ನದಿಯಲ್ಲಿ ಎಷ್ಟು ಮುಳುಗಿದರೂ ತಲೆಯು ಬುರುಡೆಯಾಗೇ ಉಳಿದಿದೆ : ಸಾನೆ ಗುರೂಜಿ

Pandurang_Sadashiv_Saneನದಿಯಲ್ಲಿ ಮುಳುಗು ಹಾಕಿದಾಗ ತಲೆಯಲ್ಲಿ ಇಂಥ ವಿಶಾಲ ವಿಚಾರಗಳು ಹೊಳೆಯಬೇಕು. ನದಿಯ ಈ ಅದ್ವೈತ ಗಾಯನವನ್ನು ಕಿವಿಗೊಟ್ಟು ಆಲಿಸಬೇಕು. ಆದರೇನು ಮಾಡುವುದು? ಗಂಗೆಯಲ್ಲಿ ಸ್ನಾನ ಮಾಡುವ ಗಂಗಾಪುತ್ರರು ಕಲ್ಲಾಗಿದ್ದಾರೆ! ಎಲ್ಲ ಪ್ರವಾಹಗಳನ್ನು ಬರಮಾಡಿಕೊಳ್ಳುವ ಪವಿತ್ರ ನದಿಯಲ್ಲಿ ನಿಂತು, ಮತ್ತೊಬ್ಬರನ್ನು ದೂರ ತಳ್ಳುತ್ತಾರೆ  ~ ಸಾನೆ ಗುರೂಜಿ

ಅದ್ವೈತದ ಸಾಕ್ಷಾತ್ಕಾರವೆಂದರೆ ಎಲ್ಲ ಚರಾಚರ ಸೃಷ್ಟಿಯ ಕೊನೆಯ ಮೆಟ್ಟಿಲು. ಚರಾಚರ ಸೃಷ್ಟಿಯೊಡನೆ ಸಮರಸವಾಗಿ ಸಮದರ್ಶಿ ಎನಿಸಿಕೊಳ್ಳುವುದು ಅದ್ವೈತದ ಪರಮಾವಧಿ. ಇದು ಮನುಷ್ಯನಿಗೆ ಎಂದು ಸಾಧ್ಯವಾಗುವುದೋ ಆಗಲಿ; ಆದರೆ ಅವನು ಮಾನವಜಾತಿಯನ್ನಾದರೂ ಕುರಿತು ವಿಶಾಲ ದೃಷ್ಟಿಯುಳ್ಳವನಾಗಬಾರದೆ?

ಭಾರತೀಯ ಸಂಸ್ಕೃತಿಯಲ್ಲಿ ಒಂದೊಂದು ತತ್ತ್ವವನ್ನು ಮನಸ್ಸಿನಲ್ಲಿ ದೃಢಪಡಿಸುವುದಕ್ಕಾಗಿ ಕೆಲವೊಂದು ಸಂಕೇತಗಳಿವೆ. ಈ ಸಂಕೇತದ ಆಚೆಗಿನ ಸತ್ವವು ಇಲ್ಲದಂತಾದರೆ ಅವು ಹೆಣಗಳಂತಾಗುವವು. ಸಂಕೇತಗಳಲ್ಲಿಯ ಅರ್ಥವು ಅಳಿದುಹೋಗಿ, ಅವುಗಳ ಪೂಜೆಯು ಯಾಂತ್ರಿಕವಾಗುತ್ತಿದೆ. ಅದ್ವೈತವನ್ನು ಮನಗಾಣಿಸುವುದಕ್ಕೆ ಒಂದು ಹಿರಿದಾದ ಸಂಕೇತ ಹೇಳಲಾಗಿದೆ.

ಸ್ನಾನಕ್ಕಾಗಿ ಸಮುದ್ರಕ್ಕೆ ಅಥವಾ ನದಿಗೆ ಹೋಗಬೇಕು ಎಂದು ಹೇಳಿದರೆ, ಸ್ನಾನ ಮಾಡುವ ಸ್ಥಳದ ಭಾವವು ನಮ್ಮ ಮನಸ್ಸಿನಲ್ಲಿಯೂ ಸೇರುವುದು. ನಲ್ಲಿಯ ಕೆಳಗೆ ಸ್ನಾನ ಮಾಡುವವನ ಮನಸ್ಸು, ನಲ್ಲಿಯಂತೆಯೇ ಸಂಕುಚಿತವಾಗುವ ಸಂಭವವಿದೆ. ಬಾವಿಯೇನೋ ನಲ್ಲಿಗಿಂತ ಒಳಿತು. ಆದರೆ ಅದು ಸಹ ನಾಲ್ಕು ಕಡೆಗೆ ಕಟ್ಟಿದ್ದು, ಅದರ ಬಾಯಿಯು ಕಿರಿದಾಗಿರುತ್ತದೆ. ಆದರೆ ಹೊಳೆಯು ಭರದಿಂದ ಹರಿಯುತ್ತಿದೆ. ನೂರಾರು ಮೈಲಿ ನಡೆದು ಹೊಳೆಯಲ್ಲಿ ಮೈತೊಳೆದರೆ ಪುಣ್ಯವು ಸಿಕ್ಕುವುದಂತೆ! ಯಾವ ಪುಣ್ಯ?

