ಜ್ಞಾನ, ವೈರಾಗ್ಯ ಮತ್ತು ಆಹಾರ ಸಮೃದ್ಧಿಗಾಗಿ ಅನ್ನಪೂರ್ಣಾ ಸ್ತೋತ್ರ

ಅನ್ನಪೂರ್ಣೇಶ್ವರಿಯನ್ನು ಕೊಂಡಾಡುವ ಎಂಟು ಶ್ಲೋಕಗಳ ಅನ್ನಪೂರ್ಣಾ ಸ್ತೋತ್ರ ಅಥವಾ ಅನ್ನಪೂರ್ಣಾಷ್ಟಕವನ್ನು ರಚಿಸಿದವರು ಶ್ರೀ ಶಂಕರಾಚಾರ್ಯರು.

ಪಂಚಮುಖಿ ಬ್ರಹ್ಮನ ಒಂದು ಶಿರವನ್ನು ಲಯಕರ್ತ ಶಿವನು ಕಿತ್ತುಹಾಕಿದಾಗ ಆ ಶಿರಸ್ಸು (ಕಪಾಲ) ಅವನ ಕೈಯನ್ನು ಕಚ್ಚಿಹಿಡಿಯುತ್ತದೆ. ಈ ಬ್ರಹ್ಮ ಕಪಾಲವನ್ನು ಹಿಡಿದು ಭಿಕ್ಷೆ ಬೇಡಬೇಕು, ಯಾವಾಗ ಅದು ತುಂಬುತ್ತದೆಯೋ ಆಗ ಅದರಿಂದ ಮುಕ್ತಿ ಸಿಗುವುದೆಂದು ನಾರಾಯಣ ತಿಳಿಸುತ್ತಾನೆ. ಅದರಂತೆ ಶಿವ ಮೂರು ಲೋಕವೆಲ್ಲ ತಿರುಗಿ ಭಿಕ್ಷೆ ಬೇಡಿದರೂ ಕಪಾಲ ತುಂಬುವುದಿಲ್ಲ. ಕೊನೆಗೆ ಪಾರ್ವತಿಯೇ ಅನ್ನಪೂರ್ಣೇಶ್ವರಿಯಾಗಿ ಭೂಮಿಯಲ್ಲಿ ಅವತರಿಸಿ, ಶಿವನಿಗೆ ಭಿಕ್ಷೆ ನೀಡುತ್ತಾಳೆ. ಜಗಜ್ಜನನಿ ನೀಡುವ ಭಿಕ್ಷೆಗೆ ಕಪಾಲ ತುಂಬಿ ಶಿವ ಮುಕ್ತನಾಗುತ್ತಾನೆ.

ಇಂಥಾ ಮಹಿಮಾನ್ವಿತಳಾದ ತಾಯಿ ಅನ್ನಪೂರ್ಣೇಶ್ವರಿಯನ್ನು ಸ್ತುತಿಸುವ 8 ಶ್ಲೋಕಗಳು, ಮತ್ತು ಕನ್ನಡ ಸರಳಾರ್ಥ ಇಲ್ಲಿದೆ :

a1

ನಿತ್ಯಾನಂದಕರೀ ವರಾಭಯಕರೀ ಸೌಂದರ್ಯರತ್ನಾಕರೀ
ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ |
ಪ್ರಾಲೇಯಾಚಲವಂಶಪಾವನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 1 ||

ಭಾವಾರ್ಥ : ತನ್ನ ಭಕ್ತರಿಗೆ ಸದಾ ಆನಂದವನ್ನು ಕರುಣಿಸುವಳೂ, ಅಭಯ ನೀಡುವವಳೂ, ಸೌಂದರ್ಯದ ಖನಿಯೂ ಆಗಿರುವ ತಾಯಿ ಅನ್ನಪೂರ್ಣೇಶ್ವರಿಗೆ ನಮಸ್ಕಾರಗಳು.
ದಯಾಕರುಣ ದೃಷ್ಟಿಯಿಂದ ಭಕ್ತರ ಮನಸ್ಸಿನ ಕಶ್ಮಲ ತೊಡೆದು, ಅವರ ಕಷ್ಟವನ್ನು ನಿವಾರಿಸುವ, ಕಾಶೀಪಟ್ಟಣದ ಅಧಿದೇವತೆಗೆ ನಮಸ್ಕಾರಗಳು.
ತಾಯಿ, ಅನ್ನಪೂರ್ಣೇಶ್ವರೀ! ನಿನ್ನ ಕೃಪಾಭಿಕ್ಷೆ ನೀಡಿ ನನ್ನನ್ನು ಕಾಪಾಡು.

