ಎಲ್ಲ ಆಧ್ಯಾತ್ಮಿಕ ಅನ್ವೇಷಣೆಗಳ ಅಂತಿಮ ನೆಲೆ ಯಾವುದು?

ಸತ್ಯ ಎನ್ನುವ ಕಲ್ಪನೆಯಲ್ಲಿ ಎಲ್ಲವೂ ಅಡಗಿದೆ. ಅದನ್ನ ಕಾಣುವ ವಿಧಾನ ಮಾತ್ರ ಭಿನ್ನವಾದುದು. ಅಂತಿಮ ಸತ್ಯವನ್ನು ಅರಸುತ್ತಾ ಹೋಗುವವರಿಗೆ, ಅಂಥದೊಂದಿದೆ ಎಂಬ ಅರಿವು ಇದೆಯಲ್ಲ, ಅದೇ ಅತ್ಯಂತ ವಿಸ್ಮಯದ ಅರಿವು.

ಇದರ ಉತ್ತರ, ವಿಭಿನ್ನ ದೃಷ್ಟಿಕೋನಗಳಿಗೆ ಅನುಗುಣವಾಗಿ ಭಿನ್ನಭಿನ್ನವಾಗಿ ಕಂಡುಬರುತ್ತದೆ. ಸಾಧಕನ ಇಷ್ಟದೇವತೆಯಿರಲಿ, ಎಲ್ಲ ದೇವತೆಗಳ ಮೂಲವೆನ್ನಲಾದ ನಿರ್ಗುಣ ನಿರಾಕಾರ ಅದ್ವೈತ ಬ್ರಹ್ಮನಿರಲಿ, ವಿಷ್ಣು, ರಾಮ, ದೇವಿಯೇ ಮೊದಲಾದ ದೇವತಾ ತತ್ತ್ವಗಳಿರಲಿ – ಅಂತಿಮ ಹಂತದಲ್ಲಿ ಸರ್ವವ್ಯಾಪಕವಾದ ಇಂದ್ರಿಯಾತೀತ ತಾತ್ತ್ವಿಕತೆಯನ್ನು ತಲುಪುತ್ತವೆ.
ಇವೆಲ್ಲ ದೃಷ್ಟಿಕೋನಗಳ ಕೊನೆಯ ಮಾತೆಂದರೆ, ‘ಇದೇ ಸತ್ಯ; ಇದನ್ನು ಕಾಣು’.

ಈ ಸತ್ಯ ಎನ್ನುವ ಕಲ್ಪನೆಯಲ್ಲಿ ಎಲ್ಲವೂ ಅಡಗಿದೆ. ಅದನ್ನ ಕಾಣುವ ವಿಧಾನ ಮಾತ್ರ ಭಿನ್ನವಾದುದು. ಅಂತಿಮ ಸತ್ಯವನ್ನು ಅರಸುತ್ತಾ ಹೋಗುವವರಿಗೆ, ಅಂಥದೊಂದಿದೆ ಎಂಬ ಅರಿವು ಇದೆಯಲ್ಲ, ಅದೇ ಅತ್ಯಂತ ವಿಸ್ಮಯದ ಅರಿವು.

