ರಮದಾನಿನ ಕಾವ್ಯ ಉಪಾಸನೆ, ಧ್ಯಾನ ~ 1 : ಕೇಶವ ಮಳಗಿ ಲೇಖನ

Untitledಕನ್ನಡದ ಮುಖ್ಯ ಕಥೆಗಾರರಲ್ಲಿ ಒಬ್ಬರಾಗಿರುವ ಕೇಶವ ಮಳಗಿಯವರು ಭಕ್ತಿಯ ನೆಲೆಗಳ ಹುಡುಕಾಟವನ್ನು ಕೇಂದ್ರವಾಗಿಟ್ಟುಕೊಂಡ  “ದೈವಿಕ ಹೂವಿನ ಸುಗಂಧ:- ಮಧ್ಯಯುಗದ ಭಕ್ತಿಲೀಲೆಯ ಸ್ವರೂಪ” ಎಂಬ ಕೃತಿಯನ್ನು ಈ ವರ್ಷಾಂತ್ಯದಲ್ಲಿ ಪ್ರಕಟಿಸಲಿದ್ದಾರೆ. ಈ ಕೃತಿಯಲ್ಲಿ ಭಾರತದ ಉಪಖಂಡದ ಭಕ್ತಿಪರಂಪರೆಯ ಕೆಲವು ಕವಿತೆಗಳು, ಪರ್ಷಿಯನ್‌ ಸೂಫಿ ಕವಿಗಳ ಕಾವ್ಯ ಇರಲಿದೆ. ಈ ಪ್ರಕಟಣೆಯ ಸಿದ್ಥತೆಯಲ್ಲಿರುವ ಕೃತಿಯ ಕೆಲವು ಪುಟಗಳನ್ನು ಮಳಗಿಯವರ ಅನುಮತಿ ಪಡೆದು ಇಲ್ಲಿ ಪ್ರಕಟಿಸಲಾಗಿದೆ. 

ಲೋಕಕ್ಕೆ ರಮಜ಼ಾನಿನ ಅರ್ಥವೇನೆ ಇರಬಹುದು. ನನ್ನ ಹರೆಯದ ರಮಜ಼ಾನಿನಲ್ಲಿ ಅಡಗಿರುವ ನೆನಪುಗಳು: ರೋಜಾ ಮುರಿದ ಮೇಲೆ ರುಚಿಯಾದ ತಿನಿಸುಗಳು ಎಲ್ಲಿ ಸಿಗುತ್ತವೆ, ಎಂದು ಹುಡುಕಿ ಹೊರಡುವುದು, ಮುಸುಲ ಗೆಳೆಯರ ಜತೆ ಇಡೀ ರಾತ್ರಿ ಗಲ್ಲಿಗಳನು ಸುತ್ತುವುದು, ಮಸೂತಿಯಿಂದ ಮಸೂತಿಗೆ ಅಲೆಯುತ್ತ, ಕೊನೆಗೆ ಯಾವುದೋ ಒಂದು ಮಸೂತಿಗೆ ಉಪ್ಪರಿಗೆಯ ಮೇಲೆ ಅರೆಗಳಿಗೆ ಮಲಗಿ, ’ಚಾರ್‌ ಬಜೆ, ಉಠೋ!’ ಎಂಬ ಸದ್ದು, ಬಳಿಕ ಸುಶ್ರಾವ್ಯ ಅಜಾನ್‌ ಕೇಳುತ್ತ ಮತ್ತೆ ನಸುಕಿನ ಬೀದಿಗಳಿಗಿಳಿಯುವುದು! ಜನ ಎಷ್ಟೇ ಕಡು ಬಡವರಾದರೂ, ಸಂಕಷ್ಟಗಳ ಸುರಿಮಳೆಯಲ್ಲಿಯೇ ಮೀಯುತ್ತಿದ್ದರೂ ಈ ಮಾಸದಲಿ ಉಪವಾಸ, ಉಪಾಸನೆ, ಸ್ಮರಣೆ, ದಾನತ್ಯಾಗಗಳನು ತಪ್ಪಿಸರು. ಬಡವನೊ, ಸಿರಿವಂತನೊ ಈ ಮಾಸದಲಿ ಅವರ ವ್ಯಕ್ತಿತ್ವಗಳನು ತುಂಬುವ ದೈವಿಕತೆ, ಉದಾರತೆ, ಮೃದುತ್ವ, ಪರಹಿತ ಚಿಂತನೆ, ‘ಇವರು ದೇವಮಾನವರು’ ಎಂಬಂತೆ ಮಾಡುತ್ತವೆ.

ನನ್ನ ಬಾಲ್ಯದ ಗೆಳೆಯ ಆರೀಫ್‌ನ ಮನೆಯ ಶೀರ್‌ ಕುರ್ಮಾ (ಉತ್ತರ ಕರ್ನಾಟಕದ ಆಡುಮಾತಲ್ಲಿ ಸುರಕುಂಭಾ)ದ ಸವಿರುಚಿ, ಕೇಸರಿ, ಹುರಿದ ಗೋಡಂಬಿ, ಮನೂಕಾಗಳ ಹದ, ನನ್ನ ನಾಲಗೆಯ ಮೇಲೆ, ’ನರ ಜನುಮಕ್ಕೆ ಗುರು ಕೊಟ್ಟ ಅತ್ತರಿನ ಹಾಗೆ’, ಎಂದಿಗೂ ಮಾಸುವುದಿಲ್ಲ. ಗೆಳೆಯರೆಲ್ಲ ನನ್ನನ್ನು ಮುಸುಲನೆಂದೇ ತಿಳಿದಿದ್ದರು. ನಾನೂ ಅವರನ್ನು ಕರ್ಮಠ ಬ್ರಾಹ್ಮಣರೆಂದು! ನಮ್ಮ ಮನೆಯ ಮದುವೆ-ಮುಂಜಿವೆಗಳ ಪಂಕ್ತಿಯೂಟದಲ್ಲಿ ಈ ಗೆಳೆಯರು ಬ್ರಾಹ್ಮಣರೊಂದಿಗೆ ಕುಳಿತು ಊಟ ಮಾಡಿದ್ದನ್ನು ಇಂದಿನ ಕಲುಷಿತ, ದುಷ್ಟಕಾಲದಲ್ಲಿ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ, ಜಲ್ಲನೆ ಬೆವರು ಹರಿಯುತ್ತದೆ!

