ವ್ಯಕ್ತಿತ್ವ ವಿಕಸನ – Personality development ಯಾಕೆ ಮುಖ್ಯ?

ನಮ್ಮೊಳಗಿನ ಎಲ್ಲ ಸಕಾರಾತ್ಮಕ ಸಾಧ್ಯತೆಗಳನ್ನರಿತು, ಸಂಕುಚಿತಗೊಂಡಿರುವ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಪ್ರಕ್ರಿಯೆಯೇ ವ್ಯಕ್ತಿತ್ವ ವಿಕಸನ ~ ಆನಂದಪೂರ್ಣ

vivi

ವ್ಯಕ್ತಿತ್ವ ವಿಕಸನಕ್ಕೂ ಅಧ್ಯಾತ್ಮಕ್ಕೂ ಏನು ಸಂಬಂಧ? ಯಾರಾದರೂ ಪ್ರಶ್ನಿಸಬಹುದು. ಸಂಬಂಧವಿದೆ. ಒಬ್ಬ ವ್ಯಕ್ತಿ ತನ್ನ ಬದುಕಿನ ರೀತಿ ನೀತಿಗಳನ್ನು ಸರಿಯಾಗಿ ಇಟ್ಟುಕೊಳ್ಳದೆ, ಸಹಜೀವಿಗಳ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳದೆ ಅಧ್ಯಾತ್ಮವನ್ನು ಆಚರಿಸಿದರೆ ಅದರಿಂದ ಲಾಭವಂತೂ ಇಲ್ಲ, ನಷ್ಟವೇ ಹೆಚ್ಚು.

ಪುರಾಣ ಕಥನಗಳಲ್ಲಿ ಬರುವ ಅಸುರಾದಿಗಳಲ್ಲಿ ಬಹುತೇಕರು ತಪೋನಿಷ್ಠರಾಗಿದ್ದರು. ಸಜ್ಜನ ಭಕ್ತರಿಂದಲೂ ಸಾಧ್ಯವಾಗದಷ್ಟು ಕಠಿಣ ವ್ರತಗಳನ್ನು ಕೈಗೊಂಡು ದೀರ್ಘಕಾಲ ಧ್ಯಾನ – ಜಪಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಹಿರಣ್ಯಕಷಿಪು ಇದಕ್ಕೆ ಉತ್ತಮ ಉದಾಹರಣೆ. ಹಾಗೆಯೇ ರಾವಣ ಕೂಡಾ. ರಾವಣನ ಪಾತ್ರವಂತೂ ಅತಿರಂಜಿತ. ಒಂದು ಹಂತದಲ್ಲಿ ರಾಮನನ್ನೂ ಮೀರಿ ಆಪ್ತವಾಗುವಷ್ಟು ಆಕರ್ಷಕ. ಆದರೆ ರಾವಣನ ವ್ಯಕ್ತಿತ್ವ ಹಿತವಾಗಿರಲಿಲ್ಲ. ಲಂಕೆಯನ್ನು ಕುಬೇರನಿಂದ ಕಿತ್ತುಕೊಂಡಂತೆಯೇ ಅವನು ಜೀವನದುದ್ದಕ್ಕೂ ಇತರರಿಂದ ಕಸಿಯುತ್ತಲೇ ಬಂದ. ಕೊನೆಗೆ ಮತ್ತೊಬ್ಬರ ಹೆಂಡತಿಯನ್ನೂ ಅಪಹರಿಸುವ ದುಸ್ಸಾಹಸ ಮಾಡಿದ. ಮಹಾತಾಪಸಿ, ಶಿವಭಕ್ತ, ಮಾತೃಭಕ್ತ ರಾವಣನ ಪರಿ ಇಂಥದ್ದು.