ಋಗ್ವೇದದಲ್ಲಿ ಬರುವ ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ – ‘ಸತ್ಯ ಎನ್ನುವುದು ಒಂದೇ, ತಿಳಿದವರು ಅದನ್ನು ಹಲವು ರೀತಿ ವಿವರಿಸುತ್ತಾರೆ’ ಎಂಬ ಮಂತ್ರ ಎಲ್ಲ ಅರಿವಿನ ಸಾರರೂಪವಾಗಿದೆ. ಸತ್ ಎನ್ನುವ ಅಂತಿಮ ನೆಲೆಯನ್ನು ತಲುಪಿದ ಮಾನವನ ಅರಿವು ಅದರ ಅದ್ಭುತ ಆಯಾಮವನ್ನು ಕಂಡು ಉದ್ಗರಿಸುವ ರೀತಿ ಅದು. ಆಧ್ಯಾತ್ಮಿಕ ಅನ್ವೇಷಣೆ ಹೇಗೆ ಸತ್ ಎನ್ನುವಲ್ಲಿ ಕೊನೆಗೊಳ್ಳುವುದೋ, ತಾತ್ತ್ವಿಕ ಅರಸುವಿಕೆಯೂ ಅಲ್ಲೇ ತನ್ನ ಕೊನೆಯನ್ನು ಕಂಡುಕೊಳ್ಳಬೇಕು. ಗ್ರಹಿಕೆಯ ಮಿತಿಗೆ ಒಳಪಟ್ಟ ಸತ್ಯದ ದರ್ಶನ ಭಿನ್ನವಾಗಬಹುದಲ್ಲದೆ, ಸತ್ಯವೆಂಬುದು ಸ್ವತಃ ಹಾಗಾಗದು. ಆದ್ದರಿಂದ
ತ್ರಿಕಾಲಾಬಾಧಿತ (ಮೂರು ಕಾಲಗಳಲ್ಲೂ ಬದಲಾಗದ್ದು) ಎಂದು ಕರೆಯಲ್ಪಡುವ ಸತ್ಯವು ಒಂದು ತತ್ತ್ವವಾಗಿಯೂ ನಿಲ್ಲುತ್ತದೆ; ಒಂದು ಸರ್ವವ್ಯಾಪಕ ನಿಯಮವಾಗಿಯೂ ನಿಲ್ಲುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ‘ಇರುವಿಕೆ’ ಎಂಬರ್ಥ ನೀಡುವ ‘ಸತ್’ ಎಲ್ಲ ವಿವರಣೆಗಳನ್ನೂ, ಎಲ್ಲ ಗ್ರಹಿಕೆಗಳನ್ನೂ ಮೀರಿ ತನ್ನ ಅಸ್ತಿತ್ವದಲ್ಲಿ ತಾನೇತಾನಾಗಿರುವ ಒಂದು ಅದ್ವಿತೀಯ ಸಂಗತಿಯಾಗಿ ಕಂಡುಬರುತ್ತದೆ.

ಸರ್ವಸ್ವವನ್ನೂ ಒಳಗೊಳ್ಳುವ ‘ಸತ್’ ಅಧ್ಯಾತ್ಮದಲ್ಲೂ, ದರ್ಶನಗಳಲ್ಲೂ, ಧರ್ಮಗಳಲ್ಲೂ, ಕೊನೆಗೆ ತತ್ತ್ವಶಾಸ್ತ್ರದಲ್ಲೂ ಅಪ್ರತಿಮವಾಗಿ ನಿಲ್ಲುತ್ತದೆ.
‘ಸತ್ಯಮೇವ ಜಯತೇ’ ಎಂಬ ಉಪನಿಷತ್ ವಾಕ್ಯದಲ್ಲೂ, ‘ಕಲಿಯುಗದಲ್ಲಿ ಸತ್ಯವಚನವೇ ತಪಸ್ಸು’ ಎಂಬ ಶ್ರೀರಾಮಕೃಷ್ಣರ ಉಪದೇಶದಲ್ಲೂ, ‘ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂಬ ಕನ್ನಡದ ಗೋವಿನ ಹಾಡಿನಲ್ಲೂ ಸತ್ಯದ ಪಾರಮ್ಯವನ್ನು ಹೇಳಲಾಗಿದೆ.

ಧರ್ಮ, ನೀತಿ, ಸಾಧನೆ, ಸಾಕ್ಷಾತ್ಕಾರ – ಎಲ್ಲವೂ ಈ ಮೂಲತತ್ತ್ವವನ್ನೇ ಅವಲಂಬಿಸಿದೆ. ಸತ್ಯದ ಅತ್ಯುನ್ನತ ಅನುಭವವೇನು, ಸತ್ಯದ ಅಸಾಧಾರಣ ಶಕ್ತಿಯೇನು ಇವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿ ಕಂಡುಬಂದರೂ, ಸತ್ಯವೆಂಬುದು ಎಲ್ಲದರ ಆಧಾರವೆಂಬುದನ್ನು ಪ್ರತಿಯೊಬ್ಬರೂ ಸ್ವೀಕರಿಸಬೇಕಾಗುತ್ತದೆ. ಈ ಸ್ವೀಕಾರದ ಮೂಲಕ ಅವನು ಸತ್ಯದ ಕಡೆಗೆ ಎಷ್ಟುದೂರ ಹೋಗಬಲ್ಲ ಎಂಬುದು ಅವನವನ ಸಾಮರ್ಥ್ಯವನ್ನು ಅವಲಂಬಿಸಿದೆ.

(ಆಕರ : ವಿವೇಕಪ್ರಭ | 2014ರ ಸಂಚಿಕೆ)

Leave a Reply