ದುರಿತ ಕಾಲವಿದು, ಉದಾರವಾಗಿ ದೇಣಿಗೆ ನೀಡಿ…

ಕರ್ನಾಟಕದ ಹಲವು ಭಾಗಗಳು ಅಕ್ಷರಶಃ ನೀರಿನಲ್ಲಿ ತೇಲುತ್ತಿವೆ. ಆ ಪ್ರಾಂತ್ಯಗಳ ಜನರ ಬದುಕು ಮುಳುಗಿಹೋಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಬಳಿ ಏನಿದೆಯೋ ಅದನ್ನು ಹಂಚಿಕೊಳ್ಳಬಹುದು. ಕಳೆದ ವರ್ಷ ಹೆಚ್ಚೂಕಡಿಮೆ ಇವೇ ದಿನಗಳಲ್ಲಿ, ಇಂಥದೇ ಸಂದರ್ಭದಲ್ಲಿ ಈ ಲೇಖನ ಪ್ರಕಟಿಸಲಾಗಿತ್ತು. ಈಗ ಸ್ಫೂರ್ತಿಗಾಗಿ ಮತ್ತೊಮ್ಮೆ…. ~ ಚೇತನಾ ತೀರ್ಥಹಳ್ಳಿ

ದೊಂದು ಆಸ್ಥಾನ ಕಾವ್ಯಗೋಷ್ಟಿ. ಸರದಿಯ ಕೊನೆಯಲ್ಲಿ ವೃದ್ಧ ಕವಿಯೊಬ್ಬಳು ಎದ್ದು ನಿಲ್ಲುತ್ತಾಳೆ. “ರಾಜಾ, ನಾನು ಹೇಳುವುದನ್ನು ಗಮನವಿಟ್ಟು ಕೇಳಿಸಿಕೋ… ಅರಗಿಳಿಗೆ ತಾನು ಕಲಿತ ಮಾತುಗಳ ಮೇಲೆ ವಿಪರೀತ ವ್ಯಾಮೋಹ. ಎಷ್ಟು ಬಾರಿಯಾದರೂ ಸರಿ, ದಣಿವಿಲ್ಲದಂತೆ ಅವನ್ನು ಹೇಳುತ್ತಲೇ ಇರುತ್ತದೆ. ಆದರೆ ದೊಡ್ಡದೊಂದು ಬೆಕ್ಕು ಎದುರಾದೊಡನೆ ಅದು ಎಲ್ಲವನ್ನೂ ಮರೆತಂತಾಗಿ ಬರಿಯ ಚೀತ್ಕಾರವನ್ನಷ್ಟೆ ಹೊರಡಿಸುತ್ತದೆ. ನನ್ನ ಸ್ಥಿತಿಯೂ ಹೀಗೇ ಆಗಿದೆ. ನಾನು ವಾಚಿಸುವ ಕವಿತೆ ಒಂದೇ ಪದದ್ದು. ವಾಚಿಸಲೇ?” ಎಂದು ಕೇಳುತ್ತಾಳೆ. 

ರಾಜ ಆಗಲೆಂದು ಸನ್ನೆ ಮಾಡುತ್ತಾನೆ. 

ವೃದ್ಧೆ ಕಣ್ಣುಗಳನ್ನು ಅರೆಮುಚ್ಚಿ, “ವರಪ್ಪೂಯರ….” ಎಂದು ಹೇಳಿ ಕುಳಿತುಬಿಡುತ್ತಾಳೆ.

ಆ ವೃದ್ಧೆಯೇ ತಮಿಳುನಾಡಿನಲ್ಲಿ ಆಗಿ ಹೋದ ಶ್ರೇಷ್ಠ ಸಾಧಕಿ ಅವೈಯಾರ್. ಭಕ್ತಿ ಚಳವಳಿಯ ಪ್ರಮುಖ ಸಂತರ ಸಾಲಿನಲ್ಲಿ ನಿಲ್ಲುವಂಥವಳು. ಜೊತೆಗೆ ಅತ್ಯುತ್ತಮ ಕವಯತ್ರಿ ಕೂಡಾ.

