ಮನುಜ ಯಂತ್ರಗಳಂತೆ ಆಗದಿರಲು ಏನು ಮಾಡಬೇಕು? ~ ಓಶೋ, ‘ದ ಬುಕ್ ಆಫ್ ಮ್ಯಾನ್’ #3

ಯಾವ ಮಗುವೂ ತಾನೊಂದು ಯಂತ್ರವಾಗಬೇಕು ಎಂದು ಹುಟ್ಟುವುದಿಲ್ಲ. ಚಿಕ್ಕ ಮಕ್ಕಳಿಗೆ ತಾವು ಮುಂದೆ ಏನಾಗಬೇಕು ಎಂದು ಕೇಳಿದಾಗ ಆ ಮಕ್ಕಳು ತಮ್ಮ ಕನಸುಗಳನ್ನು ಬಹಳ ಸೊಗಸಾಗಿ ಹೇಳುತ್ತವೆ. ಆದರೆ ಅವರಲ್ಲಿ ಎಷ್ಟು ಮಕ್ಕಳು ಅವರ ಕನಸುಗಳನ್ನು ಗೆಲ್ಲುತ್ತಾರೆ? ~ ಓಶೋ ರಜನೀಶ್ | ದ ಬುಕ್ ಆಫ್ ಮ್ಯಾನ್ ; ಕನ್ನಡ ನಿರೂಪಣೆ : ಪ್ರಣವ ಚೈತನ್ಯ


ಇಂದಿನ ಸಮಾಜದಲ್ಲಿ ಇರುವ ಒಂದು ದೊಡ್ಡ ಸಮಸ್ಯೆ ಎಂದರೆ ಅದು ಒಬ್ಬ ವ್ಯಕ್ತಿಗೆ ತಾನು ಇಷ್ಟಪಡುವ ಅಥವಾ ತನಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಲು ಅವಕಾಶ ಸಿಗುತ್ತಿಲ್ಲ ಎನ್ನುವುದು. ಈ ಸಮಾಜ ಹುಟ್ಟಿನಿಂದ ಸಾವಿನವರೆಗೂ ಒಬ್ಬ ವ್ಯಕ್ತಿಯ ಜೀವನವನ್ನು ತಾನೇ ನಿರ್ಧರಿಸುತ್ತದೆ. ಇಲ್ಲಿ ಸಮಾಜವೆಂದರೆ ಹೆಸರು ಹಾಗು ಹಣವಿರುವ ತನ್ನ ಊರಿನಲ್ಲಿ ಅತ್ಯಂತ ಪ್ರಭಾವಶಾಲಿಗಳಾದ ಸಾಮಾಜದ ದೊಡ್ಡ ಪ್ರಜೆಗಳು. ಅವರನ್ನೆ ಸಮಾಜವೆಂದರೂ ತಪ್ಪಿಲ್ಲ, ಏಕೆಂದರೆ ಆ ವ್ಯಕ್ತಿಗಳು ತಮ್ಮ ಬೆಳವಣಿಗೆಗೋಸ್ಕರ ಎಷ್ಟೋ ಜನರನ್ನು ಯಂತ್ರಗಳ ತರಹ ಬಳಸಿಕೊಳ್ಳುತ್ತಾರೆ.

ಒಬ್ಬ ಸಾಮಾನ್ಯ ಮನುಷ್ಯನು ತಾನು ಈ ಸಮಾಜದಲ್ಲಿ ಬದುಕಬೇಕೆಂದರೆ ಸಮಾಜವು ತೋರಿಸುವ ಶಾಲೆಯಲ್ಲಿ ಓದಬೇಕು, ಅವರು ಹೇಳಿಕೊಡುವುದನ್ನು ಕಲಿಯಬೇಕು, ಮುಂದೆ ಅವರಿಗಾಗಿಯೇ ಯಂತ್ರಗಳ ತರಹ ದುಡಿಯಬೇಕು. ಒಂದು ದಿನ ದುಡಿದು ದುಡಿದು ಸಾಯಬೇಕು. ಮತ್ತೆ ಮುಂದಿನ ಪೀಳಿಗೆಯೂ ಇದನ್ನೆ ಮುಂದುವರೆಸಿಕೊಂಡು ಹೋಗಬೇಕು. ಇದರಿಂದ ಆಗುವುದು ಇಷ್ಟೆ – ಒಬ್ಬ ವ್ಯಕ್ತಿಗೆ ತಾನು ನಿಜವಾಗಿಯೂ ಏನು, ತನ್ನಲ್ಲಿ ಏನು ಬೇಕಾದರೂ ಮಾಡುವ ಛಲವಿದೆ ಎಂದು ಅವನಿಗೆ ಸಾಯುವವರೆಗೂ ತಿಳಿಯುವುದಿಲ್ಲ.

