ಗುರುವಿನ ಕಿರು ಬೆರಳ ಹಿಡಿ… : ಬುಲ್ಲೇಶಾಹ್

ಮೂಲ : ಸೂಫಿ ಬುಲ್ಲೇಶಾಹ್ | ಕನ್ನಡಕ್ಕೆ : ಸುನೈಫ್

ಒಂದರಲ್ಲಿ ಅಡಗಿಹುದು ಲೋಕದೆಲ್ಲ ನಿಜವು

ಒಂದನ್ನು ಹಿಡಿದುಕೊಳ್ಳು ಉಳಿದುದ ಕಳಚಿ ಬಿಡು
ನರಕದ ಚಿಂತೆ ಬಿಡು ಕಬರಿನ ಶಿಕ್ಷೆಯ ಮರೆತು ಬಿಡು
ಕೇಡಿನ ಹಾದಿ ತೊರೆ ಎದೆಗೆ ಹಾಡನೆರೆ
ಆಗ, ಹೊಕ್ಕುವುದು ನಿಜವು ಮಹಾಮನೆಗೆ

ಹಣೆಯನೇತಕೆ ಚಚ್ಚಿಕೊಳ್ಳುವೆ ಸುಜೂದಿನಲ್ಲಿ?
ಅರ್ಥವೇನಿಹುದು ಟೊಳ್ಳು ಶರಣಾಗತಿಯಲ್ಲಿ?
ನೀನು ಆ ನಾಮವ ಉಸಿರುತ್ತಲೇ ಇಲ್ಲವಲ್ಲ
ನಿನ್ನ ಕಲಿಮಾ ಪಠನ ಬರಿಯ ಮನರಂಜನೆ

ಹಾಜಿಗಳಾಗಿ ಮರಳುವರು ಮಕ್ಕಾ ಯಾತ್ರಿಕರು
ತಲೆಗೊಂದು ಮುಂಡಾಸು ತಾನಾಗಿಯೇ ಏರುವುದು
ಹಾಜಿಯೆಂದು ಬೀಗಿ ಲಾಭವ ಗಳಿಸುವರು
ಈ ದಾರಿಯಲ್ಲಿ ನಡೆದವರಲ್ಲ ನಮ್ಮ ಫಕೀರರು

ಕಾಡು ಸೇರುವರು ಇನ್ನು ಕೆಲವರು
ಅನ್ನ ನೀರಿಲ್ಲದೆ ಧ್ಯಾನಗೈಯ್ಯುವರು
ಸಮಯ ಕೊಂದರಲ್ಲದೆ ಇನ್ನೇನು ಸಾಧಿಸಿದರು?
ಬಳಲಿ ಬಸವಳಿದು ದೇಹ ಸೋತು ಮರಳುವರು

ಗುರುವಿನ ಕಿರು ಬೆರಳ ಹಿಡಿ
ಆ ದಾರಿಯಲ್ಲಿ ದೇವನಿಗೊಲಿ
ಆಗ ನೋಡು,
ಜತನದ ಚಿಂತೆ ಕರಗುತ್ತದೆ
ಬಯಕೆಯ ಬೆಂಕಿ ಆರುತ್ತದೆ
ಹೃದಯವು ಬೆಳಗುತ್ತದೆ
ಹಾಡು ಜಿನುಗುತ್ತದೆ

ಬುಲ್ಲೇ ಈ ಸತ್ಯವ ಕಂಡುಕೊಂಡ:
ಒಂದರಲ್ಲಿ ಅಡಗಿಹುದು, ಲೋಕದೆಲ್ಲ ನಿಜವು!

1 Comment

Leave a Reply