ಪ್ರೇಮದ ಅಭಿವ್ಯಕ್ತಿಗೆ 5 ಭಾಷೆಗಳಿವೆ; ಯಾವುವು ಗೊತ್ತೇ!?

ಹಲವಾರು ವರ್ಷಗಳ ಸತತ ಅಭ್ಯಾಸದ ನಂತರ ಸಂಬಂಧಗಳ ವಿಷಯದ ಪ್ರಸಿದ್ಧ ಸಲಹಾಕಾರ ಡಾ. ಗ್ಯಾರಿ ಚಾಪ್’ಮನ್ ಪ್ರೇಮಕ್ಕೆ ಸಂಬಂಧಿಸಿದಂತೆ ನಮ್ಮ ಮಧ್ಯೆ ಬಳಕೆಯಾಗುವ ಐದು ಭಾಷೆಗಳ ಬಗ್ಗೆ ತನ್ನ ಪುಸ್ತಕ ‘Five Love Languages’ ದಲ್ಲಿ ಪ್ರಸ್ತಾಪ ಮಾಡುತ್ತಾನೆ. ಈ ಪ್ರೇಮಭಾಷೆಗಳು ಯಾವುವು? ಅವುಗಳ ಪ್ರಾಮುಖ್ಯವೇನು? ಈ ಲೇಖನದಲ್ಲಿ ನೋಡೋಣ… ~ ಚಿದಂಬರ ನರೇಂದ್ರ


ಗಂಡು ಹೆಣ್ಣಿನ ನಡುವಿನ ಪ್ರೇಮದ ಕೊಡು ಕೊಳ್ಳುವಿಕೆಯ ಬಗ್ಗೆ ಬೇಂದ್ರೆ ಹೀಗೆ ಅದ್ಭುತವಾಗಿ ಹಾಡುತ್ತಾರೆ.
ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು.
ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ.
ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ.
ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು.
ಕುಂದುಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು.

“Unconditional Love, ನಿರೀಕ್ಷೆಗಳನ್ನು ಮೀರಿದಾಗ ಮಾತ್ರ ಪ್ರೇಮ” ಎಂಬ ಭಾರದ ಮಾತುಗಳ ನಡುವೆ, ಬದುಕಿನ ಬವಣೆಯಲ್ಲಿ ತಮ್ಮ ಸಂಬಂಧಗಳನ್ನು ಕೆಲವೊಮ್ಮೆ ಎಳೆಯುತ್ತ, ಒಮ್ಮೊಮ್ಮೆ ನೂಕುತ್ತ ಬಾಳಲು ಪ್ರಯತ್ನಿಸುವ ಜನ ಸಾಮಾನ್ಯರು ತಮ್ಮ ನಡುವಿನ ಪ್ರೇಮವನ್ನು ಒರೆಗೆ ಹಚ್ಚಲು ಕೆಲವು ಸುಲಭ ಪರೀಕ್ಷಾ ವಿಧಾನಗಳನ್ನು ಬಳಸುತ್ತಾರೆ.
ಹಲವಾರು ವರ್ಷಗಳ ಸತತ ಅಭ್ಯಾಸದ ನಂತರ ಸಂಬಂಧಗಳ ವಿಷಯದ ಪ್ರಸಿದ್ಧ ಸಲಹಾಕಾರ ಡಾ. ಗ್ಯಾರಿ ಚಾಪ್’ಮನ್ ಪ್ರೇಮಕ್ಕೆ ಸಂಬಂಧಿಸಿದಂತೆ ನಮ್ಮ ಮಧ್ಯೆ ಬಳಕೆಯಾಗುವ ಐದು ಭಾಷೆಗಳ ಬಗ್ಗೆ ತನ್ನ ಪುಸ್ತಕ ‘Five Love Languages’ ದಲ್ಲಿ ಪ್ರಸ್ತಾಪ ಮಾಡುತ್ತಾನೆ.
