ಋಷಿ ಪರಂಪರೆ: ಸತ್ಯದ ಬೆಳಕುಂಡು ಬೆಳಗಿದ ಸಾಧಕರು

ವೇದಮಂತ್ರಗಳಲ್ಲಿ ಮಂತ್ರ ರಚಯಿತರಾಗಿ ಉಲ್ಲೇಖಗೊಂಡಿರುವ ಈ ಋಷಿಗಳೆಂದರೆ ಯಾರು? ಋಷಿ ಶಬ್ದದ ಅರ್ಥವೇನು? ಅರಿಯುವ ಕಿರು ಪ್ರಯತ್ನ ಇಲ್ಲಿದೆ… ಗಾಯತ್ರಿ 

ಋಗ್ವೇದದಲ್ಲಿ  ಋಷಿಗಳನ್ನು ಕುರಿತು ವ್ಯಾಖ್ಯಾನಿಸುತ್ತಾ, ‘ಜಗದ ಪರಿವೆಯೇ ಇಲ್ಲದೇ, ಜಗದೀಶನನ್ನು ಧ್ಯಾನಿಸಿ ಅಂತಃ ಪ್ರಕಾಶವನ್ನು ಬೆಳಗಿಸಿದವನು, ಸಾಮಾನ್ಯವಾಗಿ ಮನುಷ್ಯನಿಗೆ ನಿಲುಕದ ಅದಮ್ಯವಾದ ದಿವ್ಯಾನುಭೂತಿಯನ್ನು ಸಾಕ್ಷಾತ್ಕರಿಸಿಕೊಂಡವನು, ಜಗತ್ತಿನ ಸತ್ಯ ವಸ್ತುವನ್ನು ತನ್ನ ಸ್ವಂತ ಅರಿವಿಗೆ ತರಿಸಿಕೊಂಡವನು (ಸ್ವತಃ ಪ್ರಮಾಣ), ಅಂತಹ ಸತ್ಯದ ಸಾಕ್ಷಾತ್ಕಾರವನ್ನು ಭಗವಂತನಿಂದ ನೇರವಾಗಿ ಪಡೆದುಕೊಂಡವನು ಋಷಿ ಎನ್ನಿಸಿಕೊಳ್ಳುತ್ತಾನೆ’ ಎಂದು ವಿವರಿಸಲಾಗಿದೆ.

ಯಜುರ್ವೇದದಲ್ಲಿ ‘ಹಿಂದಿನ ಕಾಲದಲ್ಲಿ ಯಾರು ಗುರುಕುಲದಲ್ಲಿ ಬ್ರಹ್ಮಚರ್ಯ ವ್ರತವನ್ನು ಪಾಲಿಸಿ, ಸ್ತೋಮದಲ್ಲಿ (ಗುಂಪಿನಲ್ಲಿ ಒಟ್ಟಾಗಿ) ಒಬ್ಬರೊಬ್ಬರು ಕೂಡಿಕೊಂಡು ಧರ್ಮದ ಮರ್ಮವನ್ನರಿಯಲು ಯತ್ನಿಸಿದ್ದರೋ, ಆ ಪ್ರಯತ್ನದ ಸಾಫಲ್ಯದಿಂದ ಮಹದಾನಂದ ಪಡೆದಿದ್ದರೋ, ಯಾರು ಅಮಿತವಾದ ಜ್ಞಾನವನ್ನು ಸಂಪಾದಿಸಿದ್ದರೋ, ಯಾರಿಗೆ ಏಳು ತೆರನಾದ ಶಕ್ತಿಗಳು ಒಲಿದಿವೆಯೋ ಅವರೇ ನಿಜವಾದ ಋಷಿಗಳು ಎಂದು ಹೇಳಲಾಗಿದೆ.

‘ಋಷತಿ ಜ್ಞಾನೇನ ಸಂಸಾರ ಪಾರಂ’ ಎಂಬುದು ಒಂದು ಉಕ್ತಿ. ಜ್ಞಾನದಿಂದ ಸಂಸಾರ ಬಂಧನವನ್ನು ದಾಟಿದವರು ಋಷಿಗಳು ಎಂದರ್ಥ. ಇಲ್ಲಿ ಸಂಸಾರ ಎಂದರೆ ಕೇವಲ ಮನೆ ಮಡದಿ ಮಕ್ಕಳು ಅಷ್ಟೇ ಅಲ್ಲ, ಲಾಲಸೆ, ಆಮಿಷ, ಅಭಿಲಾಷೆ, ಆಕಾಂಕ್ಷೆ ಮತ್ತು ಸಮಸ್ತ ತೃಷೆಗಳು ಎಂದಾಗುತ್ತವೆ.