ಕಾವ್ಯಗೋಷ್ಠಿಗೆಂದು ರಾಜನಿಂದ ಆಹ್ವಾನ ಬಂದಾಗ ಅವೈಯಾರ್ ಸಂತೋಷದಿಂದ ಹೊರಟಿರುತ್ತಾಳೆ. ಈ ಸಾಧಕಿ ಸಂಚಾರಕ್ಕೆ ನಡಿಗೆಯನ್ನೆ ನೆಚ್ಚಿಕೊಂಡಿದ್ದಂಥವಳು. ಪ್ರಯಾಣದ ದಾರಿಯಲ್ಲಿ ಆಕೆಗೆ ಹಲವು ದುಃಖಿತ ಜನರು ಎದುರಾಗುತ್ತಾರೆ. ಕೃಷಿಗೆ ನೀರಿಲ್ಲದೆ ಬೆಳೆಯೊಣಗಿ ಹಳ್ಳಿಗರು ಸಂಕಟಪಡುತ್ತಿರುತ್ತಾರೆ. ದಾರಿಯುದ್ದಕ್ಕೂ ಈ ದೃಶ್ಯವನ್ನು ನೋಡಿಕೊಂಡೇ ಬರುತ್ತಾಳೆ ಅವೈಯಾರ್. ಈ ಸ್ಥಿತಿಯನ್ನೇ ಆಕೆ ಬೆಕ್ಕಿಗೆ ಹೋಲಿಸುವುದು. ತನ್ನನ್ನು ತಾನು ಗಿಳಿಗೆ ಹೋಲಿಸಿಕೊಂಡು, ವಿಷಮ ಘಳಿಗೆಯಲ್ಲಿ ನನ್ನಿಂದ ಹೊರಡುವ ಚೀತ್ಕಾರವಿದು ಎಂದು ಸೂಚಿಸುತ್ತಾ `ವರಪ್ಪೂಯರ’ ಎಂದು ಹೇಳುವುದು.
ವರಪ್ಪು ಊಯರ ಎಂದರೆ ತಮಿಳಿನಲ್ಲಿ ಬಾಂದುಗಲ್ಲುಗಳನ್ನು ನಿರ್ಮಿಸು ಎಂಬರ್ಥ ಬರುತ್ತದೆ.

ರಾಜ ಈ ಮಾತಿನ ಔಚಿತ್ಯ ಕೇಳಿದಾಗ ಅವೈಯಾರ್ ತಾನು ದಾರಿಯಲ್ಲಿ ಕಂಡ ಕಾರ್ಪಣ್ಯಗಳನ್ನು ವಿವರಿಸುತ್ತಾಳೆ. ರಾಜನ ಮನ ಕಲಕುತ್ತದೆ. `ನೀನೀಗ ನಿಜವಾದ ಕವಯತ್ರಿ. ನಿನ್ನ ಮಾನವೀಯ ಹೃದಯದಲ್ಲಿ ಮೂಡುವ ಕವಿತೆಗೆ ಭೂಮಂಡಲದ ಯಾವುದೂ ಸಾಟಿಯಲ್ಲ’ ಎಂದು ಹೇಳಿ ಗೌರವಿಸುತ್ತಾನೆ. ವೃದ್ಧ ಸಂತಳ ಮಾತಿಗೆ ಮನ್ನಣೆ ಇತ್ತು ಕೆರೆ, ನದಿಗಳಿಗೆ ಬಾಂದುಗಲ್ಲುಗಳನ್ನು ನಿರ್ಮಿಸುವೆ ಎನ್ನುತ್ತಾನೆ.
ಆದರೆ ಅಲ್ಲೊಂದು ಸಮಸ್ಯೆ. “ಹೀಗೆ ಕಟ್ಟಿಸುತ್ತ ಹೋದರೆ ರಾಜ್ಯದ ಬೊಕ್ಕಸ ಬರಿದಾಗುವುದಿಲ್ಲವೆ?” ರಾಜ ಕೇಳಿದಾಗ ಅವ್ವೈಯಾರ್, “ಕೊಡುವುದರಿಂದ ನಿನ್ನ ಖಜಾನೆ ಖಾಲಿಯಾಗಬಹುದು, ನಿನ್ನ ಪುಣ್ಯದ ಕೊಡ ತುಂಬುತ್ತ ಸಾಗುವುದು. ಶಿಲ್ಪಿಯೊಬ್ಬ ಉಳಿಯಿಂದ ಕಲ್ಲನ್ನು ಕೆತ್ತುವುದು ಅದನ್ನು ಹಿಂಸಿಸಲು ಎಂದಲ್ಲ, ಸುಂದರ ಶಿಲೆಯಾಗಿಸಲು ತಾನೆ? ಹಾಗೇ ಕೊಡುವುದರಿಂದ ನಾವು ಕಳಕೊಂಡಂತೆ ತೋರಿದರೂ ಅಂತಿಮವಾಗಿ ಎಂದೆಂದೂ ಖಾಲಿಯಾಗದ, ಕಳೆದುಹೋಗದ ದಿವ್ಯ ಸಂಪತ್ತು ನಮ್ಮದಾಗುವುದು” ಎಂದು ತಿಳಿ ಹೇಳುತ್ತಾಳೆ.
ಪರಿಣಾಮವಾಗಿ ಆ ರಾಜನ ವ್ಯಾಪ್ತಿಯ ಕೆರೆಕೊಳಗಳು ಬಾಂದುಗಲ್ಲುಗಳನ್ನು ಕಟ್ಟಿಸಿಕೊಂಡು, ರೈತರಿಗೆ ನೀರುಣಿಸಿ ಹಸನು ಮಾಡುತ್ತವೆ.