ಇನ್ನು ಕರ್ಣನ ಉದಾಹರಣೆಯನ್ನೇ ನೋಡಿ. ಆತ ಮಹಾ ಪರಾಕ್ರಮಿ. ಕೊಡುಗೈ ದಾನಿ. ದೈವಭಕ್ತ. ಆದರೆ ದುರ್ಯೋಧನಾದಿ ದುರ್ಜನರ ಸಹವಾಸದಿಂದ ಅವನ ವ್ಯಕ್ತಿತ್ವ ಮಂಕಾಯ್ತು. ಆತನ ಬದುಕು ಅವನತಿಯ ಹಾದಿ ಹಿಡಿಯಿತು. ಆತ ದುರ್ಯೋಧನನ ಗೆಳೆತನಕ್ಕಾಗಿ ಪ್ರಾಣವನ್ನೆ ತೆರುವಷ್ಟು ಸಮರ್ಪಣಾಭಾವ ಹೊಂದಿದ್ದ. ಆದರೆ ತನ್ನ ಸಮರ್ಪಣೆಗೆ ಆ ವ್ಯಕ್ತಿ ಅರ್ಹನೋ ಅಲ್ಲವೋ ಎಂದು ವಿಚಾರ ಮಾಡುವ ಗೋಜಿಗೆ ಹೋಗಲಿಲ್ಲ. ಸರಿ ತಪ್ಪುಗಳನ್ನು ಗುರುತಿಸುವುದು, ಸರಿಯಾದುದರ ಜತೆ ಇರುವುದು ಕೂಡ ಉತ್ತಮ ವ್ಯಕ್ತಿತ್ವದ ಭಾಗವೇ ಆಗಿರುತ್ತದೆ. ತಪ್ಪು ದಾರಿಯಲ್ಲಿರುವವರನ್ನು ಸೆಳೆದು ಸರಿ ದಾರಿಗೆ ಹಚ್ಚುವ ಸಾಮಥ್ರ್ಯ ಇದ್ದರಷ್ಟೇ ದುರ್ಜನರ ಸಂಗಕ್ಕೆ ಸಾಹಸಪಡಬಹುದು. ಅದಿಲ್ಲವಾದರೆ ನಾವೂ ಅವರ ಹಾದಿಯನ್ನೆ ಹಿಡಿದುಬಿಡುವ ಅಪಾಯ ಇರುತ್ತದೆ. ಕರ್ಣ ಎದುರಿಸಲಾಗದೆ ಸೋತ ಅಪಾಯವೂ ಇದೇ ಆಗಿತ್ತು.

ವ್ಯಕ್ತಿತ್ವ ವಿಕಸನ 
ವ್ಯಕ್ತಿತ್ವ ವಿಕಸನ!? ಹಾಗೆಂದರೇನು? ಅದನ್ನು ಕಂಡುಕೊಳ್ಳುವುದು ಹೇಗೆ? ಇತ್ಯಾದಿ ಪ್ರಶ್ನೆಗಳೇಳುತ್ತವೆ. ಒಬ್ಬ ವ್ಯಕ್ತಿ ವಿಕಸಿತನಾಗಿದ್ದಾನೆಯೇ ಅಥವಾ ಸಂಕುಚಿತ ಮನೋಭಾವ ಹೊಂದಿದ್ದಾನೆಯೇ ಎಂದು ಅರಿಯುವುದು ಕಷ್ಟದ ಕೆಲಸವೇನಲ್ಲ. ಯಾರು ನಡೆನುಡಿಯಲ್ಲಿ ನೇರವಾಗಿರುವುದಿಲ್ಲವೋ ಸ್ವಂತದ ಬಲದಲ್ಲಿ ನಂಬಿಕೆ ಇಟ್ಟುಕೊಂಡಿರುವುದಿಲ್ಲವೋ ಸದಾ ಅವರಿವರ ಸಂಗತಿ ಹರಟುತ್ತ ಸಮಯ ಪೋಲು ಮಾಡುವರೋ ವಿಧ್ವಂಸಕ ಕೆಲಸಗಳಲ್ಲಿ ಆಸಕ್ತರಾಗಿರುವರೋ ಅವರು ಸಂಕುಚಿತ ವ್ಯಕ್ತಿತ್ವದವರು. ಇನ್ನೂ ಕೆಲವೊಮ್ಮೆ ಅಂಥವರು ವ್ಯಕ್ತಿತ್ವಹೀನರೇ ಆಗಿಬಿಟ್ಟಿರುತ್ತಾರೆ. ಅವರಿಗೆ ತಮ್ಮದೇ ಆದ ಮೌಲ್ಯಗಳಾಗಲೀ ಧ್ಯೇಯಗಳಾಗಲೀ ಇರುವುದಿಲ್ಲ.

