ಬಹುಮುಖಿ ವ್ಯಕ್ತಿತ್ವದ ಕೃಷ್ಣದ್ವೈಪಾಯನ – ವ್ಯಾಸ

ವ್ಯಾಸರದ್ದು ಸೇತುವೆಯಂತಹ ವ್ಯಕ್ತಿತ್ವ. ಮಹಾಭಾರತವನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಶಾಂತನುವಿನ ಅಂತ್ಯದಿಂದ ಹಿಡಿದು ಪಾಂಡವರ ಸ್ವರ್ಗಾರೋಹಣದ ವರೆಗೆ ವ್ಯಾಸರೇ ಚಾಲಕ ಶಕ್ತಿಯಾಗಿ ಕಂಗೊಳಿಸುತ್ತಾರೆ. ದ್ವಾಪರಯುಗದ ಸೂತ್ರಧಾರ ಕೃಷ್ಣನಾದರೆ, ಅದರ ಚಾಲಕ ಶಕ್ತಿ ಕೃಷ್ಣ ದ್ವೈಪಾಯನ. ಈ ಯುಗದುದ್ದಕ್ಕೂ ಬಂದೊದಗುವ ಗಂಟುಗಳನ್ನು ಬಿಡಿಸುವಲ್ಲಿ ಅವರು ಕೃಷ್ಣನ ಜೊತೆಗೂಡದಿದ್ದರೆ, ಬಹುಶಃ ಕುರು ವಂಶದ ಚಿತ್ರಣವೇ ಬೇರೆ ಇರುತ್ತಿತ್ತು ~ ಸಾ.ಹಿರಣ್ಮಯಿ

vyas

ಹಾಭಾರತದ ಕರ್ತೃ ವೇದವ್ಯಾಸ, ಸ್ವತಃ ಈ ಮಹತ್ಕೃತಿಯ ಮುಖ್ಯ ಪಾತ್ರವೂ ಹೌದು. ಕೃಷ್ಣ, ದ್ವೈಪಾಯನ, ಸಾತ್ಯವತ, ಪಾರಶರ್ಯ, ವೇದ ವ್ಯಾಸ, ಬಾದರಾಯಣ ಇವೆಲ್ಲವೂ ಇವರ ಇನ್ನಿತರ ಹೆಸರುಗಳು. ವ್ಯಾಸ ಎನ್ನುವುದೊಂದು ಪದವಿ, ಮಾತ್ರ ಒಬ್ಬನೇ ವ್ಯಕ್ತಿಯಲ್ಲ, ಹಲವು ವ್ಯಾಸರಿದ್ದಾರೆ. ಕಾಲಾಂತರದಲ್ಲಿ ‘ವ್ಯಾಸ’ ಎಂಬ ಹೆಸರಿನಲ್ಲೇ ಹಲವು ಕೃತಿಗಳನ್ನು ರಚಿಸಿದ್ದಾರೆ, ಪುರಾಣಗಳು ಹಲವು ವ್ಯಾಸರ ಕೊಡುಗೆ – ಎಂದೂ ಹೇಳುವುದುಂಟು. ಪುರಾಣಗಳ ರಚನೆಯ ಕಾಲವಿಸ್ತಾರವನ್ನು ನೋಡಿದರೆ ಈ ಮಾತು ನಿಜವೆಂದು ತೋರುತ್ತದೆ.

ಸದ್ಯಕ್ಕೆ ಇಲ್ಲಿ ಭಗವಾನ್ ವಿಷ್ಣುವಿನ ಕಲಾವತಾರ ಎಂದು ನಂಬಲಾಗಿರುವ, ದ್ವಾಪರಯುಗದ ವ್ಯಾಸರ ಬಗ್ಗೆ ಬರೆಯಲಾಗಿದೆ.

