ನಡೆಯುವುದು ಉಳಿಯುತ್ತದೆ, ನಿಂತದ್ದು ಕೊಳೆಯುತ್ತದೆ : ಅಧ್ಯಾತ್ಮ ಡೈರಿ

ಕಾಲವನ್ನೇ ನೋಡಿ. ಅದು ತುದಿಮೊದಲೂ ತಿಳಿಯದಷ್ಟು ನಿತ್ಯ ಸಂಚಾರಿ. ಅದರ ಪ್ರತಿಘಳಿಗೆಯೂ ಆದಿ, ಮತ್ತು ಅದೇ ಘಳಿಗೆ ಅಂತ್ಯವೂ. ಹೊತ್ತು ಹೊತ್ತಿನ ಆದಿ ಅಂತ್ಯಗಳ ನಿರಂತರತೆಯೇ ಕಾಲನ ಚಲನೆ. ಅದರೊಳಗಿನ ಸೂಕ್ಷ್ಮವನ್ನು ಗಮನಿಸಿ. ಹುಟ್ಟು – ಸಾವಿಲ್ಲದೆ ಯಾವುದರ ಚಲನೆಯೂ ಸಾಧ್ಯವಿಲ್ಲ. ಜಗತ್ತಿನ ಪ್ರತಿಯೊಂದು ಜೀವವೂ ಹುಟ್ಟಿ ಸಾಯುತ್ತಿದೆಯೆಂದೇ ಜಗತ್ತು ನಡೆಯುತ್ತಿದೆ ~ ಅಲಾವಿಕಾ

ಸುಮ್ಮನೆ ಒಂದು ಊಹೆ. ಈ ಭೂಮಿ ಚಲನೆ ನಿಲ್ಲಿಸಿಬಿಟ್ಟರೆ ಏನಾಗುವುದು? ಹೋಗಲಿ ಚಂದ್ರ ನಿಂತರೆ? ಸೂರ್ಯ, ನಕ್ಷತ್ರಗಳು ಅಚಲವಾದರೆ? ಹೆಚ್ಚೇನಿಲ್ಲ, ಎಲ್ಲವೂ ಮುಗಿದುಹೋಗುವುದು – ಅಷ್ಟೇ. ನಿರಂತರ ಚಲನೆಯ ಈ ತತ್ತ್ವವನ್ನೇ ಬಸವಣ್ಣನವರು `ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು ಬಣ್ಣಿಸಿರುವುದು.
ಜಗತ್ತು ಚಲನಶೀಲ. ಇಲ್ಲಿ ಯಾವುದು ನಡೆಯುತ್ತ ಇರುತ್ತದೆಯೋ ಅದು ಉಳಿಯುತ್ತದೆ. ನಿಂತಿದ್ದು ಕೊಳೆಯುತ್ತದೆ, ಮುಗಿದೂಹೋಗುತ್ತದೆ. ನಡೆಯಲು ಬಲ್ಲವರಷ್ಟೆ ಇಲ್ಲಿ ಬದುಕಬಲ್ಲರು. ಮತ್ತು ಈ ನಡಿಗೆ ಬಾಹ್ಯದ್ದು ಮಾತ್ರ ಅಲ್ಲ. ಅಥವಾ ಬಾಹ್ಯ ನಡಿಗೆಗಿಂತ ಮುಖ್ಯವಾಗಿ ಆಂತರಿಕ ನಡಿಗೆ. ಕಣ್ಣಿಗೆ ಕಾಣದ ಜೀವಕೋಶಗಳ ನಿರಂತರ ಚಲನೆ. ಅಣು – ಪರಮಾಣುಗಳ ನಿಲ್ಲದ ಪರಿಕ್ರಮಣ.