1. ಪ್ರಮಾಣದ ಭಾಷೆ :
ಕೆಲವರು ತಮ್ಮ ಜೊತೆಗಾರರಿಂದ ಸ್ಷಷ್ಟ ಮಾತುಗಳಲ್ಲಿ ತಮ್ಮ ಪ್ರೇಮದ ಧೃಢಿಕರಣವನ್ನು ಬಯಸುತ್ತಾರೆ. ಉದಾಹರಣೆಗೆ, I LoveYou, ನೀನು ತುಂಬ ಚೆನ್ನಾಗಿ ಕಾಣ್ತಿದೀಯ, ನಿನ್ನ ನಗುವಿನ ಶೈಲಿ ನನಗಿಷ್ಟ…ಇತ್ಯಾದಿ. ಈ ಥರದ ಸ್ಷಷ್ಟ ಉಲ್ಲೇಖಗಳು ತಮ್ಮ ಜೊತೆಗಾರರಿಂದ ಬಾರದಿದ್ದ ಸಂದರ್ಭದಲ್ಲಿ ಅವರು ತಮ್ಮ ಪ್ರೇಮದಲ್ಲಿ ಕೊರತೆಯಿದೆಂದು ಭಾವಿಸುತ್ತಾರೆ.
2. ಸಹಕಾರದ ಭಾಷೆ :
ಮನೆ ಕೆಲಸದಲ್ಲಿ ಸಹಾಯ ಮಾಡುವುದು, ಮಕ್ಕಳಿಗೆ ಅಭ್ಯಾಸ ಮಾಡಿಸುವುದು, ಅತಿಥಿಗಳು ಮನೆಗೆ ಬಂದಾಗ ಮುಂದೆ ನಿಂತು ಸತ್ಕಾರ ಮಾಡುವುದು ಇವೇ ಮೊದಲಾದ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತಮ್ಮ ಜೊತೆಗಾರ/ ಗಾತಿ ತಮ್ಮೊಡನೆ ಪಾಲ್ಗೊಳ್ಳುವ ರೀತಿಯಲ್ಲಿಯೇ ಕೆಲವರು ತಮ್ಮ ನಡುವಿನ ಪ್ರೇಮದ ಆಳವನ್ನು ಅಳೆಯುವ ಪ್ರಯತ್ನ ಮಾಡುತ್ತಾರೆ.
3. ಉಡುಗೊರೆಯ ಭಾಷೆ :
ಕೆಲವರಿಗೆ ಉಡುಗೊರೆಗಳನ್ನು ಕೊಡುವುದು ಮತ್ತು ಸ್ವೀಕರಿಸುವುದು ಪ್ರೇಮವನ್ನು ವ್ಯಕ್ತ ಮಾಡುವ ವಿಧಾನ. ನೀವು ಈ ಬಗೆಯ ಮನಸ್ಸಿನವರಾದರೆ ನಿಮ್ಮ ಪ್ರೇಮದ ಭಾಷೆ
‘ ಉಡುಗೊರೆಯ ಭಾಷೆ’
4. ಗುಣಮಟ್ಟದ ಸಮಯ :
ತಮ್ಮ ಸಂಗಾತಿ ತಮ್ಮೊಡನೆ ಎಷ್ಟು ಗುಣಮಟ್ಟದ ಸಮಯ ಕಳೆಯುತ್ತಾನೆ ಎನ್ನುವುದರ ಆಧಾರದ ಮೇಲೆ ಕೆಲವರು ತಮ್ಮ ಪ್ರೇಮದ ಗುಣಮಟ್ಟವನ್ನು ಅಳೆಯುತ್ತಾರೆ. ಹೀಗಾಗದೇ ಹೋದ ಸಂದರ್ಭದಲ್ಲಿ ಅವರು ತಮ್ಮನ್ನು ಪ್ರೇಮ ವಂಚಿತರ ನಡುವೆ ಗುರುತಿಸಿಕೊಳ್ಳುತ್ತಾರೆ.
