ಪ್ರತಿಯೊಬ್ಬರೂ ತಮ್ಮ ಪಾಲಿನ ಸತ್ಯವನ್ನಷ್ಟೆ ಕಂಡುಕೊಳ್ಳಬಲ್ಲರು

ಯಾವುದೇ ಒಂದು ವಿಚಾರವನ್ನಾಗಲೀ ಅಥವಾ ಸಿದ್ಧಾಂತವನ್ನಾಗಲೀ ಯಾರೋ ಒಬ್ಬರು ಫ್ರೇಮ್ ಹಾಕಿ ಕೂರಿಸಲು ಬರುವುದಿಲ್ಲ.  ಅವರು ಕಂಡುಕೊಂಡಿರುವುದು ಸತ್ಯವೇ ಆದರೂ ಅದು ಅವರ ಪಾಲಿನ ಸತ್ಯ. ಅದು ಕೇವಲ ಅವರ ಪಾಲಿನ ದರ್ಶನ ಮಾತ್ರವಷ್ಟೆ ಅನ್ನುವುದನ್ನು ನಾವು ಅರಿತುಕೊಳ್ಳಬೇಕು. ~  ಜಿಡ್ಡು ಕೃಷ್ಣಮೂರ್ತಿ

jiddu-krishnamurtiದುಕಿಗೆ ನಿಜಕ್ಕೂ ಒಂದು ಅರ್ಥ ಎಂಬುದು ಇದೆಯಾ, ನಾವು ಆಚರಿಸುವ ಧರ್ಮಗಳು, ಈ ಯುದ್ಧ, ಸಂಪ್ರದಾಯಗಳು, ಹಿಂಸೆ, ಭಿನ್ನ ಭಿನ್ನವಾಗಿ ಹೊರಹೊಮ್ಮುವ ಕ್ರೌರ್ಯ, ನಮ್ಮ ಐಡಿಯಾಲಜಿಗಳು – ಏನು ಇವೆಲ್ಲಾ? ನಿಜಕ್ಕೂ ಇದೇ ನಮ್ಮ ಜೀವನವಾ? ಅಥವಾ ಇದಕ್ಕೂ ಮೀರಿದ್ದು ಇನ್ನೇನಾದರೂ ಇದೆಯಾ ?

ಶತಮಾನಗಳಿಂದ ನಮ್ಮ ಗುರುಗಳು, ನಮ್ಮ ಶಿಕ್ಷಣ ಎಲ್ಲವೂ ನಮಗೆ ಕಲಿಸಿದ್ದನ್ನು ಪಾಲಿಸುತ್ತಾ ಬಂದಿದ್ದೇವೆ. ನಾವೊಂಥರಾ ಸೆಕೆಂಡ್ ಹ್ಯಾಂಡ್ ಮನುಷ್ಯರು. ಇಲ್ಲಿ ನಮ್ಮದು ಎಂಬುದೇನೂ ಇಲ್ಲ. ಅಥವಾ ನಾವು ಅದನ್ನು ಪ್ರಶ್ನೆಯೂ ಮಾಡುವುದಿಲ್ಲ. ನಮ್ಮ ಮೇಲೆ ಏನೋ ಒಂದು ರಿವಾಜನ್ನು ಹೇರಿ ಅದನ್ನು ಪಾಲಿಸಬೇಕು ಅಂದರೂ ನಾವು ಅದನ್ನು ಪ್ರಶ್ನೆ ಮಾಡದೇ ಒಪ್ಪಿಕೊಳ್ಳುತ್ತೇವೆ. ಇದುವರೆಗೂ ನಮ್ಮವರು ನಮಗೆ ಹೇಳಿಕೊಟ್ಟಿದ್ದು ಬಿಟ್ಟರೆ ನಮ್ಮ ಚಿತ್ತಭಿತ್ತಿಯಲ್ಲಿ ಬೇರೇನೂ ಇಲ್ಲವೇ ಇಲ್ಲ.

ನಮ್ಮಲ್ಲಿ ಸಂಬಂಧಗಳು ಎಂದರೆ ಅದಕ್ಕೊಂದು ಚೌಕಟ್ಟಿರುತ್ತದೆ. ನಮ್ಮಲ್ಲಿ ಶಾಲೆಗಳು ಎಂದರೆ ಅಲ್ಲಿ ಶಿಸ್ತು ಮತ್ತು ಸ್ಪರ್ಧೆಗಳಿವೆ. ಹೀಗೆ ಎಲ್ಲಕ್ಕೂ ಒಂದೊಂದು ಚೌಕಟ್ಟು ಮತ್ತು ಪದ್ಧತಿಗಳನ್ನು ನಾವೇ ಹೇರಿಕೊಂಡು, ಕಲಿಸಿದ್ದನ್ನು ಕಲಿತುಕೊಂಡು ಸುಮ್ಮನೆ ಇದ್ದುಬಿಟ್ಟಿದ್ದೇವೆ. ಹಾಗೂ ಅದಕ್ಕೆ ವ್ಯತಿರಿಕ್ತವಾಗಿ ಸಮಸ್ಯೆಗಳು ಎದುರಾದಾಗ ಕಂಗಾಲಾಗಿ ಯೋಚಿಸುತ್ತಾ ಸ್ವಾತಂತ್ರ್ಯವನ್ನು ಧ್ಯಾನಿಸುತ್ತಾ ಅಸಹಾಯಕರಾಗಿ ಕೂಗಾಡುತ್ತೇವೆ. ಅಲ್ಲವೆ? ಹಾಗಾದರೆ ಮಾಡಬೇಕಾದ್ದೇನು? ಈ ಪ್ರಶ್ನೆಗಳನ್ನು ಕೇಳಿಕೊಳ್ಳುವ ಸಾಹಸವನ್ನೇ ನಾವು ಮಾಡುವುದಿಲ್ಲ. ನಮಗೆ ಯಾರೋ ಕಡೆದಿಟ್ಟ ದಾರಿಯಲ್ಲಿ ನಡೆಯುವುದೇ ಸುಖ. ಇದರಿಂದ ಹೊರಗೆ ಬರುವುದು ಹೇಗೆ?