ಕೊಡುವುದನ್ನು ಕಲಿಸಿದ ಮಹಾತ್ಮರು
ಈ ಮೇಲಿನ ಕಥೆ ಒಂದು ನಿದರ್ಶನವಷ್ಟೆ. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಇಂತಹ `ಕೊಡುವ ಕಾಯಕ’ದ ಮಹಾತ್ಮರು ದಾರಿಗೊಬ್ಬರು ಇರುತ್ತಿದ್ದರು. ಅವರಿಗೆ ಪ್ರೇರೇಪಣೆ ಕೊಡುವಂತೆ ಊರಿಗೊಬ್ಬರು ಕೂಡಾ.
ನಮ್ಮ ದೇಶದ ಪ್ರಾಚೀನ ಪರಂಪರೆಯ ರಾಜರಲ್ಲಿ ವರ್ಷಕ್ಕೊಂದು ಬಾರಿ ದಾನಧರ್ಮಗಳಿಂದ ಬೊಕ್ಕಸ ಬರಿದು ಮಾಡಿ ಮತ್ತೆ ಸಂಪತ್ತು ಕೂಡಿಸುವ ಪರಿಪಾಠವಿತ್ತೆಂದು ಇತಿಹಾಸ ಸಾರುತ್ತದೆ.
ಹೀಗೆ ಉಳ್ಳವರು ಕೊಡುವ ಬಗೆಯೊಂದಾದರೆ, ತತ್ವಾರದವರು ಕೊಡುವ ಬಗೆಯೇ ಮತ್ತೊಂದು!