5. ಸ್ಪರ್ಶದ ಭಾಷೆ :
ಕೊನೆಯದಾಗಿ ಕೆಲವರು ಸ್ಪರ್ಶವನ್ನು ತಮ್ಮ ಪ್ರೇಮದ ಗುರುತಾಗಿ ಬಳಸಿಕೊಳ್ಳಲು ಬಯಸುತ್ತಾರೆ. ಅದು ಸುಮ್ಮನೆ ಕೈ ಹಿಡಿದುಕೊಂಡು ನಡೆದಾಡುವುದಾಗಿರಬಹುದು, ಕಚಗುಳಿಯಿಡುವುದಾಗಿರಬಹುದು, ಚುಂಬನವಾಗಿರಬಹುದು ಕೊನೆಗೆ ಲೈಂಗಿಕ ಸಂಪರ್ಕವೂ ಈ ಭಾಷೆಯ ಪರೀಧಿಯಲ್ಲಿ ಬಳಕೆಯಾಗುವ ಪರೀಕ್ಷಾ ವಿಧಾನ. ಸ್ಪರ್ಶದಿಂದ ವಂಚಿತರಾದಾಗ ಈ ಜನ ತಮ್ಮ ಪ್ರೇಮದಲ್ಲಿ ಕೊರತೆ ಹುಡುಕಲು ಶುರು ಮಾಡುತ್ತಾರೆ.
ಪ್ರೇಮದ ಭಾಷೆಗಳು ಯಾಕೆ ಮುಖ್ಯ?
ಈ ಪ್ರೇಮದ ಭಾಷೆಗಳನ್ನು ಅರಿಯುವ ಮುಖ್ಯ ಉದ್ದೇಶ, ಯಾವ ರೀತಿಯಲ್ಲಿ ನೀವು ನಿಮ್ಮ ಪ್ರೇಮವನ್ನು ವ್ಯಕ್ತ ಪಡಿಸಬಯಸುತ್ತೀರಿ ಮತ್ತು ಯಾವ ರೀತಿಯಲ್ಲಿ ನಿಮ್ಮ ಸಂಗಾತಿಯಿಂದ ಪ್ರೇಮವನ್ನು ನಿರೀಕ್ಷಿಸುತ್ತೀರಿ ಎನ್ನುವುದನ್ನು ತಿಳಿದುಕೊಳ್ಳುವುದೇ ಆಗಿದೆ. ನಿಮ್ಮಿಬ್ಬರ ಪ್ರೇಮದ ಭಾಷೆ ನಿಮಗೆ ಗೊತ್ತಿರದ ಭಾಷೆಯಾಗಿದ್ದ ಸಂದರ್ಭದಲ್ಲಿ ನಿಮ್ಮ ಸಂಬಂಧದಲ್ಲಿ ತೊಂದರೆಗಳಾಗುವ ಅವಕಾಶಗಳು ಹೆಚ್ಚು.
ಉದಾಹರಣೆಗೆ, ನೀವು I Love you ಹೇಳುವ ಮೂಲಕ ನಿಮ್ಮ ಪ್ರೇಮವನ್ನು ವ್ಯಕ್ತ ಮಾಡಬಯಸುತ್ತೀರಿ ಮತ್ತು ಅದಕ್ಕೆ ಬದಲಾಗಿ ಉಡುಗೊರೆಗಳನ್ನು ಬಯಸುವ ಮೂಲಕ ಪ್ರೇಮವನ್ನು ಸ್ವೀಕರಿಸಬಯಸುತ್ತೀರಿ ಎಂದುಕೊಳ್ಳೋಣ. ಆದರೆ ನಿಮ್ಮ ಸಂಗಾತಿ ನಿಮಗೆ ಕೆಲಸದಲ್ಲಿ ಸಹಾಯ ಮಾಡುವ ಮೂಲಕ ತಮ್ಮ ಪ್ರೇಮವನ್ನು ವ್ಯಕ್ತ ಮಾಡುವವರಾಗಿದ್ದರೆ ಮತ್ತು ನಿಮ್ಮೊಡನೆ ಒಳ್ಳೆಯ ಸಮಯ ಕಳೆಯುವ ಮೂಲಕ ಪ್ರೇಮವನ್ನು ಸ್ವೀಕರಿಸುವವರಾದರೆ ಎಂಥ ವಿಪರ್ಯಾಸ ನೋಡಿ. ಇಲ್ಲಿ ಹೊಂದಾಣಿಕೆ ಹೇಗೆ ಸಾಧ್ಯ?
