ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ

ಶಿಕ್ಷಣ ಪಡೆದ ವ್ಯಕ್ತಿ ಹೆಚ್ಚು ಜ್ಞಾನಿಯೂ ವಿನೀತನೂ ಧೀರನೂ ಆಗಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೆಚ್ಚು ಶಿಕ್ಷಣದಿಂದ ಹೆಚ್ಚು ಅಹಂಕಾರ ಎನ್ನುವುದಾದರೆ ಅಂತಹ ಶಿಕ್ಷಣವಾದರೂ ಏಕೆ ಹೇಳಿ!? ಸ್ವಾಮಿ ವಿವೇಕಾನಂದರ ಮಾತೊಂದಿದೆ. “ಅನಕ್ಷರಸ್ಥರಿಗೆ ಬೆಳಕು ಕೊಡಿ, ಅಕ್ಷರಸ್ಥರಿಗೆ ಸ್ವಲ್ಪ ಹೆಚ್ಚಿನ ಬೆಳಕು ಕೊಡಿ” ಎಂದು ~ ಆನಂದಪೂರ್ಣ

‘ಶಿಕ್ಷಣವೆಂಬುದು ಮಾನವನೊಳಗೆ ಅದಾಗಲೇ ಹುದುಗಿದ್ದ ಪರಿಪೂರ್ಣತೆಯನ್ನು ವ್ಯಕ್ತಗೊಳಿಸುವ ಪ್ರಯತ್ನ’ ಹಾಗೆಂದವರು ಸ್ವಾಮಿ ವಿವೇಕಾನಂದರು. ಹೊರಗಿನಿಂದ ತಲೆಯೊಳಗೆ ಒತ್ತಾಯವಾಗಿ ತುರುಕಿದ್ದು ಶಿಕ್ಷಣವಾಗಲಾರದು. ಕಂಠಸ್ಥ ಮಾಡಿಕೊಂಡು ಮರು ಒಪ್ಪಿಸಿದ ಪಾಠ ಶಿಕ್ಷಣವಾಗಲಾರದು. ಒಳಗೆ ಹುದುಗಿರುವ ಬೂದಿ ಮುಚ್ಚಿದ ಕೆಂಡವನ್ನು ಗುರುತಿಸುವುದು ಮಾತ್ರವೇ ಶಿಕ್ಷಣ. ಇಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ, ತನ್ನ ತಾನು ಅರಿಯುವ ಪ್ರಯತ್ನಕ್ಕೆ ವಿಶೇಷ ಮಹತ್ವ. ಹಾಗೆಂದೇ `ಯಾವುದನ್ನು ಅರಿಯುವುದರಿಂದ ಇನ್ನೇನನ್ನೂ ತಿಳಿಯುವ ಅಗತ್ಯವಿಲ್ಲವೋ ಅಂಥದ್ದನ್ನು ಕಲಿತು ಬಂದಿರುವೆಯಾ?’ ಎಂಬ ಉಪನಿಷತ್ತಿನ ಪ್ರಶ್ನೆಗೆ ಮಗ ನಕಾರಾತ್ಮಕವಾಗಿ ಉತ್ತರಿಸಿದ. ತಂದೆಯೇ ಆ ಮಗುವಿನ ಮೈದಡವಿ ‘ತತ್ತ್ವಮಸಿ’ – ಅದು ನೀನೇ ಆಗಿದ್ದೀಯ ಎಂದುತ್ತರಿಸುವನಲ್ಲ, ಅದು ನಮ್ಮ ಪರಿಕಲ್ಪನೆಯ ಶಿಕ್ಷಣ. ಹಾಗಂತ ಲೌಕಿಕ ಶಿಕ್ಷಣಕ್ಕೆ ಬೆಲೆ ಇರಲಿಲ್ಲವೆಂದಲ್ಲ. ಪರಾ ಮತ್ತು ಅಪರಾ ವಿದ್ಯೆಗಳ ಪರಿಕಲ್ಪನೆಯನ್ನು ಕೊಟ್ಟವರು ನಾವೇ. ಒಂದು ಹೊರ ಜಗತ್ತಿನ ಬೆಳವಣಿಗೆಗೆ ಬೇಕಾದದ್ದು, ಮತ್ತೊಂದು ಆಂತರಿಕ ಅಭಿವೃದ್ಧಿಗೆ!

ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿ, ಗುರುವಿನ ಸಾನ್ನಿಧ್ಯದೊಂದಿಗೇ ನಡೆಯುವಂಥದ್ದು. ಅಲ್ಲಿ ವಿದ್ಯಾರ್ಥಿಯನ್ನು ಪ್ರತಿಕ್ಷಣ ಗಮನಿಸುವ ಗುರು, ಅವನೊಳಗಿನ ಶಕ್ತಿಯನ್ನು ಗುರುತಿಸುತ್ತಾನೆ. ಸುಪ್ತವಾಗಿರುವ ಈ ಶಕ್ತಿಯನ್ನು ವ್ಯಕ್ತಗೊಳಿಸುವ ಹೊಣೆ ಹೊರುತ್ತಾನೆ. ಆದರೆ ಈಗಿನ ಶಿಕ್ಷಣ ಪದ್ಧತಿಯಲ್ಲಿ ಇಂದ್ರಿಯ ನಿಗ್ರಹಕ್ಕೆ, ತನ್ಮೂಲಕ ಮನಸ್ಸಿನ ಮೇಳಿನ ಹಿಡಿತಕ್ಕೆ, ಬುದ್ಧಿಯ ಶುದ್ಧಿಗೆ ಯಾವ ಸ್ಥಾನವೂ ಇಲ್ಲ. ಏಕಾಗ್ರತೆಗೆ ಹುಡುಕಾಟವಿದೆ ಹೊರತು, ಅದನ್ನು ಸಾಧಿಸುವ ಮಾರ್ಗವಿಲ್ಲ. ಹಾಗೆಂದೇ ವಿವೇಕಾನಂದರು ಏಕಾಗ್ರತೆಗೆ ಅತೀವ ಮಹತ್ವ ಕೊಟ್ಟಿದ್ದು. ಸ್ವತಃ ಸ್ವಾಮೀಜಿಯವರ ಏಕಾಗ್ರತೆ ಎಷ್ಟಿತ್ತೆಂದರೆ, ಅವರು ಒಂದು ಪುಸ್ತಕವನ್ನು ಹಿಡಿದರೆ ಸಂಪೂರ್ಣ ಅರೆದು ಕುಡಿದುಬಿಡುತ್ತಿದ್ದರು. ವಿವೇಕಾನಂದರೇ ಒಂದೆಡೆ ಹೇಳಿಕೊಂಡಿದ್ದಾರೆ; “ಮೊದಮೊದಲು ಪ್ಯಾರಾಗ್ರಾಫಿನ ಮೊದಲ ಹಾಗೂ ಕೊನೆಯ ವಾಕ್ಯಗಳನ್ನು ಓದಿದರೆ ಸಾಕಾಗುತ್ತಿತ್ತು. ಬರಬರುತ್ತ ಪುಟಗಳ ಕೆಲವು ವಾಕ್ಯಗಳು. ಆಮೇಲಾಮೇಲೆ ಪುಸ್ತಕದ ಕೆಲವು ಸಾಲುಗಳನ್ನು ಓದಿದರೂ ಇಡಿಯ ಪುಸ್ತಕದ ಸಾರ ಅರ್ಥವಾಗಿಬಿಡುತ್ತಿತ್ತು” ಎಂದು!