ಆದರೆ, ಈಗ ವಯಸ್ಸಾಗುತ್ತಿರುವುದರಿಂದ ಮಸೂತಿಗಳ ಹುಡುಕಿ ಹೊರಡಲಾರೆ. ಇಮಾರತುಗಳು ಹಗಲಿನಲಿ ಬಿಸಿಲನು ಕುಡಿಯುತ್ತವೆ. ಇರುಳು ಥಣ್ಣಗಿನ ಚಳಿಯನು ಹೀರುತ್ತ ಕಲ್ಲುಗಳು ಮಾತ್ರ ಆಗಿರುತ್ತವೆ. ಮುಂಜಾವದ ಅಜಾನ್ ಕೇಳಿ ನಸುಕಿನ ಕತ್ತಲ ಬೀದಿಗಳನ್ನು ಹುಡುಕುಕೊಂಡು ಹೋಗಲಾರೆ. ನಾವು ಎದುರಾಗುವ ಪ್ರತಿಯೋರ್ವನಲೂ ದೇವನುಡಿ ಇರುವಾಗ ಮಂತ್ರತಂತ್ರಗಳ ಹಂಗೇಕೆ?

ನನಗೆ ತಿಳಿದಿದೆ: ದುರ್ವಾಸನೆಯ ಬೆವರು ಸುರಿಸುವ ನರನ ಚರ್ಮವನು ದೈವಿಕ ಪರಿಮಳದ ಸುವಾಸನೆಯಿಂದ ಪವಿತ್ರಗೊಳಿಸಬಲ್ಲ ಅಗೋಚರ ಗುಲಾಬಿ ಹೂವಿನ ತೋಟಗಳು ಎಲ್ಲಿವೆ, ಆ ಹೂಗಳ ಮೇಲೆ ಯಾವ ಜಾವದಲಿ ಸಾಕ್ಷಾತ್ಕಾರದ ಇಬ್ಬನಿಗಳು ಹರಳುಗಟ್ಟಿ ಮುತ್ತುಗಳಾಗುವವು, ಮತ್ತು ಅದನ್ನು ಹೇಗೆ ಯಾರಿಗೂ ಅರಿವಾಗದ ಹಾಗೆ, ತುಟಿ ತುಟಿಗಳ ನಡುವೆ ಸದ್ದಾಗದ ಹಾಗೆ ಸೋಕಿಸಿ ಹೀರಿ, ’ಫನಾ’ ಆಗಬೇಕು, ಎಂದು.

ಜತೆಗೆ, ನಾನು ಮಾಡಬಹುದಾದ ಇನ್ನೊಂದು ಕೆಲಸವೂ, ಹೇಳಬಹುದಾದ ಕೆಲವು ನುಡಿಗಳೂ ಇವೆ: “ಏ, ಸಾಕಿ, ಬಳಿ ಸಾರಿ ಬಾ ನಿಧಾನ. ಬಂದು ಪಕ್ಕದಲಿ ಕುಳಿತುಕೋ! ಸುರಿ ನಿನ್ನ ಮದಿರೆಯನು ಬಟ್ಟಲು ತುಂಬಿ ಹರಿಯುವವರೆಗೆ. ಕುಡಿಯುವೆ ಗಂಟಲು ಹರಿಯುವವರೆಗೆ! ಕೈಯಲಿರುವ ಕಾವ್ಯದ ಕಟ್ಟುಗಳನು ಬಿಡಿಸಿ, ಕೊಡು ಇತ್ತ. ಓದಿ, ಮರುಳಾಗಿ, ಮರುಳಸಿದ್ಧನಾಗಿ, ಬುದ್ಧನಾಗಿ, ಎಚ್ಚರವಾದಾಗ ನೀನೆ ಆಗಲಿರುವೆ!
*

