ಮೌನಿ ಬಾಬಾ ನಿಜವಾಗಿಯೂ ಹೇಳುತ್ತಿದ್ದುದೇನು? : ಮಾಧವ ಲಾಹೋರಿ ಕಥೆಗಳು

ಅಷ್ಟೂ ದಿನಗಳ ಕಾಲ ಮೌನಿ ಬಾಬಾ ಹೇಳುತ್ತಿದ್ದುದೇನು ಎಂದು ಸ್ವತಃ ಆಶ್ರಮದ ಶಿಷ್ಯರಿಗೂ ಗೊತ್ತಾಗಿರಲಿಲ್ಲ. ಕೊನೆಗೂ ಅದನ್ನು ಕಂಡುಕೊಂಡಿದ್ದು ಮಾಧವ ಲಾಹೋರಿ ಮಾತ್ರ!  ~ ಆನಂದಪೂರ್ಣ

lahori2

ಮ್ಮೆ ಮಾಧವ ಲಾಹೋರಿಯ ಊರಿಗೆ ಒಬ್ಬ ಮೌನಿ ಬಾಬಾ ಬಂದ. ವಾಸ್ತವದಲ್ಲಿ ಅವನೊಬ್ಬ ಠಕ್ಕ. ಎಲ್ಲೋ ಕನ್ನ ಹಾಕುವಾಗ ಸಿಕ್ಕಿಬಿದ್ದು, ಜನರಿಂದ ತಪ್ಪಿಸಿಕೊಳ್ಳಲು ಒಂದು ಆಶ್ರಮದಲ್ಲಿ ಅವಿತುಕೊಂಡಿದ್ದ. ಅಲ್ಲಿದ್ದ ಸಾಧುವಿನ ಬಟ್ಟೆಗಳನ್ನು ಧರಿಸಿ, ಅವರ ಶಿಷ್ಯರ ನಡುವೆ ಸೇರಿಕೊಂಡು ಬಿಟ್ಟಿದ್ದ. ಬರಬರುತ್ತಾ ಹಿರಿಯ ಸಾಧುವಿನ ವಿಶ್ವಾಸ ಗಳಿಸಿ, ಅವನ ಆಪ್ತವಲಯದಲ್ಲಿ ಒಬ್ಬನಾದ.

ಬಾಯಿ ಬಿಟ್ಟರೆ ಬಂಡವಾಳ ಬಯಲಾಗುತ್ತದೆ ಎಂದು ಸನ್ನೆಯ ಮೂಲಕ ಮಾತಾಡಲು ಶುರು ಮಾಡಿದ ಠಕ್ಕ, ಕ್ರಮೇಣ ‘ಮೌನಿ ಬಾಬಾ’ ಎಂದೇ ಗುರುತಿಸಲ್ಪಟ್ಟ. ಅವನ ಹಿಂದಿನ ಬದುಕಿನ ಕಥೆ ಯಾರಿಗೂ ಗೊತ್ತೇ ಆಗಲಿಲ್ಲ.

