ಮನೋಚಾಂಚಲ್ಯ ನಿವಾರಿಸಿ ಸ್ಥಿರತೆ ನೀಡುವ ಶ್ರೀ ಶಿವ ಸ್ತೋತ್ರ ~ ನಿತ್ಯ ಪಾಠ

ಮಹಾದೇವ ಶಿವನ ನಿಲುವನ್ನೂ ಮಹಿಮೆಯನ್ನೂ ವರ್ಣಿಸುವ 6 ಶ್ಲೋಕಗಳ ಸ್ತೋತ್ರಮಾಲೆಯ ಮೂಲಪಾಠ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ. ಭಕ್ತಿಯಿಂದ ಸ್ತೋತ್ರ ಪಠಣ ಮಾಡಿ, ಶ್ರದ್ಧೆಯಿಂದ ಭಗವಂತನಲ್ಲಿ ಮನಸ್ಸು ನಿಲ್ಲಿಸಿದರೆ ಏಕಾಗ್ರತೆ ಸಿದ್ಧಿಯಾಗಿ, ಮನೋಶುದ್ಧಿಯಾಗಿ, ಸ್ಥಿರತೆ ನೆಲೆಯಾಗುವುದು.

ನಿಖಿಲಭುವನಜನ್ಮಸ್ಥೇಮಭಂಗಪ್ರರೋಹಾಃ
ಅಕಲಿತಮಹಿಮಾನಃ ಕಲ್ಪಿತಾ ಯತ್ರ ತಸ್ಮಿನ್ |
ಸುವಿಮಲಗಗನಾಭೇ ಈಶಸಂಸ್ಥೇsಪ್ಯನೀಶೇ
ಮಮಭವತು ಭವೇsಸ್ಮಿನ್ ಭಾಸುರೋ ಭಾವಬಂಧಃ ||1||

ಭಾವಾರ್ಥ : ಮಹಾದೇವ ಶಿವನ ಹಿರಿಮೆಯನ್ನು ವರ್ಣಿಸಲಸದಳ. ಅವನು ಆಕಾಶದಂತೆ ನಿರ್ಮಲ. ಸಮಸ್ತ ಬ್ರಹ್ಮಾಂಡದ ಉತ್ಪತ್ತಿ, ಪಾಲನೆ, ಪ್ರಳಯಗಳು ನಡೆಯುವುದು ಅವನಲ್ಲಿಯೇ. ಬ್ರಹ್ಮಾಂಡಕ್ಕೆಲ್ಲಾ ಆತನೇ ಒಡೆಯನಾದ, ತನಗಿಂತ ಮಿಗಿಲಿಲ್ಲದ ಮಹಾದೇವ ಶಿವನ ಚರಣ ಕಮಲಗಳಲ್ಲಿ ನನ್ನ ಜೀವನವನ್ನು ಉಜ್ವಲಗೊಳಿಸುವ ಅನನ್ಯ ಭಕ್ತಿಯು ನೆಲೆಗೊಳ್ಳಲಿ.

ನಿಹತನಿಖಿಲಮೋಹೇsಧೀಶತಾ ಯತ್ರ ರೂಢಾ
ಪ್ರಕಟಿತಪರಪ್ರೇಮ್ಣಾ ಯೋ ಮಹಾದೇವಸಂಜ್ಞಃ |
ಅಶಿಥಿಲಪರಿರಂಭಃ ಪ್ರೇಮರೂಪಸ್ಯ ಯಸ್ಯ
ಹೃದಿ ಪ್ರಣಯತಿ ವಿಶ್ವಂ ವ್ಯಾಜಮಾತ್ರಂ ವಿಭುತ್ವಮ್ ||2||
ಭಾವಾರ್ಥ: ಆಶಾಪಾಶವನ್ನು ನಾಶಗೊಳಿಸುವ ಶಿವ ಸಕಲಕ್ಕೂ ಈಶನಾಗಿದ್ದಾನೆ. ಪ್ರೇಮದ ಸಾಕಾರ ರೂಪವಾಗಿರುವ, ದೇವತೆಗಳ ದೇವನಾದ ಶಿವನು ಮಹಾದೇವನೆಂದೂ ಕರೆಯಲ್ಪಡುತ್ತಾನೆ. ಆ ಶಿವನ ಉತ್ಕೃಷ್ಟವಾಗಿರುವ ಅನುರಾಗದಿಂದ ಕೂಡಿರುವ ಲಿಂಗನವು ಬ್ರಹ್ಮಾಂಡದ ಒಡೆತನವೂ ಕೂಡಾ ಒಂದು ಭ್ರಾಂತಿ ಎನ್ನುವ ಇಂಗಿತವನ್ನು ಹೃದಯದಲ್ಲಿ ಉಂಟು ಮಾಡುತ್ತದೆ.