ಆದರೆ ಸತ್ಯ ಏನೆಂದರೆ, ಒಬ್ಬ ವ್ಯಕ್ತಿಯಲ್ಲಿ ಅವೆಲ್ಲವೂ ಇರುತ್ತವೆ. ಮೌಲ್ಯ – ಧ್ಯೇಯಗಳು, ಸಜ್ಜನಿಕೆ, ದಯೆ, ನೇರವಂತಿಕೆಗಳೆಲ್ಲವೂ ಇರುತ್ತವೆ. ಆದರೆ ತನ್ನೊಳಗೆ ಅವೆಲ್ಲವೂ ಇವೆಯೆಂಬ ಅರಿವಿನ ಕೊರತೆಯೂ ಅಷ್ಟೇ ಪ್ರಮಾಣದಲ್ಲಿ ಇರುತ್ತದೆ ಎನ್ನುವುದೇ ಅತಿ ದೊಡ್ಡ ಸಮಸ್ಯೆ. ಈ ಅರಿವಿನ ಕೊರತೆಯೇ ಅವರನ್ನು ತಮ್ಮ ಸುತ್ತಲಿನ ಸಮಸ್ಯೆಗಳಿಗೆ ಅಥವಾ ಸವಾಲುಗಳಿಗೆ ತಪ್ಪು ದಾರಿಯಿಂದ ಪ್ರತಿಕ್ರಿಯಿಸುವಂತೆ ಪ್ರೇರೇಪಿಸೋದು. ಈ ಅರಿವಿನ ಕೊರತೆಯೇ ವ್ಯಕ್ತಿಯನ್ನು ಮುರುಟಿಸಿ ಹಾಕೋದು. ನಮ್ಮೊಳಗಿನ ಎಲ್ಲ ಸಕಾರಾತ್ಮಕ ಸಾಧ್ಯತೆಗಳನ್ನರಿತು, ಸಂಕುಚಿತಗೊಂಡಿರುವ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಪ್ರಕ್ರಿಯೆಯೇ ವ್ಯಕ್ತಿತ್ವ ವಿಕಸನ.