ಈ ಕೃಷ್ಣ ದ್ವೈಪಾಯನರದ್ದು ಬಹಳ ವರ್ಣ ರಂಜಿತ ವ್ಯಕ್ತಿತ್ವ. ಇವರ ಜನನವೇ ಒಂದು ಕೌತುಕ. ಬ್ರಹ್ಮರ್ಷಿ ವಸಿಷ್ಠರ ಮೊಮ್ಮಗ ಪರಾಶರ ಮುನಿ ಹಾಗೂ ಬೆಸ್ತ ಕನ್ಯೆ ಸತ್ಯವತಿಯರ ಮಗನಾಗಿ, ಯಮುನಾ ನದಿಯ ದ್ವೀಪವೊಂದರಲ್ಲಿ ಜನಿಸಿದರೆಂದು ಪುರಾಣಗಳು ಹೇಳುತ್ತವೆ. ಇವರು ಶ್ಯಾಮಲ ಬಣ್ಣದವರಾಗಿದ್ದರಿಂದ ಕೃಷ್ಣ ಎಂಬ ಹೆಸರು ಪಡೆದಿದ್ದರೆ, ದ್ವೀಪದಲ್ಲಿ ಜನಿಸಿದ ಕಾರಣ `ದ್ವೈಪಾಯನ’ರಾದರು. ಅಪೌರುಷೇಯವಾದ ವೇದಗಳನ್ನು ಅಭ್ಯಾಸ ಹಾಗೂ ಅಧ್ಯಯನಕ್ಕೆ ಅನುಕೂಲವಾಗುವಂತೆ ವಿಭಾಗ ಮಾಡಿದ್ದರಿಂದ ‘ವೇದ ವ್ಯಾಸ’ ಎಂಬ ಹೆಸರು ಇವರದಾಯಿತು.

ಬ್ರಹ್ಮನ ಮಾನಸ ಪುತ್ರರೂ ಸಪ್ತರ್ಷಿಗಳಲ್ಲೊಬ್ಬರು ಹಾಗೂ ಬ್ರಹ್ಮರ್ಷಿಯೂ ಆಗಿದ್ದ ವಸಿಷ್ಠ ಋಷಿಗಳ ಮಗ ಶಕ್ತಿ ಮುನಿಗಳು. ಶಕ್ತಿ ಮುನಿಯ ಮಗ ಪರಾಶರರು ಜ್ಯೋತಿರ್ವಿಜ್ಞಾನದಲ್ಲಿ ಅಪಾರ ಸಾಧನೆ ನಡೆಸಿದವರು. ಇವರ `ಹೋರಾ ಶಾಸ್ತ್ರ’ ಇಂದಿಗೂ ಭಾರತೀಯ ಜ್ಯೋತಿರ್ವಿಜ್ಞಾನದ ಪ್ರಮುಖ ಆಕರ ಗ್ರಂಥ. ಇವರಿಗೆ ಸತ್ಯವತಿಯೆಂಬ ಬೆಸ್ತ ಕನ್ಯೆಯಲ್ಲಿ ಜನಿಸಿದ ವ್ಯಾಸರು ಈ ಎರಡು ಕುಲಗಳ ನಡುವಿನ ಕೊಂಡಿಯಾಗುತ್ತಾರೆ. ಮುಂದೆ ಸತ್ಯವತಿ ಕ್ಷತ್ರಿಯ ಅರಸ, ಪ್ರತಿಷ್ಠಿತ ಭರತ ವಂಶದ ರಾಜ ಶಾಂತನುವನ್ನು ಮದುವೆಯಾಗುತ್ತಾಳೆ.