a6

ನಾನಾರತ್ನವಿಚಿತ್ರಭೂಷಣಕರೀ ಹೇಮಾಂಬರಾಡಂಬರೀ
ಮುಕ್ತಾಹಾರವಿಡಂಬಮಾನವಿಲಸದ್ವಕ್ಷೋಜಕುಂಭಾಂತರೀ
ಕಾಶ್ಮೀರಾಗರುವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 2 ||

ಭಾವಾರ್ಥ : ಹಲವು ಬಗೆಯ ಅಪರೂಪದ ಆಭರಣಗಳಿಂದ ಶೋಭಿಸುತ್ತಿರುವ, ಚಿನ್ನದ ಕಾಂತಿಯಿಂದ ಹೊಳೆಯುತ್ತಿರುವ, ಎದೆಯ ಮೇಲೆ ಥಳಥಳಿಸುತ್ತಿರುವ ಮುತ್ತಿನ ಹಾರ ಧರಿಸಿರುವ; ಚಂದನ – ಕೇಸರಿ ಪರಿಮಳ ಲೇಪಿತಳಾಗಿರುವ, ಸುಂದರ ಶರೀರದಿಂದ ಕಂಗೊಳಿಸುತ್ತಿರುವ ಕಾಶಿ ನಗರದ ಒಡತಿಯೇ ನಿನಗೆ ನಮಸ್ಕಾರಗಳು.
ತಾಯಿ, ಅನ್ನಪೂರ್ಣೇಶ್ವರೀ! ನಿನ್ನ ಕೃಪಾಭಿಕ್ಷೆ ನೀಡಿ ನನ್ನನ್ನು ಕಾಪಾಡು.

a7

ಯೋಗಾನಂದಕರೀ ರಿಪುಕ್ಷಯಕರೀ ಧರ್ಮಾರ್ಥನಿಷ್ಠಾ ಕರೀ
ಚಂದ್ರಾರ್ಕಾನಲಭಾಸಮಾನಲಹರೀ ತ್ರೈಲೋಕ್ಯರಕ್ಷಾಕರೀ |
ಸರ್ವೈಶ್ವರ್ಯಸಮಸ್ತವಾಂಛಿತಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 3 ||

ಭಾವಾರ್ಥ : ಯೋಗಾನುಸಂಧಾನದ ಮೂಲಕ ಭಗವಂತನ ಸನ್ನಿಧಿಯ ಪರಮಾನಂದವನ್ನು ಕರುಣಿಸುವ, ಹಾಗೂ ಯೋಗಾನಿಸಂಧಾನಕ್ಕೆ ಅಡ್ಡಿಯಾಗುವ ಇಂದ್ರಿಯಗಳ ಮೋಹವನ್ನು ನಾಶಪಡಿಸುವ; ಧರ್ಮ ಮಾರ್ಗದಲ್ಲಿ ನಡೆಸುತ್ತಾ ಭಗವಂತನ ಪೂಜೆಯಂತೆ ಸನ್ಮಾರ್ಗದಲ್ಲಿ ಸಂಪತ್ತನ್ನು ಸಂಪಾದಿಸಲು ಪ್ರೇರೇಪಿಸುವ; ಮೂರು ಲೋಕಗಳನ್ನೂ ರಕ್ಷಿಸುವ; ಸೂರ್ಯ ಚಂದ್ರ ಮತ್ತು ಅಗ್ನಿಗಳ ದೈವಿಕ ಶಕ್ತಿಯ ಮೂಲಸ್ರೋತವಾಗಿರುವ; ಭಕ್ತರಿಗೆ ಎಲ್ಲ ಬಗೆಯ ಅಭ್ಯುದಯವನ್ನು ದಯಪಾಲಿಸುವ ಕಾಶೀನಗರದ ಅಧಿದೇವತೆಯೇ ನಿನಗೆ ನಮಸ್ಕಾರ.
ತಾಯಿ, ಅನ್ನಪೂರ್ಣೇಶ್ವರೀ! ನಿನ್ನ ಕೃಪಾಭಿಕ್ಷೆ ನೀಡಿ ನನ್ನನ್ನು ಕಾಪಾಡು.