ಈ ವರ್ಷದ ಕೊನೆಗೆ ಪ್ರಕಟಿಸುವ ಆಶಯವನ್ನು ಹೊಂದಿರುವ ನನ್ನ ಹೊಸ ಪುಸ್ತಕದಲ್ಲಿ ಭಕ್ತಿಯ ನೆಲೆಗಳನ್ನು ಹುಡುಕಲು ಯತ್ನಿಸುತ್ತಿರುವೆ. ಪುಸ್ತಕದ ಹೆಸರು: “ದೈವಿಕ ಹೂವಿನ ಸುಗಂಧ:- ಮಧ್ಯಯುಗದ ಭಕ್ತಿಲೀಲೆಯ ಸ್ವರೂಪ. ಭಾರತದ ಉಪಖಂಡದ ಭಕ್ತಿಪರಂಪರೆಯ ಕೆಲವು ಕವಿತೆಗಳು, ಪರ್ಷಿಯನ್‌ ಸೂಫಿ ಕವಿಗಳ ಕಾವ್ಯ ಇರಲಿದೆ (ಇಂದಿನ ಅಫಘಾನಿಸ್ತಾನದಿಂದ ತುರ್ಕಿಯವರೆಗಿನ ಕವಿಗಳು). ಕನ್ನಡದಲ್ಲಿ ಈವರೆಗೆ ಕಾಣದಿರುವ ಕವಿಗಳ ಕೆಲವು ಸಾಲುಗಳನ್ನಾದರೂ ಹೊಸ ತಲೆಮಾರಿನ ತರುಣರು ಓದಲು ದೊರಕುವಂತೆ ಮಾಡುವ ಉದ್ದೇಶವಿದೆ. ನನ್ನ ಗೋಡೆಯಲ್ಲಿ ಕೆಲವು ಸಾಲುಗಳನ್ನು ರಮಜ಼ಾನ್‌ ಮಾಸದಲ್ಲಿ ಹಾಕಲಿರುವೆ. ಉತ್ತರಕರ್ನಾಟಕದ ಭಾಷೆಯಲ್ಲಿ ಹೇಳುವುದಾದರೆ ತುರುಕ್-ಬೊಮ್ಮನ್‌ರ (ಸೂಫಿ-ಶೈವ-ವೈಷ್ಣವ) ಮಿಲನ. ಇಲ್ಲಿ ಗದ್ಯ, ಪದ್ಯ, ಗ-ಪದ್ಯ, ಸ್ತೋತ್ರ, ಕೀರ್ತನೆ ಇತ್ಯಾದಿ ಸಾಲುಗಳಿರಲಿವೆ. 

ಮೊದಲ ಸರಣಿ (?)ಯಲ್ಲಿ ನಾಲ್ಕು ಸೂಫಿ ಪಂಥದ ಮುಂಬೆಳಗಿನ ನಂದಾದೀಪಗಳ ಬೆಳಕು ಹಾಯಿಸುತ್ತಿರುವೆ. ಇದು ಹರಿದಾಡುವ ಮಿಣುಕು ದೀಪವಷ್ಟೇ! ಸಂಕಲನದಲ್ಲಿ ಇವರ ಇನ್ನಷ್ಟು ಕವಿತೆಗಳನ್ನು ಓದಬಹುದು.
*

ಮೂರು ತಲೆಮಾರು: ಆತ್ಮಸಾಕ್ಷಾತ್ಕಾರದ ಸೂಫಿ ನಂಬಿಕೆಯೊಂದೇ!

ಬಹಾವುದ್ದೀನ್‌ ವಲದ್‌: ಸೂಫಿ ಪ್ರವಚನಕಾರ, ನ್ಯಾಯಪಂಡಿತ, ತನ್ನ ನಿಷ್ಠುರ ನಿಲುವಿನಿಂದಾಗಿ ಆಳುವವರ ಅವಕೃಪೆಗೆ ಗುರಿಯಾದವನು.

ಜಲಾಲುದ್ದೀನ್‌ ರೂಮಿ: ಬಹಾವುದ್ದಿನ್‌ನ ಮಗ. ತಂದೆಯ ಆಧ್ಯಾತ್ಮಿಕ ಪರಂಪರೆ, ಬಹುತ್ವ ಮತ್ತು ಪರಧರ್ಮ ಸಹಿಷ್ಣುತೆ ಬೋಧಿಸುತ್ತ ಹೊಸ ನಂಬಿಕೆಯ ಪಂಥ ಹುಟ್ಟು ಹಾಕಿದವನು; ಅಗ್ನಿಪೂಜಕ ಜರಾಷ್ಟ್ರಧರ್ಮಿಯರು,ಯಹೂದಿಗಳು, ಕ್ರಿಸ್ತ ಆರಾಧಕರನ್ನು ಗೌರವಾದರಗಳಿಂದ ಕಂಡು ಕರ್ಮಠ ಮುಸ್ಲೀಮರ ದೂಷಣೆಗೆ ಒಳಗಾದವನು.

ಸುಲ್ತಾನ್‌ ವಲದ್‌: ಅಜ್ಜ ಬಹಾವುದ್ದೀನ್‌, ತಂದೆ ರೂಮಿಯ ಆಧ್ಯಾತ್ಮಿಕ ಪರಂಪರೆ ಮುಂದುವರೆಸಿ ತಂದೆಯ ಹೊಸ ಪಂಥವನು ಗಟ್ಟಿ ತಳಹದಿಯ ಮೇಲೆ ಕಟ್ಟುತ್ತ ಹೋದವನು. ಸೂಫಿ ಪ್ರವಚನಕಾರ, ಕವಿ.

ಶಂಷುದ್ದೀನ್‌ ಎ- ತಬ್ರೀಜ಼್‌: ರೂಮಿಯ ಆಧ್ಯಾತ್ಮಿಕ ಹಾದಿಯನ್ನು ತಿದ್ದಿತೀಡಿ, ಆತನನ್ನು ಕವಿಯಾಗಿಸಿ, ಕಟೆದು ಮೂರ್ತಿ ಮಾಡಿದವನು. ಸಮಾಜದ ನಿಂದನೆಗೆ ನೊಂದು, ಇದ್ದಕ್ಕಿದ್ದಂತೆ ಕಣ್ಮರೆಯಾದ ಅವಧೂತ. ರೂಮಿಯ ಹಿರಿಯ ಮಗ ಸುಲ್ತಾನ್‌ ಈತನ ಮನವೊಲಿಸಿ ಮರಳಿ ಕರೆತಂದಿದ್ದು ಉಂಟು!

ಬಹಾವುದ್ದೀನ್‌ ವಲದ್‌ (ಕ್ರಿ.ಶ. ೧೧೫೨-೧೨೩೧)

ಈ ಅಚ್ಚರಿಯ ಹೂವನು ನೋಡಿ, 
ಅದನು ಕಾಣಲಾರೆವು, ಆದರೂ,
ಸೂಸುವ ಸುಗಂಧವನು ಅಡಗಿಸಿಡಲಾರೆವು.