ಪಶ್ಚಿಮದ ಮಿತ್ರನೊಬ್ಬನೊಡನೆ ಅವರು ಚರ್ಚಿಸುತ್ತಿರುವಾಗ ಪಿಕ್‍ವಿಕ್ ಪೇಪರ್ಸ್‍ನ ಸಾಲುಗಟ್ಟಲೆ ಉಲ್ಲೇಖ ನೀಡುತ್ತಿದ್ದರು. ಅದನ್ನು ಗ್ರಹಿಸಿದ ಮಿತ್ರ “ಅದೆಷ್ಟು ಬಾರಿ ಅದನ್ನು ಓದಿದ್ದೀರಿ?” ಎಂದು ಅಚ್ಚರಿಪಟ್ಟು ಕೇಳಿದ. “ಒಮ್ಮೆ ಮಾತ್ರ” ಎಂದ ಸ್ವಾಮೀಜಿಯವರ ಉತ್ತರವನ್ನು ಕೇಳಿ ದಂಗಾಗಿಬಿಟ್ಟ. ಏಕಾಗ್ರತೆಯಿಂದ ಗ್ರಹಿಕೆ ಸುಲಭವಾಗುತ್ತದೆ ಎನ್ನುವದಕ್ಕೆ ಸ್ವಾಮೀಜಿ ಸ್ವತಃ ನಿದರ್ಶನವಾಗಿದ್ದರು ಮತ್ತು ಬದುಕಿನುದ್ದಕ್ಕೂ ಅದನ್ನು ಸಾಬೀತುಪಡಿಸಿದರು ಕೂಡಾ.

ಸ್ವಾಮೀಜಿಯ ದೃಷ್ಟಿಯಲ್ಲಿ ಕೊಠಡಿಯಲ್ಲಿ ನಡೆಯುವ ಶಿಕ್ಷಣ ಸಾಮಾನ್ಯ ಕ್ರಿಯೆಯಲ್ಲ, ಅದು ಅಧ್ಯಾತ್ಮ ಪ್ರಕ್ರಿಯೆ! ಗುರುವಿನ ಆತ್ಮ ಶಿಷ್ಯ ಸಮೂಹದ ಆತ್ಮದೊಡನೆ ನಡೆಸುವ ಸಂವಾದ ಅದು. ಗರ್ಭಗುಡಿಯಲ್ಲಿ ನಡೆಸುವ ಪೂಜೆಯಷ್ಟೇ ಪವಿತ್ರ, ಕೊಠಡಿಯೊಳಗಿನ ಬೋಧನಾ ಕಾರ್ಯ. ಈ ಭಾವನೆ ಶಿಕ್ಷಕರಲ್ಲಿ ಮೂಡಿದ್ದೇ ಆದರೆ, ಆತನೊಳಗೆ ಬೇರೂರಿದ್ದೇ ಆದರೆ, ಆತನ ಬೋಧನಾ ಸ್ವರೂಪವೇ ಬದಲಾಗಿಬಿಡುತ್ತದೆ. ಇದರಲ್ಲಿ ಅನುಮಾನವೇ ಬೇಡ!