ಕಾಲವನ್ನೇ ನೋಡಿ. ಅದು ತುದಿಮೊದಲೂ ತಿಳಿಯದಷ್ಟು ನಿತ್ಯ ಸಂಚಾರಿ. ಅದರ ಪ್ರತಿಘಳಿಗೆಯೂ ಆದಿ, ಮತ್ತು ಅದೇ ಘಳಿಗೆ ಅಂತ್ಯವೂ. ಹೊತ್ತು ಹೊತ್ತಿನ ಆದಿ ಅಂತ್ಯಗಳ ನಿರಂತರತೆಯೇ ಕಾಲನ ಚಲನೆ. ಅದರೊಳಗಿನ ಸೂಕ್ಷ್ಮವನ್ನು ಗಮನಿಸಿ. ಹುಟ್ಟು – ಸಾವಿಲ್ಲದೆ ಯಾವುದರ ಚಲನೆಯೂ ಸಾಧ್ಯವಿಲ್ಲ. ಜಗತ್ತಿನ ಪ್ರತಿಯೊಂದು ಜೀವವೂ ಹುಟ್ಟಿ ಸಾಯುತ್ತಿದೆಯೆಂದೇ ಜಗತ್ತು ನಡೆಯುತ್ತಿದೆ.

ಅನಾದಿ – ಅನಂತವಾದ ಕಾಲ ಆಯಾ ಗಳಿಗೆಯಲ್ಲೇ ಆದಿಯನ್ನೂ ಅಂತ್ಯವನ್ನೂ ಕಾಣುವ ವಿಶಿಷ್ಟ ಸಂಗತಿಯಾಗಿದೆ. ಆದ್ದರಿಂದಲೇ ಮತ್ತೆ ಹಿಂದಿರುಗದ ನೇರ ನಡೆಯ ಕಾಲವು `ಕಾಲಚಕ್ರ’ವಾಗಿ ಮುಂದೆ ಉರುಳುವುದು. ಹುಟ್ಟಿಕೊಂಡು ಮುಗಿದು ಹೋಗುವ ಚಕ್ರ – ಆ ನಿರಂತರತೆಯೇ ಕಾಲವನ್ನು ನೇರವಾಗಿ ನಡೆಸುತ್ತಿರುವುದು.

ನೀವು ಗಮನಿಸಿಯೇ ಇರುತ್ತೀರಿ. ಒಂದು ಹೆಜ್ಜೆ ಎತ್ತಿದರೆ ಮಾತ್ರ ಇನ್ನೊಂದು ಹೆಜ್ಜೆ ಇಡಲಿಕ್ಕಾಗುವುದು. ಕುಪ್ಪಳಿಸುತ್ತೇವೆ ಎಂದುಕೊಂಡರೂ ಒಂದೆಡೆಯಿಂದ ಹೆಜ್ಜೆಗಳನ್ನು ಎತ್ತಿದರೆ ಮಾತ್ರ ಇನ್ನೊಂದೆಡೆ ಅವನ್ನು ಊರಲು ಸಾಧ್ಯವಾಗುವುದು. ಹೆಜ್ಜೆಯನ್ನೇ ಎತ್ತದೆ ಮುಂದಡಿ ಇಡಲು ಹೇಗೆ ತಾನೆ ಸಾಧ್ಯ? ಈ ಎತ್ತಿ – ಇಡುವ ಪ್ರಕ್ರಿಯೆ ಇಲ್ಲದೆ ನಡಿಗೆ ತಾನೆ ಹೇಗೆ ಸಾಧ್ಯ!? ನಡಿಗೆ ಇಲ್ಲದೆ ನಿಂತಲ್ಲಿಯೇ ನಿಂತುಕೊಂಡರೆ ಎಷ್ಟು ದಿನ ಉಳಿಯಬಲ್ಲಿರಿ?