ದೈವ, ಈ ಅಗೋಚರ ಪುಷ್ಪ.
ಎಲ್ಲೆಡೆಯೂ ವ್ಯಾಪಿಸಿರುವ 
ಹೂವ ಸುಗಂಧವೇ ಪ್ರೇಮ.

ಅಗೋಚರದಲೆ ಇಂಥ ಸವಿಯಿರುವಾಗ,
ಸಮೀಪವಿದ್ದಾಗ ಇನ್ನೆಂಥ ಅನುಭೂತಿಯಿದ್ದೀತು? 
*

ಸಮಾ
(ಸಮಾ: ಸೂಫಿ ಪಂಥದ ಸಂಗೀತ, ಸಂವಾದ, ವಾಚನ, ಉಪಾಸನೆಗಳನ್ನೊಳಗೊಂಡ ದೈವಿಕ ಗೋಷ್ಠಿ, ಇದನ್ನು ಶ್ರುತಿ ಹಾಗೂ ಸ್ಮೃತಿ ಎಂದು ಕೂಡ ಕರೆಯಬಹುದು)

ಗಹನವಾದ ಆಲಿಸುವಿಕೆಯಲಿ ಮಿಡಿತವಿದೆ. ಬಡಿತವಿಲ್ಲದೆಡೆ ಜೀವವಿಲ್ಲ. 
ಮಾತು, ಸಂಗೀತ, ಮತ್ತು ಸಮಾದ ಗತಿ, ಗೆಳೆಯರೊಂದಿಗಿನ ಸಂವಾದದಂತೆ
ಸಹಜವಾಗಿ ಹರಿಯುವವು. ನೇಗಿಲಿನ ತೋಡು, ಬೀಜಗಳನು ಬಿತ್ತುವಂತೆ
ಆಲಿಸುವಿಕೆಯ ಬೋಗುಣಿಗೆ ಹಾಡು ಸುರಿಯಲಾಗುವುದು. 
ಕೆಲವು ಜೊಳ್ಳು ಬೀಜವಿದ್ದಾವು. ಅದಕಾಗಿ ತೋಡನು ದೂರದಿರು. 
ಇಲ್ಲಿ ಹೊಳೆವ ಗಾಜಿನ ಬಾನಿಯಲಿ ಸಂಗೀತ ಮತ್ತು ಕವಿತೆಗಳಿವೆ. 
ಸಮಾದಲ್ಲಿ ಸೊಗಸಾದ ವೈವಿಧ್ಯತೆಯಿರಬೇಕು. ಅತಿಥಿಗಳಿಗೆಂದು ಆಸನಗಳು ಸಿದ್ಧಪಡಿಸಿ,
ಅವರನು ಆಹ್ವಾನಿಸಿದಾಗ ಯಾವುದೇ ಕೆಟ್ಟ ಪದಾರ್ಥವನು ನೀಡಿ ಸತ್ಕರಿಸಬಾರದು. 
ಒಂದೊಮ್ಮೆ ಹಳಸಿದ ಪದಾರ್ಥವನು ತಿಳಿದೂ ಬಡಿಸಿದಾಗ, 
ನೀವೆಷ್ಟೇ ಉದಾರಿಗಳಾಗಿದ್ದರೂ ಅದರ ಶಾಪ ಬಹುಕಾಲ ಕಾಡುವುದು. 
ಸಮಾ ಉಲ್ಲಾಸಿತವಾಗಿರಬೇಕು; ಪ್ರೀತಿಯಲಿ ಸಿದ್ಧಪಡಿಸಿದಂತಿರಬೇಕು.

ಸಂಗೀತದೊಂದಿಗೆ ವಾಚಿಸುವ ಕವಿತೆಗಳು ಮತ್ತು ಕದಲಿಕೆಗಳು 
ಎದ್ದು ಕಾಣುವ ವಸಂತದ ಅಬ್ಬರದಂತೆ, ಸ್ಫುಟವಾಗಿ, 
ಮೆದುವಾದ ಒತ್ತು ನೀಡಿ, ಮೌನಕೊಂದಿಷ್ಟು ತಾವು ನೀಡಿ, 
ಮತ್ತೆ ಗುಡುಗಂತೆ ಮೊಳಗಿ, 
ಬಳಿಕ ನಿಧಾನಕೆ ಇಳಿದಾಣವ ತಲುಪುವಂತಿರಬೇಕು. 
ಅವಧಿ ಬಹಳ ದೀರ್ಘವಾಗಿರಬಾರದು.

ವಿನೋದ, ನಗೆ, ಸಮಾದ ಒಳಹೂರಣವಾಗಿಲ್ಲದ್ದಿದ್ದರೆ, ಹೊಳಪಿಲ್ಲದಿದ್ದರೆ, 
ಸವಿನಯದ ಅರಿವಿಲ್ಲದಿದ್ದರೆ, ಹೊಗಳಿಕೆಯ ಮಾತುಗಳಲ್ಲಿ ಸತ್ಯವಿರುವುದಿಲ್ಲ.
ಅತಿ ಹೊಗಳಿಕೆ ಘನತೆಗೆ ತಕ್ಕುದಲ್ಲ.