a2

ಕೈಲಾಸಾಚಲಕಂದರಾಲಯಕರೀ ಗೌರೀ ಉಮಾ ಶಂಕರೀ
ಕೌಮಾರೀ ನಿಗಮಾರ್ಥಗೋಚರಕರೀ ಓಂಕಾರಬೀಜಾಕ್ಷರೀ |
ಮೋಕ್ಷದ್ವಾರಕಪಾಟಪಾಟನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 4 ||

ಭಾವಾರ್ಥ : ಕೈಲಾಸಪರ್ವತದ ಕಣಿವೆಗಳಲ್ಲಿ ನೆಲೆಸಿರುವ; ಗೌರಿ, ಉಮಾ, ಶಂಕರೀ ಮತ್ತು ಕೌಮಾರಿ ಎಂಬ ಹೆಸರುಗಳಿಂದ ಕರೆಯಲ್ಪಡುವ, ವೇದಾಗಮಗಳಿಂದ ಅರಿಯಲ್ಪಡುವ, ಓಂಕಾರಸ್ವರೂಪಿಣಿಯಾಗಿರುವ ಮತ್ತು ಅಧ್ಯಾತ್ಮ ಸಾಧಕರಿಗೆ ಮೋಕ್ಷದ್ವಾರದ ತಡೆಗಳನ್ನು ಒಡೆದು ದಾರಿ ತೋರಿಸುವ ಕಾಶೀಪುರದ ಒಡತಿಯೇ ನಿನಗೆ ನಮಸ್ಕಾರಗಳು.
ತಾಯಿ, ಅನ್ನಪೂರ್ಣೇಶ್ವರೀ! ನಿನ್ನ ಕೃಪಾಭಿಕ್ಷೆ ನೀಡಿ ನನ್ನನ್ನು ಕಾಪಾಡು.

a3

ದೃಶ್ಯಾದೃಶ್ಯಪ್ರಭೂತವಾಹನಕರೀ ಬ್ರಹ್ಮಾಂಡಭಾಂಡೋದರೀ
ಲೀಲಾನಾಟಕಸೂತ್ರಭೇದನಕರೀ ವಿಜ್ಞಾನದೀಪಾಂಕುರೀ |
ಶ್ರೀವಿಶ್ವೇಶಮನಃಪ್ರಸಾದನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 5 ||

ಭಾವಾರ್ಥ : ಯಾರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತನ್ನ ದೈವೀ ಲಕ್ಷಣಗಳನ್ನು ಪ್ರಕಟಿಸುತ್ತಾಳೋ. ಮತ್ತು ತನ್ನೊಳಗೆ ಇಡೀ ವಿಶ್ವವನ್ನೇ ಅಡಗಿಸಿಕೊಂಡಿರುತ್ತಾಳೋ ಆ ದೇವೀ ಮಾತೆ ಅನ್ನಪೂರ್ಣೇಶ್ವರಿಗೆ ಅನಂತ ನಮಸ್ಕಾರಗಳು. ಯಾರು ತನ್ನ ವಿಶೇಷ ಅನುಗ್ರಹದಿಂದ ದೈವೀ ಕ್ರೀಡೆಯಾದ ಸೃಷ್ಟಿ ಹಾಗೂ ಆ ಮೂಲಕ ದೈವಿಕ ಜ್ಞಾನದ ದೀಪವನ್ನು ಬೆಳಗಿ ತನ್ನ ನಿಜರೂಪವನ್ನು ತೋರ್ಪಡಿಸುತ್ತಾಳೋ ಹಾಗೂ ಶ್ರೀ ವಿಶ್ವೇಶ್ವರನ ಧ್ಯಾನದಲ್ಲಿ ಲೀನವಾಗಿರುವಳೋ ಅಂತಹಾ ಕಾಶೀಪುರದೊಡತಿಗೆ ನನ್ನ ನಮಸ್ಕಾರಗಳು.
ತಾಯಿ, ಅನ್ನಪೂರ್ಣೇಶ್ವರೀ! ನಿನ್ನ ಕೃಪಾಭಿಕ್ಷೆ ನೀಡಿ ನನ್ನನ್ನು ಕಾಪಾಡು.