ಮತ್ತೊಂದು ಉದಾಹರಣೆ ತೆಗೆದುಕೊಳ್ಳಿ. ನೀವು ಕಣ್‍ಮುಚ್ಚಿದರೆ ಮಾತ್ರ ಅದನ್ನು `ತೆರೆಯಲು’ ಸಾಧ್ಯ. ಅಥವಾ ಕಣ್ತೆರೆದಿದ್ದರೆ ಮಾತ್ರ ಮುಚ್ಚಲು ಸಾಧ್ಯ. ಒಂದೋ ನೀವು ಕಣ್ತೆರೆದೇ ಇರುತ್ತೀರಿ ಅಥವಾ ಮುಚ್ಚಿಕೊಂಡೇ ಇರುತ್ತೀರಿ ಎಂದಿಟ್ಟುಕೊಳ್ಳಿ. ಈ ಎರಡೂ ಸಂದರ್ಭಗಳು ಕಣ್ಣಿಗೆ ಹಾನಿಯುಂಟು ಮಾಡುವವು, ಕಣ್ಣಿನ ಕೆಲಸ ತೀರಿಸಿ, ಇಲ್ಲವಾಗಿಸುವವು. ಅದೇ ಕಣ್ಮುಚ್ಚಿ – ತೆರೆವ ಪ್ರಕ್ರಿಯೆಯು ಅಲ್ಲೊಂದು ಚಲನೆ ಉಂಟು ಮಾಡಿ, ಕಣ್ಣನ್ನು ಸುಸ್ಥಿತಿಯಲ್ಲಿಟ್ಟಿರುವುದು. ಉಸಿರಿನ ವಿಷಯದಲ್ಲೂ ಅದು ಹಾಗೇನೇ. ಚಲನೆಗೆ ಆಸ್ಪದ ಕೊಡದೆ ಶ್ವಾಸಕೋಶದಲ್ಲಿ ಉಸಿರು ತುಂಬಿಟ್ಟುಕೊಂಡಿದ್ದರೆ ಅಥವಾ ಖಾಲಿಯಾಗಿಟ್ಟುಕೊಂಡರೆ ಅದರ ಕೆಲಸ ನಿಲ್ಲುತ್ತದೆ, ದೇಹ ಉರುಳುತ್ತದೆ. ಅಷ್ಟೇ.

ಜಗತ್ತಿನೆಲ್ಲದರ ಚಲನೆ ಪ್ರತ್ಯೇಕ ಪ್ರತ್ಯೇಕವಾಗಿ ಕಂಡರೂ ಎಲ್ಲವೂ ಪರಸ್ಪರ ಪೂರಕವೇ ಆಗಿರುತ್ತದೆ. ಬ್ರಹ್ಮಾಂಡದ ಗ್ರಹ – ನಕ್ಷತ್ರ – ಆಕಾಶ ಕಾಯಗಳ ಚಲನೆ ಗುರುತ್ವಾಕರ್ಷಣೆಯ ಬಿಗಿ ಸರಪಳಿಯಲ್ಲಿ ಹೆಣೆದುಕೊಂಡಿದೆ.
ನೀರು ಆವಿಯಾಗಿ – ಮೋಡಗಟ್ಟಿ ಮತ್ತೆ ಸುರಿಯುವ ಪ್ರಕ್ರಿಯೆ ಇರಬಹುದು, ನಮ್ಮ ಆಹಾರ ಸರಪಳಿ ಇರಬಹುದು, ಅಥವಾ ನಮ್ಮ ನಮ್ಮ ದೈನಂದಿನ ಭೌತಿಕ ಚಲನೆಗಳೇ ಇರಬಹುದು. ಈ ಎಲ್ಲವೂ ಒಂದಕ್ಕೊಂದು ಪೂರಕವಾಗಿರುತ್ತವೆ. ಅಲ್ಲೆಲ್ಲೋ ಆಕಾಶದಲ್ಲಿ ಚಲಿಸುವ ಮೋಡ ಭೂಮಿಯಲ್ಲಿ ಮೊಳಕೆಯೊಡೆದು ಪೈರು ಬೆಳೆಯುವ ಚಲನೆಗೆ ಕಾರಣವಾಗುತ್ತದೆ. ಹಾಗೆಯೇ ಕುಟುಂಬ, ಸಮುದಾಯ, ಸಮಾಜ, ರಾಷ್ಟ್ರಗಳ ಬೆಳವಣಿಗೆಯೂ ಮತ್ತೆಲ್ಲೋ ಸಂಭವಿಸುವ ಚಲನೆಯ ಜೊತೆ ಅಂತಸ್ಸಂಬಂಧ ಹೊಂದಿರುತ್ತದೆ.

