ನಸ್ರುದ್ದೀನ್ ಏಕೆ ಮದುವೆಯಾಗಲಿಲ್ಲ!? : Tea time story

Mulla

ಸ್ರುದ್ದೀನ್ ಪ್ರವಾಸದಲ್ಲಿದ್ದ. ಯಾರಾದರೂ ಏನಾದರೂ ಪ್ರಶ್ನೆ ಕೇಳಿದರೆ ಏನೋ ಒಂದು ಉತ್ತರ ಕೊಟ್ಟುಬಿಡುತ್ತಿದ್ದ. ಅಪರಿಚಿತ ಪ್ರದೇಶಗಳಲ್ಲಿ ತನ್ನ ಖಾಸಗಿ ವಿವರಗಳನ್ನು ಯಾಕೆ ಹೇಳಬೇಕು ಅನ್ನೋದು ಅವನ ತರ್ಕ.

ಹೀಗೇ ಒಂದೂರಿನಲ್ಲಿ ನಸ್ರುದ್ದೀನ್ ಅರಳಿಕಟ್ಟೆಯಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದ. ಆಗ ಅವನನ್ನು ಒಂದಷ್ಟು ಜನ ಬಂದು ಮುತ್ತಿಕೊಂಡರು. ಅವನ ಪರಿಚಯ ಮಾಡಿಕೊಂಡು, ಅದೂ ಇದೂ ಮಾತಾಡುತ್ತಾ “ನಸ್ರುದ್ದೀನ್, ನಿನಗೆ ಮದುವೆಯಾಗಿದೆಯಾ?” ಎಂದು ಕೇಳಿದರು.

ಸಂಭಾಷಣೆ ಬೇಗ ಮುಗಿದುಹೋಗಲಿ ಅಂದುಕೊಂಡು ನಸ್ರುದ್ದೀನ್, “ಇಲ್ಲ” ಅಂದುಬಿಟ್ಟ.
ಅವನ ಎಣಿಕೆಯಂತೆ ಆ ಜನರು ಅಷ್ಟಕ್ಕೆ ಸುಮ್ಮನಾಗಲಿಲ್ಲ. “ಯಾಕೆ?” ಎಂದು ಕೇಳಿದರು.
“ಇದೊಳ್ಳೆ ಫಜೀತಿ” ಅಂತ ಗೊಣಗಿಕೊಂಡ ನಸ್ರುದ್ದೀನ್, “ಪರಿಪೂರ್ಣ ಹೆಣ್ಣಿಗಾಗಿ ಹುಡುಕುತ್ತಾ ನಾನು ನನ್ನ ತಾರುಣ್ಯ ಕಳೆದೆ. ಮೊದಲು ಕೈರೋದಲ್ಲಿ ಚೆಂದದ, ಬುದ್ಧಿವಂತ ಹುಡುಗಿ ಸಿಕ್ಕಿದ್ದಳು. ಆದರೆ ಅವಳು ತುಂಬಾ ಬಜಾರಿ. ಬಗ್ದಾದಿನಲ್ಲಿ ಸಿಕ್ಕವಳು ಚೆಂದವೂ, ಬುದ್ಧಿವಂತಳೂ, ಸದ್ಗುಣಿಯೂ ಆಗಿದ್ದಳು. ಆದರೆ ನಮ್ಮಿಬ್ಬರ ತಾಳಮೇಳ ಹೊಂದಲಿಲ್ಲ. ಹೀಗೇ ಎಷ್ಟು ಹುಡುಕಿದರೂ ನನಗೆ ಪರಿಪೂರ್ಣ ಅನ್ನಿಸುವ ಹೆಣ್ಣೇ ಸಿಗಲಿಲ್ಲ” ಅಂದ ನಸ್ರುದ್ದೀನ್. ಇಷ್ಟಕ್ಕೆ ಸುಮ್ಮನಾಗುತ್ತಾರೆಂದುಕೊಂಡು ಅಲ್ಲೇ ಮಲಗಲು ಅಣಿಯಾದ.

ಜನ ಸುಮ್ಮನಾಗಲಿಲ್ಲ. “ಹಾಗಾದರೆ, ಪರಿಪೂರ್ಣ ಹೆಣ್ಣು ಎಲ್ಲೂ ಇಲ್ಲವೆ? ನಿನಗೆ ಯಾರೂ ಸಿಗಲೇ ಇಲ್ಲವೆ?” ಎಂದು ಕೇಳಿದರು.
ಕ್ಷಣ ಕಾಲ ಯೋಚಿಸಿದ ನಸ್ರುದ್ದೀನ್, “ಹಾಗೇನಿಲ್ಲ. ಸಿಕ್ಕಿದ್ದಳು, ಅವಳು ಯಾವ ಕೊರತೆಯೂ ಇಲ್ಲದ ಪರಿಪೂರ್ಣ ಹೆಣ್ಣಾಗಿದ್ದಳು” ಅಂದ.

“ಮತ್ತೇಕೆ ಮದುವೆಯಾಗಲಿಲ್ಲ?”
“ಅವಳು ಪರಿಪೂರ್ಣ ಗಂಡಸಿಗಾಗಿ ಹುಡುಕುತ್ತಿದ್ದಳು”
ಉತ್ತರಿಸಿದ ನಸ್ರುದ್ದೀನ್, ಮುಖದ ಮೇಲೆ ಟವೆಲ್ ಹಾಕಿಕೊಂಡು ಮಲಗಿ ನಿದ್ರೆಹೋದ.
(ಸಂಗ್ರಹ ಮತ್ತು ಅನುವಾದ: ಅಲಾವಿಕಾ)

Leave a Reply