ದೇಹದ ಪ್ರತಿ ಅಂಗಕೂ ಸಂಗೀತದ ಸಾನಿಧ್ಯವಿದೆ. ಪ್ರತಿಯೊಂದು
ಅಂಗವೂ ತನ್ನದೇ ರೀತಿಯಲಿ ಸಮಾವನ್ನು ಅನುಭವಿಸುವುದು. 
ಕಿವಿಗಳು ಶಬ್ದವನು ಹೃದಯಕ್ಕಿಂತ ಬೇರೆ ವಿಧದಲಿ ಹೀರುವವು.
ತಂತಿಯನು ಜೋರಾಗಿ ಎಳೆದಂತೆ ನುಡಿದ ಮಾತುಗಳು,
ಕಿವಿಗೆ ಕೊಂಚ ಬಿರುಸಾಗಿ ಕೇಳಬಹುದು. ಆದರೆ ಹೃದಯಕದೆ
ಆರ್ದ್ರವಾಗಿರಬಹುದಲ್ಲವೆ? ಇಂಪಾದ ಹಾಡು ನಿಮ್ಮ ತನುವಿನ ಅರಿವನು ಕರಗಿಸಬಹುದು. 
ಮನುಷ್ಯನ ದೇಹ ತನ್ನ ಅಂಗಗಳೊಂದಿಗೆ ಸಾಮರಸ್ಯ ಸಾಧಿಸುವಂತೆಯೇ,
ಸಮಾ, ತನ್ನೆಲ್ಲ ವಿವಿಧ ಸಂಗತಗಳೊಂದಿಗೆ ಸಾಂಗತ್ಯ ಸಾಧಿಸಬೇಕು.
ಪ್ರತಿ ಸಂಗತವೂ ತನ್ನದೆ ಪ್ರತ್ಯೇಕ ಕೆಲಸವನ್ನು ಹೊಂದಿದೆ. 
ಮನುಷ್ಯನ ಉಪಸ್ಥಿತಿಯಲ್ಲಿಯೇ ಎಲ್ಲವನೂ ಸರಿದೂಗಿಸುತ್ತ ಪೂರ್ಣವಾಗುವುದು. 
ದೇಹ, ಹೃದಯ, ಆತ್ಮ ಮತ್ತು ಉಜ್ವಲ ಪ್ರಜ್ಞೆಗಳ ಸಮಾಗಮ ಪರಿಪೂರ್ಣವಾಗುವುದು. 
*

ಜಲಾಲುದ್ದೀನ್‌ರೂಮಿ (ಕ್ರಿ.ಶ. ೧೨೦೭-೧೨೭೩)

ಸೂಫಿ ಸತ್ಸಂಗ

ನನ್ನೆರಡು ಕಣ್ಣುಗಳಿಂದಲೇ ನೀನು ನೋಡುತಲಿರುವೆ 
ನೀನು ನನಗಿಂತ ನನಗೆ ಅತಿ ಸನಿಹದಲಿರುವೆ!
ನಿನ್ನ ಕಾಂತಿ ಮೀರಿಸುವುದು ಚಂದ್ರನ ಬೆಳಕನ್ನು, 
ಬಾರೊಮ್ಮೆ ತೋಟಕೆ,ವಿನೀತವಾಗುವುದು ಗುಲಾಬಿಯ ಖ್ಯಾತಿ,
ನಿನ್ನ ಆಗಮನವು ಹೊಸಯಿಸುವುದದರ ಸೊಬಗು.
ದೇವದಾರು ತಲೆತಗ್ಗಿಸುವುದು ತನ್ನ ಎತ್ತರಕೆ
ನನಗಿಂತ ನೀನೆ ಚೆಲುವೆಂದು ಘೋಷಿಸುವುದು ಜಲನೈದಿಲೆ. 
ಕರುಣೆ ಹರಿಸುವಾಗ ನೀನು ಕರಗುವ ಮೃದು ಮೇಣ
ಉದಾಸೀನತೆಯಲಿ ಕಬ್ಬಿಣಕಿಂತ ಬಲು ಕಠಿಣ. 
ಅವಳ ಮುಖವನೆದುರಿಸಬೇಕು ಒರಟಾಗಿಬೇಡ.
ಅವಳ ಚೆಲುವು ಬುವಿಯಂತೆ ಒದ್ದೆ, ಮೆದು. 
ಸೆಣೆಸಾಟದಲಿ ಬಿಟ್ಟುಕೊಡು ಶಸ್ತ್ರ, ತೆರೆದಿಡು ತೆರೆದೆದೆ
ಆಕೆಗಿಂತ ಬಲವಾದ ರಕ್ಷಕಿ ನಿನಗೆ ಬೇರೆ ಬೇಕೇನು?

ಹಾಗೆಂದೇ, ನಿನ್ನ ಬೆಳಕಿಂದ ನಿವಾಸವು ಕಾಂತಿ ಪಡೆಯಲು 
ಸೂಫಿ ಸತ್ಸಂಗದಲಿ ಮುಚ್ಚುವರು ಎಲ್ಲ ಬಾಗಿಲುಗಳು. 
*