ವಹತಿ ವಿಪುಲವಾತಃ ಪೂರ್ವಸಂಸ್ಕಾರರೂಪಃ
ಪ್ರಮಥತಿ ಬಲವೃಂದಂ ಘೂರ್ಣಿತೇವೋರ್ಮಿಮಾಲಾ |
ಪ್ರಚಲತಿ ಖಲು ಯುಗ್ಮಂ ಯುಷ್ಮದಸ್ಮತ್ಪ್ರತೀತಂ
ಅತಿವಿಕಲಿತರೂಪಂ ನೌಮಿ ಚಿತ್ತಂ ಶಿವಸ್ಥಮ್ ||3||
ಭಾವಾರ್ಥ: ಬಿರುಗಾಳಿ ಬೀಸಿ ಅಲೆಯನ್ನು ಎಬ್ಬಿಸುವ ರೀತಿಯಲ್ಲಿ ಪ್ರಾಚೀನ ಸಂಸ್ಕಾರವೆನ್ನುವ ಝಂಝಾವಾತವು ಬೀಸಿ “ನಾನು” “ನೀನು” ಎನ್ನುವ ಅಲೆಗಳನ್ನು ನಿರ್ಮಿಸಿದೆ. ಆ ಪರಶಿವನಲ್ಲಿ ಆ ರೀತಿಯಲ್ಲಿ ಮುದುಡಿಕೊಂಡಿರುವ ರೂಪದ ಮನವನ್ನು ನಾನು ನಮಿಸುವೆನು.

ಜನಕ ಜನಿತ ಭಾವೋ ವೃತ್ತಯಃ ಸಂಸ್ಕೃತಾಶ್ಚ
ಅಗಣನಬಹುರೂಪೋ ಯತ್ರ ಏಕೋ ಯಥಾರ್ಥಃ |
ಶಮಿತವಿಕೃತಿವಾತೇ ಯತ್ರ ನಾಂತರ್ಬಹಿಶ್ಚ
ತಮಹಹ ಹರಮೀಡೇ ಚಿತ್ತವೃತ್ತೇರ್ನಿರೋಧಮ್ ||4||
ಭಾವಾರ್ಥ: ಎಲ್ಲಿ ಹುಟ್ಟಿಗೆ ಕಾರಣವಾದ, ಉತ್ಪತ್ತಿಯಾಗಿರುವ ಉದ್ದೇಶ, ಪವಿತ್ರವಾಗಿರುವ ಕಾರ್ಯಗಳು, ಮತ್ತು ಅಸಂಖ್ಯಾತ ಸ್ವರೂಪಗಳು, ಒಂದೇ ಜ್ಞಾನದಲ್ಲಿ ಐಕ್ಯವಾಗುವವೋ; ಯಾವಕಡೆ ಒಳಗೆ – ಹೊರಗೆ ಎಂಬ ಭೇದಗಳು ಅಂತ್ಯವಾಗುವುದೋ, ಚಾಂಚಲ್ಯದ ಅಲೆಗಳು ಎಲ್ಲಿ ಪ್ರಶಾಂತವಾಗುವವೋ, ಅವೆಲ್ಲಕ್ಕೂ ಕಾರಣನಾದ, ಮನೋನಿಯಂತ್ರಕ ಮಹಾದೇವ ಶಿವನಿಗೆ ನಾನು ನಮಿಸುವೆನು.