ಆತ್ಮವಿಕಸನ
ವ್ಯಕ್ತಿತ್ವ ವಿಕಸನವಿಲ್ಲದೆ ಆತ್ಮದ ವಿಕಸನ ಸಾಧ್ಯವಾಗುವುದಿಲ್ಲ. ಹಿಂದಿನ ಗುರುಕುಲಗಳಲ್ಲಿ ವೇದಾಧ್ಯಯನವೇ ಮೊದಲಾದ ಶಿಕ್ಷಣದ ಜೊತೆ ವ್ಯಕ್ತಿತ್ವ ರೂಪುಗೊಳ್ಳುವಿಕೆಗೂ ಸೂಕ್ತ ಬೋಧನೆ ನೀಡಲಾಗುತ್ತಿದ್ದ ಉಲ್ಲೇಖಗಳನ್ನು ಪ್ರಾಚೀನ ಸಾಹಿತ್ಯದಲ್ಲಿ ನೋಡಬಹುದು. ಪಂಚತಂತ್ರ, ಹಿತೋಪದೇಶ ಮೊದಲಾದ ಮಾರ್ಗದರ್ಶಕ ಕೃತಿಗಳಲ್ಲೂ ವ್ಯಕ್ತಿತ್ವ ವಿಕಸನಕ್ಕೆ ಮಹತ್ವ ನೀಡಿರುವುದನ್ನು ಕಾಣಬಹುದು.
ಸ್ವಾಮಿ ವಿವೇಕಾನಂದರು ತಮ್ಮ ಬಹುತೇಕ ಉಪನ್ಯಾಸಗಳಲ್ಲಿ ವ್ಯಕ್ತಿತ್ವ ವಿಕಸನದ ಮೂಲಕ ಆತ್ಮವಿಕಸನ ಮಾಡಿಕೊಳ್ಳುವ ಕುರಿತು ಹೇಳಿದ್ದಾರೆ. ಸ್ವಾಮೀಜಿ ಈ ಚಿಂತನೆಗಾಗಿ ಬಹುಮೂಲ್ಯ ಹೊಳಹುಗಳನ್ನು ನೀಡಿದ್ದಾರೆ. ಅವರು ಶಿಕ್ಷಣದ ಕುರಿತೇ ಮಾತಾಡಲಿ, ಅಧ್ಯಾತ್ಮದ ಕುರಿತೇ ಮಾತನಾಡಲಿ; ಅವರು ನಿರ್ದಿಷ್ಟವಾಗಿ ಕೈತೋರಿಸಿ ಮಾತನಾಡಿದ್ದರೆ, ಅದು ವ್ಯಕ್ತಿತ್ವ ನಿರ್ಮಾಣದ ಬಗೆಗೇ.

ಹೀಗೆ ವ್ಯಕ್ತಿಗಳನ್ನು ನಿರ್ಮಾಣ ಮಾಡುವಲ್ಲಿ ಅವರದ್ದೇ ಆದ ವಿಧಾನವೊಂದಿತ್ತು. ಅದು ಆತ್ಮವಿಶ್ವಾಸದ ಜಾಗೃತಿಯ ಮಾರ್ಗ. ಭಯ, ಗೊಂದಲ, ಕೀಳರಿಮೆ ಮೊದಲಾದವುಗಳಿಂದ ಉಂಟಾದ ಗುಲಾಮಿ ಮಾನಸಿಕತೆಯನ್ನು `ಆತ್ಮವಿಸ್ಮೃತಿ’ ಎಂದೇ ಕರೆದ ಸ್ವಾಮೀಜಿ ಆ ವಿಸ್ಮೃತಿಯಿಂದ ಬಡಿದೆಬ್ಬಿಸಲು, ಆತ್ಮಜಾಗೃತಿ ಉಂಟುಮಾಡಲು ಟೊಂಕ ಕಟ್ಟಿ ನಿಂತುಬಿಟ್ಟಿದ್ದರು. ಈ ಕಾರಣದಿಂದಲೇ ಇಂದು ನಾವು ಬಹುತೇಕ ಪ್ರತಿಯೊಂದು ವ್ಯಕ್ತಿತ್ವ ವಿಕಸನ ತರಗತಿಯಲ್ಲಿಯೂ ಸ್ವಾಮೀಜಿಯವರ ಒಂದಲ್ಲ ಒಂದು ಹೇಳಿಕೆಯನ್ನು ಕೇಳುವಂತಾಗಿರುವುದು!

“ಏಳಿ ಎಚ್ಚರಗೊಳ್ಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ” ಅನ್ನುವ ಉಪನಿಷತ್ ವಾಕ್ಯವನ್ನು ವಿವೇಕಾನಂದರು ಪ್ರಚುರಪಡಿಸಿ, ನವಜಾಗೃತಿಯನ್ನೇ ಉಂಟುಮಾಡಿದರು. ಆ ಜಾಗೃತಿ ಪಥದಲ್ಲಿ ನಮ್ಮ ನಮ್ಮ ನಡಿಗೆಯನ್ನು ನಾವು ನಡೆಯುವುದಷ್ಟೆ ಇನ್ನು ಬಾಕಿ ಇರುವುದು!

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.