ಮುಟ್ಟಲು ಬಿಡಿ

ಕೊಂಚ ಮುಟ್ಟಲು ಬಿಡಿ, ಸಮಪಾಕದ ಈ ತುಟಿಗಳನು,
ಬಳಿಕ ಕೊಳಲಿನಂತೆ ಹೇಳಬೇಕಿರುವುದನು ಉಲಿಯುವೆನು.
ಹಾಡುಗಾರನಿಗೆ ತಿಳಿದಿರಬಹುದು ಅಸಂಖ್ಯ ಗೀತೆಗಳು;
ಆದರೆ ನಾಲಗೆ ಕತ್ತರಿಸಿದ ಮೂಕರೋದನವನಾರು ಬಲ್ಲರು? 
ಒಂದೊಮ್ಮೆ, ಗುಲಾಬಿ ಮುದುಡಿದರೆ, ತೋಟ ಕಣ್ಮರೆಯಾಗುವುದು,
ಹಾಡುಹಕ್ಕಿ ಮತ್ತೆಂದಿಗೂ ತನ್ನ ದನಿಯನು ಎತ್ತಲಾರದು.
ಪ್ರಿಯಕರನೇ ಒಲುಮೆ,ಮುಸುಕು,ಎಲ್ಲವೂ ಆತನೇ!
ಪ್ರಿಯಕರನು ಬದುಕಿ,ಪ್ರೇಮಿ ಹತನಾಗಿದ್ದಾನೆ. 
ಬಡಪಾಯಿ ಪ್ರೇಮಿಯನು ಒಲವು ಕಾಪಿಡಲಿಲ್ಲ! 
ಅವನ ಗರಿಗಳನೆಲ್ಲ ಹಕ್ಕಿಪುಕ್ಕದಂತೆ ಕಿತ್ತು ನೆಲಕೆ ಬಿಸುಟಲಾಗಿದೆ.
ಒಡನಾಡಿಯ ಬೆಳಕಿನಾಸರೆಯಿರದೆ ಮುಂದೇನು ಬರುವುದು;
ಹಿಂದೇನಾಯಿತೆಂದು ಅರಿವುದಾದರೂ ಎಂತು? 
ಮನದಾಳದ ಮಾತು ಹೊರಹಾಕಲು ಒಲವು ಬಯಸುತಿದೆ.
ಕನ್ನಡಿಗಳಾವೂ ಪ್ರತಿಫಲಿಸುವುದಿಲ್ಲವೆಂದರೆ ಅದು ಯಾರ ತಪ್ಪು?
ಕನ್ನಡಿಗಳೇಕೆ ಪ್ರತಿಬಿಂಬ ಸೂಸವೆಂದು ನಿನಗೆ ತಿಳಿದಿದೆಯೆ?
ಶುದ್ಧಗೊಳಿಸದ ಕೊಳೆಕಸವು ಮುಖವನಾವರಿಸಿದೆ.

*

ಸುಲ್ತಾನ್‌ವಲದ್‌ (ಕ್ರಿ.ಶ.೧೨೨೬-೧೩೧೨)

ನೀನು ನನ್ನವನೆಂಬ ನಂಬಿಕೆಯಲಿ ಬದುಕಿರುವೆ ಪ್ರಿಯಕರ!
ನನಗಾವ ನೋವು,ದುಃಖಗಳಿಲ್ಲ,ನೀನೆನ್ನ ನಿವಾರಕ.
ಎನ್ನ ತೊರೆದರೆ ನೀನು,ನನ್ನ ಸಾವದು ನಿಶ್ಚಿತ,
ಈ ದೇಹ ಬರಿ ರೂಪ,ನೀನೆನ್ನ ಒಳಚೇತನ.
*

ದೈವ ಸ್ವರೂಪ ಮತ್ತು ದೈವ ಸತ್ವ

ಯಾರೋ ಕೇಳಿದರು: “ಕೆಲವು ದರವೇಶಿಗಳು ತಿರುಗಣಿ ನೃತ್ಯದಲ್ಲಿ (ಧಿಕ್ರ್ ಅಥವ ಜ಼ಿಕ್ರ್: ಪರಿಭ್ರಮಣ ನಾಟ್ಯ) ತೊಡಗಿ, ಏಕತಂತಿಯಿಂದ ಸಂಗೀತವನು ನುಡಿಸುತ್ತಾರೆ. ಈ ಆಚರಣೆ ಎಷ್ಟು ಸರಿ? ದರವೇಶಿಗಳಾದವರು ಹೀಗೆ ಮಾಡಲೇಬೇಕೇನು? ಧರ್ಮಗ್ರಂಥದಲ್ಲಿ ಎಲ್ಲಿ ಹೇಳಿದೆ?”

ವಿವರವಾಗಿ ಉತ್ತರಿಸುವೆ, ಕೇಳಿ: ದೇವಸಾಕ್ಷಾತ್ಕಾರಕ್ಕಾಗಿ ಒಬ್ಬ ನಿಷ್ಠಾವಂತ ದರವೇಶಿ ಪ್ರಾರ್ಥನೆ, ಉಪವಾಸ, ಏಕಾಂತ, ಸ್ಮರಣೆ ಹೀಗೆ ಬಹುವಿಧದ ಉಪಾಸನೆಯಲ್ಲಿ ತೊಡಗುತ್ತಾನೆ. ಈ ಕಾರಣವಾಗಿ ಪರವಶ ಅನುಭಾವಿಕ ಸ್ಥಿತಿ (ಹಲ್), ಮತ್ತು ದಾರ್ಶನಿಕ ರುಚಿ (ಜ಼ಕ್ವ್) ಪಡೆದುಕೊಳ್ಳುತ್ತಾನೆ. ತನ್ನ ಆಂತರಿಕ ಸಮತೋಲನವನ್ನು ಸಂಗೀತ ಆಲಿಸುತ್ತ, ನೃತ್ಯದಲಿ ತೊಡಗುತ್ತ ಹೋದಂತೆ ಆತನ ದೈವಿಕ ಸ್ಥಿತಿ ಹಾಗೂ ಕಾಣ್ಕೆಗಳು ಉಕ್ಕಿ ಹರಿಯತೊಡಗುತ್ತವೆ. ದರವೇಶಿಯ ಆಧ್ಯಾತ್ಮಿಕ ಮಾರ್ಗದರ್ಶಿ ಅದಕ್ಕೆ ಅನುವು ಮಾಡಿಕೊಡುತ್ತಾನೆ. ಈ ತಿರುಗುಣಿ ನೃತ್ಯದ ಗುರಿ-ಉದ್ದೇಶ ದೈವ ಸಾಮೀಪ್ಯ ಪಡೆಯುವುದೇ ವಿನಹಃ ವೈಯಕ್ತಿಕ ಖುಷಿಯನ್ನು ಗಳಿಸುವುದಲ್ಲ. ದೇವೋಪಾಸನೆಯಲ್ಲಿ ಒಂದೊಮ್ಮೆ ಆಧ್ಯಾತ್ಮಿಕ ಆಘಾತವುಂಟಾದರೆ ಅಂಥ ಉಪಾಸಕನಿಗೆ ನೃತ್ಯದಲ್ಲಿ ಭಾಗಿಯಾಗಲು ಅವಕಾಶವಿರುವುದಿಲ್ಲ.
*
ಮದಿರೆ ‘ಗುರಿ’ಯಾಗಿದೆಯೆ ಹೊರತು,’ಬಟ್ಟಲು’ ಗುರಿಯಲ್ಲ. ಒದಗುತ್ತಿರುವ ಪರಮಸುಖವು ’ಸದ್ಯ’ದ ’ಸ್ಥಿತಿ’ಯೇ ಹೊರತು ರಮ್ಯಕಲ್ಪನೆಯಲ್ಲ.