ಉದಾಹರಣೆಗೆ ಭಕ್ತ ಕುಂಬಾರ. ಒಮ್ಮೆ ಮಡಿಕೆಗಳನ್ನು ಹೊತ್ತುಕೊಂಡು ಸಂತೆಗೆ ಹೋಗುವ ಭಕ್ತ ಕುಂಬಾರ, ರೊಟ್ಟಿ ತಿನ್ನಲು ಬುತ್ತಿಯನ್ನು ಬಿಚ್ಚುತ್ತಾನೆ. ಮೊದಲೇ ಬಡತನ. ಹೆಂಡತಿ ತನ್ನ ಪಾಲಿನದನ್ನು ಉಳಿಸಿ ಆತನಿಗೆ ಕಟ್ಟಿ ಕಳುಹಿಸಿರುತ್ತಾಳೆ. ರೊಟ್ಟಿ ತೆಗೆದಿಟ್ಟು ಕೈತೊಳೆಯಲು ಎದ್ದಾಗ ನಾಯಿಯೊಂದು ಅದನ್ನು ಕಚ್ಚಿಕೊಂಡು ಓಡುತ್ತದೆ. ಕುಂಬಾರ ಗಾಬರಿಪಡುತ್ತಾನೆ. ಕೈಲಿದ್ದ ಚೊಂಬನ್ನು ಹಿಡಿದು ಅದರ ಹಿಂದೆಯೇ ಓಡುತ್ತಾನೆ. ಅವನು ಅಟ್ಟಾಡುತ್ತಾನೆ ಎಂಬ ಭಯಕ್ಕೆ ನಾಯಿಯ ವೇಗ ಮತ್ತೂ ಹೆಚ್ಚುತ್ತದೆ. ಕೊನೆಗೂ ಅದು ಬಯಲಲ್ಲಿ ಏದುಸಿರು ಬಿಡುತ್ತಾ ರೊಟ್ಟಿಯನ್ನು ತಿನ್ನಲು ಹೊರಟಾಗ ಕುಂಬಾರ ಅಲ್ಲಿ ತಲಪುತ್ತಾನೆ. ಅದರ ಬೆನ್ನು ಸವರುತ್ತಾ, `ಮೊದಲೇ ಇದು ಒಣ ರೊಟ್ಟಿ. ನಿನ್ನ ಗಂಟಲು ಹಿಡಿದೀತು. ಈ ನೀರನ್ನೂ ಕುಡಿ’ ಎಂದು ಒಂದು ದೊನ್ನೆಯಲ್ಲಿ ನೀರಿಡುತ್ತಾನೆ. ಭಕ್ತ ಕುಂಬಾರ ನಾಯಿಯ ಹಿಂದೆ ಓಡಿ ಬಂದಿದ್ದು ಅದನ್ನು ಹಿಡಿದು ರೊಟ್ಟಿ ಕಸಿದುಕೊಳ್ಳಲಿಕ್ಕಲ್ಲ, ಅದಕ್ಕೆ ಅನುಕೂಲವಾಗಲಿ ಎಂದು ನೀರು ಕುಡಿಸೋದಕ್ಕೆ!

ಇಂಥದ್ದೇ ಇನ್ನೊಂದು ಕತೆಯನ್ನು ಝೆನ್ ಸಂಪ್ರದಾಯ ಹೇಳುತ್ತದೆ. ಒಮ್ಮೆ ಕಳ್ಳನೊಬ್ಬ ಝೆನ್ ಸನ್ಯಾಸಿಯ ಗುಡಿಸಲಿಗೆ ಬರುತ್ತಾನೆ. ನಿದ್ದೆ ಬಂದಂತೆ ಮಲಗಿದ್ದ ಸನ್ಯಾಸಿ ಅದನ್ನು ಗಮನಿಸಿ ಕದಿಯಲು ಅವನಿಗೆ ಏನೂ ಇಲ್ಲವಲ್ಲ ಎಂದು ಪರಿತಪಿಸುತ್ತಾನೆ. ಹತಾಶನಾಗಿ ಹೊರಟ ಕಳ್ಳನನ್ನು ಕೂಗಿ ಕರೆದು, `ತಮ್ಮಾ, ಈ ಬಡವನ ಮನೆಗೆ ಬಂದು ನಿನ್ನ ಶಕ್ತಿ ವ್ಯವಾಯಿತಷ್ಟೆ. ಬೇಜಾರು ಮಾಡಿಕೊಳ್ಬೇಡ. ಈ ಕಂಬಳಿಯೊಂದು ನನ್ನ ಹತ್ತಿರ ಇದೆ. ಇದನ್ನೇ ತೆಗೆದುಕೊಂಡು ಹೋಗು’ ಎಂದು ಭಿಕ್ಷೆಯಲ್ಲಿ ದೊರೆತಿದ್ದ ಕಂಬಳಿಯನ್ನು ಹೊದಿಸಿ ಕಳಿಸುತ್ತಾನೆ!

