ಜ್ಞಾನ, ಧ್ಯಾನ, ಸ್ನಾನ ಮತ್ತು ಶೌಚದ ಕುರಿತು : ಮೈತ್ರೇಯಿ ಉಪನಿಷತ್

ಅಭೇದದರ್ಶನಮ್ ಜ್ಞಾನಮ್ ಧ್ಯಾನಮ್ ನಿರ್ವಿಷಯಮ್ ಮನಃ |
ಸ್ನಾನಮ್ ಮನೋಮಲತ್ಯಾಗಃ ಶೌಚಮ್ ಇಂದ್ರಿಯನಿಗ್ರಹಃ || ಮೈತ್ರೇಯೀ ಉಪನಿಷತ್ | 3.2 ||

MU
ಅರ್ಥ: ಜೀವ ಮತ್ತು ಬ್ರಹ್ಮ ಒಂದು ಎಂದು ತಿಳಿಯುವುದೇ ಜ್ಞಾನವು, ಮನಸ್ಸನ್ನು ವಿಷಯಗಳಿಂದ ದೂರವಿಡುವದೇ ಧ್ಯಾನವು. ಮನಸ್ಸಿನ ಕಲ್ಮಷಗಳನ್ನು ನಾಶಮಾಡುವುದೇ ಸ್ನಾನವು. ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಡುವುದೇ ಶೌಚವು.

ತಾತ್ಪರ್ಯ : ಜೀವ – ಬ್ರಹ್ಮರನ್ನು ಪ್ರತ್ಯೇಕ ನೋಡುವುದು ಅಜ್ಞಾನ. ಇದರಿಂದ ಭೇದಬುದ್ಧಿ ಹುಟ್ಟುತ್ತದೆ. ಮನಸ್ಸಿನಲ್ಲಿ ಐಹಿಕ ಸಂಗತಿಗಳ ಬಗ್ಗೆ ಯೋಚಿಸುತ್ತಲೇ ಇದ್ದರೆ ನಮಗೆ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಏಕಾಗ್ರತೆ ಇಲ್ಲದೆಹೋದರೆ ಧ್ಯಾನಸಿದ್ಧಿ ದೂರದ ಮಾತು. ಸ್ನಾನವೆಂದರೆ ದೇಹದ ಶುದ್ಧಿ (ಮಾತ್ರ) ಅಲ್ಲ. ಮನಸ್ಸಿನ ಕೊಳೆಯನ್ನು ನಿವಾರಿಸಿಕೊಳ್ಳುವುದೇ ನಿಜವಾದ ಸ್ನಾನ. ಇಂದ್ರಿಯಗಳನ್ನು ಸತ್ಕರ್ಮಗಳಿಗೆ ಬಳಸುತ್ತಾ, ಅವುಗಳನ್ನು ನಿಗ್ರಹದಲ್ಲಿಟ್ಟುಕೊಳ್ಳುವುದೇ ಶುಚಿತ್ವ.
(ಪ್ರಸ್ತುತಿ : ಅಪ್ರಮೇಯ)

Leave a Reply