ಗಾಬರಿಯಾಗಬೇಡಿ. ನಿಮ್ಮ ಮತ್ತು ನಿಮ್ಮ ಸಂಗಾತಿಯ ಭಾಷೆ ಒಂದೇ ಆಗಿರಬೇಕಿಲ್ಲ, ( ಈ ಬಗ್ಗೆ ಮುಂದಿನ ಅಧ್ಯಾಯದಲ್ಲಿ ಚರ್ಚಿಸೋಣ) ಯಾವುದು ಮುಖ್ಯವೆಂದರೆ ನಿಮ್ಮ ಸಂಗಾತಿಯ ಪ್ರೇಮದ ಭಾಷೆ ಯಾವುದು ಎಂದು ತಿಳಿದುಕೊಳ್ಳುವುದು ಮಾತ್ರ. ಈ ವಿಷಯಗಳು ಪರಸ್ಪರರಿಗೆ ಸ್ಷಷ್ಟವಿದ್ದಾಗ ಯಾವ ತೊಂದರೆಗೂ ಜಾಗವಿಲ್ಲ.
ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಅನನ್ಯ ಹಾಗಾಗಿ ಪ್ರತಿಯೊಬ್ಬರ ಬೇಕು ಬೇಡಗಳು ಕೂಡ ಅನನ್ಯ. ಡಾ. ಗ್ಯಾರಿ ಚಾಪ್’ಮನ್ ತನ್ನ ಅಧ್ಯಯನದ ಮೂಲಕ ಈ ಐದು ಪ್ರೇಮದ ಭಾಷೆಗಳನ್ನು ಗುರುತಿಸುತ್ತಾನಾದರೂ, ಪ್ರೇಮಿಗಳು ಈ ಐದು ಮುಖ್ಯ ಭಾಷೆಗಳ ಒಳ ಭಾಷೆಗಳನ್ನು ಮಾತುಕತೆಯ ಮೂಲಕ ಕಂಡುಕೊಳ್ಳಿ.
ಪ್ರೇಮವೆನಲು ಹಾಸ್ಯವೆ?
ಈ ಪ್ರೇಮದ ವಿಷಯ ಎಷ್ಟು ಸರಳವೋ ಅಷ್ಟು ಚಾಲೆಂಜಿಂಗ್ ಕೂಡ ಹೌದು.
ಒಂದು ಹೆಣ್ಣಿಗೊಂದು ಗಂಡು
ಹೇಗೊ ಸೇರಿ ಹೊಂದಿಕೊಂಡು
ಕಾಣದಂಥ ಹರುಷ ಕಂಡು
ಮಾತಿಗೊಲಿಯದಮೃತ ಉಂಡು
ದುಃಖ ಹಗುರವೆನುತಿರೆ
ಪ್ರೇಮವೆನಲು ಹಾಸ್ಯವೆ?
ಎಂದು ಕೆ ಎಸ್ ನ ಹಾಡಿದ್ದು ಹಾಗೇ ಸುಮ್ಮನೇ ಅಲ್ಲ.
(ಮುಂದುವರೆಯುವುದು …….)

1 Comment

Leave a Reply