ಇದಮ್ ನ ಮಮ….
ಜನಸಾಮಾನ್ಯರ ಧಾರ್ಮಿಕ, ಆಧ್ಯಾತ್ಮಿಕ ಜೀವನಕ್ಕೆ ಶ್ರದ್ಧಾ ಕೇಂದ್ರಗಳು ಅಗತ್ಯ. ಆದ್ದರಿಂದಲೇ ಅವುಗಳ ನಿರ್ಮಾಣ ಸಾವಿರಾರು ವರ್ಷಗಳಿಂದಲೂ ನಿರಂತರತೆ ಕಾಯ್ದುಕೊಂಡಿರುವುದು. ಇಂತಹ ಧಾರ್ಮಿಕ ಕಾರ್ಯಕ್ಕೆ ಹಣ ಕಲೆ ಹಾಕುವ ಸಂತರು ಕೆಲವರು ಸಾಮಾಜಿಕ ಅಗತ್ಯಗಳಿಗೂ ಸ್ಪಂದಿಸಿದ್ದಿದೆ. ಅಷ್ಟೇ ಏಕೆ, ಸಮಾಜವೇ ಮೊದಲೆಂದು, ಆ ನಿಟ್ಟಿನಲ್ಲಿ ಕಾರ್ಯ ಸಾಧಿಸಿ, ಆನಂತರವಷ್ಟೆ ತಮ್ಮ ಉದ್ದೇಶದತ್ತ ನಡೆದಿದ್ದೂ ಇದೆ. ಝೆನ್ ಪರಂಪರೆಯ ತೆತ್ಸುಜೆನ್ ಅಂಥವರಲ್ಲೊಬ್ಬ.

ಶತಮಾನಗಳ ಹಿಂದೆ ಬುದ್ಧನ ಪದ್ಮ ಸೂತ್ರ ಚೀನಾ ಲಿಪಿಯಲ್ಲಿ ಮಾತ್ರ (ಭಾರತದ ಹೊರತಾಗಿ) ಲಭ್ಯವಿತ್ತು. ಅದನ್ನು ಜಪಾನಿ ಲಿಪಿಯಲ್ಲೂ ಮುದ್ರಿಸಬೇಕೆಂದು ಝೆನ್ ಸನ್ಯಾಸಿ ತೆತ್ಸುಜೆನ್‍ಗೆ ಬಯಕೆಯಾಯಿತು. ಇದರಿಂದ ತನ್ನ ಜನರು ತಮ್ಮ ಲಿಪಿಯಲ್ಲೇ ಅದನ್ನು ಸುಲಭವಾಗಿ ಓದಬಹುದಲ್ಲ!
ದೇಶದುದ್ದಗಲ ಸಂಚರಿಸಿದ ತೆತ್ಸುಜೆನ್ ಹತ್ತು ವರ್ಷಗಳ ಕಾಲ ಸತತವಾಗಿ ವಂತಿಗೆ ಸಂಗ್ರಹಿಸಿದ. ಕೊನೆಗೂ ಮರದ ಅಚ್ಚುಮೊಳೆಗಳನ್ನು ತಯಾರಿಸಲು ಅಗತ್ಯವಿದ್ದಷ್ಟು ಹಣ ಸಂಗ್ರಹವಾಯ್ತು. ಅದನ್ನು ಹಿಡಿದು ಮರಳುತ್ತಿರುವ ಸಮಯದಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ. ಹೊಟ್ಟೆಗಿಲ್ಲದ ಜನ ಹೆಣಗಳಾಗಿ ಬೀಳುತ್ತಿದ್ದರು. ಸನ್ಯಾಸಿಯ ಮನಕರಗಿತು. ತನ್ನ ಬಳಿ ಇದ್ದ ಹಣದಲ್ಲಿ ಸ್ವಲ್ಪ ಸ್ವಲ್ಪವನ್ನೆ ಎದುರಾದ ಜನರಿಗೆಲ್ಲ ಹಂಚುತ್ತ ಹಂಚುತ್ತ ಬರಿಗೈಯಾದ. ಹತ್ತು ವರ್ಷಗಳ ಶ್ರಮ ಒಂದೇ ದಿನದಲ್ಲಿ ಕರಗಿದರೂ ಬೇಸರವಾಗಲೀ ತಾನು ಕೊಟ್ಟೆ ಎನ್ನುವ ಅಹಂಕಾರವಾಗಲೀ ಅವನಲ್ಲಿ ಮೂಡಲಿಲ್ಲ.