a10

ಆದಿಕ್ಷಾಂತಸಮಸ್ತವರ್ಣನಕರೀ ಶಂಭೋಸ್ತ್ರಿಭಾವಾಕಾರೀ
ಕಾಶ್ಮೀರತ್ರಿಪುರೇಶ್ವರೀ ತ್ರಿನಯನೀ ವಿಶ್ವೇಶ್ವರೀ ಶರ್ವರೀ |
(ಕಾಶ್ಮೀರಾತ್ರಿಜಲೇಶ್ವರೀ ತ್ರಿಲಹರೀ ನಿತ್ಯಾಂಕುರಾ ಶರ್ವರಿ)
ಸ್ವರ್ಗದ್ವಾರಕವಾಟಪಾಟನಕರೀ ಕಾಶೀಪುರಾಧೀಶ್ವರೀ
(ಕಾಮಾಕಾಂಕ್ಷಕರೀ ಜನೋದಯಕರೀ ಕಾಶೀಪುರಾಧೀಶ್ವರೀ)
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 6 ||

ಭಾವಾರ್ಥ : ಯಾರು ತನ್ನೊಳಗಿಂದ ಸಮಸ್ತ ಅಕ್ಷರಗಳನ್ನು ಅ ಇಂದ ಕ್ಷ ದ ವರೆಗೂ ಪ್ರಕಟಪಡಿಸುತ್ತಾಳೋ ಮತ್ತು ಶಂಭುವಿನ ಮೂರು ಭಾವಗಳಾದ ಸತ್ವ ರಜಸ್ಸು ತಮಸ್ಸು ಕ್ರಮವಾಗಿ ವಿಶ್ವದ ಸೃಷ್ಟಿ ಸ್ಥಿತಿ ಲಯಗಳ ಭಂಡಾರವೋ ಆ ಮಾತೆ ಅನ್ನಪೂರ್ಣೇಶ್ವರಿಗೆ ನಮನಗಳು. ಯಾರು ಶಕ್ತಿಯನ್ನು ಹೋಲುವ ರಕ್ತವರ್ಣವುಳ್ಳವಳೋ ಹಾಗೂ ತ್ರಿಪುರಗಳ ಒಡತಿಯೋ ಮತ್ತು ಮೂರು ಕಣ್ಣುಳ್ಳವಳೋ ಸಮಸ್ತ ಸ್ತ್ರೀಶಕ್ತಿಯನ್ನು ಪ್ರಕಟಿಸುವ ವಿಶ್ವೇಶ್ವರಿಯಾಗಿರುವಳೋ
ಅಂತಹಾ ಕಾಶೀಪುರಾಧೀಶ್ವರಿಗೆ ನನ್ನ ನಮಸ್ಕಾರಗಳು.
ತಾಯಿ, ಅನ್ನಪೂರ್ಣೇಶ್ವರೀ! ನಿನ್ನ ಕೃಪಾಭಿಕ್ಷೆ ನೀಡಿ ನನ್ನನ್ನು ಕಾಪಾಡು.

a9

ಉರ್ವೀಸರ್ವಜನೇಶ್ವರೀ ಜಯಕರೀ ಮಾತಾ ಕೃಪಾಸಾಗರೀ
ವೇಣೀನೀಲಸಮಾನ ಕುಂತಲಧರೀ ನಿತ್ಯಾನ್ನದಾನೇಶ್ವರೀ
ಸಾಕ್ಷಾನ್ಮೋಕ್ಷಕರೀ ಸದಾ ಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 7 ||