ನಲ್ಲಿಯ ಕೆಳಗೆ ತೊಯ್ದ ತಲೆ ನಲ್ಲಿಯಂತೆ ಆಗುವುದು. ನದಿಯಲ್ಲಿ ಮುಳುಗಿದ ತಲೆಯು ನದಿಯಂತೆ ಆಗುವುದು. ನದಿಯು ಪಾಪಹಾರಿ. ಮೈಮೇಲಿನ ಹೊಲಸಿನ ಜೊತೆ ತಲೆ ಮತ್ತು ಹೃದಯದ ಕಶ್ಮಲವೂ ನದಿಯಲ್ಲಿ ಹರಿದುಹೋಗುವುದು.

ನದಿ ಅಂದರೇನು? ಭೂಮಿಯ ತುಂಬೆಲ್ಲ ಅಲ್ಲಲ್ಲಿ ಹರಿಯುವ ಚಿಕ್ಕಪುಟ್ಟ ಹರಿವುಗಳು ಐಕ್ಯಗೊಳ್ಳುವ ಪ್ರಕ್ರಿಯೆ. ಇದೊಂದು ಪರಮಾದ್ಭುತ ದರ್ಶನ. ನದಿ ಎಂದರೆ ಅದ್ವೈತ. ನದಿ ಎಂದರೆ ಒಗ್ಗಟ್ಟು. ಒಂದು ಧಾರೆಯಲ್ಲಿ ಸೇರುವ ನೀರಿನ ಹರಿವುಗಳು ಒಂದರೊಡನೆ ಒಂದು ಬೆರೆಯದೆ ಅಂತರ ಕಾಯ್ದುಕೊಳ್ಳುವುದಿಲ್ಲ. ಈ ನೀರಿನ ಹರಿವುಗಳು ಅಹಂಕಾರದಿಂದ ಪರಸ್ಪರ ಬೆರೆಯದೆ ಉಳಿದಿದ್ದರೆ ನದಿಯಾಗಲು ಸಾಧ್ಯವಿರುತ್ತಿರಲಿಲ್ಲ. ಅವುಗಳ ವಿಕಾಸ ಸಾಧ್ಯವಾಗುತ್ತಿರಲಿಲ್ಲ. ಅವು ಉದ್ದವಾಗಲೀ ಅಗಲವಾಗಲೀ, ಆಳವಾಗಲೀ ಆಗುತ್ತಿರಲಿಲ್ಲ. ನೂರಾರು ಎಕರೆ ಹೊಲಗದ್ದೆಗಳೂ ಬೆಳೆಯುತ್ತಿರಲಿಲ್ಲ. ಹಾಗಾಗಲು ಬಿಡದೆ, ತೊರೆಯ ಹರಿವುಗಳೆಲ್ಲ ಒಂದಾದವು. ಒಂದಾಗಿ ನದಿಯಾದವು.

ನದಿಯಲ್ಲಿ ಮುಳುಗು ಹಾಕಿದಾಗ ತಲೆಯಲ್ಲಿ ಇಂಥ ವಿಶಾಲ ವಿಚಾರಗಳು ಹೊಳೆಯಬೇಕು. ನದಿಯ ಈ ಅದ್ವೈತ ಗಾಯನವನ್ನು ಕಿವಿಗೊಟ್ಟು ಆಲಿಸಬೇಕು. ಆದರೇನು ಮಾಡುವುದು? ಗಂಗೆಯಲ್ಲಿ ಸ್ನಾನ ಮಾಡುವ ಗಂಗಾಪುತ್ರರು ಕಲ್ಲಾಗಿದ್ದಾರೆ! ಎಲ್ಲ ಪ್ರವಾಹಗಳನ್ನು ಬರಮಾಡಿಕೊಳ್ಳುವ ಪವಿತ್ರ ನದಿಯಲ್ಲಿ ನಿಂತು, ಮತ್ತೊಬ್ಬರನ್ನು ದೂರ ತಳ್ಳುತ್ತಾರೆ. ಬಾಯಿಯಲ್ಲಿ ರುದ್ರವನ್ನು ಹೇಳುತ್ತಲೇ, “ನೀನು ಕೀಳು, ನೀನು ಪತಿತ, ದೂರ ಹೋಗು!” ಎಂದು ಸಹಮಾನವರನ್ನು ಅವಮಾನಿಸುತ್ತ ಇರುತ್ತಾರೆ. ನೂರಾರು ವರ್ಷಗಳ ಕಾಲ ನದಿಯಲ್ಲಿ ತಲೆಯನ್ನು ಮುಳುಗಿಸಿದರೂ ತಲೆಬುರುಡೆ ಬುರುಡೆಯೇ ಆಗಿ ಉಳಿದಿದೆ.

ಪಾಂಡುರಂಗ ಸದಾಶಿವ ಸಾನೆ, ಮಹಾರಾಷ್ಟ್ರದಲ್ಲಿ ಆಗಿಹೋದ (1899 – 1950) ಚಿಂತಕ, ಲೇಖಕ, ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ. ಇವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು.  ಮರಾಠಿ ಭಾಷೆಯಲ್ಲಿ ಇವರು ಹಲವು ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಶ್ಯಾಮಾ ಚಿ ಆಯಿ ಮತ್ತು ಭಾರತೀಯ ಸಂಸ್ಕೃತಿ ಮುಖ್ಯವಾದವು. ಈ ಲೇಖನವನ್ನು ‘ಭಾರತೀಯ ಸಂಸ್ಕೃತಿ’ ಪುಸ್ತಕದ ಇಂಗ್ಲಿಶ್ ಮತ್ತು ಕನ್ನಡ ಅನುವಾದಗಳಿಂದ ಆಯ್ದುಕೊಳ್ಳಲಾಗಿದೆ. 

1 Comment

Leave a Reply