ಉಪನಿಷತ್ತುಗಳ ಅಭಿಪ್ರಾಯದಲ್ಲಿ `ಋಷಯಃ ಅಂತಃ ಪ್ರಕಾಶಕಾ’ – ಅಂದರೆ, ಋಷಿಗಳು ಅಂತರಂಗದಲ್ಲಿ ಸತ್ಯದ ಬೆಳಕು ಕಂಡವರು ಎಂದು ವಿಷದಪಡಿಸಲಾಗಿದೆ. ಮುಂಡಕ ಉಪನಿಷತ್ತಿನಲ್ಲಿ ಸರ್ವಸಮರ್ಥ ಸರ್ವಂತರ್ಯಾಮಿಯಾದ ಭಗವಂತನ ಇರುವಿಕೆಯನ್ನು ಸಾಕ್ಷಾತ್ಕರಿಸಿಕೊಂಡು, ಜ್ಞಾನದಿಂದ ತುಂಬಿದ ತಲೆಯುಳ್ಳವರಾಗಿ ಅಂದರೆ ಜ್ಞಾನಸಂಪನ್ನರಾಗಿ, ಆನಂದಮಯ, ಶಾಂತಿಪೂರ್ಣ ಸಂತೃಪ್ತ ಜೀವನವನ್ನು ನಡೆಸುವವರು ಋಷಿಗಳು ಎಂದು ಹೇಳಲಾಗಿದೆ.

ಅತೀಂದ್ರಿಯಸ್ಯ ವೇದಸ್ಯ ಪರಮೇಶ್ವರಾನುಗ್ರಹೇಣ ಪ್ರಥಮತೋ ದರ್ಶನಾತ್ ಋಷಿತ್ವಂ’ – ಎಲ್ಲಕ್ಕಿಂತ ಮೊದಲು ಭಗವಂತನ ಅನುಗ್ರಹದಿಂದ, ಅವಿರತ ತಪಸ್ಸಿನಿಂದ ಅತೀಂದ್ರಿಯವಾದ ವೇದಗಳನ್ನು ಕಂಡುಕೊಳ್ಳುವುದು ಋಷಿತನ ಎಂದು ವೇದ ಭಾಷ್ಯಕಾರ ಸಾಯಣರು ಸಾರಿದ್ದಾರೆ.

ಅಪೌರುಷೇಯವಾದ ವೇದಗಳನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಋಷಿಗಳುನೇರವಾಗಿ ಭಗವಂತನಿಂದ ಸಾಕ್ಷಾತ್ಕರಿಸಿಕೊಂಡರು. ಅವೇ ವೇದಮಂತ್ರಗಳು. ‘ಋಷಯೋ ಮಂತ್ರ ದೃಷ್ಟಾರಃ’ ಎನ್ನುವ ಮಾತಿದೆ. ಇದು, ಋಷಿಗಳು ಮಂತ್ರ ಕರ್ತಾರರಲ್ಲ ದೃಷ್ಟಾರರು ಎಂಬುದನ್ನು ಸ್ಪಷ್ಟವಾಗಿ ಸಾರುತ್ತದೆ. ಋಷಿಗಳು ಅವುಗಳನ್ನು ಕಂಡುಕೊಂಡ ಅನ್ವೇಷಕರು ಹೊರತು ಸೃಷ್ಟಿಕರ್ತರಲ್ಲ. ಅವರು ಬೆಳಕಿನ ಹಾದಿಯ ಪಥಿಕರು. ಇಡಿಯ ಜಗತ್ತೇ ಬಾಹ್ಯವಾಗಿ ಕತ್ತಲಾದರೂ ಅವರು ತಮ್ಮ ಅಂತರ್‍ ದೃಷ್ಟಿಯಿಂದ ಬೆಳಕು ಕಂಡುಕೊಳ್ಳುತ್ತ ಇತರರಿಗೂ ಅದನ್ನು ಹಂಚುವವರು.

ಮಧ್ವಾಚಾರ್ಯರು ವೇದ ಭಾಷ್ಯದಲ್ಲಿ , ‘ಯಾರು ಸ್ವಯಂ ಅನುಭವದಲ್ಲಿ ಸತ್ಯವನ್ನು ಅರಿತುಕೊಳ್ಳುಕೊಳ್ಳುವರೋ, ಅವರನ್ನು ಋಷಿಗಳೆಂದು ಕರೆಯುತ್ತಾರೆ’ ಎಂದು ಹೇಳಿದ್ದಾರೆ. ಟೀಕಾಚಾರ್ಯರು ಈ ವಾಕ್ಯದ ಅರ್ಥವನ್ನು ‘ಅಧ್ಯಯನ ಮಾಡದೆ, ಯಾರು ಕೇವಲ ನಿರಂತರ ತಪಸ್ಸಿನಿಂದ ನೇರವಾಗಿ ಭಗವಂತನನ್ನು ಒಲಿಸಿಕೊಂಡು ಮಂತ್ರಗಳನ್ನು ಪಡೆದುಕೊಳ್ಳುತಾರೋ ಅವರು ಋಷಿಗಳು’ ಎಂದು ಆಚಾರ್ಯರ ವಾಕ್ಯವನ್ನು ಇನ್ನೂ ಸರಳೀಕರಿಸುತ್ತಾರೆ.  ಅರವಿಂದರು, `ಅಂತರಿಕ್ಷದ ದೈವವಾಣಿಯನ್ನು ಅಂತರಂಗದಲ್ಲಿ ಕೇಳಿಸಿಕೊಂಡವರು ಋಷಿಗಳು’ ಎಂದು ಹೇಳಿರುವುದು ಋಷಿಗಳ ವ್ಯಾಪ್ತಿ ಸಾಧ್ಯತೆಯನ್ನು ಸೂಚಿಸುತ್ತದೆ.