ಹಿರಿಯ ಸಾಧು ತೀರಿಕೊಂಡ ಮೇಲೆ ಮೌನಿ ಬಾಬಾ ಆಶ್ರಮದ ಮುಖ್ಯಸ್ಥನಾದ. ಅವನನ್ನು ಕಾಣಲು ಬರುತ್ತಿದ್ದವರು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವಕ್ಕೆಲ್ಲಾ ಮೌನಿ ಬಾಬಾ ಆಂಗಿಕ ಚಲನೆಗಳ ಮೂಲಕ ಉತ್ತರ ಕೊಡುತ್ತಿದ್ದ. ಅವನ ಸಹಾಯಕ್ಕೆಂದೇ ನೇಮಕಗೊಂಡ ಇಬ್ಬರು ಯುವ ಶಿಷ್ಯರು ಅವನ್ನು ಮಾತುಗಳಲ್ಲಿ ವಿವರಿಸುತ್ತಿದ್ದರು.
ಉದಾಹರಣೆಗೆ, ಯಾರಾದರೂ “ದೇವರು ಎಲ್ಲಿರುತ್ತಾನೆ?” ಅಂತ ಕೇಳಿದರೆ ಮೌನಿ ಬಾಬಾ ಆಕಡೆ ಒಮ್ಮೆ, ಈಕಡೆ ಒಮ್ಮೆ ಮುಖ ತಿರುಗಿಸಿ ತಲೆ ಕೆಳಗೆ ಹಾಕುತ್ತಿದ್ದ.
ಶಿಷ್ಯರು, “ಜನರು ಸುಮ್ಮನೆ ದೇವರನ್ನು ದಶದಿಕ್ಕುಗಳಲ್ಲಿ ಹುಡುಕುತ್ತಾರೆ; ಆದರೆ ದೇವರು ನಮ್ಮೊಳಗೇ ಇದ್ದಾನೆ – ಎನ್ನುತ್ತಿದ್ದಾರೆ ಬಾಬಾ” ಅಂತ ವಿವರಿಸ್ತಿದ್ದರು.
“ಧರ್ಮ ಅಂದರೇನು?” ಅಂತ ಕೇಳಿದಾಗ ಮೌನಿ ಬಾಬಾ ನೆಲವನ್ನೊಮ್ಮೆ ಮುಟ್ಟಿ, ಆಕಾಶದತ್ತ ತಲೆ ಎತ್ತಿ ನೋಡಿ ಸುಮ್ಮನಾಗುತ್ತಿದ್ದ.
ಶಿಷ್ಯರು “ಅನ್ನ ನೀಡುವ ನೆಲ, ಅರಿವು ನೀಡುವ ಮುಗಿಲುಗಳನ್ನು ಆದರಿಸಿ, ಅವೆರಡಕ್ಕೂ ಅಪಚಾರವೆಸಗದಂತೆ ನಡೆಯುವುದೇ ಧರ್ಮವೆಂದು ಬಾಬಾ ಅಭಿಮತ” ಅನ್ನುತ್ತಿದ್ದರು.
“ವರಗಳಲ್ಲೇ ಅತ್ಯುತ್ತಮವಾದದ್ದು ಯಾವುದು?” ಅಂತ ಒಮ್ಮೆ ಒಬ್ಬ ಸಂದರ್ಶಕ ಕೇಳಿದಾಗ ಮೌನಿ ಬಾಬಾ ತನ್ನ ಎರಡೂ ಕೈಗಳನ್ನು ಅವರ ಮುಂದೆ ಚಾಚಿಬಿಟ್ಟ.
“ದಾನ ನೀಡುವಷ್ಟು ಸಂಪತ್ತನ್ನು ಗಳಿಸುವುದು; ಗಳಿಸಿದ ಸಂಪತ್ತನ್ನು ದಾನ ಮಾಡುವ ಬುದ್ಧಿ ಹೊಂದಿರುವುದೇ ಅತ್ಯುನ್ನತ ವರ – ಎನ್ನುತ್ತಿದ್ದಾರೆ ಬಾಬಾ” ಅಂತ ವಿವರಿಸಿದ್ದರು ಶಿಷ್ಯರು.
ಹೀಗೆ, ಜ್ಞಾನಿಗಳೂ ಶ್ರದ್ಧಾವಂತರೂ ಆದ ಶಿಷ್ಯರಿದ್ದುದು ಮೌನಿ ಬಾಬಾನ ಜನಪ್ರಿಯತೆ ಹೆಚ್ಚಾಗಲು ಕಾರಣವಾಯ್ತು.

ಇಂಥಾ ಮೌನಿ ಬಾಬಾ ಮಾಧವ ಲಾಹೋರಿಯ ಊರಿಗೆ ಬಂದ. ಹಾಗೆಲ್ಲ ಗೌಜಿ ಇರುವ ಕಡೆ ಕಾಲಿಡದ ಮಾಧೋ, ಗೌಸ್ಪೀರನ ಒತ್ತಾಯಕ್ಕೆ ಮಣಿದು ಬಾಬಾನನ್ನು ನೋಡಲು ಹೋದ.

ದೇವಸ್ಥಾನದ ಆವರಣದಲ್ಲಿ ಜನ ಸೇರಿದ್ದರು. ಇನ್ನೇನು, ಬಾಬಾರನ್ನು ಜನ ಪ್ರಶ್ನೆ ಕೇಳಲು ಆರಂಭಿಸಬೇಕು… ಅಷ್ಟರಲ್ಲಿ ಒಬ್ಬ ಶಿಷ್ಯನಿಗೆ ಹೊಟ್ಟೆ ನೋವು ಶುರುವಾಯಿತು. ಅವನಿಗೆ ಚಿಕಿತ್ಸೆ ಕೊಡಿಸಲು ಇನ್ನೊಬ್ಬ ಶಿಷ್ಯ ಅವನನ್ನು ಎತ್ತಿಕೊಂಡು ಹೊರಟುಹೋದ. ಈಗ ಬಾಬಾ ಒಬ್ಬಂಟಿ.