ಜ್ಞಾನ ದಾಹಿಯಾಗಿದ್ದ ಕೃಷ್ಣ ದ್ವೈಪಾಯನ ತಂದೆಯ ಜೊತೆಯಲ್ಲಿ ವೇದಾಧ್ಯಯನ ಮಾಡುತ್ತ ಬೆಳೆಯುತ್ತಿದ್ದರೂ ತಾಯಿಯ ಕಷ್ಟಗಳಿಗೆ, ಆಕೆಯ ಮಕ್ಕಳ ತಾಪತ್ರಯಗಳಿಗೆ ಓಗೊಡುತ್ತಾ ನಿವಾರಕ ಶಕ್ತಿಯಾಗಿ ನಿಲ್ಲುತ್ತಾರೆ. ಮಹಾಭಾರತದಲ್ಲಿ ಕ್ಷತ್ರಿಯ ರಾಜವಂಶವೊಂದು ಮುನ್ನಡೆಯುವುದೇ ಬ್ರಾಹ್ಮಣ – ಬೆಸ್ತ ವರ್ಗಗಳ ಸಂತಾನವಾದ ದ್ವೈಪಾಯನರ ಮೂಲಕ. ಅವರು ನಿಯೋಗ ಪದ್ಧತಿಯ ಮೂಲಕ ತನ್ನ ಮಲ ಸಹೋದರನ ಪತ್ನಿಯರಿಗೆ ಸಂತಾನ ಒದಗಿಸುತ್ತಾರೆ. ಅವರ ಮಕ್ಕಳೇ ಮುಂದೆ ಕೌರವ ಪಾಂಡವರಾಗಿ ಮಹಾಭಾರತಕ್ಕೆ ಕಾರಣವಾಗುತ್ತಾರೆ.

ವ್ಯಾಸರು ಅರಮನೆಗಳ ಪಡಸಾಲೆಗಳಲ್ಲಿ ಓಡಾಡಿಕೊಂಡಷ್ಟೇ ದಟ್ಟಾರಣ್ಯಗಳಲ್ಲಿಯೂ ಇರುತ್ತಿದ್ದರು. ಅವರ ಜನ್ಮ ಸ್ಥಳ ಇಂದಿನ ನೇಪಾಳದ ಹಳ್ಳಿಯಲ್ಲಿ ಆಯಿತು ಎನ್ನುತ್ತವೆ ಇತಿಹಾಸದ ಪುಟಗಳು. ವ್ಯಾಸರು ಸಾಮಾನ್ಯವಾಗಿ ಭಾರತದ ಈಶಾನ್ಯ ಭಾಗದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದರು, ಹಾಗೂ ಅಲ್ಲಿನ ವನವಾಸಿಗಳೊಂದಿಗೆ ಆಪ್ತ ಸಂಬಂಧ ಹೊಂದಿದ್ದರು ಎನ್ನುತ್ತವೆ ಪ್ರಾಚೀನ ಕೃತಿಗಳು. ಈ ಮೂಲಕ ಅವರು ಅರಮನೆ – ಗಿರಿಮನೆಗಳ ನಡುವೆಯೂ ಸೇತುವೆಯಾಗಿ ಸಂಬಂಧ ನಿಭಾಯಿಸುತ್ತಿದ್ದರು.

ವ್ಯಾಸರದ್ದು ಸೇತುವೆಯಂತಹ ವ್ಯಕ್ತಿತ್ವ. ಮಹಾಭಾರತವನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಶಾಂತನುವಿನ ಅಂತ್ಯದಿಂದ ಹಿಡಿದು ಪಾಂಡವರ ಸ್ವರ್ಗಾರೋಹಣದ ವರೆಗೆ ವ್ಯಾಸರೇ ಚಾಲಕ ಶಕ್ತಿಯಾಗಿ ಕಂಗೊಳಿಸುತ್ತಾರೆ. ದ್ವಾಪರಯುಗದ ಸೂತ್ರಧಾರ ಕೃಷ್ಣನಾದರೆ, ಅದರ ಚಾಲಕ ಶಕ್ತಿ ಕೃಷ್ಣ ದ್ವೈಪಾಯನ. ಈ ಯುಗದುದ್ದಕ್ಕೂ ಬಂದೊದಗುವ ಗಂಟುಗಳನ್ನು ಬಿಡಿಸುವಲ್ಲಿ ಅವರು ಕೃಷ್ಣನ ಜೊತೆಗೂಡದಿದ್ದರೆ, ಬಹುಶಃ ಕುರು ವಂಶದ ಚಿತ್ರಣವೇ ಬೇರೆ ಇರುತ್ತಿತ್ತು.