ಆದರೆ ಹೀಗೆ ಮಂತ್ರವನ್ನು ಕಂಡುಹಿಡಿದವರು ಮಾತ್ರವೇ ಋಷಿಗಳಾಗಿರಬೇಕು ಎಂದೇನಿಲ್ಲ.  ಮಂತ್ರ / ಜ್ಞಾನವನ್ನು ಗುರುಗಳಿಂದ ಮೊದಲು ಪಡೆದುಕೊಂಡವರು, ಅದರಿಂದ ಸಿದ್ಧಿ ಹೊಂದಿದವರು, ಮಂತ್ರದ ಪ್ರಸಿದ್ಧಿಗೆ ಕಾರಣರಾದವರೂ ಋಷಿಗಳೇ. ಉದಾಹರಣೆಗಾಗಿ ಗಾಯಂತ್ರಿ ಮಂತ್ರಕ್ಕೆ ವಿಶ್ವಾಮಿತ್ರನನ್ನು ಋಷಿಯಾಗಿ ಸ್ಮರಿಸುತ್ತೇವೆ, ಆದರೆ ಅದಕ್ಕಿಂತ ಮೊದಲಲ್ಲಿಯೂ ಗಾಯಂತ್ರಿ ಮಂತ್ರ ಇತ್ತು. ಅದರ ಜಪದಿಂದ ವಿಶ್ವಾಮಿತ್ರರು ಬ್ರಹ್ಮರ್ಷಿ ಪಟ್ಟಕ್ಕೇರಿದ್ದರಿಂದ ಅವರನ್ನು ಗಾಯತ್ರಿ ಮಂತ್ರಕ್ಕೆ ಋಷಿಯಾಗಿ ಪರಿಗಣಿಸಲಾಗುತ್ತದೆ ಎಂಬುದು ಆಚಾರ್ಯ ಮಧ್ವರ ನಿರ್ಣಯ.

ಸಂಸ್ಕೃತ ಶಬ್ದಗಳ ಅರ್ಥ ಸಂಪತ್ತಿನ ಆಗರ ಅಮರಕೋಶದಲ್ಲಿ ಋಷಿ ಶಬ್ದಕ್ಕೆ ‘ಸತ್ಯ ವಚಃ’ ಎಂಬ ಪರ್ಯಾಯಪದವನ್ನು ಸೂಚಿಸಲಾಗಿದೆ. ಸತ್ಯವನ್ನು ಮಾತನಾಡುವವರು ಎಂತಲೂ, ಕಂಡುಕೊಂಡ ಸತ್ಯವನ್ನು ಸಾದರ ಪಡಿಸುವವರು ಎಂತಲೂ  ಇದನ್ನು ಅರ್ಥೈಸಿಕೊಳ್ಳಬಹುದು. 

ಋಷಿಗಳನ್ನು ಸಾಕ್ಷಾತ್ ಋಷಿ (ಭಗವಂತನಿಂದ ಕೇಳಿಸಿಕೊಂಡ ಋಷಿ) ಮತ್ತು ಶ್ರುತ ಋಷಿ (ಗುರುವಿನಿಂದ ಹೇಳಿಸಿಕೊಂಡ ಋಷಿ) ಎಂಬ ಎರಡು ವಿಧಗಳಾಗಿ ಪರಿಗಣಿಸಲಾಗುತ್ತದೆ. 
ಋಗ್ವೇದ ಕಾಲಕ್ಕೆ ಮಂತ್ರ ದೃಷ್ಟಾರತ್ವ ಮಿಗಿಲಾದರೆ, ಪುರಾಣಗಳಲ್ಲಿ ದೀರ್ಘಾಯುಷ್ಯ, ದಿವ್ಯಜ್ಞಾನ, ಶಾಪ – ಅನುಗ್ರಹ ಶಕ್ತಿಯನ್ನು ಋಷಿ ಲಕ್ಷಣಕ್ಕೆ ಪರಿಗಣಿಸಲಾಯಿತು. ಆಧುನಿಕ ಕಾಲದಲ್ಲಿ ಸಾತ್ವಿಕತೆ, ಅಪರೋಕ್ಷ ಜ್ಞಾನ, ಧರ್ಮ ತತ್ಪರತೆ, ಸತ್ಯ ನಿಷ್ಟೆ, ನಿರಪೇಕ್ಷತೆ, ಸಾಮಾಜಿಕ ಕಳಕಳಿ ಉಳ್ಳವರನ್ನು ಋಷಿ ಸದೃಶರು ಎಂದು ಹೇಳುವುದು ರೂಢಿಯಲ್ಲಿದೆ.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.