ಜನ ಪ್ರಶ್ನೆ ಕೇಳಿದರು. ಮೊದಲ ಪ್ರಶ್ನೆಗೆ ಬಾಬಾ ಯಾವಾಗಿನಂತೆ ಆಕಡೆ, ಈ ಕಡೆ ನೋಡಿ ತಲೆ ಕೆಳಗೆ ಹಾಕಿದ. ಜನ  ಲಾಹೋರಿಯನ್ನು ಸುತ್ತುಗಟ್ಟಿ, “ಮಾಧೋ! ಅವನ ಉತ್ತರವನ್ನು ವಿವರಿಸು” ಅಂತ ದುಂಬಾಲು ಬಿದ್ದರು.
ಅರೆಕ್ಷಣ ಯೋಚಿಸಿದ ಲಾಹೋರಿ, “ಈ ಮೌನಿ ಬಾಬಾ ನಿಮ್ಮ ಪ್ರಶ್ನೆಗೆ ಉತ್ತರ ನೀಡಿಲ್ಲ. ನನಗೇನೂ ಗೊತ್ತಿಲ್ಲವೆಂಬುದನ್ನು ಸಂಜ್ಞೆಯ ಮೂಲಕ ಹೆಳುತ್ತಿದ್ದಾನಷ್ಟೆ” ಅಂದ.

ಮತ್ತೊಂದು ಪ್ರಶ್ನೆ ಜನರ ನಡುವಿಂದ ತೂರಿಬಂತು. ಮೌನಿ ಬಾಬಾ ನೆಲ ಮುಟ್ಟಿ, ಆಕಾಶ ನೋಡಿ ಸುಮ್ಮನೆ ಕುಂತ.
“ಈಗಲೂ ಈತ ಉತ್ತರ ಹೇಳಿಲ್ಲ… ಭೂಮಿಯಲ್ಲಿ ಹುಟ್ಟಿದ ಯಾರಾದರೂ ನನಗೆ ಉತ್ತರಿಸಲು ಸಹಾಯ ಮಾಡಿ; ಆಕಾಶದ ದೇವತೆಗಳೇ ಸಹಾಯ ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾನೆ” ಅಂತ ವಿವರಿಸಿದ ಮಾಧೋ.

ಸಂದಣಿಯಲ್ಲಿ ಗುಜುಗುಜು ಶುರುವಾಯಿತು. ಆಯೋಜಕರು ಇನ್ನು ಕೆಲಸ ಕೆಡುತ್ತದೆ ಎಂದು ಎಲ್ಲರೂ ಮನೆಗೆ ಹೊರಡಲು ತಾಕೀತು ಮಾಡತೊಡಗಿದರು. ಅಷ್ಟರಲ್ಲಿ ಒಬ್ಬ ಯುವತಿ ಮುಂದೆ ಬಂದು “ವರಗಳಲ್ಲೇ ಶ್ರೇಷ್ಠವಾದುದು ಯಾವುದು? ದಯವಿಟ್ಟು ಇದೊಂದು ಪ್ರಶ್ನೆಗೆ ಉತ್ತರಿಸಿಬಿಡಿ” ಅಂದಳು.
ಮೌನಿ ಬಾಬಾ ತನ್ನ ಎರಡೂ ಕೈಗಳನ್ನು ಮುಂಚಾಚಿ ತಲೆ ಬಾಗಿಸಿದ. ಮಾಧೋ, “ಈಗ ಈತ ಸಂಪೂರ್ಣ ಶರಣಾಗಿದ್ದಾನೆ. ತನಗೆ ಏನೂ ತಿಳಿದಿಲ್ಲವೆಂದು ಹೇಳಿಕೊಳ್ಳುತ್ತಿದ್ದಾನೆ” ಅಂದ.

ಊರಿನವರು ತಲೆ ಕೆರೆದುಕೊಂಡರು. ಮೌನಿ ಬಾಬಾನನ್ನು ಸಂಶಯಿಸಲು ಅವರಿಗೆ ಇಷ್ಟವಿದ್ದಿಲ್ಲ. ಹಾಗಂತ ಮಾಧೋನ ಮೇಲೆ ಅವರಿಗೆಲ್ಲ ವಿಪರೀತ ಗೌರವವಿತ್ತು. ಅವನ ವ್ಯಾಖ್ಯಾನವನ್ನೂ ಅವರು ತಿರಸ್ಕರಿಲಾಗದೆ ಹೋದರು. ಈ ಗೊಂದಲದಲ್ಲೇ ಪನಿವಾರ ವಿತರಣೆಯಾದ ಮೇಲೆ ಗುಂಪು ಚದುರಿತು. 

ಅವತ್ತು ರಾತ್ರಿ ಆಶ್ರಮಕ್ಕೆ ಮರಳಿ ಮಲಗಿದ ಮೌನಿ ಬಾಬಾ, ಮಾರನೇ ದಿನ ಅಲ್ಲಿ ಏಳಲಿಲ್ಲ; ಸೂರ್ಯ ತಲೆಗೇರುವ ಹೊತ್ತಿಗೆ ಅಂವ ಮಾಮೂಲು ಉಡುಗೆ ತೊಟ್ಟು; ಮಾಧವ ಲಾಹೋರಿಯ ಜಗಲಿಯಲ್ಲಿ, ಅವನೊಡನೆ ಹುಕ್ಕಾ ಸೇದುತ್ತಾ ಹರಟುತ್ತಾ ಕುಳಿತಿದ್ದ!

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.