ಭಾವಾರ್ಥ : ಯಾರು ಸ್ವತಃ ಭೂಮಾತೆಯಾಗಿರುವಳೋ ಮತ್ತು ಎಲ್ಲದರ ಒಡತಿಯಾಗಿರುವಳೋ, ಯಾರನ್ನು ಭಕ್ತರು ಭಗವತೀ ಎಂದು ಕರೆಯುತ್ತಾರೋ, ಯಾರ ಕಪ್ಪು ಬಣ್ಣದ ಕೇಶರಾಶಿಯು ಮನಮೋಹಕವಾಗಿ ತೂಗಾಡುತ್ತಿರುವುದೋ, ಸ್ವತಃ ಭೂಮಿ ತಾಯಿಯಾದ ದೇವಿಯು ಸದಾ ತನ್ನ ಮಕ್ಕಳಿಗೆ ಆಹಾರವನ್ನು ದಯಪಾಲಿಸುವವಳೋ, ತನ್ನ ಇರುವಿಕೆಯಿಂದ ಸದಾ ಭಕ್ತರಿಗೆ ಒಳ್ಳೆಯ ಅದೃಷ್ಟಗಳನ್ನು ಕರುಣಿಸುವಳೋ, ಅಂತಹಾ ಕಾಶೀ ಪಟ್ಟನದ ಒಡತಿಗೆ ನನ್ನ ನಮಸ್ಕಾರಗಳು.
ತಾಯಿ, ಅನ್ನಪೂರ್ಣೇಶ್ವರೀ! ನಿನ್ನ ಕೃಪಾಭಿಕ್ಷೆ ನೀಡಿ ನನ್ನನ್ನು ಕಾಪಾಡು.

a11

ದೇವೀ ಸರ್ವವಿಚಿತ್ರ ರತ್ನರುಚಿರಾ ದಾಕ್ಷಾಯಣೀ ಸುಂದರೀ
ವಾಮಾ ಸ್ವಾದುಪಯೋಧರಾ ಪ್ರಿಯಕರೀ ಸೌಭಾಗ್ಯಮಾಹೇಶ್ವರೀ |
ಭಕ್ತಾಭೀಷ್ಟಕರೀ ಸದಾ ಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 8 ||

ಭಾವಾರ್ಥ : ಯಾರು ಹಲವು ಬಗೆಯ ರತ್ನಾಭರಣಗಳನ್ನು ಧರಿಸಿರುವಳೋ, ಯಾರು ದಕ್ಷ ರಾಜನ ಅಪ್ರತಿಮ ಸೌಂದರ್ಯವತಿಯಾದ ಪುತ್ರಿಯಾಘಿರುವಳೋ, ಯಾರು ತನ್ನ ಎಡ ಹಸ್ತದಲ್ಲಿ ಅಮೃತವನ್ನು ತುಂಬಿದ ಕೊಡವನ್ನು ಹಿಡಿದಿರುವವಳೋ ಹಾಗೂ ಅದನ್ನು ಪ್ರೀತಿಯಿಂದ ತನ್ನ ಕಂದಮ್ಮಗಳಿಗೆ ಹಂಚುವಳೋ ತನ್ನ ಭಕ್ತರಿಗೆ ಒಳ್ಳೆಯ ಅದೃಷ್ಟಗಳನ್ನು ತಂದುಕೊಡುವ ಮಹಾನ್ ದೇವಿಯೋ ಯಾರು ತನ್ನ ಭಕ್ತರ ಆಸೆಗಳನ್ನು ಪೂರೈಸುವ ದೇವಿಯಾಗಿದ್ದಾಳೋ, ಅಂತಹಾ ಕಾಶೀನಗರವನ್ನು ಆಳುವ ಒಡತಿಗೆ ನನ್ನ ನಮಸ್ಕಾರಗಳು.
ತಾಯಿ, ಅನ್ನಪೂರ್ಣೇಶ್ವರೀ! ನಿನ್ನ ಕೃಪಾಭಿಕ್ಷೆ ನೀಡಿ ನನ್ನನ್ನು ಕಾಪಾಡು.

Leave a Reply