ಮತ್ತೆ ಹತ್ತು ವರ್ಷಗಳ ಕಾಲ ಹೀಗೇ ಧನ ಸಂಗ್ರಹಕ್ಕೆ ತೊಡಗಿದ. ಮೊದಲಿನಂತೆ ಸಾಕಷ್ಟು ಮೊತ್ತ ಕೈಗೂಡಿತು. ಈ ಬಾರಿ ಊರಿ ನದಿಯ ನೆರೆ ಹಾವಳಿ ಆತನ ಸತ್ವ ಪರೀಕ್ಷಿಸಿತು. ಜನರ ಸಂಕಷ್ಟ ಕಂಡು ತೆತ್ಸುಜೆನ್ ಪುನಃ ತನ್ನಲ್ಲಿದ್ದುದೆಲ್ಲ ಹಂಚಿಬಿಟ್ಟ.

ಮತ್ತೆ ಓಡಾಟ, ಹಣ ಸಂಗ್ರಹ. ಈ ಬಾರಿ ಯಾವ ಸನ್ನಿವೇಶವೂ ಎದುರಾಗಲಿಲ್ಲ. ತೆತ್ಸುಜೆನ್ ತನ್ನ ಕಾರ್ಯದಲ್ಲಿ ತೊಡಗಿಕೊಂಡ. ಜಪಾನೀ ಲಿಪಿಯಲ್ಲಿ ಪದ್ಮಸೂತ್ರವನ್ನು ಅಚ್ಚು ಹಾಕುವ ವ್ಯವಸ್ಥೆ ರೂಪಿಸಿದ. ಆತ ತಯಾರಿಸಿದ ಅಚ್ಚು ಮೊಳೆಗಳು ಇಂದಿಗೂ ಜಪಾನಿನ ಜನರು ಕಾಪಾಡಿಕೊಂಡಿದ್ದಾರೆ. ಝೆನ್ ಸಂತನ ಕೊಡುಗೈ ಖ್ಯಾತಿಯನ್ನು ಆದರ್ಶವಾಗಿ ನೆನೆಯುತ್ತಾರೆ.

ಸ್ವಾಮಿ ವಿವೇಕಾನಂದರೂ ಕೋಲ್ಕೊತಾದ ಬೇಲೂರಿನಲ್ಲಿ ಶ್ರೀರಾಮಕೃಷ್ಣ ಮಠ ಕಟ್ಟಿಸುವ ಸಂದರ್ಭದಲ್ಲಿ ಇಂಥದೇ ಕೆಲಸ ಮಾಡಿದ್ದರು. ಮಠದ ಕಟ್ಟಡ ನಿರ್ಮಾಣಕ್ಕೆಂದು ಸಂಗ್ರಹಿಸಿದ್ದ ಹಣವನ್ನು ಭೀಕರ ಪ್ಲೇಗ್ ರೋಗದ ಪರಿಹಾರ ಕಾರ್ಯಗಳಿಗೆ ವಿನಿಯೋಗಿಸಿ, ಸ್ವತಃ ತಾವೂ ರೋಗಿಗಳ ಸೇವೆಗ ನಿಂತುಬಿಟ್ಟಿದ್ದರು. ಪರಿಸ್ಥಿತಿ ತಹಬಂದಿಗೆ ಬಂದಮೇಲೆ ಪುನಃ ಲೋಕಸಂಚಾರ ಮಾಡಿ, ಉಪನ್ಯಾಸಗಳನ್ನು ನೀಡಿ, ದೇಣಿಗೆ ಸಂಗ್ರಹಿಸಿ ಮಠದ ನಿರ್ಮಾಣ ಕಾರ್ಯಕ್ಕೆ ಮುಂದಾದರು. 

ಈ ಮಹಾಪುರುಷರ ಇಂತಹಾ ಉದಾರಹೃದಯ ನಮಗೆ ಮೇಲ್ಪಂಕ್ತಿಯಾಗಬೇಕಲ್ಲವೆ?

