ಕಾಲೋ ನ ಯಾತೋ ವಯಮೇವ ಯಾತಾ : ದಿನದ ಸುಭಾಷಿತ

ಮನುಷ್ಯರೆಂದೂ ಸರ್ವತಂತ್ರ ಸ್ವತಂತ್ರರಲ್ಲ. ಕಣ್ಣಿಗೆ ಕಾಣದ ಕಡಿವಾಣಗಳು ಬೀಳುತ್ತಲೇ ಇರುತ್ತವೆ. ಇದುವೇ ಜೀವನ….


ಭೋಗಾ ನ ಭುಕ್ತಾ ವಯಮೇವ ಭುಕ್ತಾ-
ಸ್ತಪೋ ನ ತಪ್ತಂ ವಯಮೇವ ತಪ್ತಾಃ |
ಕಾಲೋ ನ ಯಾತೋ ವಯಮೇವ ಯಾತಾ-
ಸ್ತೃಷ್ಣಾ ನ ಜೀರ್ಣಾ ವಯಮೇವ ಜೀರ್ಣಾಃ || ವೈರಾಗ್ಯ ಶತಕ ||
ಅರ್ಥ : ಭೋಗಗಳನ್ನು ನಾವು ಅನುಭವಿಸಲಿಲ್ಲ. ಆದರೆ ಭೋಗಗಳೇ ನಮ್ಮನ್ನು ತಿಂದು ತೇಗಿದವು. ತಪಸ್ಸನ್ನು ಆಚರಿಸಲಿಲ್ಲ. ಆದರೆ ನಾವೇ ಸಂತಪ್ತರಾದೆವು. ಕಾಲ ಕಳೆಯಲಿಲ್ಲ. ಆದರೆ (ಕಾಲ ಗರ್ಭದಲ್ಲಿ) ನಾವೇ ಕಳೆದು ಹೋದೆವು. ನಮ್ಮ ಬಯಕೆಗಳು ಜೀರ್ಣವಾಗಲಿಲ್ಲ. ಆದರೆ ನಾವೇ ಜೀರ್ಣವಾಗಿ ಹೋದೆವು.

ತಾತ್ಪರ್ಯ : ಭರ್ತೃಹರಿ ಜೀವನದ ಅಪ್ಪಟ ಸತ್ಯಗಳನ್ನು ಅನಾವರಣಗೊಳಿಸುತ್ತಾನೆ. ಸತ್ಯದ ಸ್ವರೂಪವೇ ಬೇರೆ. ಆದರೆ ನಾವು ಸತ್ಯವೆಂದು ತಿಳಿದುಕೊಂಡಿರುವುದೇ ಬೇರೆ. ಹೆಚ್ಚಿನಂಶ ಜೀವನದಲ್ಲಿ ಮನುಷ್ಯರು ಬಯಸುವುದು ಒಂದು. ಆದರೆ ಆಗುವುದೇ ಇನ್ನೊಂದು. ಮನುಷ್ಯರೆಂದೂ ಸರ್ವತಂತ್ರ ಸ್ವತಂತ್ರರಲ್ಲ. ಕಣ್ಣಿಗೆ ಕಾಣದ ಕಡಿವಾಣಗಳು ಬೀಳುತ್ತಲೇ ಇರುತ್ತವೆ. ಇದುವೇ ಜೀವನ. ಸಂಸಾರದ ರಹಸ್ಯ ಇನ್ನೂ ರಹಸ್ಯವಾಗಿಯೇ ಇದೆ. ಯಾವ ವ್ಯಕ್ತಿಯ ಮತಿ ವಿಭವವೂ ಈ ಒಗಟನ್ನು ಬಿಡಿಸಲಿಕ್ಕೆ ಇನ್ನೂವರೆಗೆ ಸಮರ್ಥವಾಗಿಲ್ಲ. ಜೀವನವು ಅನೇಕ ವೈರುಧ್ಯಗಳ ಆಗರವಾಗಿದೆ.
ಇದನ್ನು ಅರಿತರೆ ಮನಸ್ಸು ತಾನಾಗಿ ವೈರಾಗ್ಯದತ್ತ ತಿರುಗುತ್ತದೆ. ಲೌಕಿಕವಾದ ಇಚ್ಛೆಗಳನ್ನು ಬಿಡುವುದು ಮಾತ್ರ ವೈರಾಗ್ಯವಲ್ಲ. ಸಾರವತ್ತಾದದ್ದು ಯಾವುದು? ಎನ್ನುವ ಮಹಾನ್ವೇಷಣೆಯಲ್ಲಿ ಆಸಕ್ತವಾಗುವುದೇ ನಿಜವಾದ ವೈರಾಗ್ಯ.

Leave a Reply