ಒಂದು ಮಗುವನ್ನು ಸಮಾಜವು ತನಗೆ ಬೇಕಾದಹಾಗೆ ರೂಪಿಸುತ್ತದೆ. ಅಷ್ಟಕ್ಕು ಈ ಸಮಾಜ ಕಟ್ಟಿದವರು ಯಾರು? ಅವರು ಕೂಡ ಸಾಮಾನ್ಯ ಮನುಜರು. ಆದರೆ ಅವರಿಗೆ ತಮ್ಮಲ್ಲಿರುವ ಸಾಮರ್ಥ್ಯ ತಿಳಿದು ತಮಗೆ ಬೇಕಾದ ಸಮಾಜವನ್ನು ಕಟ್ಟಿದರು. ಹೀಗೆ ನಾವು ನಮ್ಮಲ್ಲಿನ ಸಾಮರ್ಥ್ಯವನ್ನು ಕಂಡುಕೊಂಡರೆ ಅವರಿಗಿಂತ ಉತ್ತಮವಾದ ಸಮಾಜವನ್ನು ಕಟ್ಟಬಹುದು. ಎಂತಹ ಸಮಾಜವೆಂದರೆ ಎಲ್ಲಾ ಜೀವಿಗಳೂ ತಮ್ಮನ್ನು ತಾವು ಕಂಡುಕೊಂಡು ತಮ್ಮ ಶಕ್ತಿ ಯಾವ ಕ್ಷೇತ್ರದಲ್ಲಿದೆ ಎಂದು ತಿಳಿದುಕೊಂಡು ತಮ್ಮನ್ನು ತಾವು ರೂಪಿಸಿಕೊಳ್ಳುವಂತಹ ಸಮಾಜ. ಅಂತಹ ಸಮಾಜವೊಂದು ನಿರ್ಮಾಣವಾದರೆ ಅದು ಅತ್ಯಂತ ಸುಂದರ ಹಾಗು ಅತ್ಯಂತ ಪ್ರಬಲ ಸಮಾಜವಾಗುತ್ತದೆ.

ಆದರೆ ಈ ಸಮಾಜಕ್ಕೆ ಅದು ಬೇಡವಾಗಿದೆ, ಅದು ಒಬ್ಬ ವ್ಯಕ್ತಿಯಿಂದ ತನ್ನ ವ್ಯಕ್ತಿತ್ವವನ್ನು ಕಸಿದುಕೊಳ್ಳುತ್ತಿದೆ. ವ್ಯಕ್ತಿತ್ವವೇ ಇಲ್ಲದ ಒಬ್ಬ ಮನುಜನು ಬರೀ ಒಂದು ಕೆಲಸ ಮಾಡುವ ಯಂತ್ರವಾಗುತ್ತಾನೆ, ಈ ಸಮಾಜಕ್ಕೆ ಗುಲಾಮನಾಗುತ್ತಾನೆ. ಯಾವ ಮಗುವೂ ತಾನೊಂದು ಯಂತ್ರವಾಗಬೇಕು ಎಂದು ಹುಟ್ಟುವುದಿಲ್ಲ. ಚಿಕ್ಕ ಮಕ್ಕಳಿಗೆ ತಾವು ಮುಂದೆ ಏನಾಗಬೇಕು ಎಂದು ಕೇಳಿದಾಗ ಆ ಮಕ್ಕಳು ತಮ್ಮ ಕನಸುಗಳನ್ನು ಬಹಳ ಸೊಗಸಾಗಿ ಹೇಳುತ್ತವೆ. ಆದರೆ ಅವರಲ್ಲಿ ಎಷ್ಟು ಮಕ್ಕಳು ಅವರ ಕನಸುಗಳನ್ನು ಗೆಲ್ಲುತ್ತಾರೆ? ಬಹಳ ಕಡಿಮೆ.

ಏಕೆ ಹೀಗಾಗುತ್ತಿದೆ ಎಂದರೆ ಅದಕ್ಕೆ ಉತ್ತರ ಬಹಳ ಸುಲಭ. ಈ ಸಮಾಜವು ಆ ಮಗುವಿನಿಂದ ತನ್ನ ಆಸೆ ಕನಸುಗಳನ್ನು ಕಿತ್ತುಕೊಂಡು, ತಾನು ನಿರ್ಮಿಸಿರುವ ಈ ಕೋಟೆಯೊಳಗೆ ನೂಕುತ್ತದೆ. ಮನೆ, ಸಂಸಾರ, ಮದುವೆ, ಧರ್ಮ ಎನ್ನುವ ಸಣ್ಣ ಸಣ್ಣ ಹುಳಗಳನ್ನು ಆ ಮಗುವಿನ ತಲೆಯೊಳಗೆ ಹರಿದು ಬಿಡುತ್ತದೆ. ಇದರಿಂದ ಆ ಮಗು ಹೆದರುತ್ತದೆ, ಹೆದರಿ ಈ ಸಮಾಜದ ನಿಯಮಗಳನ್ನು ಪಾಲಿಸುತ್ತದೆ. ಕಡೆಗೆ ಆ ಮಗು ತನ್ನ ಜೀವನವೆಲ್ಲ ಯಂತ್ರವಾಗಿ ದುಡಿದು ಒಂದು ದಿನ ಸಾಯುತ್ತದೆ. ಮತ್ತೆ ಇದೇ ರಿವಾಜು ಮುಂದುವರೆಯುತ್ತದೆ.