ಗಲಿತತಿಮಿರಮಾಲಃ ಶುಭ್ರತೇಜಪ್ರಕಾಶಃ
ಧವಲಕಮಲಶೋಭಃ ಜ್ಞಾನಪುಂಜಾಟ್ಟಹಾಸಃ |
ಯಮಿಜನಹೃದಿಗಮ್ಯೋ ನಿಷ್ಕಲಂ ಧ್ಯಾಯಮಾನಃ
ಪ್ರಣತಮವತು ಮಾಂ ಸಃ ಮಾನಸೋ ರಾಜಹಂಸಃ ||5||
ಭಾವಾರ್ಥ: ಅಜ್ಞಾನಗಳ ಸರಣಿ ಯಾವಾತನಲ್ಲಿ ಕಳೆದು ಹೋಗುವುದೋ, ನಿರ್ಮಲ ಕಿರಣಗಳಿಂದ ಬೆಳಗುತ್ತಾ ಬೆಳ್ದಾವರೆಯಂತೆ ಯಾವಾತನು ಪ್ರಕಾಶಿಸುವನೋ ಯಾರ ಘರ್ಜನೆಯು ಜ್ಞಾನವನ್ನು ಉದ್ದೀಪನಗೊಳಿಸುವುದೋ; ಯಾರನ್ನು ಅನವರತ ಧ್ಯಾನದಿಂದ ತಮ್ಮ ಹೃದಯಾಂತರಾಳದಲ್ಲಿ ವಿದ್ವದ್ಜನರು ಅರಿತುಕೊಂಡಿರುವರೋ; ಆ ಬಗೆಯ ಮನೋ ಸಾಗರದಲ್ಲಿ ಸಂಚರಿಸುತ್ತಲಿರುವ ಮಹಾದೇವನೆಂಬ ಅರಸಂಚೆಯು ನಮಸ್ಕರಿಸುತ್ತಲಿರುವ ನನ್ನನ್ನು ಅನವರತವೂ ರಕ್ಷಿಸಲಿ.

ದುರಿತದಲನದಕ್ಷಂ ದಕ್ಷಜಾದತ್ತದೋಷಂ
ಕಲಿತಕಲಿಕಲಂಕಂ ಕಮ್ರಕಹ್ಲಾರಕಾಂತಮ್ |
ಪರಹಿತಕರಣಾಯ ಪ್ರಾಣಪ್ರಚ್ಛೇದಪ್ರೀತಂ
ನತನಯನನಿಯುಕ್ತಂ ನೀಲಕಂಠಂ ನಮಾಮಃ ||6||
ಭಾವಾರ್ಥ: ಯಾರು ನಮ್ಮ ಸಂಕಷ್ಟಗಳನ್ನು ಹೋಗಲಾಡಿಸುವುದರಲ್ಲಿ ನಿಪುಣನೋ,ಯಾರಿಗೆ ತನ್ನ ಮಗಳನ್ನು ದಕ್ಷನು ಧಾರೆಯೆರೆದನೋ; ಯಾರು ಕಲಿಯ ಕಲ್ಮಶಗಳನ್ನು ಪರಿಹರಿಸುವರೋ; ಯಾರು ಬೆಳ್ದಾವರೆಯಂತೆ ಮನೋಹರವಾಗಿರುವರೋ; ಯಾರು ಅನ್ಯರ ಒಳಿತಿಗಾಗಿ ತನ್ನ ಜೀವವನ್ನು ತೆರಲು ಸಿದ್ಧನಾಗಿರುವನೋ; ಯಾರ ಕರುಣಾದೃಷ್ಟಿಯು ದೀನದರಿದ್ರರ ಮೇಲಿರುವುದೋ – ಅಂತಹಾ ಮಹಾದೇವ ನೀಲಕಂಠ ಶಿವನಿಗೆ ಅನವರತವೂ ನಮಿಸೋಣ.

Leave a Reply