ನಿಮ್ಮೊಳಗಿನ ಚೇತನ ನಿಮ್ಮ ತುಟಿಗಳನ್ನು ನಿಯಂತ್ರಿಸಲಿ : ಖಲೀಲ್ ಗಿಬ್ರಾನ್

ಮೂಲ : ಖಲೀಲ್ ಗಿಬ್ರಾನ್, ಪ್ರವಾದಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಿಮ್ಮ ವಿಚಾರಗಳ ಜೊತೆ
ಸಮಾಧಾನ ಸಾಧ್ಯವಾಗದೇ ಹೋದಾಗ ಮಾತ್ರ
ನೀವು ಮಾತನಾಡುತ್ತೀರಿ.

ಯಾವಾಗ ನೀವು
ಹೃದಯದ ಏಕಾಂತದಲ್ಲಿ ನೆಲೆ ನಿಲ್ಲಲಾರಿರೋ
ಆಗಲೇ ತುಟಿಗಳ ಮೇಲೆ
ವಾಸ ಮಾಡಲು ಆರಂಭ ಮಾಡುತ್ತೀರಿ.

ಶಬ್ದ, ದಾರಿ ತಪ್ಪಿಸುವ ಮತ್ತು
ಕಾಲ ಹರಣದ ಸಾಧನವಾಗುವುದು ಆಗಲೇ.

ಬಹುತೇಕ ನಿಮ್ಮ ಮಾತಿನಲ್ಲಿ
ವಿಚಾರದ ಅರ್ಧ ಕೊಲೆಯಾಗಿರುತ್ತದೆ.

ಏಕೆಂದರೆ ವಿಚಾರ, ಆಕಾಶದ ಹಕ್ಕಿ.
ಶಬ್ದದ ಪಂಜರದಲ್ಲಿ ತನ್ನ ರೆಕ್ಕೆಯನ್ನೇನೋ ಬಿಚ್ಚುತ್ತದೆ
ಆದರೆ ಹಾರಾಟ ಸಾಧ್ಯವಾಗುವುದಿಲ್ಲ.

ಏಕಾಂತದ ಆತಂಕವನ್ನು ಎದುರಿಸಲಾರದೇ
ಮಾತಿಗಿಳಿಯುತ್ತಾರೆ ನಿಮ್ಮಲ್ಲಿ ಕೆಲವರು.

ಏಕಾಂತದ ನೀರವ 
ಅವರ ಬೆತ್ತಲನ್ನು ಬಯಲು ಮಾಡಬಹುದೆಂಬ
ಭಯದಿಂದ ಪಾರಾಗಲು ಹವಣಿಸುತ್ತಾರೆ.

ಮತ್ತೆ ಕೆಲವರು ಮಾತನಾಡುತ್ತಾರೆ
ಯಾವುದೇ ಅರಿವಿಲ್ಲದೆಯೇ, 
ಯಾವ ದೂರಾಲೋಚನೆಯೂ ಇಲ್ಲದೆಯೇ.
ಹೀಗೆ ಮಾತನಾಡುವಾಗಲೇ ಅವರು 
ತಮಗೂ ಅರ್ಥವಾಗದಿರುವ 
ಸತ್ಯವೊಂದನ್ನು ಅನಾವರಣ ಮಾಡುತ್ತಾರೆ.

ಇನ್ನೂ ಕೆಲವರ ಒಳಗೆ ಸತ್ಯ ಒಂದಾಗಿದೆ
ಆದರೆ ಅದು, ಮಾತಿನ ಮೂಲಕ ವ್ಯಕ್ತವಾಗುವುದಿಲ್ಲ.

ಇಂಥವರ ಹೃದಯದಲ್ಲಿಯೇ ಚೇತನ
ಲಯಬದ್ಧ ಮೌನದಲ್ಲಿ ನೆಲೆಗೊಂಡಿದೆ.

ರಸ್ತೆ ಬದಿಯಲ್ಲಿ 
ಅಥವಾ ಮಾರುಕಟ್ಟೆಯ ಜಾಗದಲ್ಲಿ
ನಿಮ್ಮ ಗೆಳೆಯ ಎದುರಾದಾಗ,
ನಿಮ್ಮೊಳಗಿನ ಚೇತನ 
ನಿಮ್ಮ ತುಟಿಗಳನ್ನು ನಿಯಂತ್ರಿಸಲಿ,
ನಿಮ್ಮ ನಾಲಿಗೆಯನ್ನು ನಿರ್ದೇಶಿಸಲಿ.

ನಿಮ್ಮ ದನಿಯೊಳಗಿನ ದನಿ
ಅವನ ಕಿವಿಯೊಳಗಿನ ಕಿವಿಯ ಜೊತೆ
ಮಾತಿಗಿಳಿಯಲಿ.

ಆಗಲೇ,
ಬಣ್ಣ ಮರೆತು ಹೋದಾಗಲೂ,
ಬಟ್ಟಲು ಇಲ್ಲದಿರುವಾಗಲೂ,
ನಿಮ್ಮ ನಾಲಿಗೆ,
ಮದಿರೆಯ ರುಚಿಯನ್ನು ನೆನಪಿಲ್ಲಿಟ್ಟುಕೊಳ್ಳುವಂತೆ
ಅವನ ಆತ್ಮ
ನಿಮ್ಮ ಹೃದಯದ ಸತ್ಯವನ್ನು
ತನ್ನ ನೆನಪಿನಲ್ಲಿ ಕಾಯ್ದಿಟ್ಟುಕೊಳ್ಳುವುದು.

Leave a Reply