ವ್ಯಾಸರು ಸಾಂಸಾರಿಕ ಕ್ಲೇಷಗಳನ್ನು ಬಗೆಹರಿಸಿದಂತೆಯೇ ಜ್ಞಾನಲೋಕದಲ್ಲಿಯೂ ತಮ್ಮ ಚಿಕಿತ್ಸಕ ಪ್ರಜ್ಞೆ ಪ್ರಯೋಗಿಸಿದರು. ವೇದಗಳ ಪಟ್ಟಿಯಲ್ಲಿ ಮದ್ದು, ಮಾಟ ಮಂತ್ರಗಳ ಅಥರ್ವ ವೇದವನ್ನು ಸೇರಿಸಕೂಡದೆಂಬ ಕೂಗು ಆ ಕಾಲದಲ್ಲಿ ಬಲವಾಗಿದ್ದಿತು. ಈ ವಿಷಯದಿಂದ ಋಷಿಗಳ ನಡುವೆ ಸ್ಪಷ್ಟವಾದೊಂದು ಬಿರುಕೂ ಮೂಡಿತ್ತು. ವೇದವ್ಯಾಸರು ತಮ್ಮ ಚಾಣಾಕ್ಷತೆಯಿಂದ ಅದನ್ನು ಬಗೆಹರಿಸಿ, ಅಥರ್ವ ವೇದಕ್ಕೆ ಅಧಿಕೃತ ಸ್ಥಾನ ದೊರಕಿಸಿಕೊಟ್ಟರು. ತಮ್ಮ ಶಿಷ್ಯರಾದ ಪೈಲರನ್ನು ಋಗ್ವೇದದ ಅಧ್ಯಯನಕ್ಕೂ, ವೈಶಂಪಾಯನರನ್ನು ಯಜುರ್ವೇದಾಧ್ಯಯನಕ್ಕೂ, ಅಂಗೀರಸ (ಸುಮಂತು)ನನ್ನು ಅಥರ್ವ ವೇದಾಧ್ಯಯನಕ್ಕೂ ಅಧಿಕಾರಿಯನ್ನಾಗಿ ಮಾಡುತ್ತಾರೆ. ಮತ್ತು ಯಾಗ ಯಜ್ಞಗಳಿಗೆ ಎಲ್ಲ ವೇದಾಧಿಕಾರಿಗಳು ಅತ್ಯಗತ್ಯವೆಂದು ನಿಯಮ ಮಾಡುತ್ತಾರೆ. ಈ ಮೂಲಕ ವೇದದ ವಿಭಿನ್ನ ಶಾಖೆಗಳನ್ನು ಹಾಗೂ ಅವುಗಳ ಅನುಯಾಯಿಗಳನ್ನು ಬೆಸೆಯುವ, ಮತ್ತು ಪರಸ್ಪರ ಕೊಡುಕೊಳ್ಳುವಿಕೆ ಸಾಧ್ಯವಾಗಿಸುವ ಕೆಲಸವನ್ನು ವೇದವ್ಯಾಸರು ಮಾಡುತ್ತಾರೆ.

ಇಂದು `ಗುರು’ ಪದಕ್ಕೆ ಪರ್ಯಾಯವಾಗಿ ಗೌರವಿಸಲ್ಪಡುವ ವ್ಯಾಸರ ಕೃತಿಗಳಷ್ಟೇ ಸ್ವಯಂ ಅವರ ಬದುಕೂ ಬೋಧಪ್ರದವಾಗಿದೆ. ಗುರು ಪೂರ್ಣಿಮೆಯ ಸಂದರ್ಭದಲ್ಲಿ ಇದನ್ನು ಸ್ಮರಿಸಿ, ವ್ಯಾಸ ಜೀವನ ದೃಷ್ಟಿಯ ಪಥದಲ್ಲಿ ನಡೆಯುವ ಸಂಕಲ್ಪ ತೊಡುವುದು ಶ್ರೇಯಸ್ಕರವಾಗಿದೆ.

 

 

Leave a Reply