ಇಲ್ಲಿ ನಿಜವಾಗಿಯೂ ಸೋಲುತ್ತಿರುವುದು ನಾಮಾನ್ಯ ಮನುಜರು, ಯಾರೋ ತಮಗೆ ಬೇಕಾದಹಾಗೆ ಮಾಡಿಹೋಗಿರುವ ನಿಯಮಗಳನ್ನು ನಾವು ಇಂದು ಪಾಲಿಸುತ್ತೇವೆ. ಇಷ್ಟು ಬುಧ್ದಿವಂತನಾಗಿರುವ ಮನುಷ್ಯನಿಗೆ ಕಾಲ ಬದಲಾದಂತೆ ನಿಯಮಗಳು ಬದಲಾಗಬೇಕು ಎಂದು ಇನ್ನೂ ಅರ್ಥವಾಗಿಲ್ಲ. ಇದರಿಂದ ಒಬ್ಬ ಮನುಷ್ಯನ ಮನಃಶಾಂತಿ ನಾಶವಾಗುತ್ತಿದೆ, ಏಕೆಂದರೆ ಯಾವಾಗ ಒಬ್ಬ ಮನುಷ್ಯನು ತನಗೆ ಬೇಕಾಗಿದ್ದನ್ನು ತಾನು ಸಾಧಿಸುವುದಿಲ್ಲವೋ ಆಗ ಅವನು ಸೋಲುತ್ತಾನೆ, ಸೋತಾಗ ಅವನು ಒಳಗಿಂದಲೆ ಸಾಯುತ್ತಾನೆ. ಸತ್ತಮೇಲೂ, ತಾನು ಕೊನೆಗೆ ಮಾಡಬೇಕಾಗಿದ್ದನ್ನು ಮಾಡಲಿಲ್ಲ ಎಂದು ಕೊರಗುತ್ತಾನೆ. ಹೀಗೆ ಕೊರಗಿದಾಗ ಅವನಿಗೆ ಶಾಂತಿ ಸಿಗುವುದಿಲ್ಲ. ಇಂತಹ ಜಗತ್ತಿನಲ್ಲಿ ಏಕೆ ನಾನು ಹುಟ್ಟಿದೆ ಎಂದು ತನ್ನಮೇಲೆ ತಾನು ದ್ವೇಷ ಪಡುತ್ತಾನೆ.

ಆದ್ದರಿಂದ, ನಮ್ಮ ಮನಸ್ಸಿಗೆ ಶಾಂತಿ, ಹಾಗು ನಮ್ಮ ಜೀವನದಲ್ಲಿ ಆನಂದ ಹಾಗು ನೆಮ್ಮದಿ ಇರಬೇಕು ಎಂದರೆ ನಾವು ನಮಗೆ ಆಸಕ್ತಿ ಇರುವ ಹಾಗು ನಾವು ಪ್ರೀತಿಸುವ ವಿಷಯಗಳನ್ನು ಆಯ್ದುಕೊಂಡು ಕೆಲಸ ಮಾಡಬೇಕು, ಆಗ ನಾವು ಯಂತ್ರಗಳಲ್ಲ, ಮನುಷ್ಯರಾಗುತ್ತೇವೆ, ನಾವು ನಾವಾಗುತ್ತೇವೆ. ಈ ಸಂಗತಿಯನ್ನು ಓಶೋ ರಜನೀಶ್’ರವರು “ದಿ ಬುಕ್ ಆಫ್ ಮ್ಯಾನ್” ಕೃತಿಯಲ್ಲಿ ಬಹಳ ಸುಂದರವಾಗಿ ವಿವರಿಸಿದ್ದಾರೆ.

(ಹಿಂದಿನ ಭಾಗ ಇಲ್ಲಿ ಓದಿ : https://aralimara.com/2019/06/23/osho-23/)

2 Comments

  1. ಮೃಗಕ್ಕೆ ಮೂಲ ಪುಸ್ತಕದಲ್ಲಿ ಯಾವ ಶಬ್ದ ಬಳಸಿದ್ದಾರೆ ತಿಳಿಸಬಹುದಾ?

Leave a Reply