ಅಂತೆಯೆ, ಪ್ರವಾದಿ ಅಯೇಷಳ ಪಾದಗಳನ್ನು, ಮುಖವನ್ನು ಚುಂಬಿಸಿದಾಗ ಆಕೆ ಸಖೇದಾಶ್ಚರ್ಯಕ್ಕೆ ಒಳಗಾದಳು. ಕೆಲವು ದಿನಗಳ ತನಕ ಪ್ರವಾದಿ ಆಕೆಯ ಕಣ್ಣುಗಳಲ್ಲಿ ಕಣ್ಣುಗಳನಿಟ್ಟು ನೋಡಲಿಲ್ಲ. ಇದರಿಂದ ತನಗೆ ಉಂಟಾಗುತ್ತಿರುವ ಯಾತನೆಯನ್ನು ಅಯೇಷ ನೋವಿನ ದೇವನಲ್ಲಿ ಅರುಹಿದಳು. ಅಯೇಷಳನ್ನು ಕಂಡು ಸಮಾಧಾನಪಡಿಸು ಎಂಬ ಸಲಹೆ ಪ್ರವಾದಿಗಳಿಗೆ ತಲುಪಿತು. ಮುಹಮ್ಮದ್, ಅಯೇಷಳ ಬಳಿ ಹೋಗಿ ಕ್ಷಮೆ ಯಾಚಿಸಿದರು.

ಅವರು ಆಕೆಯ ಪಾದ ಮತ್ತು ಕೈಗಳನ್ನು ಚುಂಬಿಸಿ ಹೇಳಿದರು: ’ಓ,ಅಯೇಷ ನಿನ್ನ ಮುಖದ ಪ್ರೀತಿಗಾಗಿ ನಿನ್ನ ಪಾದ ಮತ್ತು ಕರಗಳನ್ನು ಚುಂಬಿಸುತ್ತಿರುವೆ ಎಂದು ತಿಳಿಯಬೇಡ. ನಾನು ಅವುಗಳನ್ನು ಸತ್ಯದ ಮೇಲಿನ ಪ್ರೀತಿಯಿಂದ ಚುಂಬಿಸುತ್ತೇನೆ. ನಿನ್ನ ಮುಖಕ್ಕೆ ಮುಖ ನೀಡಿದಾಗ ನಾನಲ್ಲಿ ಗೆಳೆಯನನ್ನು ಕಾಣುತ್ತೇನೆ. ಇರುಳು ನಿನ್ನ ಕಂದು ದೇಹದಲ್ಲಿ ದೈವಿಕ ಬೆಳಗನ್ನು ಕಾಣುತ್ತೇನೆ. “ನಾನು ತಲೆ ಬಾಗುವುದು ಚಿರಂತನ ಸತ್ಯವಾದ ದೇವರೆದುರೆ ಹೊರತು,ನಶ್ವರವಾದ ನಿನ್ನ ದೇಹದ ಎದುರಲ್ಲ. ಇನ್ನು ಮೇಲೆ ನಿನ್ನಲ್ಲಿ ನಿನ್ನನ್ನಷ್ಟೇ ಕಾಣಬೇಡ, ‘ದೇವರ’ನ್ನು ಕಾಣು.”

ಪ್ರವಾದಿಗಳು, ಸಂತರು, ಧರ್ಮಗಳು, ಪಂಥ, ಮಾರ್ಗಗಳು ಹುಟ್ಟಲು, ಅವತರಿಸಲು ಇರುವ ಗಹನ ಕಾರಣ ಇದೇ ಆಗಿದೆ. ಸತ್ಯದ ಅನ್ವೇಷಕರು ಮತ್ತು ಅವರನ್ನು ಅನುಕರಿಸುವವರನ್ನು ಸಮಾನರೆಂದು ಪರಿಗಣಿಸಲಾಗುವುದಿಲ್ಲ. ಸತ್ಯದ ಅನ್ವೇಷಕರ ಸಾರಭೂತ ಚೆಲುವು ಪ್ರಕಟವಾಗುವುದು; ಮತ್ತು ಅನುಚಾರಕರಲ್ಲಿ ಒಳಗೆ ಅವಿತುಕೊಂಡ, ಆಧಾರವಾಗಿರುವ ಮುಸುಕನ್ನು ತೆಗೆದುಹಾಕಲಾಗುವುದು. ಎಲ್ಲ ಮನುಷ್ಯರಲ್ಲಿಯೂ ಈ ಸಾರಭೂತ ಚೆಲುವು ಅಡಗಿರುತ್ತದೆ. 
*