ನಾವು ಪ್ರತಿ ಘಳಿಗೆಯೂ ಹೊಸಬರೇ!
No man steps in the same river twice ಅನ್ನುತ್ತಾನೆ ತತ್ತ್ವಜ್ಞಾನಿ ಹೆರಾಕ್ಲೀಟಸ್. `ಒಂದು ನದಿಗೆ ಎರಡು ಸಾರಿ ಕಾಲಿಡಲು ಸಾಧ್ಯವಿಲ್ಲ. ಎರಡು ಸಾರಿ ಕಾಲಿಟ್ಟ ಆ ಮನುಷ್ಯ ಒಬ್ಬನೇ ಅಲ್ಲ; ಎರಡು ಸಾರಿ ಕಾಲಿಟ್ಟಾಗಿನ ಪರಿಸ್ಥಿತಿಗಳೂ ಪರಿಣಾಮಗಳೂ ಒಂದೇ ಅಲ್ಲ; ಮತ್ತೂ ಮುಂದಕ್ಕೆ – ಎರಡು ಸಾರಿ ಕಾಲಿಟ್ಟ ಆ ನದಿ ಒಂದೇ ಅಲ್ಲ; ಬೇರೆಬೇರೆಯೂ ಅಲ್ಲ; ಎರಡು ಸಾರಿ ಕಾಲಿಟ್ಟ ಮನುಷ್ಯ ಒಬ್ಬನೇ ಅಲ್ಲ, ಬೇರೆಬೇರೆಯೂ ಅಲ್ಲ’ ಎಂದು ವಿವರಿಸುತ್ತಾನೆ ಬೌದ್ಧ ವಿಜ್ಞಾನಿ ಹಾಗೂ ತತ್ತ್ವಜ್ಞಾನಿ ನಾಗಾರ್ಜುನ.
ಮೊದಲ ನೋಟಕ್ಕೆ ಸಂಕೀರ್ಣವಾಗಿ ಕಾಣುವ ಈ ಹೇಳಿಕೆ ಹೊಂದಿರುವುದು ಅತ್ಯಂತ ಸರಳಾರ್ಥವನ್ನು. `ಒಂದು ನದಿಗೆ ಎರಡು ಸಾರಿ ಕಾಲಿಡಲು ಸಾಧ್ಯವಿಲ್ಲ’…. ಸರಿಯೇ. ನದಿ ಎನ್ನುವುದು ಹೊತ್ತುಹೊತ್ತಿನ ಸಂಭವನೀಯತೆ. ಅದು ಪ್ರತಿ ಕ್ಷಣದ ಘಟನೆ. ನದಿ ನೀರಿನ ಪ್ರತಿ ಕಣವೂ ಚಲಿಸುತ್ತಲೇ ಇರುತ್ತದೆ. ಕಾಲದ ಅತಿ ಚಿಕ್ಕ ಮಾಪನಕ್ಕೂ ಕಡಿಮೆ ಅವಧಿಯಲ್ಲಿ ನದಿಯ ನೀರು ಮುಂದೆ ಸಾಗಿರುತ್ತದೆ. ಆದ್ದರಿಂದ ಈ ಹರಿವು ಪ್ರತಿ ಕ್ಷಣ ಹೊಸತು. ಒಮ್ಮೆ ಒಂದು ಹರಿವಿಗೆ ಕಾಲಿಟ್ಟವರು ಮತ್ತೊಮ್ಮೆ ಅದೇ ಹರಿವಿಗೆ ಕಾಲಿಡಲು ಸಾಧ್ಯವಿಲ್ಲ.

ನದಿ ಮಾತ್ರವಲ್ಲ, ಮನುಷ್ಯ ಕೂಡ ಪ್ರತಿ ಕ್ಷಣ ಹೊಸಬ. ನಮ್ಮ ಸ್ಥೂಲ ದೇಹವೇನೋ ಪ್ರತಿಕ್ಷಣದ ಬದಲಾವಣೆ ತೋರ್ಪಡಿಸದು. ಆದರೆ ವಾಸ್ತವದಲ್ಲಿ ನಾವು ಪ್ರತಿ ಗಳಿಗೆ ಕಾಲದೊಂದಿಗೆ ಹಳಬರಾಗುತ್ತ ಸಾಗುತ್ತೇವೆ. ಹಾಗೆಯೇ ನಾವು ಪ್ರತಿ ಘಳಿಗೆ ಹೊಸಬರೂ ಆಗುತ್ತೇವೆ! ಆದ್ದರಿಂದ `ಎರಡು ಸಾರಿ ಕಾಲಿಟ್ಟ ಆ ಮನುಷ್ಯ ಒಬ್ಬನೇ ಅಲ್ಲ’ ಎನ್ನುವುದು ಸಮಂಜಸವೇ ಆಗಿದೆ.

Leave a Reply