ಎಲ್ಲಕ್ಕಿಂತ ಮೊದಲು, ಸತ್ಯಕ್ಕೆ ಇಂಥದ್ದೇ ಎನ್ನುವ ನಿಖರವಾದ ಯಾವ ದಾರಿಗಳೂ ಇಲ್ಲ ಎಂಬುದು ನಮಗೆ ಖಾತ್ರಿಯಾಗಬೇಕು. ಯಾವುದೇ ಒಂದು ವಿಚಾರವನ್ನಾಗಲೀ ಅಥವಾ ಸಿದ್ಧಾಂತವನ್ನಾಗಲೀ ಯಾರೋ ಒಬ್ಬರು ಫ್ರೇಮ್ ಹಾಕಿ ಕೂರಿಸಲು ಬರುವುದಿಲ್ಲ. ಅವರು ಕಂಡುಕೊಂಡಿರುವುದು ಸತ್ಯವೇ ಆದರೂ ಅದು ಅವರ ಪಾಲಿನ ಸತ್ಯ. ಅದು ಕೇವಲ ಅವರ ಪಾಲಿನ ದರ್ಶನ ಮಾತ್ರವಷ್ಟೆ ಅನ್ನುವುದನ್ನು ನಾವು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ನಮಗೆ ಪ್ರಶ್ನೆ ಮಾಡುವುದು ಸಾಧ್ಯವಾಗಬೇಕು. ಮತ್ತು ಸರಿ ಕಾಣದೆ ಹೋದದ್ದನ್ನು ತಿರಸ್ಕರಿಸಲು ಸಾಧ್ಯವಾಗಬೇಕು. ಕೆಲವೊಮ್ಮೆ ನಾವು ಯಾರದ್ದೋ ನಿರ್ದಿಷ್ಟ ವಿಚಾರವನ್ನು ಮೂರ್ಖರಂತೆ ಅನುಸರಿಸುತ್ತಿದ್ದೇವೆ ಎಂದು ನಮಗೆ ಗೊತ್ತಾದರೂ ಅದನ್ನು ತಿರಸ್ಕರಿಸಲು ಹೋಗುವುದಿಲ್ಲ. ಆದ್ದರಿಂದಲೇ ನಮಗೆ ನಮ್ಮ ಪಾಲಿನ ದಾರಿಯನ್ನು, ಸರಿಯಾದ ದಾರಿಯನ್ನು ಹುಡುಕಿಕೊಳ್ಳಲು ಸಾಧ್ಯವಾಗುವುದಿಲ್ಲ.

ಅದು ಸಾಧ್ಯವಾಗಬೇಕು ಎಂದರೆ ನಾವು ಅದಕ್ಕಾಗಿ ದೃಢ ನಿರ್ಧಾರ ಮಾಡಬೇಕು. ಈ ಭೂಮಿಯ ಮೇಲೆ ಇಂದೇ ಜನಿಸಿ, ಇವತ್ತೊಂದು ದಿನ ಮಾತ್ರ ಬದುಕಿರುತ್ತೇವೆ ಎಂದು ಭಾವಿಸಿ, ಮೊಟ್ಟ ಮೊದಲ ಬಾರಿಗೆ ನಮ್ಮ ಬಗ್ಗೆ ನಾವು ಅರಿಯುತ್ತಾ ಹೊಸತನ್ನು ಶುರುಮಾಡಬೇಕು. ಆಗ ನಮಗೆ ನಮ್ಮದೇ ದಾರಿಯನ್ನು ರೂಪಿಸಿಕೊಳ್ಳಲು ಸಾಧ್ಯವಾಗಬಹುದು.

2 Comments

  1. ಅರಳಿಮರದಿಂದ ಪ್ರಕಟವಾಗುವ ನಿತ್ಯದ ಉಪಯುಕ್ತವಾದ ಮಾಹಿತಿಗಳನ್ನು ಕರುಣಿಸುವ ಎಲ್ರಿಗೂ ಕೋಟಿ ಶರಣು ಶರಣಾರ್ಥಿಗಳು.

Leave a Reply