಾವಂತ? ಏಕೆ ಹೀಗೆ ರಭಸದಿಂದ ಓಡುತ್ತಿದ್ದೀಯಾ?”
ಇರುವೆ ಏದುಸಿರು ಬಿಡುತ್ತಾ ಹೇಳಿತು, “ಮಹಾತ್ಮರೇ! ಈ ಎತ್ತಿನ ಬಂಡಿಯು ನನ್ನ ಮೈಮೇಲೇ ಬರುವಂತೆ ಅನಿಸುತ್ತಿದೆ. ಅದರ ಚಕ್ರದ ಶಬ್ದವನ್ನು ಕೇಳಿಯೇ ನನ್ನ ಎದೆಯು ಗಡಗಡ ನಡುಗುತ್ತಿದೆ. ಬಂಡಿಯಲ್ಲಿ ಕುಳಿತವರು ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಎತ್ತುಗಳು ಏದುಸಿರು ಬಿಡುತ್ತಾ ಓಡುತ್ತಿವೆ. ಬಂಡಿಯವನು ಅವುಗಳನ್ನು ಬಾರುಕೋಲಿನಿಂದ ಹೊಡೆಯುತ್ತಿದ್ದಾನೆ . ಈ ಎಲ್ಲದರಿಂದ ನನಗೆ ವಿಪರೀತ ಭಯವಾಗುತ್ತಿದೆ. ಬಂಡಿಯ ಚಕ್ರಕ್ಕೆ ಸಿಕ್ಕು ಸತ್ತುಹೋಗುತ್ತೀನೋ ಅನಿಸುತ್ತಿದೆ” ಎಂದು ಮತ್ತೆ ಓಡತೊಡಗಿತು.
ಇರುವೆಯ ಮಾತು ಕೇಳಿ ವ್ಯಾಸರು ಹೇಳಿದರು, “ನಿನ್ನ ಜೀವ ಹೋದರೆ ಒಳ್ಳೆಯದಲ್ಲವೆ? ನೀನು ಕೀಟಯೋನಿಯಿಂದ ಮುಂದುವರಿದು ವಿಕಸಿತ ಶರೀರದಲ್ಲಿ ಹುಟ್ಟಬಹುದು. ಮರಣದಲ್ಲೇ ನಿನಗೆ ಸುಖವಿದೆ ಎಂದು ನನ್ನ ಭಾವನೆ”
ವ್ಯಾಸರ ಮಾತು ಕೇಳಿ ಇರುವೆ ಕ್ಷಣ ಕಾಲ ನಿಂತಿತು. ಆಮೇಲೆ, “ಮಹಾನುಭಾವಾ! ಜೀವಿಗಳು ಯಾವ ಯೋನಿಯಲ್ಲಿ ಜನಿಸಿದರೂ ಸಹ ಅವುಗಳಿಗೆ ಅದರಲ್ಲಿಯೇ ಸುಖಾನುಭೂತಿ ಇರುತ್ತದೆ. ನನಗೂ ಸಹ ಈ ಶರೀರದಲ್ಲಿ ಸುಖವಿದೆ. ಅದಕ್ಕಾಗಿಯೇ ನಾನು ಬದುಕಿರಬೇಕು ಎಂದು ಬಯಸುತ್ತಿದ್ದೇನೆ. ನನಗೂ ಸಹ ಈ ಶರೀರಕ್ಕೆ ಸರಿಹೊಂದುವ ಎಲ್ಲಾ ವಿಧವಾದ ಸುಖ ದುಃಖಗಳು ನನಗಿವೆ; ಅವು ಇತರ ಯಾವುದೇ ಪ್ರಾಣಿ ಅಥವಾ ಮನುಷ್ಯರ ಸುಖಕ್ಕಿಂತ ಬೇರೆಯಾಗಿರಬಹುದು. ನನ್ನ ಸುಖ ನನ್ನದು. ನನಗೆ ಈ ಶರೀರದಲ್ಲಿ ಬದುಕುವ ಇಚ್ಛೆಯಿದೆ” ಅಂದಿತು.
ಇರುವೆಯ ಮಾತು ವ್ಯಾಸರಿಗೆ ಒಪ್ಪಿತವಾಯಿತು. ಅದರ ತಾರ್ಕಿಕ ಬುದ್ಧಿಯನ್ನು ಮೆಚ್ಚಿಕೊಂಡರು.
“ಆದ್ದರಿಂದ ಹೇ ಯುಧಿಷ್ಠಿರ! ಪ್ರಪಂಚದಲ್ಲಿ ಪ್ರತಿ ಜೀವಿಗೆ ಪ್ರಾಣದ ಮೇಲೆ ಮಮಕಾರವಿರುತ್ತದೆ. ಕೇವಲ ಪ್ರಾಣಿ ಪಕ್ಷಿಗಳಿಗಷ್ಟೇ ಅಲ್ಲ, ಮರ ಗಿಡಗಳಿಗೂ ಇರುತ್ತದೆ. ಸುಖದುಃಖ ಭಾವನೆ ಎನ್ನುವುದು ಸಕಲ ಜೀವಿಗಳಿಗೂ ಸಮಾನವಾದುದು. ಹಾಗಿರುವಾಗ ಸರ್ವಭೂತ ದಯೆ ಎನ್ನುವುದು ಪ್ರತಿ ವ್ಯಕ್ತಿಯೂ ತಪ್ಪದೇ ಆಚರಿಸಬೇಕಾದ ಧರ್ಮವಾಗಿದೆ.
ಈ ಪ್ರಪಂಚಕ್ಕೆ ಕೇಂದ್ರ ಬಿಂದುವಾದನು ಮನುಷ್ಯ. ಸಮಸ್ತ ಸೃಷ್ಟಿಯಲ್ಲಿ ಈ ಮನುಷ್ಯ ಒಂದು ಅಂಶ ಮಾತ್ರ, ಆದರೆ ಅವನು ಉತ್ತಮವಾದ ಅಂಶ. ಈ ಸಮಸ್ತ ಸೃಷ್ಟಿಗೆ ಕೇಂದ್ರ ಬಿಂದುವಾಗಿರುವ ಮೂಲ ಚೈತನ್ಯವೊಂದಿದೆ. ಆ ಚೈತನ್ಯವನ್ನೇ ಭಗವತ್ ತತ್ತ್ವ ಎಂದು ಕರೆಯುವುದು. ಆದ್ದರಿಂದ ಮನುಷ್ಯನು ಜೀವಿಸಲಿಕ್ಕಾಗಿ, ಸುಖವನ್ನು ಪಡೆಯಲಿಕ್ಕಾಗಿ ಉಳಿದ ಜೀವರಾಶಿಯನ್ನು ಬಾಧೆಗೊಳಪಡಿಸುವುದು, ಹಿಂಸಿಸುವುದು ತಪ್ಪು. ಜೀವಿಸುವ ಇಚ್ಛೆಯು ಸಮಾನವಾಗಿ ಇರುವ ಇತರ ಜೀವಿಗಳ ಹಿತಕ್ಕಾಗಿ ಶ್ರಮಿಸುವವನೇ ಉತ್ತಮನಾದ ಜೀವಿ. ಮನುಷ್ಯ ಇದನ್ನು ಸದಾ ಕಾಲ ನೆನಪಿಟ್ಟುಕೊಳ್ಳಬೇಕು.

Leave a Reply