ವಿವೇಕಾನಂದರು ಶಿಕ್ಷಣಕ್ಕೆ ಅಪಾರ ಮಹತ್ವ ಕೊಟ್ಟಿದ್ದರು. “ಬಹು ಸಂಖ್ಯಾತರನ್ನು ಕಡೆಗಣಿಸಿರುವುದೇ ಎಲ್ಲ ಸಮಸ್ಯೆಗೆ ಮೂಲ” ಎಂದು ಅವರಿಗೆ ಗೊತ್ತಿತ್ತು. “ರಾಷ್ಟ್ರನಿರ್ಮಾಣಕ್ಕೆ ಇರುವ ಏಕೈಕ ಮಾರ್ಗ ಈ ಬಹುಸಂಖ್ಯಾತರಿಗೆ ಶಿಕ್ಷಣ ನೀಡಿ ಮೇಲೆತ್ತುವುದೇ ಆಗಿದೆ” ಎಂಬುದನ್ನು ಅವರು ಬಲವಾಗಿ ನಂಬಿದ್ದರು. ಅವರ ದೃಷ್ಟಿಯ ಈ ಬಹು ಸಂಖ್ಯಾತರು ಶಿಕ್ಷಣ ವಂಚಿತ, ನೋವುಂಡ, ತುಳಿತಕ್ಕೆ ಒಳಗಾದ ಸಮುದಾಯವೇ ಆಗಿತ್ತು ಹೊರತು ಬೇರೆಯಲ್ಲ. ಹೌದು. ಅವರ ಕಾಳಜಿ ಅತ್ಯಪರೂಪದ್ದು. “ಗುಡಿಸಲುಗಳಲ್ಲಿ ವಾಸ ಮಾಡುವ ಈ ಜನ ಸ್ವಾಭಿಮಾನವನ್ನೆ ಕಳೆದುಕೊಂಡಿದ್ದಾರೆ. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ನರೆಲ್ಲರ ಪದಾಘಾತಕ್ಕೆ ಒಳಗಾಗಿರುವ ಅವರಿಗೆ ತಾವು ಮರೆತಿರುವ ಸ್ವಾಭಿಮಾನವನ್ನು ಮರಳಿಸಬೇಕಿದೆ. ಅದಕ್ಕೆ ಸೂಕ್ತ ಶಿಕ್ಷಣ ಕೊಡುವ ಅಗತ್ಯವಿದೆ” ಎಂದು ಸ್ವಾಮೀಜಿ ಹೇಳುತ್ತಿದ್ದರು. ಹೌದು. ಈ ಚಿಂತನೆ ತುಂಬುವ ಕೆಲಸವೇ ಶಿಕ್ಷಣ. ಸ್ವಾಮೀಜಿ ಮತ್ತೆ ಮತ್ತೆ ಅದನ್ನು ಹೇಳಿದ್ದಾರೆ. ಸ್ವಾಭಿಮಾನದ ಮರುಸ್ಥಾಪನೆಗೂ ಶಿಕ್ಷಣವೇ ರಾಜಮಾರ್ಗವೆಂದು ಪುನರುಚ್ಚರಿಸಿದ್ದಾರೆ.

ಶಿಕ್ಷಣ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಅದು ಧೈರ್ಯ ತುಂಬುವಂತೆ ಇರಬೇಕು. ಜೀವನದ ಗಹನ ಸವಾಲುಗಳನ್ನು ಎದುರಿಸಬಲ್ಲ ಶಕ್ತಿಯಾಗಬೇಕು. ಶಿಕ್ಷಣ ಹೆದರಿಕೆಯನ್ನು ತೊಲಗಿಸಬೇಕು. ಇವೆಲ್ಲವೂ ವಿವೇಕಾನಂದರ ಕನಸುಗಳಾಗಿದ್ದವು. ಶತಶತಮಾಣಗಳಿಂದಲೂ ಇಂತಹ ಶಿಕ್ಷಣದಿಂದ ವಂಚಿತರಾದವರಿಗೆ ಸುಶೀಕ್ಷಿತರು ಮಾರ್ಗದರ್ಶಿಯಾಗಬೇಕು.

“ಬಡವ ಶಾಲೆಗೆ ಬರಲಾಗದಿದ್ದರೆ ಶಾಲೆಯೇ ಕೃಷಿಭೂಮಿಗೆ, ಕಾರ್ಖಾನೆಗೆ, ಅವರಿರುವ ಎಲ್ಲೆಡೆಗೆ ಹೋಗಬೇಕು” ಎನ್ನುತ್ತಿದ್ದರು ಸ್ವಾಮೀಜಿ. ಅದು ಹೇಗೆ? ಅವರ ಬಳಿ ಸ್ಪಷ್ಟ ನೀಲಿ ನಕಾಶೆ ಇತ್ತು. “ನಿಸ್ವಾರ್ಥ, ಒಳ್ಳೆಯ ಮನಸ್ಸಿನ, ಸುಶಿಕ್ಷಿತ ನೂರಾರು ಜನ ಹಳ್ಳಿಯಿಂದ ಹಳ್ಳಿಗೆ, ಮನೆಯಿಂದ ಮನೆಗೆ ಹೋಗಬೇಕು. ಧರ್ಮವನ್ನಷ್ಟೆ ಅಲ್ಲ, ಶಿಕ್ಷಣವನ್ನೂ ಮನೆ ಬಾಗಿಲಿಗೆ ತಲುಪಿಸಬೇಕು. ಖಗೋಳದ ಚಿತ್ರಗಳನ್ನು, ಇತರ ದೇಶದ ಚಿತ್ರಪಟಗಳನ್ನು ತೋರಿಸುತ್ತ ಅವರಿಗೆ ಬೋಧಿಸಬೇಕು. ಉಳಿದದ್ದನ್ನು ಅವರೇ ನೋಡಿಕೊಳ್ಳುತ್ತಾರೆ’. ಈ ನಕಾಶೆಯನ್ನಿಟ್ಟುಕೊಂಡೇ ಅವರು ಕೆಲಸ ಮಾಡಿದರು. ತಮ್ಮ ಅನುಯಾಯಿಗಳಿಗೂ ಅಂತೆಯೇ ದುಡಿಯಲು ಹೇಳಿದರು.