ಕೊಡಬೇಕಾದ್ದು ಮತ್ತು ಕೊಟ್ಟೆ ಎನ್ನದಿರುವುದು…
`ಒಬ್ಬನಿಗೆ ಒಂದು ಹೊತ್ತಿನ ಊಟ ನೀಡುವುದು ಸರಿಯಷ್ಟೆ, ಆದರೆ ಆತ ನಾಳೆಯೂ ಹಸಿದಿರುತ್ತಾನೆ. ಆದ್ದರಿಂದ ಅವರು ತಮ್ಮ ಆಹಾರ ಗಳಿಸಿಕೊಳ್ಳುವಷ್ಟು ಸಮರ್ಥರನ್ನಾಗಿ ಮಾಡಬೇಕು. ಆ ನಿಟ್ಟಿನಲ್ಲಿ ದೇಣಿಗೆ ನೀಡಬೇಕು’ ಇದು ಸ್ವಾಮಿ ರಾಮತೀರ್ಥರ ಅಮೃತ ವಾಣಿ. ಈ ಹೇಳಿಕೆಯ ಮೂಲಕ ಸ್ವಾಮಿ ರಾಮತೀರ್ಥರು ಅನುಕಂಪದ ಭಿಕ್ಷೆಗಿಂತ ಕಾಯಕ ಕಲಿಸುವಿಕೆಗೆ, ಪೂರಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ.

ಬಲಗೈಲಿ ಕೊಟ್ಟಿದ್ದ ಎಡಗೈಗೂ ತಿಳಿಯದಂತಿರಬೇಕು ಎನ್ನುತ್ತದೆ ಒಂದು ಒಂದು ನಾಣ್ಣುಡಿ. ರಾಮಕೃಷ್ಣ ಪರಮಹಂಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ. `ಯಾವ ಕಾರಣಕ್ಕೂ ನೀನು ಕೊಟ್ಟೆ ಎಂದುಕೊಳ್ಳಬೇಡ ಎನ್ನುತ್ತಾರೆ. ಇತರರಿಗೆ ನೀವು ಕೊಡುವುದರಿಂದ ಅವರಿಗೆ ಉಪಕಾರ ಮಾಡುತ್ತಿಲ್ಲ, ಬದಲಿಗೆ ನಿಮಗೆ ನೀವೆ ಉಪಕಾರ ಮಾಡಿಕೊಳ್ಳುತ್ತಿದ್ದೀರಿ. ಕೊಡುವ ಮೂಲಕ ನಿಮ್ಮ ಆಧ್ಯಾತ್ಮಿಕ ಸಂಪತ್ತು ಹೆಚ್ಚುತ್ತದೆ. ಪಡೆಯುವವರೇ ಇಲ್ಲದೆ ಹೋದರೆ ನೀವು ಯಾರಿಗೆ ಕೊಡುತ್ತೀರಿ? ಆದ್ದರಿಂದ ಕೊಡುವಾಗ ಸ್ವತಃ ನೀವೇ ಉಪಕೃತರು ಎಂದು ಭಾವಿಸಿ’ ಎನ್ನುತ್ತಾರೆ ರಾಮಕೃಷ್ಣ ಪರಮಹಂಸರು.

ಹಾಗೆಯೇ ಓಶೋ, ಕೊಡುವುದು ಅನ್ನುವುದಕ್ಕಿಂತ `ಹಂಚಿಕೊಳ್ಳುವುದು’ ಎಂಬ ಪದಬಳಕೆಯೇ ಸೂಕ್ತ ಎನ್ನುತ್ತಾರೆ. ಕೊಡುವುದು ಎಂಬ ಪದ ನಮ್ಮಲ್ಲಿ ಅಹಂಕಾರ ಹುಟ್ಟಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಪ್ರೀತಿ, ಸಂಪತ್ತು ಆದಿಯಾಗಿ ಅಸ್ತಿತ್ವದಲ್ಲಿರುವ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತೇವೆ ಎಂದು ತಿಳಿಯುವುದೇ ಸೂಕ್ತ ಅನ್ನೋದು ಓಶೋ ವಿವರಣೆ.

ಆದ್ದರಿಂದ, ನಮ್ಮ ಬಳಿ ಏನಿದೆಯೋ, ಅದೇನೇ ಇದ್ದರೂ ಎಷ್ಟೇ ಇದ್ದರೂ ಅದರಲ್ಲೇ ಒಂದು ಚಿಕ್ಕ ಪಾಲನ್ನು ಹಂಚಿಕೊಳ್ಳೋಣ, ನಮ್ಮದೇ ಒಳಿತಿಗಾಗಿ….

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.