ದೇಹದೊಳಗಿರುವ ಚೇತನವು ಕೊಳದಲಿರುವ ನೀರಿನಂತೆ. ಅನ್ಯಮನಸ್ಕತೆ,ಚಿಂತೆಗಳು. ಲೋಕಕ್ಕೆ ಅಂಟಿಕೊಂಡ ಕಕ್ಕುಲತೆ,ತಿಳಿನೀರನ್ನು ಕದಡುವ ಕೆಸರಿನಂತೆ ಕಾಡುತ್ತದೆ. ವ್ಯಕ್ತಿಯೊಬ್ಬ ತನ್ನ ಆತ್ಮವನ್ನು ಎಷ್ಟೇ ನಿಕಷಕ್ಕೊಳಪಡಿಸಿದರೂ ಆವರಿಸಿಕೊಂಡ ಈ ಮುಸುಕಿನಿಂದಾಗಿ ಆತನಿಗೇನೂ ಕಾಣದು. ಆತ ಅಂತರಂಗದಿಂದ ಮತ್ತೆ ಮತ್ತೆ ದೂರ ಓಡುತ್ತಾನೆ. ಜನರತ್ತ ನೋಡುತ್ತಾನೆ. ಬದುಕಿನಲ್ಲಿ ಕಳೆದುಹೆಗುತ್ತಾನೆ. ಅದಕ್ಕೆ ಹೇಳುವುದು: “ಯಾರು ತನ್ನನ್ನು ಬಲ್ಲನೊ, ಆತ ತನ್ನ ದೇವರನ್ನೂ ಬಲ್ಲ”

*

ಶಂಷುದ್ದೀನ್‌ಎ-ತಬ್ರಿಜ಼ಿ (ಕ್ರಿ.ಶ. ೧೧೮೫-೧೨೪೮)

ನಿನಗೆ ಯಾವಾಗ ಗುಲಾಬಿಗಳ ಜತೆ ಸಾನಿಧ್ಯ ಸಾಧ್ಯವಾಗುವುದಿಲ್ಲವೊ,
ಆಗ ಮುಳ್ಳುಗಳ ಜತೆ ಕಾಲ ಕಳೆಯುತ್ತೀಯ.
ನಿನಗೆ ಯಾವಾಗ ಸಜ್ಜಾದ ವೇದಿಕೆ ಸರಿಯೆನ್ನಿಸುವುದಿಲ್ಲವೊ,
ಆಗ ನೇಣುಗಂಬದ ಮೆಟ್ಟಲಿನೆಡೆ ಹೆಜ್ಜೆ ಹಾಕುತ್ತೀಯ.
*
ವಸಂತಕಾಲದಲ್ಲಿ ನನ್ನ ಗೆಳೆಯನಿಂದ ದೂರವಿದ್ದಾಗ,
ತೋಟವೆಷ್ಟು ಚೆನ್ನವಿದ್ದರೇನು? ಗಿಡಮೂಲಿಕೆಗಳಿದ್ದರೇನು?
ಮಳೆ ಬರುವ ಬದಲು ಕಲ್ಲುಗಳು ಸುರಿಯಲಿ!
*
ಹಗಲಿನಲಿ ನೀನು ಮುತ್ತುಗಳನು ಚೆಲ್ಲಾಪಿಲ್ಲಿ ಮಾಡಲಿ ಎಂದು ಬಯಸುವೆ
ಇರುಳಿಂದ ಬೆಳಗಾಗುವವರೆಗೆ ಸ್ವರ್ಗಕಾಗಿ ಕಾಯುವೆ.
ನೀನು ನನ್ನ ನೆತ್ತರನು ಹೀರುವುದನ್ನು ಹಂಬಲಿಸಲಾರೆ,
ಆದರೆ,ನೆತ್ತರನು ಬಸಿಯುವೆ ಎಂದಾದರೆ,ಅದಕಾಗಿಯೂ ಕಾಯುವೆ.
*
ನಾನು ಬೇರೊಬ್ಬರೊಂದಿಗಿದ್ದಾಗ 
ಆತ ಹೇಗೆ ತಾನೆ ಬೇಗುದಿಗೆ ಒಳಗಾಗಬಲ್ಲ? 
ಲೋಕದಲಿ ಆತನಿಗೆ ಯಾರ ಭಯವೂ ಇಲ್ಲ.

ನೀನಂದೆ: “ನಿನ್ನ ಕಣ್ಣೀರೇಕೆ ಪನ್ನೀರಿನ ಬಣ್ಣವಾಗಿಹವು?”

“ನೀ ಕೇಳಿದೆ ಎಂದಷ್ಟೇ ಹೇಳುವೆ ಕೇಳು, ನಿಜದ ಕಥೆಯನ್ನು’:

“ನನ್ನ ಮನಸು ನಿನಗಾಗಿ ರೋಧಿಸುತ ರಕ್ತ ಹನಿಸುತಿತ್ತು,
ಎಲ್ಲವೂ ಮುನ್ನುಗ್ಗಿ ಕಣ್ಣುಗಳ ಮೂಲಕ ಹರಿಯಿತು”.

(ಇಲ್ಲಿ ಹಾಕಿರುವ ವರ್ಣಚಿತ್ರ ಕಲಾವಿದ ಕಮಾಲುದ್ದೀನ್‌ ಬೆಹಜ಼ಾದ್‌ನದು, ಚಿತ್ರಿಸಿದ ಕಾಲ ಕ್ರಿ.ಶ ಸುಮಾರು ೧೪೮೦-೯೦. ಶೀರ್ಷಿಕೆ, ’ಸೂಫಿ ದರವೇಶಿಗಳ ನೃತ್ಯ.’)

1 Comment

Leave a Reply