ಇಂದಿನ ಶಿಕ್ಷಣಕ್ಕೂ ಆ ಕಲ್ಪನೆಯ ಸಾಕಾರತೆ ಸಿದ್ಧಿಸಬೇಕಿದೆ. ಶಿಕ್ಷಣ ಪಡೆದ ವ್ಯಕ್ತಿ ಹೆಚ್ಚು ಜ್ಞಾನಿಯೂ ವಿನೀತನೂ ಧೀರನೂ ಆಗಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೆಚ್ಚು ಶಿಕ್ಷಣದಿಂದ ಹೆಚ್ಚು ಅಹಂಕಾರ ಎನ್ನುವುದಾದರೆ ಅಂತಹ ಶಿಕ್ಷಣವಾದರೂ ಏಕೆ ಹೇಳಿ!? ಸ್ವಾಮಿ ವಿವೇಕಾನಂದರ ಮಾತೊಂದಿದೆ. “ಅನಕ್ಷರಸ್ಥರಿಗೆ ಬೆಳಕು ಕೊಡಿ, ಅಕ್ಷರಸ್ಥರಿಗೆ ಸ್ವಲ್ಪ ಹೆಚ್ಚಿನ ಬೆಳಕು ಕೊಡಿ” ಎಂದು.

ನಮ್ಮ ಬೋಧನಾ ರೀತಿ, ವ್ಯವಸ್ಥೆ, ಗುರಿ, ಆಸ್ಥೆಗಳೆಲ್ಲವೂ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುವಂತಾಗಬೇಕು. ಕಲಿತವ ನಾಡಿಗೆ ಬೆಳಕಾಗಬೇಕು. ದೇಶದ ಕಠಿಣ ಸಂದರ್ಭಗಳಲ್ಲಿ ಜೊತೆಯಾಗಿ ನಿಲ್ಲಬಲ್ಲ ಸಾಮಥ್ರ್ಯ ತೋರಬೇಕು. ಸರಿಯಾದ ವಿದ್ಯೆಯ ಬೋಧನೆಯಾಗದಿದ್ದರೆ ಆಗುವ ಅನರ್ಥಗಳೇ ಹೆಚ್ಚು. `ಪಶ್ಚಿಮದಲ್ಲಿ ಒಬ್ಬ ನಾಯಕನ ಅವಸಾನದ ಹಿಂದುಹಿಂದೆಯೇ ಮತ್ತೊಬ್ಬ ನಾಯಕ ಹುಟ್ಟುತ್ತಾನೆ. ಭಾರತದಲ್ಲಿ ಶ್ರೇಷ್ಠ ಪುರುಷರ ಹುಟ್ಟುವಿಕೆಯ ನಡುವೆ ಅಂತರ ದೀರ್ಘಕಾಲದ್ದಾಗಿರುತ್ತದೆ’ ಎಂಬುದನ್ನು ಗುರುತಿಸುವ ಸ್ವಾಮೀಜಿ, ಇದಕ್ಕೆ ಕಾರಣ ಸೂಕ್ತ ಶಿಕ್ಷಣದ ಕೊರತೆ ಎಂದೂ ಅಭಿಪ್ರಾಯ ಪಡುತ್ತಾರೆ. ಈ ಕೊರತೆಯನ್ನು ತುಂಬುವ ಕೆಲಸ ಈಗಲಾದರೂ ಆಗಬೇಕಿದೆ.

 

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.